ಗುರುವಾರ , ಡಿಸೆಂಬರ್ 12, 2019
17 °C

ಹೊಸ ಗೆಟಪ್‌ನಲ್ಲಿ ಕಮಲ್ ಹಾಸನ್

Published:
Updated:
Deccan Herald

ಸಿನಿನಟರ ಅಂಗಸೌಷ್ಟವದ ಹದ ಕಾಪಾಡಲು ವಿದೇಶ ಗಳಿಂದ ಫಿಟ್‌ನೆಸ್‌ ಗುರುಗಳನ್ನು ಕರೆಸಿಕೊಳ್ಳುವುದು ಹೊಸದೇನಲ್ಲ. ಮಾಂಸಖಂಡಗಳನ್ನು ‘ಕಟ್ಟಿ ಬೆಳೆಸುವ’, ಬೇಡದ ಕೊಬ್ಬನ್ನು ಕರಗಿಸಿ ಟೋನಿಂಗ್‌ ಮಾಡುವ ಮತ್ತು ಕಟ್ಟುಮಸ್ತು ಕಾಯಕ್ಕೆ ಬೇಕಾದ ಆಹಾರದ ಮೇಲೆ ನಿಗಾ ಇರಿಸುವುದು ಈ ‘ಗುರು’ಗಳ ಜವಾಬ್ದಾರಿ.

ಬಹುಭಾಷಾ ನಟ ಕಮಲ್‌ಹಾಸನ್‌ ಅವರ ದೇಹದ ಕೊಬ್ಬು ಕರಗಿಸಲು ಅಮೆರಿಕದಿಂದ ಒಬ್ಬರು ಫಿಟ್‌ನೆಸ್‌ ಗುರು ಬಂದಿದ್ದಾರೆ. ಕಳೆದ ವರ್ಷ ಸಂಭವಿಸಿದ ಅಪಘಾತದ ಬಳಿಕ ಸಾಕಷ್ಟು ತೂಕ ಹೆಚ್ಚಿಸಿಕೊಂಡಿದ್ದ ಕಮಲ್‌ಹಾಸನ್‌ ‘ಇಂಡಿಯನ್‌ 2’ (ಭಾರತೀಯುಡು 2’) ಸಿನಿಮಾಕ್ಕಾಗಿ ಕೃಶದೇಹಿಯಾಗಬೇಕಾಗಿದೆ. ಅದಕ್ಕಾಗಿ ಕಮಲ್‌ ದೇಹವನ್ನು ತಿದ್ದಿ ತೀಡಲು ಈ ಗುರುಗಳು ಪ್ಲಾನ್‌ ಸಿದ್ಧಪಡಿಸಿಕೊಂಡಿದ್ದಾರೆ. ಕಮಲ್‌ ಯಾವ ಹೊತ್ತಿಗೆ ಯಾವ ಆಹಾರವನ್ನು ಎಷ್ಟು ಸೇವಿಸಬೇಕು ಎಂಬ ಪಟ್ಟಿಯನ್ನೂ ಅವರು ನೀಡಿದ್ದಾರೆ.

ಅಂದ ಹಾಗೆ, ಬರೋಬ್ಬರಿ 22 ವರ್ಷಗಳ ಹಿಂದೆ ತೆರೆಕಂಡಿದ್ದ ‘ಇಂಡಿಯನ್‌’ ಸಿನಿಮಾ ನೆನಪಿರಬೇಕಲ್ಲ? ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸಿದ್ದ ಈ ಚಿತ್ರ ತಮಿಳಿನ ಪ್ರತಿಭಾವಂತ ನಿರ್ದೇಶಕ ಎಸ್. ಶಂಕರ್‌ ಅವರ ಮಹತ್ವಾಕಾಂಕ್ಷೆಯ ಚಿತ್ರವಾಗಿತ್ತು. ಇದೀಗ ಎರಡನೇ ಆವೃತ್ತಿಯನ್ನೂ ಶಂಕರ್‌ ಅವರೇ ನಿರ್ದೇಶಿಸಲಿದ್ದಾರೆ. ‘ಇಂಡಿಯನ್‌–2’ ಎಂದೂ ‘ಭಾರತೀಯುಡು’ ಎಂದೂ ಚಿತ್ರರಂಗ ಈ ಸಿನಿಮಾವನ್ನು ಕರೆಯುತ್ತಿದೆ.

ಇತ್ತೀಚೆಗಷ್ಟೇ ತಮಿಳಿನ ‘ಬಿಗ್‌ಬಾಸ್‌’ನ ಎರಡನೇ ಆವೃತ್ತಿಯನ್ನು ನಡೆಸಿಕೊಟ್ಟಿರುವ ಕಮಲ್‌ ಡಿಸೆಂಬರ್‌ನಿಂದ ‘ಭಾರತೀಯುಡು 2’ರ ಚಿತ್ರೀಕರಣದಲ್ಲಿ ತೊಡಗಿಸಿಕೊಳ್ಳಲಿದ್ದಾರೆ. ಆದರೆ ಅದಕ್ಕೂ ಮೊದಲು ಅವರು ದೇಹ ತೂಕವನ್ನು ಗಣನೀಯ ಪ್ರಮಾಣದಲ್ಲಿ ಇಳಿಸಿಕೊಳ್ಳಬೇಕಾಗಿದೆ.

ಎಸ್. ಶಂಕರ್‌ ಈಗ ‘2.0’ ಚಿತ್ರದ ಚಿತ್ರೀಕರಣೋ ತ್ತರ ಕೆಲಸಗಳಲ್ಲಿ ಮಗ್ನರಾಗಿದ್ದಾರೆ. ನವೆಂಬರ್‌ನಲ್ಲಿ ಚಿತ್ರ ತೆರೆ ಕಾಣಲಿದೆ. ‘ಭಾರತೀಯುಡು 2’ ಕೂಡಾ ಶಂಕರ್‌ ಅವರ ಜಾಯಮಾನಕ್ಕೆ ತಕ್ಕಂತೆ ದೊಡ್ಡ ಬಜೆಟ್‌ನ ಚಿತ್ರವಾಗಿರುತ್ತದೆ. 2020ರಲ್ಲಿ ತೆರೆ ಕಾಣಬೇಕು ಎಂಬುದು ಅವರ ಲೆಕ್ಕಾಚಾರ. 

1996ರಲ್ಲಿ ತೆರೆಕಂಡಿದ್ದ ‘ಇಂಡಿಯನ್‌’ ಅದ್ದೂರಿ ತಾರಾಗಣದೊಂದಿಗೆ ಅದ್ಭುತ ಚಿತ್ರಕತೆ ಮತ್ತು ಸಂಭಾಷಣೆಯಿಂದಲೂ ರಂಜಿಸಿತ್ತು. ಸ್ವಾತಂತ್ರ್ಯ ಹೋರಾಟಗಾರನೊಬ್ಬ ಹೆಚ್ಚುತ್ತಿರುವ ಅಪರಾಧ ಮತ್ತು ಭ್ರಷ್ಟಾಚಾರದ ವಿರುದ್ಧ ಸಿಡಿದೇಳುವುದು ಚಿತ್ರದ ಕತೆ. ಈ ಪಾತ್ರದಲ್ಲಿ ಕಮಲ್‌ ಹಾಸನ್‌ ಅಭೂತಪೂರ್ವವಾಗಿ ನಟಿಸಿದ್ದರು.

ಇದೀಗ ಅದೇ ಪಾತ್ರದ ಮುಂದುವರಿಕೆಗೆ ಅವರು ಸಜ್ಜಾಗಬೇಕಿದೆ. ಹಾಗಾಗಿ 22 ವರ್ಷಗಳಷ್ಟು ಹಿರಿಯನಾಗಿ ಈ ಆವೃತ್ತಿಯಲ್ಲಿ ಅವರು ಕಾಣಿಸಿಕೊಳ್ಳಲಿದ್ದಾರೆ. ಅಜಯ್‌ ದೇವಗನ್, ನೆಡುಮುಡಿ ವೇಣು, ಮನಿಷಾ ಕೊಯಿರಾಲ, ಸುಕನ್ಯಾ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದರು. ‘ಭಾರತೀಯುಡು 2’ರಲ್ಲಿ ಕಮಲ್‌ಗೆ ಯಾರು ನಾಯಕಿಯಾಗಲಿದ್ದಾರೆ ಎಂಬ ಕುತೂಹಲವೂ ಅಭಿಮಾನಿಗಳ ಮುಂದಿದೆ.

ಸಂಗೀತ ನಿರ್ದೇಶನ ಅನಿರುದ್ಧ್‌ ರವಿಚಂದರ್‌ ಅವರದು ಹಾಗೂ ಕ್ಯಾಮೆರಾ ಹಿಡಿಯಲಿರುವವರು ರವಿ ವರ್ಮನ್‌ ಎಂಬ ಮಾಹಿತಿಯಷ್ಟೇ ಈಗ ಹೊರ ಬಿದ್ದಿರು ವುದು. 2.0 ಬಿಡುಗಡೆಯಾದ ಬೆನ್ನಿಗೆ ‘ಭಾರತೀಯುಡು 2’ ಚಿತ್ರತಂಡವನ್ನು ಶಂಕರ್‌ ಪ್ರಕಟಿಸಲಿದ್ದಾರೆ. ‘ಸೇನಾಪತಿ ಈಸ್‌ ಬ್ಯಾಕ್‌’ ಎಂಬ ಟ್ಯಾಗ್‌ಲೈನ್‌, ಈ ಚಿತ್ರದ ಬಗೆಗಿನ ಕಾತರವನ್ನು ಇನ್ನಷ್ಟು ಹೆಚ್ಚಿಸಿದೆ.  ‘ಭಾರತೀಯುಡು 2’ಗಾಗಿ ಕಮಲ್‌ ತಾಳಲಿರುವ ಹೊಸ ರೂಪ ಹೇಗಿರುತ್ತದೆ ಎಂದು ಕಾದುನೋಡಬೇಕಿದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು