ಸ್ಪರ್ಧಾತ್ಮಕ ಯುಗದಲ್ಲಿ ಕಂಪ್ಯೂಟರ್‌ ಜ್ಞಾನ ಅತ್ಯಗತ್ಯ

7
ಕಿಯೋನಿಕ್ಸ್ ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ ಜಿ.ಪಂ ಸಿಇಒ ಜಗದೀಶ್‌ ಅಭಿಪ್ರಾಯ

ಸ್ಪರ್ಧಾತ್ಮಕ ಯುಗದಲ್ಲಿ ಕಂಪ್ಯೂಟರ್‌ ಜ್ಞಾನ ಅತ್ಯಗತ್ಯ

Published:
Updated:
Deccan Herald

ಕೋಲಾರ: ‘ಕಂಪ್ಯೂಟರ್‌ ಜ್ಞಾನದ ಕೊರತೆಯಿಂದಾಗಿ ವಿದ್ಯಾವಂತರು ಸಹ ಉದ್ಯೋಗ ವಂಚಿತರಾಗುತ್ತಿದ್ದಾರೆ’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಜಿ.ಜಗದೀಶ್ ಕಳವಳ ವ್ಯಕ್ತಪಡಿಸಿದರು.

ಇಲ್ಲಿ ಶುಕ್ರವಾರ ನಡೆದ ಕಿಯೋನಿಕ್ಸ್ ಸಂಸ್ಥೆಯ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿ, ‘ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಎಲ್ಲಾ ಕ್ಷೇತ್ರಗಳಲ್ಲೂ ಕಂಪ್ಯೂಟರ್‌ ಜ್ಞಾನ ಅತ್ಯಗತ್ಯ. ತರಬೇತಿ ಕೇಂದ್ರಗಳು ಕೇವಲ ಅಭ್ಯರ್ಥಿಗಳಿಗೆ ಪ್ರಮಾಣಪತ್ರ ಕೊಡುವುದಕ್ಕೆ ಸೀಮಿತವಾಗಬಾರದು’ ಎಂದರು.

‘ನಗರ ಮತ್ತು ಪಟ್ಟಣ ಪ್ರದೇಶದಲ್ಲಿ ಅನೇಕ ತರಬೇತಿ ಸಂಸ್ಥೆಗಳು ತಲೆ ಎತ್ತುತ್ತಿವೆ. ಆದರೆ, ಅಗತ್ಯ ತರಬೇತಿ ನೀಡದೆ ಕೇವಲ ಪ್ರಮಾಣಪತ್ರ ಕೊಡುತ್ತಿವೆ. ಸರ್ಕಾರದಿಂದ ಮಾನ್ಯತೆ ಪಡೆದ ತರಬೇತಿ ಕೇಂದ್ರಗಳು ಈ ರೀತಿ ಮಾಡುವುದು ಎಷ್ಟು ಸರಿ?’ ಎಂದು ಪ್ರಶ್ನಿಸಿದರು.

‘ಕೆಲವು ಕಡೆ ಪ್ರಮಾಣಪತ್ರ ನೋಡಿ ಕೆಲಸ ಬರುತ್ತದೆ ಎಂಬ ನಂಬಿಕೆಯಿಂದ ಕೆಲಸ ಕೊಡುತ್ತಾರೆ. ನಂತರ ಕೆಲಸ ಮಾಡಲು ಬಾರದೆ ಅರ್ಧಕ್ಕೆ ಬಿಟ್ಟು ಬಂದಿರುವವರು ಇದ್ದಾರೆ. ಇದರಿಂದ ಸಂಸ್ಥೆಯ ಮೇಲಿನ ನಂಬಿಕೆಯೂ ಹೋಗುತ್ತದೆ. ಈ ರೀತಿ ಆಗದಂತೆ ಎಚ್ಚರಿಕೆ ವಹಿಸಬೇಕು’ ಎಂದು ಸಲಹೆ ನೀಡಿದರು.

‘ಇತ್ತೀಚೆಗೆ ಜಿಲ್ಲಾ ಪಂಚಾಯಿತಿಯ ನರೇಗಾ ವಿಭಾಗದಲ್ಲಿನ 10 ಎಂಜಿನಿಯರ್‌ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿತ್ತು. 200ಕ್ಕೂ ಹೆಚ್ಚು ಮಂದಿ ಅರ್ಜಿ ಸಲ್ಲಿಸಿದ್ದು, ಇದರಲ್ಲಿ ಎಷ್ಟು ಮಂದಿಗೆ ಕಂಪ್ಯೂಟರ್ ಜ್ಞಾನ ಇದೆ ಎಂಬುದು ಮುಖ್ಯವಾಗುತ್ತದೆ’ ಎಂದು ಅಭಿಪ್ರಾಯಪಟ್ಟರು.

ಕೌಶಲ ತರಬೇತಿ: ‘ಕಂಪ್ಯೂಟರ್‌ ಜ್ಞಾನವಿಲ್ಲದ ಕಾರಣಕ್ಕೆ ಅನೇಕ ವಿದ್ಯಾವಂತರು ನಿರುದ್ಯೋಗಿಗಳಾಗಿ ಉಳಿದಿದ್ದಾರೆ. ಅವರಿಗೆ ಉದ್ಯೋಗಾವಕಾಶ ಕಲ್ಪಿಸುವ ನಿಟ್ಟಿನಲ್ಲಿ ಸರ್ಕಾರ ಕೌಶಲ ತರಬೇತಿ ಯೋಜನೆ ಜಾರಿಗೆ ತಂದಿದೆ. ಅಭ್ಯರ್ಥಿಗಳಿಗೆ ಯೋಜನೆ ಪ್ರಯೋಜನ ತಲುಪಿಸುವ ನಿಟ್ಟಿನಲ್ಲಿ ಸಂಸ್ಥೆಗಳು ಕೆಲಸ ಮಾಡಬೇಕು’ ಎಂದು ಕಿವಿಮಾತು ಹೇಳಿದರು.

ಜ್ಞಾನ ವೃದ್ಧಿ: ‘ಕಂಪ್ಯೂಟರ್ ತರಬೇತಿಯಿಂದ ವಿದ್ಯಾರ್ಥಿಗಳ ಜ್ಞಾನ ವೃದ್ಧಿಯಾಗುತ್ತದೆ. ಈಗ ಪ್ರತಿ ಕ್ಷೇತ್ರದಲ್ಲೂ ಆನ್‌ಲೈನ್‌ ವ್ಯವಸ್ಥೆ ಜಾರಿಯಾಗಿದ್ದು, ಕೆಲಸಕ್ಕೆ ಸೇರಿಸಿಕೊಳ್ಳುವ ಮುನ್ನ ಕಂಪ್ಯೂಟರ್ ಜ್ಞಾನ ಇದೆಯೇ ಎಂದು ಕೇಳುತ್ತಾರೆ. ಆದ ಕಾರಣ ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಜತೆಗೆ ಕಂಪ್ಯೂಟರ್‌ ತರಬೇತಿ ಪಡೆಯಬೇಕು’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹಿಣಿ ಕಟೋಚ್ ಸೆಪಟ್‌ ಸಲಹೆ ನೀಡಿದರು.

ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕ ರವಿಚಂದ್ರನ್, ಜಿಲ್ಲಾ ಸರಬರಾಜು ಮತ್ತು ಮಾರಾಟ ಸಹಕಾರ ಸಂಘದ ನಿರ್ದೇಶಕ ವಿ.ಮುನಿರಾಜು ಪಾಲ್ಗೊಂಡಿದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !