ಸೋಮೇಶ್ವರ ಬೀಚ್‌ನಲ್ಲಿ ವಿದ್ಯಾರ್ಥಿ ಕುತ್ತಿಗೆಗೆ ಚೂರಿ ಇರಿತ

7
ಸಹಪಾಠಿ ವಿದ್ಯಾರ್ಥಿನಿಗೆ ಕಿರುಕುಳ ನೀಡಿದ್ದನ್ನ ಆಕ್ಷೇಪಿಸಿದ್ದಕ್ಕೆ ಹಲ್ಲೆ

ಸೋಮೇಶ್ವರ ಬೀಚ್‌ನಲ್ಲಿ ವಿದ್ಯಾರ್ಥಿ ಕುತ್ತಿಗೆಗೆ ಚೂರಿ ಇರಿತ

Published:
Updated:

ಮಂಗಳೂರು: ಸಹಪಾಠಿ ವಿದ್ಯಾರ್ಥಿನಿಯ ಮೊಬೈಲ್‌ಗೆ ಕರೆಮಾಡಿ ಕಿರುಕುಳ ನೀಡುತ್ತಿದ್ದುದನ್ನು ಆಕ್ಷೇಪಿಸಿದ ವಿದ್ಯಾರ್ಥಿಯೊಬ್ಬನನ್ನು ಉಳ್ಳಾಲದ ಸೋಮೇಶ್ವರ್ ಬೀಚ್‌ಗೆ ಕರೆಸಿಕೊಂಡ ತಂಡವೊಂದು ಆತನ ಕುತ್ತಿಗೆಗೆ ಚಾಕುವಿನಿಂದ ಇರಿದಿದೆ.

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯ ಶ್ರೇಯಸ್‌ ಶೆಟ್ಟಿ (22) ಚೂರಿ ಇರಿತದಿಂದ ಗಾಯಗೊಂಡಿರುವ ವಿದ್ಯಾರ್ಥಿ. ಈತ ಬೋಳಾರದಲ್ಲಿರುವ ತನ್ನ ಅಜ್ಜಿಯ ಮನೆಯಲ್ಲಿ ವಾಸವಿದ್ದು, ಪಂಪ್‌ವೆಲ್‌ ಜಂಕ್ಷನ್‌ನಲ್ಲಿರುವ ಅಗ್ನಿಶಾಮಕ ಮತ್ತು ಸುರಕ್ಷಾ ತರಬೇತಿ ಕಾಲೇಜಿನಲ್ಲಿ ವಿದ್ಯಾರ್ಥಿಯಾಗಿದ್ದಾನೆ.

ಶ್ರೇಯಸ್‌ನ ಸಹಪಾಠಿ ವಿದ್ಯಾರ್ಥಿನಿಗೆ ಯುವಕನೊಬ್ಬ ಕರೆಮಾಡಿ ಕಿರುಕುಳ ನೀಡುತ್ತಿದ್ದ. ಈ ವಿಷಯ ತಿಳಿದ ವಿದ್ಯಾರ್ಥಿ, ಆತನಿಗೆ ಕರೆಮಾಡಿ ಎಚ್ಚರಿಕೆ ನೀಡಿದ್ದ. ಶುಕ್ರವಾರ ಬೆಳಿಗ್ಗೆ ಮತ್ತೆ ಆರೋಪಿ ಮತ್ತು ಶ್ರೇಯಸ್‌ ನಡುವೆ ದೂರವಾಣಿಯಲ್ಲಿ ಮಾತಿನ ಚಕಮಕಿ ನಡೆದಿತ್ತು. ‘ತಾಕತ್ತಿದ್ದರೆ ತೊಕ್ಕೊಟ್ಟು ಮೇಲುಸೇತುವೆ ಬಳಿ ಬಾ’ ಎಂದು ಆತ ಸವಾಲು ಹಾಕಿದ್ದ.

ಗೆಳೆಯರಾದ ಜಾನ್ಸನ್ ಮತ್ತು ಹರಿಪ್ರಸಾದ್‌ ಜೊತೆ ಶ್ರೇಯಸ್‌ ತೊಕ್ಕೊಟ್ಟು ಮೇಲುಸೇತುವೆ ಬಳಿ ಹೋಗಿದ್ದ. ಅಲ್ಲಿಗೆ ಹೋಗಿ ಕರೆಮಾಡಿದಾಗ ತೊಕ್ಕೊಟ್ಟು ಜಂಕ್ಷನ್‌ಗೆ ಬರುವಂತೆ ಕರೆದ. ಅಲ್ಲಿಗೂ ಹೋಗಿ ಮತ್ತೆ ಕರೆಮಾಡಿದಾಗ ಸೋಮೇಶ್ವರ ಬೀಚ್‌ ಬಳಿ ಬರುವಂತೆ ಕರೆದ. ಅಲ್ಲಿ ಆರೋಪಿಗಳು ಮತ್ತು ಶ್ರೇಯಸ್‌ ಮುಖಾಮುಖಿಯಾಗಿದ್ದರು. ಮಾತಿನ ಚಕಮಕಿ ನಡೆಯುತ್ತಿರುವಾಗ ಒಬ್ಬ ಶ್ರೇಯಸ್‌ನ ಕುತ್ತಿಗೆಗೆ ಚೂರಿಯಿಂದ ಇರಿದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಗಾಯಗೊಂಡಿರುವ ವಿದ್ಯಾರ್ಥಿಯನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ದೂರವಾಣಿ ಕರೆಗಳ ವಿವರ ಆಧರಿಸಿ ಆರೋಪಿಗಳನ್ನು ಪತ್ತೆ ಮಾಡಲು ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದಾರೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !