ಭಾನುವಾರ, ಡಿಸೆಂಬರ್ 8, 2019
20 °C
ಅಂತರರಾಷ್ಟ್ರೀಯ ಖ್ಯಾತಿಯ ಚಿತ್ರಕಲಾವಿದ

ಜಯವಂತ ಮುನ್ನೊಳ್ಳಿಯ ಕುಂಚದ ಸ್ಪರ್ಶಕ್ಕೆ ವಿಶ್ವಮನ್ನಣೆ

Published:
Updated:
Deccan Herald

ರಬಕವಿ ಬನಹಟ್ಟಿ: ಜಯವಂತ ಮುನ್ನೊಳ್ಳಿ ಮೂಲತಃ ಬನಹಟ್ಟಿಯವರು. ಈಗ ಅಂತರಾಷ್ಟ್ರೀಯ ಖ್ಯಾತಿಯ  ಚಿತ್ರ ಕಲಾವಿದ ಎನಿಸಿದ್ದಾರೆ. ಎಸ್‌ಎಸ್‌ಎಲ್‌ಸಿವರೆಗೆ ಬನಹಟ್ಟಿಯಲ್ಲೇ ಓದಿದ್ದಾರೆ. ಸದ್ಯ ಅವರು ಮುಂಬೈನಲ್ಲಿ ವಾಸವಿದ್ದಾರೆ. ಅವರೊಬ್ಬ ವನ್ಯಜೀವಿಗಳ ಅದ್ಭುತ ಚಿತ್ರಕಾರ. ತಮ್ಮ 78 ನೇ ಇಳಿ ವಯಸ್ಸಿನಲ್ಲೂ ಶ್ರೇಷ್ಠ ಚಿತ್ರಕಾರರಾಗಿ ಗುರುತಿಸಿಕೊಂಡಿದ್ದಾರೆ.

ಹ್ಯಾಂಡ್‌ಲೂಮ್‌ ಟೆಕ್ಸ್‌ಟೈಲ್‌ನಲ್ಲಿ ಡಿಪ್ಲೊಮಾ ಪದವಿ ಪಡೆದಿರುವ ಜಯವಂತ, ಆರೂವರೆ ವರ್ಷ  ತಾಂಜಾನಿಯಾದಲ್ಲಿ ಕೆಲಸ ಮಾಡಿದ್ದಾರೆ. ಅಲ್ಲಿ ವನ್ಯಜೀವಿಗಳ ಚಲನವಲನ ಅತ್ಯಂತ ಸೂಕ್ಷ್ಮವಾಗಿ ಅಧ್ಯಯನ ಮಾಡಿದ್ದಾರೆ. ಮುಂದೆ ವನ್ಯಜೀವಿಗಳ ನೂರಾರು ಚಿತ್ರ ಬಿಡಿಸಿ ಖ್ಯಾತಿ ಗಳಿಸಿದ್ದಾರೆ. ದಕ್ಷಿಣ ಆಫ್ರಿಕಾದ ವಿವಿಧ ಪಂಚತಾರಾ ಹೋಟೆಲ್‌ಗಳು, ಅಲ್ಲಿಯ ಪ್ರಮುಖರ ಮನೆಗಳಲ್ಲಿ ಮತ್ತು ತಾಂಜಾನಿಯಾದ ಅಧ್ಯಕ್ಷರ ಮನೆ ಗೋಡೆಗಳನ್ನು ಮುನ್ನೊಳ್ಳಿ ಅವರ ಚಿತ್ರಗಳು ಅಲಂಕರಿಸಿವೆ.


ಸಿಂಹ ಮತ್ತು ಸಿಂಹಿನಿ ಜೊತೆಯಾಗಿ ಕುಳಿತಿರುವುದು.

ದಕ್ಷಿಣ ಆಫ್ರಿಕಾದ ಕಿಲಿಮಾಂಜಿರೊ ಹೋಟೆಲ್‌ನಲ್ಲಿ ಎರಡು ಬಾರಿ, ಮುಂಬೈನ್‌ ಪ್ರತಿಷ್ಠಿತ ಜಹಾಂಗೀರ ಆರ್ಟ್‌ ಗ್ಯಾಲರಿಯಲ್ಲಿ 14 ಬಾರಿ ಏಕ ವ್ಯಕ್ತಿ ಚಿತ್ರ ಕಲಾ ಪ್ರದರ್ಶನ ಹಮ್ಮಿಕೊಂಡಿದ್ದಾರೆ.

ಅದೇ ರೀತಿ ತಾಜ್ ಆರ್ಟ್‌ ಗ್ಯಾಲರಿಯಲ್ಲಿ ಎರಡು ಬಾರಿ,  ಮುಂಬೈಯನ್ಸ್ ಆರ್ಟ್‌ ಗ್ಯಾಲರಿಯಲ್ಲಿ, ಬಜಾಜ್‌ ಆರ್ಟ್‌ ಗ್ಯಾಲರಿ, ಬೆಂಗಳೂರಿನ ಲಲಿತಾ ಕಲಾ ಅಕಾಡೆಮಿಯಲ್ಲಿ ಮತ್ತು ವೆಂಕಟಪ್ಪ ಆರ್ಟ್‌ ಗ್ಯಾಲರಿಯಲ್ಲಿ ಬನಹಟ್ಟಿಯ ಎಸ್‌ಆರ್‌ಎ ಸಂಯುಕ್ತ ಪದವಿಪೂರ್ವ ಕಾಲೇಜಿನಲ್ಲಿ, ಗದುಗಿನ ತೊಂಟದಾರ್ಯ ಮಠದಲ್ಲಿ, ಕಲಬುರಗಿಯ ಶರಣ ಬಸವೇಶ್ವರ ಕಲಾ ಮಹಾವಿದ್ಯಾಲಯದಲ್ಲಿ ಹಾಗೂ ದುಬೈನಲ್ಲಿ ತಲಾ ಒಮ್ಮೆ ಚಿತ್ರಕಲಾ ಪ್ರದರ್ಶನ ಮಾಡಿದ್ದಾರೆ. ಒಟ್ಟು ಒಲ್ಲಿಯವರೆಗೆ ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ 35 ಕ್ಕೂ ಹೆಚ್ಚು ಚಿತ್ರ ಕಲಾ ಪ್ರದರ್ಶನಗಳಲ್ಲಿ ಭಾಗವಹಿಸಿದ್ದಾರೆ.


ಕಾಡಿನಲ್ಲಿ ಹುಲಿ ಮತ್ತು ಕಾಡು ಕೋಣ ಪರಸ್ಪರ ಎದುರಿಗೆ ಬಂದಿರುವು ಚಿತ್ರ ಕಲೆ.

ತಾಂಜಾನಿಯಾ, ಇಂಗ್ಲೆಂಡ್, ಇಟಲಿ, ಆಸ್ಟ್ರೆಲಿಯಾ, ಕೆನಡಾ, ಸಿಲೋನ್‌, ಹಾಲೆಂಡ್, ಡೆನ್ಮಾರ್ಕ್, ಜಪಾನ್, ಸಿಂಗಾಪುರ, ಅಮೆರಿಕ, , ದಕ್ಷಿಣ ಕೊರಿಯಾ, ಬ್ಯಾಂಕಾಕ್, ಹಾಂಕಾಂಗ್‌ ದೇಶಗಳಲ್ಲೂ ತಮ್ಮ ಚಿತ್ರಗಳ ಪ್ರದರ್ಶನ ಮಾಡಿದ್ದಾರೆ.

ಮುಂಬೈನ್‌ ಆರ್ಟ್‌ ಗ್ಯಾಲರಿಯಲ್ಲಿ ‘ಜಂಗಲ್‌ ರೂಲರ್ಸ್‌ನ’ ತಲೆ ಬರಹದ ಅಡಿಯಲ್ಲಿ ತಮ್ಮ ಚಿತ್ರಗಳನ್ನು ಪ್ರದರ್ಶನ ಮಾಡುತ್ತಿದ್ದಾರೆ. ಅವರಿಗೆ ಬೆಂಗಳೂರಿನ ಲಲಿತಾ ಕಲಾ ಅಕಾಡೆಮಿ ಪ್ರಶಸ್ತಿ, ದಾರ್‌ ಎ ಸಲಾಮ್‌ನ ಎಸ್ಸೊ ಕ್ಯಾಲೆಂಡರ್‌ ಪ್ರಶಸ್ತಿ ದೊರೆತಿವೆ. 


ಚಿರತೆಯ ಕುಟುಂಬ ಏನೋ ಹುಡುಕುತ್ತಿರುವುದು.

 

ಪ್ರತಿಕ್ರಿಯಿಸಿ (+)