ಟೆಸ್ಟ್ ಕ್ರಿಕೆಟ್: ನೂರರತ್ತ ಚೇಸ್; ಮುನ್ನೂರರತ್ತ ವಿಂಡೀಸ್

7
ಕುಲದೀಪ್–ಯಾದವ್‌ಗೆ ತಲಾ ಮೂರು ವಿಕೆಟ್

ಟೆಸ್ಟ್ ಕ್ರಿಕೆಟ್: ನೂರರತ್ತ ಚೇಸ್; ಮುನ್ನೂರರತ್ತ ವಿಂಡೀಸ್

Published:
Updated:

ಹೈದರಾಬಾದ್: ಉಪ್ಪಳದ ರಾಜೀವಗಾಂಧಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ಶುಕ್ರವಾರ ರೋಸ್ಟನ್ ಚೇಸ್ ಮತ್ತು ನಾಯಕ ಜೇಸನ್ ಹೋಲ್ಡರ್‌ ಅವರ ಆಟ ರಂಗೇರಿತು.

ಇಲ್ಲಿ ಆರಂಭವಾದ ಭಾರತ ತಂಡದ ಎದುರಿನ ಎರಡನೇ ಟೆಸ್ಟ್‌ನಲ್ಲಿ ಮೊದಲ ದಿನದ ಗೌರವವನ್ನು ವಿಂಡೀಸ್ ತನ್ನದಾಗಿಸಿಕೊಂಡಿತು. ದಿನದಾಟದ ಕೊನೆಗೆ 95 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 295 ರನ್‌ಗಳನ್ನು ಗಳಿಸಿತು.  ಚೇಸ್ (ಬ್ಯಾಟಿಂಗ್ 98; 174ಎಸೆತ, 7ಬೌಂಡರಿ, 1ಸಿಕ್ಸರ್) ಮತ್ತು ದೇವೇಂದ್ರ ಬಿಷೂ (ಬ್ಯಾಟಿಂಗ್ 2) ಕ್ರೀಸ್‌ನಲ್ಲಿದ್ದಾರೆ.

ಸರಣಿಯ ಮೊದಲ ಪಂದ್ಯದಲ್ಲಿ  ಇನಿಂಗ್ಸ್ ಮತ್ತು 272 ರನ್‌ಗಳಿಂದ ಗೆದ್ದಿದ್ದ ವಿರಾಟ್ ಬಳಗವು ಈ ಪಂದ್ಯದಲ್ಲಿಯೂ ಸುಲಭವಾಗಿ ಜಯದತ್ತ ಸಾಗುವ ಕನಸು ಕಂಡಿತ್ತು. ಅದಕ್ಕೆ ಗಟ್ಟಿ ಬುನಾದಿ ಹಾಕುವ ಅವಕಾಶವನ್ನೂ ಪಡೆದಿತ್ತು.

ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ತಂಡಕ್ಕೆ ಮಧ್ಯಮವೇಗಿ ಉಮೇಶ್ ಯಾದವ್ (83ಕ್ಕೆ3) ಮತ್ತು ಕುಲದೀಪ್ ಯಾದವ್ (74ಕ್ಕೆ3) ಅವರ ಬೌಲಿಂಗ್  ದಾಳಿಗೆ ಬ್ಯಾಟಿಂಗ್ ಪಡೆ ತತ್ತರಿಸಿತು. ಅಗ್ರ ಕ್ರಮಾಂಕದ ಮತ್ತು ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಬೇಗನೆ ಪೆವಿಲಿಯನ್‌ಗೆ ಮರಳಿದರು.

ಇದರಿಂದಾಗಿ 113 ರನ್‌ಗಳಾಗುವಷ್ಟರಲ್ಲಿ 5 ವಿಕೆಟ್‌ಗಳು ಉರುಳಿದವು. ಆರನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದ ರೋಸ್ಟನ್ ಚೇಸ್ ತಾಳ್ಮೆಯಿಂದ ಬೌಲರ್‌ಗಳನ್ನು ಎದುರಿಸಿದರು. ಆರನೇ ವಿಕೆಟ್‌ ಜೊತೆಯಾಟದಲ್ಲಿ ಅವರು ಶೇನ್ ಡೋರಿಚ್‌ ಅವರೊಂದಿಗೆ 69 ರನ್‌ಗಳನ್ನು ಸೇರಿಸಿದರು. 60ನೇ ಓವರ್‌ನಲ್ಲಿ ಉಮೇಶ್ ಯಾದವ್ ಅವರ ನೇರ ಎಸೆತಕ್ಕೆ ಡೋರಿಚ್ ಎಲ್‌ಬಿಡಬ್ಲ್ಯು ಆದರು. ಜೊತೆಯಾಟ ಮುರಿದುಬಿತ್ತು.

ಕ್ರೀಸ್‌ಗೆ ಬಂದ ನಾಯಕ ಜೇಸನ್ ಹೋಲ್ಡರ್‌ ಅವರು ಚೇಸ್‌ ಜೊತೆಗೂಡಿ ಸುಂದರ ಇನಿಂಗ್ಸ್‌ ಕಟ್ಟಿದರು. ಬೌಲರ್‌ಗಳನ್ನು ಸಖತ್ ಕಾಡಿದರು.

ಏಳನೇ ವಿಕೆಟ್‌ ಪಾಲುದಾರಿಕೆಯಲ್ಲಿ  ಇಬ್ಬರೂ ಸೇರಿ 104 ರನ್‌ಗಳನ್ನು ಸೇರಿಸಿದರು. ಮೂವರು ಸ್ಪಿನ್ನರ್‌ಗಳು ಮತ್ತು ಒಬ್ಬ ವೇಗಿಯನ್ನು ದಿಟ್ಟತನದಿಂದ ಎದುರಿಸಿದರು. ಇದರಿಂದಾಗಿ ತಂಡದ ಮೊತ್ತವು ಮುನ್ನೂರರ ಸನಿಹಕ್ಕೆ ಬಂದಿತು. ಮೊದಲ ದಿನವೇ ಎಲ್ಲ ವಿಕೆಟ್ ಕಬಳಿಸುವ ಭಾರತದ ಗುರಿಗೆ ಹಿನ್ನಡೆಯಾಯಿತು.

ಪದಾರ್ಪಣೆ–ಗಾಯ: ಮಧ್ಯಮವೇಗಿ ಶಾರ್ದೂಲ್ ಠಾಕೂರ್ ಅವರಿಗೆ ಠೆಸ್ಟ್ ಪದಾರ್ಪಣೆಯ ಅವಕಾಶ ಲಭಿಸಿತು. ಆದರೆ ಅವರು ತಮ್ಮ ಎರಡನೇ ಓವರ್‌ನಲ್ಲಿ ಬೌಲಿಂಗ್‌ ಮಾಡುವಾಗ ತೊಡೆಯ ಸ್ನಾಯುಸೆಳೆತ ಅನುಭವಿಸಿದರು.ಹೆಚ್ಚು ನೋವಿದ್ದ ಕಾರಣ ಅವರಿಗೆ ವಿಶ್ರಾಂತಿ ನೀಡಲಾಯಿತು. ಇದರಿಂದಾಗಿ ಉಮೇಶ್ ಯಾದವ್ ಒಬ್ಬರೇ ವೇಗದ ಬೌಲಿಂಗ್‌ ಹೊಣೆಯನ್ನು ನಿಭಾಯಿಸಿದರು.

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !