ರಕ್ತದಾನ ಮಾಡಿ ಜೀವ ಉಳಿಸಿ

7
ಜಗದ್ಗುರು ಚಂದ್ರಶೇಖರ ಸ್ವಾಮೀಜಿ ತಾಂತ್ರಿಕ ಸಂಸ್ಥೆಯಲ್ಲಿ ರಕ್ತದಾನ ಶಿಬಿರ ಆಯೋಜನೆ

ರಕ್ತದಾನ ಮಾಡಿ ಜೀವ ಉಳಿಸಿ

Published:
Updated:
Deccan Herald

ಚಿಕ್ಕಬಳ್ಳಾಪುರ: ‘ಆರೋಗ್ಯವಂತ ಯುವ ಸಮುದಾಯವು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡುವ ಮೂಲಕ ರಕ್ತದ ಅವಶ್ಯಕತೆಯಿಂದ ಬಳಲುವ ಅಮೂಲ್ಯ ಜೀವ ಉಳಿಸಲು ಮುಂದಾಗಬೇಕು’ ಎಂದು ಶ್ರೀ ಜಗದ್ಗುರು ಚಂದ್ರಶೇಖರ ಸ್ವಾಮೀಜಿ ತಾಂತ್ರಿಕ ಸಂಸ್ಥೆಯ ಪ್ರಾಶುಪಾಲ ಕೆ.ಎಂ.ರವಿಕುಮಾರ್ ಹೇಳಿದರು.

ನಗರ ಹೊರವಲಯದ ಎಸ್‌ಜೆಸಿಐಟಿಯಲ್ಲಿ ಗುರುವಾರ ರೋಟರಿ ಚಿಕ್ಕಬಳ್ಳಾಪುರ ಬಿಜಿಎಸ್‌, ನಾರಾಯಣ ಹೇಲ್ತ್ ಕೇರ್ ಸಂಸ್ಥೆ, ಭಾರತೀಯ ರೆಡ್‌ಕ್ರಾಸ್‌ ಸಂಸ್ಥೆ ಸಹಯೋಗದಲ್ಲಿ ಆಯೋಜಿಸಿದ್ದ ರಕ್ತದಾನ ಶಿಬಿರದಲ್ಲಿ ಅವರು ಮಾತನಾಡಿದರು.

‘ರಕ್ತದಾನದಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ ಎಂಬ ತಪ್ಪು ಕಲ್ಪನೆ ಸಮಾಜದಲ್ಲಿ ಬೇರೂರಿದೆ. ಇದನ್ನು ತೊಲಗಿಸಬೇಕಿದೆ. ಆದ್ದರಿಂದ ಆರೋಗ್ಯವಂತ ವ್ಯಕ್ತಿಗಳು ರಕ್ತದಾನಕ್ಕೆ ಮುಂದಾಗಿ ಮತ್ತೊಬ್ಬರಿಗೆ ಮಾದರಿಯಾಗಬೇಕು. ಯುವಕರು ರಕ್ತದಾನದ ಕುರಿತು ಇರುವ ಮೌಢ್ಯವನ್ನು ದೂರ ಮಾಡಬೇಕು’ ಎಂದು ತಿಳಿಸಿದರು.

‘ರಕ್ತದಾನದಿಂದ ರಕ್ತದ ಅವಶ್ಯಕತೆ ಇರುವವರಿಗೆ ಮಾತ್ರ ಲಾಭವಾಗುವುದಿಲ್ಲ. ರಕ್ತದಾನಿಗಳೂ ತಮ್ಮ ಆರೋಗ್ಯ ವೃದ್ಧಿಸಿಕೊಳ್ಳಬಹುದು. ಇದರಿಂದ ರಕ್ತದಾನ ಮಾಡಿದವರಲ್ಲಿ ಹೊಸ ರಕ್ತಕಣಗಳು ಉತ್ಪತ್ತಿಯಾಗುತ್ತವೆ. ಜತೆಗೆ ಹೃದಯಾಘಾತದ ಸಂಭವ, ರಕ್ತದಲ್ಲಿ ಕೊಬ್ಬಿನ ಅಂಶ ಕಡಿಮೆಯಾಗುತ್ತದೆ. ಆದ್ದರಿಂದ ರಕ್ತದಾನ ಮಾಡಲು ಹಿಂಜರಿಯಬಾರದು. ಈ ಬಗ್ಗೆ ಯುವಕರು ಜನರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಜಾಗೃತಿ ಮೂಡಿಸಬೇಕು’ ಎಂದು ಹೇಳಿದರು.

‘ಒಬ್ಬ ದಾನಿಯಿಂದ ಪಡೆದ ರಕ್ತವನ್ನು ಕೇವಲ 35 ದಿನ ಮಾತ್ರ ಉಪಯೋಗಿಸಲು ಸಾಧ್ಯ ಮತ್ತು ಅದನ್ನು ಅದೇ ರಕ್ತದ ಗುಂಪಿನ ಮತ್ತೊಬ್ಬ ವ್ಯಕ್ತಿಗೆ ಮಾತ್ರ ಉಪಯೋಗಿಸಬಹುದು. ದಾನ ಮಾಡಿದ ವ್ಯಕ್ತಿಯಲ್ಲಿ ಶುದ್ಧ ರಕ್ತ ಮತ್ತೆ 3 ತಿಂಗಳಲ್ಲಿ ಪುನ: ಉತ್ಪತ್ತಿಯಾಗುತ್ತದೆ. ದಾನಿಯ ಆರೋಗ್ಯದಲ್ಲಿ ಯಾವುದೇ ತೊಂದರೆ ಉಂಟಾಗದು’ ಎಂದರು.

ಶಿಬಿರದಲ್ಲಿ ವಿದ್ಯಾರ್ಥಿಗಳು ಸೇರಿದಂತೆ 400 ಜನರು ರಕ್ತದಾನ ಮಾಡಿದರು. ರೋಟರಿ ಚಿಕ್ಕಬಳ್ಳಾಪುರ ಬಿಜಿಎಸ್‌ ಅಧ್ಯಕ್ಷ ಎಂ.ನಾಗೇಂದ್ರಕುಮಾರ್, ಕಾರ್ಯದರ್ಶಿ ಪ್ರೊ.ವೈ.ಎ.ಸತೀಶ್ ಭಾಗವಹಿಸಿದ್ದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !