ಸಿಬ್ಬಂದಿ ಕೊರತೆ, ಪೊಲೀಸರಿಗೆ ಕೆಲಸದ ಒತ್ತಡ: ರಾಜೇಂದ್ರಕುಮಾರ್

7

ಸಿಬ್ಬಂದಿ ಕೊರತೆ, ಪೊಲೀಸರಿಗೆ ಕೆಲಸದ ಒತ್ತಡ: ರಾಜೇಂದ್ರಕುಮಾರ್

Published:
Updated:
Deccan Herald

ಕೋಲಾರ: ‘ಪೊಲೀಸ್ ಅಧಿಕಾರಿಗಳ ಮಕ್ಕಳು ದಾರಿ ತಪ್ಪಲು ನಮ್ಮ ಕೆಲಸದ ಸ್ಥಿತಿಯೇ ಕಾರಣ. ಹೀಗಾಗಿ ಪೋಷಕರು ಮಕ್ಕಳ ಕಡೆಗೆ ಹೆಚ್ಚು ಗಮನಹರಿಸಿ ಅವರನ್ನು ಸುಶಿಕ್ಷಿತರಾಗಿ ಮಾಡಬೇಕು’ ಎಂದು ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಜೇಂದ್ರಕುಮಾರ್ ಕಿವಿಮಾತು ಹೇಳಿದರು.

ಇಲ್ಲಿ ಶನಿವಾರ ನಡೆದ ಜಿಲ್ಲಾ ನಿವೃತ್ತ ಪೊಲೀಸ್ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಮಾತನಾಡಿ. ‘ಇಲಾಖೆಯಲ್ಲಿ ಸಿಬ್ಬಂದಿ ಕೊರತೆಯಿಂದಾಗಿ ಕೆಲಸದ ಒತ್ತಡ ಹೆಚ್ಚಿದೆ. ಪೊಲೀಸ್ ಸಿಬ್ಬಂದಿ ಕಾರ್ಯ ಒತ್ತಡದಲ್ಲಿ ತಮ್ಮ ಆರೋಗ್ಯ ಮತ್ತು ಕುಟುಂಬವನ್ನೇ ಮರೆಯುತ್ತಾರೆ’ ಎಂದರು.

‘ಇಲಾಖೆಯಲ್ಲಿ ಖಾಲಿ ಇರುವ ವಿವಿಧ ಹಂತಗಳ ಹುದ್ದೆಗಳನ್ನು ಭರ್ತಿ ಮಾಡುವಂತೆ ಸರ್ಕಾರಕ್ಕೆ ಈಗಾಗಲೇ ಪ್ರಸ್ತಾವ ಸಲ್ಲಿಸಲಾಗಿದೆ. ಈ ಸಂಬಂಧ ನಿವೃತ್ತ ಅಧಿಕಾರಿಗಳು ಸಹ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ. ಸದ್ಯದಲ್ಲೇ ನೇಮಕಾತಿ ನಡೆಯುವ ನಿರೀಕ್ಷೆ ಇದೆ’ ಎಂದು ತಿಳಿಸಿದರು.

‘ಆರೋಗ್ಯ ನಿರ್ಲಕ್ಷ್ಯದಲ್ಲಿ ನಮ್ಮ ಇಲಾಖೆಯವರೇ ಹೆಚ್ಚಾಗಿದ್ದಾರೆ. ಸಿಬ್ಬಂದಿಯ ಮನಸ್ಥಿತಿ ಬದಲಾಗಬೇಕು. ಕರ್ತವ್ಯದಷ್ಟೇ ಆರೋಗ್ಯ ಸಹ ಮುಖ್ಯ. ಸಿಬ್ಬಂದಿ ಆರೋಗ್ಯವಂತರಾಗಿದ್ದಾಗ ಮಾತ್ರ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಲು ಸಾಧ್ಯ. ಅಧಿಕಾರಿಗಳ ಬುದ್ಧಿಶಕ್ತಿ, ಕೌಶಲವನ್ನು ಸರಿಯಾಗಿ ಬಳಸಿಕೊಂಡರೆ ಇಲಾಖೆಯು ಮತ್ತಷ್ಟು ಜನಸ್ನೇಹಿಯಾಗಿ ಕಾರ್ಯ ನಿರ್ವಹಿಸಬಹುದು’ ಎಂದು ಸಲಹೆ ನೀಡಿದರು.

ಸ್ವಾಸ್ಥ್ಯ ಕಾಪಾಡುತ್ತದೆ: ‘ಪೊಲೀಸ್ ಇಲಾಖೆಯು ಎಲ್ಲಾ ಇಲಾಖೆಗಳ ಪಿತೃ. ಇಲಾಖೆಯು ತಂದೆ ಸ್ಥಾನದಲ್ಲಿ ನಿಂತು ತಪ್ಪುಗಳನ್ನು ತಿದ್ದಿ, ಸಮಾಜದ ಸ್ವಾಸ್ಥ್ಯ ಕಾಪಾಡುತ್ತದೆ. ಸಿಬ್ಬಂದಿ ಹಬ್ಬದ ದಿನಗಳಲ್ಲೂ ಲಾಠಿ ಹಿಡಿದು ಬಂದೋಬಸ್ತ್‌ ಕಾರ್ಯ ನಿರ್ವಹಿಸುತ್ತಾರೆ. ಸಿಬ್ಬಂದಿಯು ಜನಸಾಮಾನ್ಯರು, ಕಾರ್ಮಿಕರು, ರೈತರು ಹೀಗೆ ಎಲ್ಲಾ ವರ್ಗದ ಜನರೊಂದಿಗೆ ಬೆರೆತು ಅವರ ಸಮಸ್ಯೆ ಆಲಿಸಿ ಪರಿಹರಿಸುವ ಪ್ರಯತ್ನ ಮಾಡುತ್ತಾರೆ’ ಎಂದರು.

‘ಜನ ಇಲಾಖೆ ಮತ್ತು ಪೊಲೀಸರ ಬಗ್ಗೆ ಏನೇನೋ ಮಾತನಾಡುತ್ತಾರೆ. ಸಿಬ್ಬಂದಿ ಪ್ರಾಮಾಣಿಕವಾಗಿ ಮತ್ತು ಜನಪರವಾಗಿ ಕಾರ್ಯ ನಿರ್ವಹಿಸಿದರೆ ಅನಗತ್ಯ ಟೀಕೆಗಳಿಗೆ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ. ನಿವೃತ್ತಿ ಬಳಿಕವೂ ಜನ ನಮ್ಮ ಸೇವೆ ಗುರುತಿಸುವಂತೆ ಕೆಲಸ ಮಾಡಬೇಕು. ಆಗ ಮಾತ್ರ ವೃತ್ತಿ ಜೀವನ ಸಾರ್ಥಕವಾಗುತ್ತದೆ. ನಿವೃತ್ತಿ ಬಳಿಕವೂ ಶಿಸ್ತು ಮುಂದುವರಿಯಬೇಕು’ ಎಂದು ಹೇಳಿದರು.

ವಿಲೀನ ಬೇಡ: ‘ನಿವೃತ್ತ ಪೊಲೀಸ್ ಅಧಿಕಾರಿಗಳಿಗೆ ಸರ್ಕಾರ ಜಾರಿ ಮಾಡಿರುವ ಆರೋಗ್ಯ ಭಾಗ್ಯ ಯೋಜನೆಯನ್ನು ಯಾವುದೇ ಕಾರಣಕ್ಕೂ ಇತರ ಯೋಜನೆಗಳೊಂದಿಗೆ ವಿಲೀನ ಮಾಡಬಾರದು’ ಎಂದು ಜಿಲ್ಲಾ ನಿವೃತ್ತ ಪೊಲೀಸ್ ಅಧಿಕಾರಿಗಳ ಆರೋಗ್ಯ ಟ್ರಸ್ಟ್‌ ಸದಸ್ಯ ಮಾಲೂರಪ್ಪ ಮನವಿ ಮಾಡಿದರು.

‘ರಾಜ್ಯದಲ್ಲಿ 54 ಸಾವಿರ ನಿವೃತ್ತ ಪೊಲೀಸ್ ಅಧಿಕಾರಿಗಳಿದ್ದು, ಈ ಪೈಕಿ 34 ಸಾವಿರ ಮಂದಿ ನಮ್ಮ ಸಂಘದಲ್ಲಿ ಹೆಸರು ನೋಂದಣಿ ಮಾಡಿಸಿದ್ದಾರೆ. ಸಂಘದಲ್ಲಿ ಕಡ್ಡಾಯವಾಗಿ ನೋಂದಣಿ ಮಾಡಿದರೆ ಮಾತ್ರ ಆರೋಗ್ಯ ಭಾಗ್ಯ ಯೋಜನೆ ಸೌಲಭ್ಯ ಪಡೆಯಲು ಸಾಧ್ಯ’ ಎಂದು ವಿವರಿಸಿದರು.

ಪ್ರತಿಭಟನೆ ಸರಿಯಲ್ಲ: ‘ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಿವೃತ್ತ ಪೊಲೀಸ್ ಅಧಿಕಾರಿಗಳಿಗೂ ಕ್ಯಾಂಟೀನ್ ಮತ್ತು ಆರೋಗ್ಯ ಭಾಗ್ಯ ಯೋಜನೆ ಜಾರಿ ಮಾಡಿದ್ದರು. ಅಲ್ಲದೇ, ₹ 20 ಕೋಟಿ ಅನುದಾನ ಮಂಜೂರು ಮಾಡಿದ್ದರು. ನಿವೃತ್ತ ಸಿಬ್ಬಂದಿಗೆ ಇನ್ನೂ ಸಣ್ಣಪುಟ್ಟ ಸಮಸ್ಯೆಗಳಿದ್ದು, ಅವುಗಳನ್ನು ಶಿಸ್ತಿನ ಮೂಲಕವೇ ಬಗೆಹರಿಸಿಕೊಳ್ಳಬೇಕು. ಸಮಸ್ಯೆ ಪರಿಹಾರಕ್ಕೆ ಪ್ರತಿಭಟನೆ ಮಾಡುವುದು ಸರಿಯಲ್ಲ’ ಎಂದು ಅಭಿಪ್ರಾಯಪಟ್ಟರು.

ನಿವೃತ್ತಿ ಬಳಿಕ ನಿಧನ ಹೊಂದಿದ ಪೊಲೀಸ್ ಸಿಬ್ಬಂದಿ ಸ್ಮರಣಾರ್ಥ ಮೌನಾಚರಣೆ ಮಾಡಲಾಯಿತು. ಜಿಲ್ಲಾ ಸಶಸ್ತ್ರ ಮೀಸಲ ಪೊಲೀಸ್ ಪಡೆ ಡಿವೈಎಸ್ಪಿ ರಘು, ಜಿಲ್ಲಾ ನಿವೃತ್ತ ಪೊಲೀಸ್ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ವಿ.ಎಂ.ಸೊಣ್ಣಪ್ಪ, ಉಪಾಧ್ಯಕ್ಷ ಕೃಷ್ಣಪ್ಪ, ಪದಾಧಿಕಾರಿಗಳಾದ ಗೋಪಾಲಯ್ಯ, ರವಿ ಪಾಲ್ಗೊಂಡಿದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !