ಬೆಂಕಿ: ಸಿಡಿದ ಸಿಲಿಂಡರ್‌, ಅಂಗಡಿ ಭಸ್ಮ

7

ಬೆಂಕಿ: ಸಿಡಿದ ಸಿಲಿಂಡರ್‌, ಅಂಗಡಿ ಭಸ್ಮ

Published:
Updated:
Deccan Herald

ಮಂಡ್ಯ: ತಾಲ್ಲೂಕಿನ ರಾಗಿಮುದ್ದನಹಳ್ಳಿ ಗ್ರಾಮದ ಚಿಲ್ಲರೆ ಅಂಗಡಿಯೊಂದರಲ್ಲಿ ಗುರುವಾರ ರಾತ್ರಿ ಬೆಂಕಿ ಕಾಣಿಸಿಕೊಂಡು ನಂತರ ಗೃಹ ಬಳಕೆಯ ಗ್ಯಾಸ್‌ ಸಿಲಿಂಡರ್‌ ಸಿಡಿದಿದೆ. ಘಟನೆಯಲ್ಲಿ ಅಂಗಡಿ ಭಸ್ಮವಾಗಿದ್ದು ಯಾವುದೇ ಸಾವು ನೋವು ಉಂಟಾಗಿಲ್ಲ.

ಗ್ರಾಮದ ಅನಿಲ್‌ ಕುಮಾರ್‌ ಅವರಿಗೆ ಅಂಗಡಿ ಸೇರಿದೆ. ರಾತ್ರಿ 12 ಗಂಟೆಯ ವೇಳೆಯಲ್ಲಿ ಅಂಗಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ನಂತರ ಅಂಗಡಿಯೊಳಗಿದ್ದ ಸಿಲಿಂಡರ್‌ ಸಿಡಿದಿದೆ. ಸಿಲಿಂಡರ್‌ ಶಬ್ದಕ್ಕೆ ಇಡೀ ಗ್ರಾಮದ ಜನರು ಭಯಭೀತರಾಗಿದ್ದಾರೆ. ಬೆಂಕಿ ಪಕ್ಕದಲ್ಲಿದ್ದ ಶುದ್ಧ ಕುಡಿಯವ ನೀರಿನ ಘಟಕಕ್ಕೂ ತಗುಲಿ ಉಪಕರಣಗಳು ಸುಟ್ಟು ಹೋಗಿವೆ. ಜೊತೆಗೆ ಅಂಗಡಿಯ ಹಿಂಭಾಗದಲ್ಲಿದ್ದ ಸಲೂನ್‌ಗೂ ಬೆಂಕಿ ತಗುಲಿದೆ. ಅಂಗಡಿಯಲ್ಲಿ ಕೆಲವು ಕೃಷಿ ಉಪಕರಣಗಳು ಇದ್ದವು. ಅವುಗಳನ್ನು ಅನಿಲ್‌ಕುಮಾರ್‌ ಬಾಡಿಗೆ ನೀಡುತ್ತಿದ್ದರು. ಅವೂ ಬೆಂಕಿಗೆ ಆಹುತಿಯಾಗಿವೆ. ಜೊತೆಗೆ ಮೊಬೈಲ್‌ ರೀಚಾರ್ಜ್‌ ಮಾಡಲು ಇಟ್ಟುಕೊಂಡಿದ್ದ ಐದು ಮೊಬೈಲ್‌ ಫೋನ್‌ಗಳು ಸುಟ್ಟುಹೋಗಿವೆ.

ಬೆಂಕಿ ಕಾಣಿಸಿಕೊಂಡ ತಕ್ಷಣ ಗ್ರಾಮಸ್ಥರು ಅಗ್ನಿಶಾಮಕ ಠಾಣೆಗೆ ಕರೆ ಮಾಡಿದ್ದಾರೆ. ಸಿಬ್ಬಂದಿ ವಾಹನದೊಂದಿಗೆ ಬರುವಷ್ಟರಲ್ಲಿ ಬೆಂಕಿಗೆ ಅಂಗಡಿ ಭಸ್ಮವಾಗಿತ್ತು. ಆದರೂ ಬೇರೆ ಮನೆಗಳಿಗೆ ಬೆಂಕಿ ಹರಡುವುದನ್ನು ತಡೆಯುವಲ್ಲಿ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.

‘ಗ್ರಾಮದಲ್ಲಿ ಕಳೆದ ಐದು ವರ್ಷಗಳಿಮದ ಮೂರು ಅಂಗಡಿಗಳು ಸುಟ್ಟು ಹೋಗಿವೆ. ಏಳೆಂಟು ಹುಲ್ಲಿನ ಬಣವೆಗಳು ಭಸ್ಮವಾಗಿವೆ. ಗ್ರಾಮದಲ್ಲಿ ಕೆಲವು ಕಿಡಿಗೇಡಿಗಳು ಬೆಂಕಿ ಹಚ್ಚುತ್ತಿರುವ ಬಗ್ಗೆ ಅನುಮಾನವಿದೆ. ಪೊಲೀಸರು ಈ ಬಗ್ಗೆ ತನಿಖೆ ನಡೆಸಬೇಕು’ ಎಂದು ಗ್ರಾಮಸ್ಥರು ಆಗ್ರಹಿಸಿದರು. ಘಟನೆಯಲ್ಲಿ ₹ 3 ಲಕ್ಷಕ್ಕೂ ಹೆಚ್ಚು ಹಾನಿಯಾಗಿದೆ ಎಂದು ಅಂದಾಜು ಮಾಡಲಾಗಿದೆ. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !