ಮೂರು ಎಂ.ಟೆಕ್ ಕೋರ್ಸ್‌ಗಳಿಗೆ ಚಾಲನೆ

7
ಮುದ್ದೇನಹಳ್ಳಿಯಲ್ಲಿರುವ ವಿಟಿಯು ಸ್ನಾತಕೋತ್ತರ ಕೇಂದ್ರದಲ್ಲಿ ತಾತ್ಕಾಲಿಕವಾಗಿ ರಾಜೀವ್‌ ಗಾಂಧಿ ಪೆಟ್ರೋಲಿಯಂ ತಂತ್ರಜ್ಞಾನ ಸಂಸ್ಥೆಯ ತರಗತಿಗಳು ಆರಂಭ

ಮೂರು ಎಂ.ಟೆಕ್ ಕೋರ್ಸ್‌ಗಳಿಗೆ ಚಾಲನೆ

Published:
Updated:
Deccan Herald

ಚಿಕ್ಕಬಳ್ಳಾಪುರ: ಹೊಸಕೋಟೆ ತಾಲ್ಲೂಕಿನ ಕಂಬಳೀಪುರದಲ್ಲಿ ರಾಜೀವ್‌ ಗಾಂಧಿ ಪೆಟ್ರೋಲಿಯಂ ತಂತ್ರಜ್ಞಾನ ಸಂಸ್ಥೆಯ (ಆರ್‌ಜಿಐಟಿಪಿ) ಕ್ಯಾಂಪಸ್‌ ನಿರ್ಮಾಣವಾಗುವವರೆಗೆ ಆ ಸಂಸ್ಥೆಯ ಎಂ.ಟೆಕ್‌ ತರಗತಿಗಳು ತಾಲ್ಲೂಕಿನ ಮುದ್ದೇನಹಳ್ಳಿಯಲ್ಲಿರುವ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ (ವಿಟಿಯು) ಸ್ನಾತಕೋತ್ತರ ಕೇಂದ್ರದಲ್ಲಿ ತಾತ್ಕಾಲಿಕವಾಗಿ ನಡೆಯಲಿವೆ.

ಗುರುವಾರ ವಿಟಿಯು ಸ್ನಾತಕೋತ್ತರ ಕೇಂದ್ರದಲ್ಲಿ ಆರ್‌ಜಿಐಟಿಪಿಯ ನವೀಕರಿಸಬಹುದಾದ ಇಂಧನ, ಪವರ್ ಅಂಡ್ ಎನರ್ಜಿ ಎಂಜಿನಿಯರಿಂಗ್ ಸಿಸ್ಟಂ, ಎನರ್ಜಿ ಸೈನ್ಸ್ ಅಂಡ್ ಟೆಕ್ನಾಲಜಿ ಎಂಬ ಎಂ.ಟೆಕ್‌ ಕೋರ್ಸ್‌ಗಳ ತರಗತಿಗಳನ್ನು ಉದ್ಘಾಟಿಸಲಾಯಿತು.

ಕಾರ್ಯಕ್ರಮದಲ್ಲಿ ಮಾತನಾಡಿದ ಸಂಸದ ವೀರಪ್ಪ ಮೊಯಿಲಿ ಅವರು, ‘ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ಪೆಟ್ರೋಲಿಯಂ ಕಾಯ್ದೆಯಡಿ ರಾಷ್ಟ್ರೀಯ ಪ್ರಾಮುಖ್ಯತೆಯ ಶೈಕ್ಷಣಿಕ ಸಂಸ್ಥೆಯಾಗಿ ರಾಜೀವ್‌ ಗಾಂಧಿ ಪೆಟ್ರೋಲಿಯಂ ತಂತ್ರಜ್ಞಾನ ಸಂಸ್ಥೆಗಳನ್ನು ಸ್ಥಾಪಿಸುತ್ತಿದೆ. ಪ್ರಸ್ತುತ ದೇಶದಲ್ಲಿ ರಾಯ್‌ ಬರೇಲಿ ಮತ್ತು ಅಸ್ಸಾಂ ಶಿವಸಾಗರ್‌ದಲ್ಲಿ ಎರಡು ಸಂಸ್ಥೆಗಳು ಸ್ಥಾಪನೆಯಾಗಿದ್ದು, ಮೂರನೇ ಕೇಂದ್ರಕ್ಕೆ ಕಂಬಳೀಪುರದಲ್ಲಿ ಶಂಕುಸ್ಥಾಪನೆ ನೆರವೇರಿಸಲಾಗಿದೆ’ ಎಂದು ಹೇಳಿದರು.

‘ಐಐಟಿ, ಐಐಎಂ ಮಾದರಿಯ ಈ ಸಂಸ್ಥೆಗೆ ಪೆಟ್ರೋಲಿಯಂ ಕಂಪೆನಿಗಳು ಆರ್ಥಿಕ ನೆರವು ನೀಡುತ್ತವೆ. ಹೀಗಾಗಿ ಹಣಕಾಸಿನ ಕೊರತೆ ಇಲ್ಲ. ಕಂಬಳಿಪುರದ ಬಳಿ 150 ಎಕರೆಯಲ್ಲಿ ಆರ್‌ಜಿಐಟಿಪಿ ಕಟ್ಟಡ ಕಾಮಗಾರಿ ಆರಂಭಗೊಂಡಿದೆ. ಎರಡು ವರ್ಷಗಳಲ್ಲಿ ಆ ಕ್ಯಾಂಪಸ್ ನಿರ್ಮಾಣವಾಗಲಿದೆ. ಅಲ್ಲಿಯವರೆಗೆ ತಾತ್ಕಾಲಿಕವಾಗಿ ಇಲ್ಲಿ ತರಗತಿಗಳನ್ನು ನಡೆಸಲಾಗುತ್ತದೆ’ ಎಂದು ತಿಳಿಸಿದರು.

‘ಈಗಾಗಲೇ ಮೂರೂ ಎಂ.ಟೆಕ್ ಕೋರ್ಸ್‌ಗಳಿಗೆ ವಿದ್ಯಾರ್ಥಿಗಳ ಪ್ರವೇಶಾತಿ ನಡೆದಿದೆ. ಪ್ರಾಧ್ಯಾಪಕ ನೇಮಕಾತಿ ಸಹ ನಡೆದಿದೆ. ಶೀಘ್ರದಲ್ಲಿಯೇ ತರಗತಿಗಳು ಆರಂಭವಾಗಲಿವೆ. ಪೆಟ್ರೋಲಿಯಂ ತಂತ್ರಜ್ಞಾನದಲ್ಲಿ ಪರಿಣಿತಿ ಪಡೆದ ಅಂತರರಾಷ್ಟ್ರೀಯ ವಿಶ್ವವಿದ್ಯಾಲಯಗಳ ಸಹಯೋಗದಲ್ಲಿ ಈ ಸಂಸ್ಥೆ ಕೆಲಸ ಮಾಡಲಿದೆ’ ಎಂದರು.

ರಾಜೀವ್‌ ಗಾಂಧಿ ಪೆಟ್ರೋಲಿಯಂ ತಂತ್ರಜ್ಞಾನ ಸಂಸ್ಥೆಯ ಅಧ್ಯಕ್ಷ ಪ್ರೊ.ಕೆ.ಬಿ.ಅಖಿಲೇಶ್ ಮಾತನಾಡಿ, ‘ಕಂಬಳಿಪುರದ ಬಳಿ 150 ಎಕರೆ ಪ್ರದೇಶದಲ್ಲಿ ಸುಮಾರು ₨೧,೬೫೦ ಕೋಟಿ ವೆಚ್ಚದಲ್ಲಿ ಆರ್‌ಜಿಐಟಿಪಿ ಕ್ಯಾಂಪಸ್‌ ನಿರ್ಮಾಣಗೊಳ್ಳುತ್ತಿದೆ. ಅದು ಪೂರ್ಣಗೊಳ್ಳುವ ವರೆಗೆ ಸುಮಾರು ಎರಡು ವರ್ಷ ಎಂ.ಟೆಕ್ ತರಗತಿಗಳು ಇಲ್ಲಿ ನಡೆಯಲಿವೆ’ ಎಂದು ಹೇಳಿದರು. ವಿಟಿಯು ಸ್ನಾತಕೋತ್ತರ ಕೇಂದ್ರದ ಪ್ರಾಂಶುಪಾಲ ಜಿ.ಎಸ್.ವೆಂಕಟೇಶ್ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !