ಗುರುವಾರ , ಫೆಬ್ರವರಿ 27, 2020
19 °C
ರೋಮ್‌ನಲ್ಲಿ ನಡೆದ ಸಮಾರಂಭದಲ್ಲಿ ‘ಸಿಕ್ಕಿಂ’ಗೆ ವಿಶ್ವಸಂಸ್ಥೆಯ ‘ಫ್ಯೂಚರ್ ಪಾಲಿಸಿ ಅವಾರ್ಡ್‌’ ಪ್ರದಾನ

ಸಾವಯವ: ಈಶಾನ್ಯ ರಾಜ್ಯಕ್ಕೆ ವಿಶ್ವ ಮನ್ನಣೆ

ಪಿಟಿಐ Updated:

ಅಕ್ಷರ ಗಾತ್ರ : | |

Deccan Herald

ನ್ಯೂಯಾರ್ಕ್‌/ರೋಮ್‌: ಸಂಪೂರ್ಣ ಸಾವಯವ ಕೃಷಿಯನ್ನು ಸಾಧಿಸಿರುವ ಭಾರತದ ಈಶಾನ್ಯ ರಾಜ್ಯ ಸಿಕ್ಕಿಂಗೆ ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಘಟನೆಯ (ಎಫ್‌ಎಒ) ಪ್ರತಿಷ್ಠಿತ ಆಸ್ಕರ್‌ ಪ್ರಶಸ್ತಿ ದೊರೆತಿದೆ.

ರೋಮ್‌ನಲ್ಲಿ ಸೋಮವಾರ ನಡೆದ ಸಮಾರಂಭದಲ್ಲಿ ‘ಆಸ್ಕರ್‌ ಫಾರ್‌ ಫ್ಯೂಚರ್‌ ಪಾಲಿಸಿ ಅವಾರ್ಡ್‌–2018’ ಪ್ರದಾನ ಮಾಡಲಾಗಿದೆ. 

25 ರಾಷ್ಟ್ರಗಳ 51 ನೀತಿಗಳು ಈ ಸ್ಪರ್ಧೆಯಲ್ಲಿದ್ದವು. ಬ್ರೆಜಿಲ್‌, ಡೆನ್ಮಾರ್ಕ್‌ ಮತ್ತು ಕ್ವಿಟೊ (ಈಕ್ವೆಡಾರ್‌) ರಾಷ್ಟ್ರಗಳಿಗೆ ಬೆಳ್ಳಿ ಪದಕ ದೊರೆತಿದೆ.

ಸಿಕ್ಕಿಂ ಅಳವಡಿಸಿಕೊಂಡಿರುವ ಸುಸ್ಥಿರ ಆಹಾರ ವ್ಯವಸ್ಥೆ ಮತ್ತು ಕೃಷಿ ಪರಿಸರ ನೀತಿಗಳನ್ನು ಪರಿಗಣಿಸಿ ಈ ಪುರಸ್ಕಾರ ನೀಡಲಾಗಿದೆ. ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಘಟನೆ ಹಾಗೂ ವರ್ಲ್ಡ್‌ ಫ್ಯೂಚರ್ ಕೌನ್ಸಿಲ್ ಜಂಟಿಯಾಗಿ ಈ ಪ್ರಶಸ್ತಿ ನೀಡುತ್ತವೆ.

2009ರಲ್ಲಿ ಈ ಪ್ರಶಸ್ತಿ ಆರಂಭಿಸಲಾಯಿತು. ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಮತ್ತು ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಬದಲಾವಣೆ ತರುವ ಪೂರಕ ನೀತಿಗಳನ್ನು ಅಳವಡಿಸಿಕೊಂಡ ರಾಷ್ಟ್ರ, ರಾಜ್ಯ ಮತ್ತು ಸರ್ಕಾರಗಳಿಗೆ ಈ ಪ್ರಶಸ್ತಿ ನೀಡಲಾಗುತ್ತದೆ.

ಪ್ರಸಕ್ತ ಸಾಲಿನ ಪ್ರಶಸ್ತಿಗೆ ‘ಕೃಷಿ–ವಿಜ್ಞಾನ’ ಕ್ಷೇತ್ರವನ್ನು ಗುರುತಿಸಲಾಗಿತ್ತು. ಸಾವಯವಕ್ಕೆ ಉತ್ತೇಜನ ಮತ್ತು ಕೃಷಿ ತ್ಯಾಜ್ಯವನ್ನು ಗೊಬ್ಬರವಾಗಿ ಬಳಸುವುದನ್ನು ಮಾನದಂಡವಾಗಿ ಪರಿಗಣಿಸಲಾಗಿತ್ತು.

ಈ ಎಲ್ಲಾ ಮಾನದಂಡಗಳನ್ನು ಪೂರೈಸಿದ ಕಾರಣ ‘ಫ್ಯೂಚರ್‌ ಪಾಲಿಸಿ ಅವಾರ್ಡ್‌’ ನೀಡಲಾಗಿದೆ.

ಸಾವಯವ ಕೃಷಿಯಿಂದ ಸಿಕ್ಕಿಂನಲ್ಲಿ ರೈತರ ಬೇಸಾಯದ ವೆಚ್ಚ ಕಡಿಮೆಯಾಗಿದೆ, ಇಳುವರಿಯೂ ಹೆಚ್ಚಿದೆ. ಉತ್ತಮ ಗುಣಮಟ್ಟದ ಮತ್ತು ಆರೋಗ್ಯಕರ ಆಹಾರ ಪದಾರ್ಥಗಳು ದೊರೆಯುತ್ತಿವೆ ಎಂದು ಸಮಿತಿ ಹೇಳಿದೆ.

ರಾಸಾಯನಿಕ ಗೊಬ್ಬರಕ್ಕಿಲ್ಲ ಪ್ರವೇಶ

ಮಣ್ಣಿನ ಫಲವತ್ತತೆ, ಪರಿಸರ ಸಂರಕ್ಷಣೆ, ಆರೋಗ್ಯಕರ ಜೀವನ ಶೈಲಿಯನ್ನು ರೂಢಿಸಿಕೊಳ್ಳುವ ಮಹತ್ವದ ಉದ್ದೇಶದಿಂದ ಸಿಕ್ಕಿಂ 2003ರಲ್ಲಿ ಸಂಪೂರ್ಣ ಸಾವಯವ ಕೃಷಿ ನೀತಿಯನ್ನು ಅಳವಡಿಸಿಕೊಂಡಿದೆ.

ನೂರಕ್ಕೆ ನೂರರಷ್ಟು ಸಾಯವಯ ಕೃಷಿ ಪದ್ಧತಿ ಅಳವಡಿಸಿಕೊಂಡ ಭಾರತದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಯನ್ನು ಸಿಕ್ಕಿಂ ಹೊಂದಿದೆ.

15 ವರ್ಷಗಳಿಂದ ಸಿಕ್ಕಿಂನಲ್ಲಿ ರಾಸಾಯನಿಕ ಗೊಬ್ಬರಗಳ ಬಳಕೆಯನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ. ಅಲ್ಲಿಯ ರೈತರು ಕೊಟ್ಟಿಗೆ ಗೊಬ್ಬರವನ್ನು ಬಳಸುತ್ತಿದ್ದಾರೆ.

2016 ರಿಂದ ನೂರಕ್ಕೆ ನೂರರಷ್ಟು ಸಾವಯವ ಕೃಷಿ ಪದ್ಧತಿಯನ್ನು ಸಾಧಿಸುವಲ್ಲಿ ಯಶಸ್ವಿಯಾಗಿರುವ ಸಿಕ್ಕಿಂಗೆ ವಿಶ್ವದ ನಾನಾ ಭಾಗಗಳ ರೈತರು, ವಿಜ್ಞಾನಿಗಳು ಭೇಟಿ ನೀಡುತ್ತಿದ್ದಾರೆ. ಇದರಿಂದ ರಾಜ್ಯದ ಪ್ರವಾಸೋದ್ಯಮ ಬೆಳೆಯುತ್ತಿದೆ.

***

ನೂರಕ್ಕೆ ನೂರರಷ್ಟು ಸಾವಯವ ಕೃಷಿ ಸಾಧಿಸುವುದು ಕನಸಿನ ಮಾತು ಅಲ್ಲ. ಆ ಕನಸು ಈಗ ನನಸಾಗಿದೆ. ಭಾರತದ ಸಿಕ್ಕಿಂ ಅದನ್ನು ಸಾಧಿಸಿ ತೋರಿಸಿದೆ 

–ಮರಿಯಾ ಹೆಲೆನಾ ಸೆಮೆಡೊ, ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಘಟನೆ ಉಪನಿರ್ದೇಶಕಿ

ಸಾವಯವ ಕೃಷಿ ಕ್ಷೇತ್ರದಲ್ಲಿ ಹೇಗೆ ಯಶಸ್ಸು ಗಳಿಸಬಹುದು ಎನ್ನುವುದನ್ನು ಸಿಕ್ಕಿಂ ಜಗತ್ತಿಗೆ ತೋರಿಸಿಕೊಟ್ಟಿದೆ. ಅದೊಂದು ಅದ್ಭುತವಾದ ಉದಾಹರಣೆ

–ಅಲೆಕ್ಸಾಂಡ್ರಾ ವ್ಯಾಂಡೆಲ್, ವರ್ಲ್ಡ್‌ ಫ್ಯೂಚರ್ ಕೌನ್ಸಿಲ್ ನಿರ್ದೇಶಕಿ

***

* ಸಿಕ್ಕಿಂ ಸಂಪೂರ್ಣ ಸಾವಯವ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡ ವರ್ಷ 2003

* ಸಿಕ್ಕಿಂ ಕೃಷಿ ಕುಟುಂಬದ ಸಂಖ್ಯೆ 66,000

* ಸಾವಯವ ರಾಜ್ಯವಾದ ನಂತರ ಪ್ರವಾಸಿಗರ ಸಂಖ್ಯೆಯಲ್ಲಿ ಶೇ 50ರಷ್ಟು ಏರಿಕೆ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು