ಮಾವಿನ ಬೆಂಬಲ ಬೆಲೆ ಹಣ ಪಾವತಿಗೆ ಒತ್ತಾಯ: ಜಿಲ್ಲಾ ಬಂದ್‌ ಕರೆ ಎಚ್ಚರಿಕೆ

7

ಮಾವಿನ ಬೆಂಬಲ ಬೆಲೆ ಹಣ ಪಾವತಿಗೆ ಒತ್ತಾಯ: ಜಿಲ್ಲಾ ಬಂದ್‌ ಕರೆ ಎಚ್ಚರಿಕೆ

Published:
Updated:

ಕೋಲಾರ: ‘ಮಾವಿನ ಬೆಂಬಲ ಬೆಲೆ ಹಣವನ್ನು ವಾರದೊಳಗೆ ರೈತರ ಬ್ಯಾಂಕ್‌ ಖಾತೆಗೆ ಜಮಾ ಮಾಡದಿದ್ದರೆ ಜಿಲ್ಲಾ ಬಂದ್‌ಗೆ ಕರೆ ನೀಡುತ್ತೇವೆ’ ಎಂದು ಜಿಲ್ಲಾ ಮಾವು ಬೆಳೆಗಾರರ ಸಂಘದ ಕಾರ್ಯದರ್ಶಿ ಚಿನ್ನಪ್ಪರೆಡ್ಡಿ ಎಚ್ಚರಿಕೆ ನೀಡಿದರು.

ಇಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಮಾವಿಗೆ ಸರ್ಕಾರ ಬೆಂಬಲ ಬೆಲೆ ಘೋಷಿಸಿ ₹ 27.50 ಕೋಟಿ ಬಿಡುಗಡೆ ಮಾಡಿದೆ. ಆದರೆ, ಜಿಲ್ಲಾಡಳಿತವು ಈವರೆಗೂ ಮಾವು ಬೆಳೆಗಾರರ ಖಾತೆಗೆ ಹಣ ಜಮಾ ಮಾಡಿಲ್ಲ’ ಎಂದು ದೂರಿದರು.

‘ದೇವರು ವರ ಕೊಟ್ಟರೂ ಪೂಜಾರಿ ವರ ಕೊಡಲ್ಲ ಎಂಬಂತೆ ಜಿಲ್ಲಾಡಳಿತ ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಮಾವು ಖರೀದಿಸಿ 3 ತಿಂಗಳು ಕಳೆದರೂ ರೈತರಿಗೆ ಹಣ ಸಂದಾಯ ಮಾಡಿಲ್ಲ. ರೈತರು ಹಣಕ್ಕಾಗಿ ತೋಟಗಾರಿಕೆ ಇಲಾಖೆ ಕಚೇರಿಗೆ ಅಲೆಯುವಂತಾಗಿದೆ. ಹಣ ನೀಡಲು ಮೀನಾಮೇಷ ಎಣಿಸುತ್ತಿರುವ ಅಧಿಕಾರಿಗಳು ಸಬೂಬು ಹೇಳುತ್ತಾ ಕಾಲಹರಣ ಮಾಡುತ್ತಿದ್ದಾರೆ’ ಎಂದು ಆರೋಪಿಸಿದರು.

‘ಜಿಲ್ಲೆಯ ಸುಮಾರು 11 ಸಾವಿರ ರೈತರು ಬೆಂಬಲ ಬೆಲೆಯಡಿ ಅರ್ಜಿ ಹಾಕಿದ್ದಾರೆ. ಡಿಸೆಂಬರ್ ಆರಂಭದಲ್ಲಿ ಮಾವಿನ ಮರಗಳಿಗೆ ಔಷಧಿ ಸಿಂಪಡಿಸಬೇಕಿದೆ. ಆದರೆ, ಹಣಕಾಸಿನ ಕೊರತೆ ಕಾರಣಕ್ಕೆ ಮಾವು ಬೆಳೆಗಾರರು ಪರದಾಡುತ್ತಿದ್ದಾನೆ’ ಎಂದು ಬೇಸರ ವ್ಯಕ್ತಪಡಿಸಿದರು.

75 ರೈತರಿಗೆ ಸಂದಾಯ: ‘ಬೆಂಬಲ ಬೆಲೆ ಕಡತವನ್ನು ಅಧಿಕಾರಿಗಳು 2 ತಿಂಗಳು ಮೂಲೆಗೆ ಹಾಕಿದ್ದರು. ಕೋಲಾರ ಜಿಲ್ಲೆ ಒಂದರಲ್ಲೇ ಸುಮಾರು 6,795 ಅರ್ಜಿಗಳು ಬಂದಿವೆ. ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಜಿಲ್ಲೆಗೆ ಬರುತ್ತಾರೆಂಬ ಸುದ್ದಿ ತಿಳಿದ ಅಧಿಕಾರಿಗಳು ಇತ್ತೀಚೆಗೆ ಕೆಲ ಮಾವು ಬೆಳೆಗಾರರ ಖಾತೆಗೆ ತರಾತುರಿಯಲ್ಲಿ ಹಣ ತುಂಬಿದರು. 75 ರೈತರಿಗೆ ಮಾತ್ರ ಹಣ ಸಂದಾಯವಾಗಿದೆ’ ಎಂದು ವಿವರಿಸಿದರು.

ರೈತ ಸಂಘ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ನಳಿನಿ, ಮಾವು ಬೆಳೆಗಾರರಾದ ರಮೇಶ್, ಚಂದ್ರಶೇಖರ್, ಸೋಮಶೇಖರ್‌ಗೌಡ, ನೀರಾವರಿ ಹೋರಾಟ ಸಮಿತಿ ಸಂಚಾಲಕ ಪುಟ್ಟರಾಜು ಹಾಜರಿದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !