ರಾಜ್ಯಮಟ್ಟದ ಹಾಕಿ ಟೂರ್ನಿಗೆ ಜಿಲ್ಲಾಧಿಕಾರಿಯಿಂದ ಚಾಲನೆ

7

ರಾಜ್ಯಮಟ್ಟದ ಹಾಕಿ ಟೂರ್ನಿಗೆ ಜಿಲ್ಲಾಧಿಕಾರಿಯಿಂದ ಚಾಲನೆ

Published:
Updated:
Deccan Herald

ಬಾಗಲಕೋಟೆ: ಪದವಿ ಪೂರ್ವ ಶಿಕ್ಷಣ ಇಲಾಖೆ ಹಾಗೂ ಇಲ್ಲಿನ ಬಿ.ವಿ.ವಿ ಸಂಘದ ಸಹಯೋಗದಲ್ಲಿ ಶನಿವಾರ ಇಲ್ಲಿ ಆರಂಭವಾದ ಎರಡು ದಿನಗಳ ರಾಜ್ಯ ಮಟ್ಟದ ಹಾಕಿ ಟೂರ್ನಿಗೆ ಜಿಲ್ಲಾಧಿಕಾರಿ ಕೆ.ಜಿ.ಶಾಂತಾರಾಮ್ ಶನಿವಾರ ಚಾಲನೆ ನೀಡಿದರು.

ಈ ವೇಳೆ ಮಾತನಾಡಿದ ಶಾಂತಾರಾಮ್, ‘ಕ್ರೀಡೆಯಲ್ಲಿ ಸೋಲು ಗೆಲುವು ಮುಖ್ಯವಲ್ಲ. ಪಾಲ್ಗೊಳ್ಳುವಿಕೆ ಬಹಳ ಮುಖ್ಯ. ಕ್ರೀಡೆಯಿಂದ ಮನುಷ್ಯನಲ್ಲಿನ ಧನಾತ್ಮಕ ಹಾಗೂ ಋಣಾತ್ಮಕ ಗುಣಗಳು ಹೊರಬರುತ್ತವೆ. ನಮ್ಮೊಳಗಿನ ಕ್ರೀಡಾ ಸ್ಫೂರ್ತಿ ಬದುಕನ್ನೇ ಬದಲಾಯಿಸುತ್ತದೆ’ ಎಂದರು.

‘ಉತ್ತರ ಕರ್ನಾಟಕದಲ್ಲಿ ಹಾಕಿ ಟೂರ್ನಿ ಆಯೋಜಿಸಿರುವುದು ದಕ್ಷಿಣ ಕರ್ನಾಟಕ ಭಾಗದವರಿಗೆ ಇಲ್ಲಿನ ಸಂಸ್ಕೃತಿ ಪರಿಚಯಿಸಲು ಅನುಕೂಲವಾಗಿದೆ. ಜೊತೆಗೆ ಪರಸ್ಪರದ ಪರಿಚಯಕ್ಕೂ ನೆರವಾಗಲಿದೆ’ ಎಂದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ವೀರಣ್ಣ ಚರಂತಿಮಠ ಮಾತನಾಡಿ, ‘ಆರೋಗ್ಯಕರ ದೇಹದಲ್ಲಿ ಆರೋಗ್ಯಕರ ಮನಸ್ಸಿರುತ್ತದೆ. ಕ್ರೀಡೆಯಿಂದ ದೈಹಿಕ ಶಕ್ತಿ ಹೆಚ್ಚಳವಾಗುತ್ತದೆ. ಕ್ರೀಡಾ ಮನೋಭಾವನೆಯಿಂದ ಇಲ್ಲಿ ಪಾಲ್ಗೊಂಡು ಉತ್ತಮ ಸಾಧನೆ ಮಾಡಬೇಕು. ಇಲ್ಲಿ ಸಾಧನೆ ಮಾಡುವುದರಿಂದ ನಿಮ್ಮ ಜಿಲ್ಲೆ, ರಾಜ್ಯ ಹಾಗೂ ದೇಶದ ಕೀರ್ತಿ ಹೆಚ್ಚಿಸುವ ಕೆಲಸ ಮಾಡಬಹುದಾಗಿದೆ’ ಎಂದರು.

‘ಕ್ರಿಕೆಟ್ ಹಾವಳಿ ಹೆಚ್ಚಿರುವ ಕಾರಣ ದೇಸಿ ಕ್ರೀಡೆಗಳಾದ ಹಾಕಿ, ಕಬಡ್ಡಿ, ಕೊಕೊ  ಕಣ್ಮರೆಯಾಗಿದ್ದವು, ಆದರೆ ಇಂದು ಮತ್ತೆ ದೇಸಿ ಕ್ರೀಡೆಗಳಿಗೆ ಜನಮನ್ನಣೆ ಸಿಗುತ್ತಿದೆ. ಇದು ಸಂತೋಷದ ವಿಷಯ’ ಎಂದರು.

ವಿಧಾನ ಪರಿಷತ್ ಸದಸ್ಯ ಹನಮಂತ ನಿರಾಣಿ, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಸ್.ಬಿ.ಪೂಜಾರಿ, ಬಿ.ವಿ.ವಿ ಸಂಘದ ಗೌರವ ಕಾರ್ಯದರ್ಶಿ ಮಹೇಶ ಅಥಣಿ, ಅಶೋಕ ಸಜ್ಜನ, ಸಂಘದ ಪದವಿ ಪೂರ್ವ ಕಾಲೇಜ್‌ನ ಪ್ರಾಚಾರ್ಯ ಡಾ. ಪಿ.ಎಸ್.ಆಲೂರ ಸೇರಿದಂತೆ ವಿವಿಧ ಜಿಲ್ಲೆಯ ಹಾಕಿ ತಂಡಗಳ ತರಬೇತುದಾರರು ಪಾಲ್ಗೊಂಡಿದ್ದರು.

 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !