ಸ್ವಪ್ರೇರಣೆಯಿಂದ ರಕ್ತದಾನ ಮಾಡಿ: ಜಗದೀಶ್ ಕಿವಿಮಾತು

7

ಸ್ವಪ್ರೇರಣೆಯಿಂದ ರಕ್ತದಾನ ಮಾಡಿ: ಜಗದೀಶ್ ಕಿವಿಮಾತು

Published:
Updated:
Deccan Herald

ಕೋಲಾರ: ‘ಯುವಕ ಯುವತಿಯರು ರಕ್ತದಾನದ ಮಹತ್ವ ಅರಿತು ಸ್ವಪ್ರೇರಣೆಯಿಂದ ರಕ್ತದಾನ ಮಾಡಬೇಕು’ ಎಂದು ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ.ಎಂ.ಜಗದೀಶ್ ಕಿವಿಮಾತು ಹೇಳಿದರು.

ಜಿಲ್ಲಾಡಳಿತ ಹಾಗೂ ಗೋಕುಲ್ ಕಾಲೇಜ್ ಆಫ್ ಆರ್ಟ್ಸ್‌, ಸೈನ್ಸ್ ಮತ್ತು ಮ್ಯಾನೇಜ್‍ಮೆಂಟ್ ಸ್ಟಡೀಸ್ ಸಹಯೋಗದಲ್ಲಿ ಇಲ್ಲಿ ಗುರುವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಸ್ವಯಂಪ್ರೇರಿತ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿ, ‘ಮನುಷ್ಯನಿಗೆ ಮನುಷ್ಯನ ರಕ್ತವನ್ನೇ ನೀಡಬೇಕು. ಆದರೆ, ಅನೇಕರಿಗೆ ರಕ್ತದಾನ ಮಾಡಲು ಆಸಕ್ತಿ ಇಲ್ಲ’ ಎಂದು ವಿಷಾದಿಸಿದರು.

‘ಕ್ಯಾನ್ಸರ್ ರೋಗಿಗಳು, ಮೂತ್ರಪಿಂಡ ಸಮಸ್ಯೆ ಇರುವವರಲ್ಲಿ, ಡಯಾಲಿಸಿಸ್‌ಗೆ ಒಳಗಾಗುವವರಲ್ಲಿ ರಕ್ತ ಉತ್ಪತ್ತಿಯಾಗುವುದಿಲ್ಲ. ಮಹಿಳೆಯರಲ್ಲಿ ಶೇ 60ರಿಂದ 80ರಷ್ಟು ಮಂದಿಗೆ ರಕ್ತಹೀನತೆ ಸಮಸ್ಯೆ ಕಾಡುತ್ತಿದೆ. ದಿನದಿಂದ ದಿನಕ್ಕೆ ರಕ್ತದ ಬೇಡಿಕೆ ಹೆಚ್ಚುತ್ತಿದೆ. ಆದರೆ, ಕೃತಕವಾಗಿ ರಕ್ತ ಉತ್ಪಾದಿಸಲು ಸಾಧ್ಯವಿಲ್ಲ. ರಕ್ತದ ಕೊರತೆ ನೀಗಿಸುವ ನಿಟ್ಟಿನಲ್ಲಿ ರಕ್ತದಾನ ಶಿಬಿರಗಳ ಸಂಖ್ಯೆ ಹೆಚ್ಚಿಸಬೇಕು’ ಎಂದು ಸಲಹೆ ನೀಡಿದರು.

‘ನಾವು ಪಡೆಯುವ ರಕ್ತ ಎಚ್‍ಐವಿ ಸೋಂಕು, ಹೆಪಟೈಸಿಸ್ ಬಿ ಮತ್ತು ಸಿ, ಮಲೇರಿಯಾ ಸೇರಿದಂತೆ ಐದು ಕಾಯಿಲೆಗಳಿಂದ ಮುಕ್ತವಾಗಿರಬೇಕು. ವಿದ್ಯಾರ್ಥಿಗಳು ಧೂಮಪಾನ, ಮದ್ಯಪಾನ, ಲೈಂಗಿಕ ಚಟುವಟಿಕೆಗಳಿಂದ ದೂರ ಇರುವುದರಿಂದ ರಕ್ತವು ಕಾಯಿಲೆಗಳಿಂದ ಮುಕ್ತವಾಗಿರುತ್ತದೆ ಎಂಬ ಕಾರಣಕ್ಕೆ ಸ್ವಯಂ ಪ್ರೇರಿತ ರಕ್ತದಾನಕ್ಕೆ ಯುವ ಸಮುದಾಯವನ್ನು ಉತ್ತೇಜಿಸಲಾಗುತ್ತಿದೆ’ ಎಂದು ವಿವರಿಸಿದರು.

ಶಿಬಿರ ಪ್ರೋತ್ಸಾಹಿಸಿ: ‘ಒಂದು ಯೂನಿಟ್ ರಕ್ತ ನಾಲ್ಕು ಜನರ ಪ್ರಾಣ ಉಳಿಸುತ್ತದೆ. ರಕ್ತದಾನ ಶಿಬಿರಗಳನ್ನು ಪ್ರೋತ್ಸಾಹಿಸಬೇಕು ಮತ್ತು ಜನರಿಗೆ ಜಾಗೃತಿ ಮೂಡಿಸಬೇಕು. ರಕ್ತದಾನದಲ್ಲಿ ಯುವಕ ಯುವತಿಯರ ಪಾತ್ರ ನಿರ್ಣಾಯಕ. ಕಾಲೇಜುಗಳಲ್ಲಿ ಶಿಬಿರಗಳನ್ನು ಆಯೋಜಿಸಿ ರಕ್ತದಾನ ಮಾಡುವಂತೆ ವಿದ್ಯಾರ್ಥಿಗಳನ್ನು ಪ್ರೇರೇಪಿಸಬೇಕು’ ಎಂದು ಹೇಳಿದರು.

ಆರೋಗ್ಯ ಸುಧಾರಿಸುತ್ತದೆ: ‘ಕಾಲೇಜಿನಲ್ಲಿ ಪ್ರತಿ ವರ್ಷ ಸ್ವಯಂಪ್ರೇರಿತ ರಕ್ತದಾನ ಶಿಬಿರ ನಡೆಸಲಾಗುತ್ತಿದೆ. ರಕ್ತದಾನದಿಂದ ಯಾವುದೇ ಸಮಸ್ಯೆ ಆಗುವುದಿಲ್ಲ. ಹೀಗಾಗಿ ರಕ್ತದಾನ ಕುರಿತು ಭಯಪಡುವ ಅಗತ್ಯವಿಲ್ಲ. ಆರೋಗ್ಯವಂತ ವ್ಯಕ್ತಿ ವರ್ಷದಲ್ಲಿ 4 ಬಾರಿ ರಕ್ತದಾನ ಮಾಡಬಹುದು. ರಕ್ತದಾನದಿಂದ ಆರೋಗ್ಯ ಸುಧಾರಿಸುತ್ತದೆ’ ಎಂದು ಗೋಕುಲ್ ವಿದ್ಯಾ ಸಂಸ್ಥೆ ಕಾರ್ಯದರ್ಶಿ ವಿ.ನಾರಾಯಣಸ್ವಾಮಿ ತಿಳಿಸಿದರು.

ಹೆಚ್ಚು ಬಾರಿ ರಕ್ತದಾನ ಮಾಡಿದ ಡಿ.ವಿ.ಮಂಜುನಾಥ್, ಅಪ್ಸರ್ ಪಾಷಾ, ಸಬೀರ್ ಅಹಮ್ಮದ್‌ ಖಾನ್‌ ಅವರನ್ನು ಸನ್ಮಾನಿಸಲಾಯಿತು. ಭಿತ್ತಿಪತ್ರ ರಚನೆ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದ ವಿದ್ಯಾರ್ಥಿ ಕೆ.ಸಿ.ಪ್ರೇಮಕುಮಾರ್ ಅವರನ್ನು ಪುರಸ್ಕರಿಸಲಾಯಿತು.

ರಕ್ತದಾನ ಮಾಡಿದ ವಿದ್ಯಾರ್ಥಿಗಳಾದ ನಂದೀಶ್, ಮನೋಜ್, ಪ್ರಶಾಂತ್, ಮಹೇಶ್, ಆದರ್ಶ, ರವಿ ಅವರಿಗೆ ಪ್ರಮಾಣಪತ್ರ ವಿತರಿಸಲಾಯಿತು. ಕಾಲೇಜಿನ ಪ್ರಾಂಶುಪಾಲ ಎಚ್.ಬಿ.ಮಹೇಶ್, ಆರೋಗ್ಯ ಇಲಾಖೆ ಅಧಿಕಾರಿ ಹೇಮಲತಾ, ಆರೋಗ್ಯ ಶಿಕ್ಷಣಾಧಿಕಾರಿ ಪ್ರಸನ್ನ ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !