ಕಿರಿಯ ಮೇಲ್ವಿಚಾರಕಿ ಅಮಾನತು

7

ಕಿರಿಯ ಮೇಲ್ವಿಚಾರಕಿ ಅಮಾನತು

Published:
Updated:

ಕೋಲಾರ: ನಗರದ ಇಟಿಸಿಎಂ ಆಸ್ಪತ್ರೆ ಬಳಿ ಇರುವ ಮೆಟ್ರಿಕ್ ನಂತರದ ಸರ್ಕಾರಿ ಬಾಲಕಿಯರ ವಿದ್ಯಾರ್ಥಿನಿಲಯದ ಕಿರಿಯ ಮೇಲ್ವಿಚಾರಕಿ ಭಾಗ್ಯಮ್ಮ ಅವರನ್ನು ಕರ್ತವ್ಯ ನಿರ್ಲಕ್ಷ್ಯ ಆರೋಪದ ಮೇಲೆ ಅಮಾನತು ಮಾಡಿ ಜಿ.ಪಂ ಸಿಇಒ ಜಿ.ಜಗದೀಶ್‌ ಶನಿವಾರ ಆದೇಶ ಹೊರಡಿಸಿದ್ದಾರೆ.

ಜಗದೀಶ್‌ ಅವರು ಅ.10ರಂದು ವಿದ್ಯಾರ್ಥಿನಿಲಯಕ್ಕೆ ದಿಢೀರ್‌ ಭೇಟಿ ನೀಡಿ ಪರಿಶೀಲನೆ ನಡೆಸಿದ್ದ ಸಂದರ್ಭದಲ್ಲಿ ಆಹಾರದ ಗುಣಮಟ್ಟ ಕಳಪೆಯಾಗಿರುವುದು ಮತ್ತು ಆಹಾರ ಪದಾರ್ಥಗಳ ದಾಸ್ತಾನಿನಲ್ಲಿ ವ್ಯತ್ಯಾಸ ಇರುವುದು ಕಂಡು ಬಂದಿತ್ತು.

ಹಾಸ್ಟೆಲ್‌ ಗೋದಾಮಿನಲ್ಲಿನ ಕಡಲೆ ಬೇಳೆ, ತೊಗರಿ ಬೇಳೆ ಹಾಗೂ ಕಡಲೆ ಬೀಜ ಹುಳು ಬಿದ್ದು ಹಾಳಾಗಿರುವುದನ್ನು ಸಿಇಒ ಪತ್ತೆ ಮಾಡಿದ್ದರು. ಅಲ್ಲದೇ, ವಿದ್ಯಾರ್ಥಿಗಳಿಗೆ ಬೆಳಗಿನ ಉಪಾಹಾರಕ್ಕೆ ಸಿದ್ಧಪಡಿಸಿದ್ದ ದೋಸೆ ಹುಳಿಯಾಗಿದ್ದ ಸಂಗತಿ ಬಯಲಾಗಿತ್ತು. ಭಾಗ್ಯಮ್ಮ ಅವರು ಹೊರಗಿನ ವ್ಯಕ್ತಿಗಳ ಅತಿಕ್ರಮ ಪ್ರವೇಶಕ್ಕೆ ಅವಕಾಶ ಕಲ್ಪಿಸಿರುವುದು ಮತ್ತು ಅಡುಗೆ ಸಿಬ್ಬಂದಿಗೆ ವೇತನ ನೀಡದೆ ವಂಚಿಸಿರುವುದು ಸಿಇಒ ತನಿಖೆಯಿಂದ ಬಯಲಾಗಿತ್ತು.

ಅಡುಗೆಗೆ ತಾಜಾ ತರಕಾರಿ ಬಳಸುವುದಿಲ್ಲ ಎಂದು ಭಾಗ್ಯಮ್ಮರ ವಿರುದ್ಧ ವಿದ್ಯಾರ್ಥಿಗಳು ಸಿಇಒಗೆ ದೂರು ಹೇಳಿದ್ದರು. ವಿದ್ಯಾರ್ಥಿಗಳ ದೂರು ಹಾಗೂ ಕರ್ತವ್ಯ ನಿರ್ಲಕ್ಷ್ಯದ ಆರೋಪದ ಮೇಲೆ ಭಾಗ್ಯಮ್ಮ ಅವರನ್ನು ಅಮಾನತು ಮಾಡಿರುವುದಾಗಿ ಸಿಇಒ ಆದೇಶದಲ್ಲಿ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !