ಕಿತ್ತುಹೋಗಿದೆ ಗಾರ್ಡನ್‌ ಪರ್ಯಾಯ ರಸ್ತೆ

7
ಕಚ್ಛಾ ರಸ್ತೆ ಅಭಿವೃದ್ಧಿಗೆ ಹೊಸ ಪ್ರಸ್ತಾವ

ಕಿತ್ತುಹೋಗಿದೆ ಗಾರ್ಡನ್‌ ಪರ್ಯಾಯ ರಸ್ತೆ

Published:
Updated:
Deccan Herald

ಬೆಂಗಳೂರು: ಕಾವಲ್‌ಭೈರಸಂದ್ರ ಮುಖ್ಯರಸ್ತೆಯಿಂದ ಮೋದಿ ಗಾರ್ಡನ್‌ವರೆಗೆ ಪರ್ಯಾಯ ರಸ್ತೆಯೊಂದನ್ನು ನಿರ್ಮಿಸಲಾಗಿದೆ. ತಗ್ಗು ದಿಣ್ಣೆಗಳಿಂದ ಕೂಡಿದ ಈ ರಸ್ತೆಯಲ್ಲಿ ದ್ವಿಚಕ್ರ ವಾಹನ ಸವಾರರಂತೂ ಜೀವ ಕೈಯಲ್ಲಿ ಹಿಡಿದುಕೊಂಡು ಸಾಗಬೇಕಾದ ಪರಿಸ್ಥಿತಿ ಇದೆ.

ಈ ರಸ್ತೆಯಲ್ಲಿ ಬರುವುದಕ್ಕೆ ಆಟೊರಿಕ್ಷಾದವರು ಒಪ್ಪುತ್ತಿಲ್ಲ. ಮೋದಿ ಗಾರ್ಡನ್‌ಗೆ ಒಂದೇ ಒಂದು ಬಸ್‌ ಸೌಕರ್ಯ ಇದೆ. ಬಸ್ಸಿಗಾಗಿ ಗಂಟೆಗಟ್ಟಲೆ ಕಾಯಬೇಕಾದ ದುಸ್ಥಿತಿ ಸ್ಥಳೀಯರದು.

ಹೊಸ ಪ್ರಸ್ತಾಪ: ಪರ್ಯಾಯ ರಸ್ತೆಯನ್ನು ಅಭಿವೃದ್ಧಿಪಡಿಸಲು ಬಿಬಿಎಂಪಿ ಹೊಸ ಯೋಜನೆ ಸಿದ್ಧಪಡಿಸಿದೆ. ಈ ಕಾಮಗಾರಿಗೆ ಬೇಕಾದ ಜಾಗದ ಬದಲು ಬೇರೆ ಜಾಗವನ್ನು ಅಥವಾ ಅದರ ಮೌಲ್ಯವನ್ನು ರಕ್ಷಣಾ ಇಲಾಖೆಗೆ ನೀಡಲು ಪಾಲಿಕೆ ಸಿದ್ಧವಿದೆ. ಈ ಪ್ರಸ್ತಾಪಕ್ಕೆ ರಕ್ಷಣಾ ಸಚಿವರೂ ಒಪ್ಪಿಗೆ ಸೂಚಿಸಿದ್ದರು.


ಮೋದಿ ಗಾರ್ಡನ್‌ ಸಂಪರ್ಕಿಸುವ ರಸ್ತೆಗೆ ಹಾಕಿದ್ದ ಡಾಂಬರನ್ನು ರಕ್ಷಣಾ ಇಲಾಖೆ ಸಿಬ್ಬಂದಿ ಕಿತ್ತುಹಾಕಿರುವುದು

ಶಂಕುಸ್ಥಾಪನೆ ರದ್ದು: ಈ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಆಗಸ್ಟ್‌ 25ರಂದು ಶಂಕುಸ್ಥಾಪನೆ ನೆರವೇರಿಸಲು ನಿಕಟಪೂರ್ವ ಮೇಯರ್‌ ಆರ್‌.ಸಂಪತ್‌ರಾಜ್‌ ನೇತೃತ್ವದಲ್ಲಿ ಸಿದ್ಧತೆ ನಡೆದಿತ್ತು. ಇನ್ನೇನು ಶಾಮಿಯಾನ ಅಳವಡಿಸಬೇಕೆನ್ನುವಾಗ ಬಂದೂಕು ಹಿಡಿದು ಸ್ಥಳಕ್ಕೆ ಬಂದ ರಕ್ಷಣಾ ಇಲಾಖೆ ಸಿಬ್ಬಂದಿ ಅದಕ್ಕೆ ಅಡ್ಡಿಪಡಿಸಿದ್ದರು. ಈ ಕಾರ್ಯಕ್ರಮವನ್ನು ಕೊನೆ ಕ್ಷಣದಲ್ಲಿ ರದ್ದುಪಡಿಸಲಾಗಿತ್ತು.

ಸೇನೆಗೆ ಸೇರಿದ ಜಾಗದಲ್ಲಿ ಅಭಿವೃದ್ಧಿ ಕಾರ್ಯ ಕೈಗೊಳ್ಳುವುದಕ್ಕೆ ಮುನ್ನ ಪರ್ಯಾಯ ಜಾಗ ನೀಡುವ ಬಗ್ಗೆ ಸಚಿವ ಸಂಪುಟ ವಾಗ್ದಾನ ನೀಡಬೇಕೆಂಬುದು ರಕ್ಷಣಾ ಇಲಾಖೆ ಅಧಿಕಾರಿಗಳ ಒತ್ತಾಯವಾಗಿತ್ತು. ಆ ಪ್ರಕಾರ, ಎಂಟು ಕಡೆ ಅಭಿವೃದ್ಧಿ ಚಟುವಟಿಕೆಗೆ ರಕ್ಷಣಾ ಇಲಾಖೆ ಜಮೀನು ಬಳಸುವುದಕ್ಕೆ ಪರ್ಯಾಯವಾಗಿ ಬೇರೆ ಕರೆ ಜಾಗ ನೀಡುವ ಪ್ರಸ್ತಾವಕ್ಕೆ ಕಳೆದ ವಾರ ನಡೆದ ಸಂಪುಟ ಸಭೆಯಲ್ಲಿ ಒಪ್ಪಿಗೆ ಸಿಕ್ಕಿದೆ. ಕನಿಷ್ಠಪಕ್ಷ ಪರ್ಯಾಯ ರಸ್ತೆಯಾದರೂ ಡಾಂಬರು ಕಾಣುವ ಬಗ್ಗೆ ಸ್ಥಳೀಯರಲ್ಲಿ ಭರವಸೆ ಮೂಡಿದೆ. ಸಂಪುಟ ಸಭೆಯ ಒಪ್ಪಿಗೆ ಬಳಿಕವೂ ರಕ್ಷಣಾ ಇಲಾಖೆ ಅಧಿಕಾರಿಗಳು ಕಾಮಗಾರಿ ನಡೆಸಲು ಅವಕಾಶ ನೀಡುತ್ತಾರೋ ಇಲ್ಲವೋ ಎಂಬುದನ್ನು ಇನ್ನು ಕಾದು
ನೋಡಬೇಕಷ್ಟೇ.

ಡಾಂಬರು ಕಿತ್ತು ಹಾಕಿದರು..!

ಪರ್ಯಾಯ ರಸ್ತೆಗೆ 2017ರಲ್ಲಿ ಬಿಬಿಎಂಪಿ ವತಿಯಿಂದ ಡಾಂಬರೀಕರಣ ನಡೆಸಲಾಗಿತ್ತು. ಈ ಕಾಮಗಾರಿಗೂ ರಕ್ಷಣಾ ಇಲಾಖೆ ಅಧಿಕಾರಿಗಳು ಒಪ್ಪಿಗೆ ನೀಡಿದ್ದರು. ಕೆಲಸ ಪೂರ್ಣಗೊಳ್ಳುವವರೆಗೆ ಚಕಾರ ಎತ್ತದ ಆಧಿಕಾರಿಗಳು ಬಳಿಕ ಜೆಸಿಬಿ ತರಿಸಿ ಡಾಂಬರನ್ನು ಕಿತ್ತು ಹಾಕಿದ್ದರು.

ಬೀದಿ ದೀಪಕ್ಕೂ ಕೊಕ್ಕೆ

ಈ ರಸ್ತೆಯ ಪಕ್ಕದಲ್ಲಿ ಬೀದಿ ದೀಪ ಅಳವಡಿಸುವುದಕ್ಕೂ ರಕ್ಷಣಾ ಇಲಾಖೆ ಕೊಕ್ಕೆ ಹಾಕುತ್ತಿದೆ. ಈ ರಸ್ತೆಯಲ್ಲಿ ರಾತ್ರಿ ವೇಳೆ ಸಂಚರಿಸುವುದು ಭಯಾನಕ ಅನುಭವ. ಸಂಜೆ ಬಳಿಕ ಈ ರಸ್ತೆಯಲ್ಲಿ ಸಾಗುವವರನ್ನು ಅಡ್ಡಗಟ್ಟಿ ಚಿನ್ನದ ಸರ, ಮೊಬೈಲ್‌ ಹಾಗೂ ದುಡ್ಡು ಕಿತ್ತುಕೊಂಡ ಅನೇಕ ಪ್ರಕರಣಗಳು ನಡೆದಿವೆ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಮಹಿಳೆಯೊಬ್ಬರು ದೂರಿದರು. 

***

ಅಂಕಿ ಅಂಶ

ಪರ್ಯಾಯ ರಸ್ತೆ ನಿರ್ಮಾಣಕ್ಕೆ ಬೇಕಾಗಿರುವ ಜಾಗ 1 ಎಕರೆ 6ಗುಂಟೆ 

ಈ ಜಾಗದ ಮೌಲ್ಯ ₹ 15.36 ಕೋಟಿ

ಪರ್ಯಾಯ ರಸ್ತೆಯ ಉದ್ದ 511 ಮೀ

ಪರ್ಯಾಯ  ರಸ್ತೆಯ ಅಗಲ 4.5 ಮೀ

ರಸ್ತೆ ಕಾಮಗಾರಿಯ ಅಂದಾಜು ವೆಚ್ಚ  ₹ 51 ಲಕ್ಷ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 1

  Sad
 • 0

  Frustrated
 • 1

  Angry

Comments:

0 comments

Write the first review for this !