ಎಪಿಎಂಸಿ ಅಧ್ಯಕ್ಷಗಾದಿ ಚುನಾವಣೆ: ಶಾಸಕರಿಗೆ ಮುಖಭಂಗ

7
ಜೆಡಿಎಸ್‌ ಬಂಡಾಯ ಅಭ್ಯರ್ಥಿ ನಾಗರಾಜ್‌ಗೆ ಗೆಲುವು– ಶಾಸಕರ ಬಣದ ವೆಂಕಟೇಶ್‌ಗೆ ಸೋಲು

ಎಪಿಎಂಸಿ ಅಧ್ಯಕ್ಷಗಾದಿ ಚುನಾವಣೆ: ಶಾಸಕರಿಗೆ ಮುಖಭಂಗ

Published:
Updated:
Deccan Herald

ಕೋಲಾರ: ತೀವ್ರ ಕುತೂಹಲ ಕೆರಳಿಸಿದ್ದ ಸ್ಥಳೀಯ ಎಪಿಎಂಸಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷಗಾದಿಗೆ ಇಲ್ಲಿ ಶುಕ್ರವಾರ ನಡೆದ ಚುನಾವಣೆಯಲ್ಲಿ ಶಾಸಕ ಕೆ.ಶ್ರೀನಿವಾಸಗೌಡರ ಬಣದ ಅಭ್ಯರ್ಥಿ ಪರಾಭವಗೊಂಡಿದ್ದು, ಶಾಸಕರಿಗೆ ಮುಖಭಂಗವಾಗಿದೆ.

ಶಾಸಕರು ಹಾಗೂ ಪಕ್ಷದ ಮುಖಂಡರು ಎಪಿಎಂಸಿ ನಿಕಟಪೂರ್ವ ಅಧ್ಯಕ್ಷ ಬಿ.ವೆಂಕಟೇಶ್‌ ಅವರನ್ನೇ ಎರಡನೇ ಅವಧಿಗೂ ಮುಂದುವರಿಸುವ ನಿರ್ಣಯ ಕೈಗೊಂಡು ನಾಮಪತ್ರ ಹಾಕಿಸಿದರು. ಆದರೆ, ಶಾಸಕರ ನಿರ್ಧಾರಕ್ಕೆ ಸೆಡ್ಡು ಹೊಡೆದ ಜೆಡಿಎಸ್‌ ಪಾಳಯದವರೇ ಆದ ಡಿ.ಎಲ್‌.ನಾಗರಾಜ್‌ ಬಂಡಾಯ ಅಭ್ಯರ್ಥಿಯಾಗಿ ಉಮೇದುವಾರಿಕೆ ಸಲ್ಲಿಸಿದರು.

ಬಳಿಕ ನಡೆದ ಚುನಾವಣೆಯಲ್ಲಿ ನಾಗರಾಜು 8 ಮತ ಗಳಿಸಿ ಗೆಲುವಿನ ನಗೆ ಬೀರಿದರು. 7 ಮತ ಗಳಿಸಿದ ವೆಂಕಟೇಶ್‌ ಸೋಲು ಅನುಭವಿಸಿದರು. ಉಪಾಧ್ಯಕ್ಷ ಸ್ಥಾನಕ್ಕೆ ಜೆಡಿಎಸ್‌ ಪಾಳಯದ ರವಿಶಂಕರ್‌ ಮಾತ್ರ ನಾಮಪತ್ರ ಸಲ್ಲಿಸಿದರು. ಹೀಗಾಗಿ ಅವರು ಅವಿರೋಧ ಆಯ್ಕೆಯಾದರು.

ನಾಟಕೀಯ ಬೆಳವಣಿಗೆ: ನಾಮಪತ್ರ ಸಲ್ಲಿಕೆಗೂ ಮುನ್ನ ಎಪಿಎಂಸಿ ಕಚೇರಿಯಲ್ಲಿ ನಾಟಕೀಯ ಬೆಳವಣಿಗೆಗಳು ನಡೆದವು. ಟಮಕ ಕ್ಷೇತ್ರದ ವೆಂಕಟೇಶ್ ಅವರನ್ನೇ ಪುನರಾಯ್ಕೆ ಮಾಡುವಂತೆ ಶಾಸಕ ಶ್ರೀನಿವಾಸಗೌಡರು ಲಕೋಟೆ ಮೂಲಕ ಹೆಸರು ಸೂಚಿಸಿ ಕಳುಹಿಸಿದ್ದರು.

ಆದರೆ, ನಾಗರಾಜು ಅವರನ್ನು ಒಳಗೊಂಡಂತೆ 8 ಮಂದಿ ಸ್ವಪಕ್ಷೀಯ ನಿರ್ದೇಶಕರೇ ಶಾಸಕರ ನಿರ್ಧಾರದ ವಿರುದ್ಧ ಸಿಡಿದೆದ್ದರು. ಪಕ್ಷದ ಮುಖಂಡರು ನಾಗರಾಜು ಮತ್ತು ಅವರ ಬಣದ ನಿರ್ದೇಶಕರ ಮನವೊಲಿಕೆಗೆ ನಡೆಸಿದ ಕಸರತ್ತು ವಿಫಲವಾಯಿತು.

ಮಾತು ಕೊಟ್ಟಿದ್ದರು: ‘ಹಿಂದಿನ ಅವಧಿಯಲ್ಲೇ ನಾನು ಅಧ್ಯಕ್ಷನಾಗಬೇಕಿತ್ತು. ಆದರೆ, ಶ್ರೀನಿವಾಸಗೌಡರ ಮಾತಿಗೆ ಕಟ್ಟುಬಿದ್ದು ವೆಂಕಟೇಶ್ ಅವರಿಗೆ ಅವಕಾಶ ಬಿಟ್ಟುಕೊಟ್ಟಿದ್ದೆ. ಶ್ರೀನಿವಾಸಗೌಡರು ಎರಡನೇ ಅವಧಿಗೆ ನನ್ನನ್ನೇ ಅಧ್ಯಕ್ಷನನ್ನಾಗಿ ಮಾಡುವುದಾಗಿ ಮಾತು ಕೊಟ್ಟಿದ್ದರು. ಈಗ ಅವರೇ ವೆಂಕಟೇಶ್‌ ಅವರನ್ನು ಮರು ಆಯ್ಕೆ ಮಾಡುವಂತೆ ಹೇಳಿದರೆ ಹೇಗೆ? ಅದಕ್ಕೆ ಒಪ್ಪುವುದಿಲ್ಲ’ ಎಂದು ನಾಗರಾಜು ಪಟ್ಟು ಹಿಡಿದರು.

‘ಶಾಸಕರು ಕೊಟ್ಟ ಮಾತಿನಂತೆ ನಡೆದುಕೊಳ್ಳಲಿ. ಕನಿಷ್ಠ ಒಂದು ತಿಂಗಳು ಅಧ್ಯಕ್ಷನಾಗಿರಲು ಅವಕಾಶ ಕೊಟ್ಟರೂ ಸಾಕು. ಆಮೇಲೆ ನಾನೇ ರಾಜೀನಾಮೆ ಕೊಡುತ್ತೇನೆ. ಈಗ ಯಾವುದೇ ಕಾರಣಕ್ಕೂ ನಾಮಪತ್ರ ಹಿಂಪಡೆಯುವುದಿಲ್ಲ’ ಎಂದು ಕಡ್ಡಿ ತುಂಡು ಮಾಡಿದಂತೆ ಮುಖಂಡರಿಗೆ ತಿಳಿಸಿದರು.

ಇತ್ತ ವೆಂಕಟೇಶಪ್ಪ, ‘ಶ್ರೀನಿವಾಸಗೌಡರು ಹೇಳಿದಂತೆ ಕೇಳುತ್ತೇನೆ. ಅವರು ಚುನಾವಣೆಯಲ್ಲಿ ಸ್ಪರ್ಧಿಸಲು ನನ್ನ ಹೆಸರನ್ನು ಲಕೋಟೆ ಮೂಲಕ ಕಳುಹಿಸಿದ್ದಾರೆ. ಅವರು ಕರೆ ಮಾಡಿ ತಿಳಿಸಿದರೆ ಉಮೇದುವಾರಿಕೆ ಹಿಂಪಡೆಯುತ್ತೇನೆ’ ಎಂದು ಮುಖಂಡರಿಗೆ ಹೇಳಿದರು.

ಮಾತಿನ ಚಕಮಕಿ: ‘ವೆಂಕಟೇಶ್ ಅಧ್ಯಕ್ಷರಾಗಿ ಈಗಾಗಲೇ 20 ತಿಂಗಳ ಆಡಳಿತ ನಡೆಸಿದ್ದಾರೆ. ಅವರನ್ನು ಮುಂದುವರಿಸುವ ಅಗತ್ಯ ಏನಿದೆ? ನಾಗರಾಜು ಅವರಿಗೆ ಮೊದಲ ಅವಧಿಯಲ್ಲೇ ಅಧ್ಯಕ್ಷರಾಗುವ ಅವಕಾಶವಿತ್ತು. ಆದರೂ ಅಧಿಕಾರಕ್ಕೆ ಆಸೆಪಡದೆ ಅವಕಾಶ ಬಿಟ್ಟುಕೊಟ್ಟರು. ಶಾಸಕರು ಏಕೆ ವೆಂಕಟೇಶ್‌ ಅವರ ಹೆಸರು ಸೂಚಿಸಿದ್ದಾರೆ’ ಎಂದು ನಾಗರಾಜ್‌ ಬಣದ ನಿರ್ದೇಶಕರು ಅಸಮಾಧಾನ ವ್ಯಕ್ತಪಡಿಸಿದರು. ಆಗ ಉಭಯ ಬಣಗಳ ನಿರ್ದೇಶಕರ ನಡುವೆ ಮಾತಿನ ಚಕಮಕಿ ನಡೆಯಿತು.

ನಂತರ ಮುಖಂಡರು ಶ್ರೀನಿವಾಸಗೌಡರನ್ನು ಸಂಪರ್ಕಿಸಲು ಯತ್ನಿಸಿದರು. ಆದರೆ, ಅವರ ಮೊಬೈಲ್‌ ಸ್ವಿಚ್‌ ಆಫ್‌ ಆಗಿತ್ತು. ಇಬ್ಬರೂ ಅಭ್ಯರ್ಥಿಗಳು ಚುನಾವಣಾ ಕಣದಿಂದ ಹಿಂದೆ ಸರಿಯಲು ಒಪ್ಪದ ಕಾರಣ ಮುಖಂಡರು ಬೇಸರದಿಂದ ಹೊರ ನಡೆದರು.

1 ಮತ ತಿರಸ್ಕೃತ: ಒಟ್ಟು 16 ನಿರ್ದೇಶಕರ ಸ್ಥಾನ ಹೊಂದಿರುವ ಎಪಿಎಂಸಿಯಲ್ಲಿ ಜೆಡಿಎಸ್‌ ಬೆಂಬಲಿತ 11 ಮಂದಿ, ಕಾಂಗ್ರೆಸ್‌ನ 1 ಹಾಗೂ ಮಾಜಿ ಶಾಸಕ ವರ್ತೂರು ಪ್ರಕಾಶ್‌ ಬಣದ ಒಬ್ಬರು ನಿರ್ದೇಶಕರಿದ್ದಾರೆ. 3 ಮಂದಿ ನಾಮನಿರ್ದೇಶಿತ ನಿರ್ದೇಶಕರಿದ್ದಾರೆ. ಈ ಎಲ್ಲಾ ನಿರ್ದೇಶಕರಿಗೂ ಮತದಾನ ಹಕ್ಕಿದ್ದು, ಅಧ್ಯಕ್ಷ ಹಾಗೂ ಉಪಾಧ್ಯಕ್ಷಗಾದಿಗೆ ಏರಲು 9 ನಿರ್ದೇಶಕರ ಬೆಂಬಲದ ಅಗತ್ಯವಿತ್ತು. ನಾಮಪತ್ರ ಸಲ್ಲಿಕೆ ಬಳಿಕ ರಹಸ್ಯ ಮತದಾನ ನಡೆದು 16 ನಿರ್ದೇಶಕರೂ ಮತ ಚಲಾಯಿಸಿದರು. ಈ ಪೈಕಿ ಒಬ್ಬರ ಮತ ತಿರಸ್ಕೃತಗೊಂಡಿತು.

ತಹಶೀಲ್ದಾರ್‌ (ಪ್ರಭಾರ) ನಾಗವೇಣಿ ಚುನಾವಣಾ ಪ್ರಕ್ರಿಯೆ ನಿರ್ವಹಿಸಿದರು. ಚುನಾವಣಾ ಫಲಿತಾಂಶ ಘೋಷಣೆ ಬಳಿಕ ನಾಗರಾಜು ಬೆಂಬಲಿಗರು ಹಾಗೂ ಜೆಡಿಎಸ್‌ ಕಾರ್ಯಕರ್ತರು ಎಪಿಎಂಸಿ ಆವರಣದಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಿದರು. ಅಲ್ಲದೇ, ಸಿಹಿ ಹಂಚಿ ನಾಗರಾಜು ಪರ ಘೋಷಣೆ ಕೂಗಿದರು.

ಅಂಕಿ ಅಂಶ
* 13 ಮಂದಿ ಚುನಾಯಿತ ನಿರ್ದೇಶಕರು
* 3 ಮಂದಿ ನಾಮನಿರ್ದೇಶಿತ ನಿರ್ದೇಶಕರು
* 16 ಮತ ಚಲಾವಣೆ
* 1 ಮತ ತಿರಸ್ಕೃತ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !