‘ಬೀಜ ಆಯ್ದರೆ, ಹೊಟ್ಟೆಗೆ ಅನ್ನ ಕಣಮ್ಮಾ...’

7
ಪಿಂಚಣಿ ಇಲ್ಲದ ಮುನಿಯಮ್ಮನ ಗೋಳು ಕೇಳುವವರಿಲ್ಲ

‘ಬೀಜ ಆಯ್ದರೆ, ಹೊಟ್ಟೆಗೆ ಅನ್ನ ಕಣಮ್ಮಾ...’

Published:
Updated:

ಬೆಂಗಳೂರು: ‘ಬೀಜ ಆಯ್ದರೆ ಮಾತ್ರ ಹೊಟ್ಟೆಗೆ ಅನ್ನ ಕಣಮ್ಮಾ..., ಬೆನ್ನು ಬಾಗಿದ್ರು ದೇಹ ಇನ್ನೂ ಗಟ್ಟಿಯಾಗೈತಮ್ಮಾ. ನನ್ನ ಅನ್ನ ನಾನೇ ದುಡ್ಕೋಬೇಕಲ್ವಾ?’

ಹೀಗೆ ಪ್ರಶ್ನಿಸುವವರು ಸಸ್ಯಕಾಶಿ ಲಾಲ್‌ಬಾಗ್‌ನಲ್ಲಿ ಬೀಜ ಆಯುವ ಅಜ್ಜಿ ಮುನಿಯಮ್ಮ. ಇವರು ಸಿದ್ಧಾಪುರದ ನಿವಾಸಿ. ಸ್ವಂತದ ಸೂರಿಲ್ಲ. ನಿತ್ಯ ಬೀಜ ಆಯದಿದ್ದರೆ ಹೊಟ್ಟೆಗೆ ಗತಿಯಿಲ್ಲದಂತಹ ಪರಿಸ್ಥಿತಿ ಇವರದ್ದು.

‘ಮಗಳು ದುಡೀತಾಳೆ. ನಾಲ್ಕು ಜನ ಮೊಮ್ಮಕ್ಕಳು. ಅಳಿಯ ತೀರಿಕೊಂಡಾಗಿನಿಂದ ಒಬ್ಬ ಮೊಮ್ಮಗನಿಗೆ ಪೀಡ್ಸ್‌ ಕಾಯಿಲೆ ಇದೆ. ಅವನನ್ನು ನಾನೇ ನೋಡಕೋಬೇಕಮ್ಮ. ಉಳಿದೋರು ಅವರವರ ಬದುಕು ನೋಡ್ಕೊಂಡವ್ರೆ. ಗಂಡು ಮಗ ಇದ್ದೂ ಇಲ್ದಂಗೆ. ದುಡೀತಾನೆ, ಕುಡಿತಾನೆ. ಅವನ ಹೆಂಡ್ರೂ ಬಿಟ್ಟೋಗ್‌ ಬಿಟ್ಲು. ಹೆಂಗೋ ಜೀವನ ಮಾಡ್ತೀತಿದೀನಿ’ ಎನ್ನುತ್ತಾರೆ ಅವರು. 

ಮುನಿಯಮ್ಮ, ಶಾಂತಿನಗರದ ಹಕ್ಕಿತಿಮ್ಮನಹಳ್ಳಿಯ ಅಪಾರ್ಟ್‌ಮೆಂಟ್‌ನಲ್ಲಿ ಮನೆಗೆಲಸ ಮಾಡುತ್ತಿದ್ದರು. ಅಲ್ಲಿಯವರು ಕೆಲಸಕ್ಕೆ ಬೇಡವೆಂದು ಬಿಡಿಸಿದ ನಂತರ, ಮೂರು ವರ್ಷಗಳಿಂದ ಲಾಲ್‌ಬಾಗ್‌ನಲ್ಲಿ ಬೀಜ ಆಯ್ದು, ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದಾರೆ.

‘ಲಾಲ್‌ಬಾಗ್‌ನವರು ಬೀಜ ಆಯಲು ಬಿಡಲ್ಲಮ್ಮ, ಬೈಯ್ತಾರೆ. ತಪ್ಪು ಅಂತ ನನಗೂ ಗೊತ್ತದೆ. ಆದ್ರೂ ಹೆಂಗೋ ನಾಲ್ಕು ಕಾಸು ದುಡ್ಕೋಬೇಕಲ್ಲ? ದುಡಿಯಾಕೆ ಎಲ್ಲಿಗೆ ಹೋಗ್ಲಿ? ನನಗ್ಯಾರು ಕೆಲಸ ಕೊಡ್ತಾರೆ’ ಎಂದು ಅಳಲು ತೋಡಿಕೊಳ್ಳುತ್ತಾರೆ.

ಪೆಲ್ಟಾಪೋರಂ, ಕತ್ತಿ ಕಾಯಿ (ಮೇ ಫ್ಲವರ್‌) ಮರದ ಬೀಜಗಳನ್ನು ಆಯ್ದು, ಒಣಗಿಸಿದ ನಂತರ ಇಂದಿರಾನಗರದ ಒಬ್ಬ ನರ್ಸರಿ ಉದ್ಯಮಿಗೆ ಮಧ್ಯವರ್ತಿ ಮೂಲಕ ಬೀಜ ಮಾರಾಟ ಮಾಡಿದಾಗ, ಇವರಿಗೆ ಸಿಗೋದು ಕೇವಲ ₹40 ರಿಂದ ₹50. ಇದರಲ್ಲೇ ಉಪಜೀವನ ನಡೆಸುವಂತಹ ಸ್ಥಿತಿ ಇವರದ್ದು. 

ಹೆಸರು ಮುನಿಯಮ್ಮ ಎಂದಿದ್ದರೂ ಅವರಿಗೆ ಯಾರ ಮೇಲೂ ಮುನಿಸಿಲ್ಲ. ಮುಪ್ಪಿನಲ್ಲಿ ನೋಡಿಕೊಳ್ಳದ ಕುಟುಂಬದ ಸದಸ್ಯರ ಮೇಲೆ, ತನಗೆ ಪಿಂಚಣಿ ಸೌಲಭ್ಯ ನೀಡದ ಅಧಿಕಾರಿಗಳ ಮೇಲೆ ಅವರು ಸಿಟ್ಟು ತೋರುವುದಿಲ್ಲ. ಬದಲಾಗಿ ಶಾಂತಚಿತ್ತರಾಗಿ ತಮ್ಮ ಬೀಜ ಆಯುವ ಕಾಯಕದಲ್ಲಿ ತೊಡಗಿರುತ್ತಾರೆ.

Tags: 

ಬರಹ ಇಷ್ಟವಾಯಿತೆ?

 • 42

  Happy
 • 3

  Amused
 • 14

  Sad
 • 1

  Frustrated
 • 0

  Angry

Comments:

0 comments

Write the first review for this !