ನಿರಾಶ್ರಿತರ ನೀರಸ ಬದುಕು

7

ನಿರಾಶ್ರಿತರ ನೀರಸ ಬದುಕು

Published:
Updated:
ನಿರಾಶ್ರಿತರ ನೀರಸ ಬದುಕು

ಗುಲ್ಬರ್ಗ: ಅಲ್ಲಿ ಕನ್ನಡ ರಾಜ್ಯೋತ್ಸವದ ಅಂಗವಾಗಿ ಸಚಿವರು, ಅಧಿಕಾರಿಗಳು ಸಾಧನೆಗಳ ಪಟ್ಟಿ ಪ್ರಕಟಿಸುತ್ತಿದ್ದರು. ಇನ್ನೊಂದೆಡೆ ಕನ್ನಡ ಸಾಹಿತ್ಯ- ಸಾಂಸ್ಕೃತಿಕ ಲೋಕದ ಹೆಮ್ಮೆಯ ವಿಷಯಗಳನ್ನು ಸಾಹಿತಿಗಳು ಕೊಂಡಾಡುತ್ತಿದ್ದರು. ಅದೇ ಸಮಯಕ್ಕೆ ಹಸಿವೆ ತಾಳದೇ ಭಿಕ್ಷುಕನೊಬ್ಬ ಕಸದ ತೊಟ್ಟಿಯಿಂದ ಹೊರಬಿದ್ದಿದ್ದ ಪ್ಲಾಸ್ಟಿಕ್ ಪಾಕೆಟ್‌ಗಳಲ್ಲಿ ಏನಾದರೂ ಆಹಾರ ಸಿಕ್ಕೀತೆ? ಎಂದು ಗುಲ್ಬರ್ಗದ ಗಾಜಿಪುರ ರಸ್ತೆಯಲ್ಲಿ ತಡಕಾಡುತ್ತಿದ್ದ...ಆಗ ಮುಂಗಾರು ಮಳೆಯ ಅಬ್ಬರದ ದಿನಗಳು. ಪ್ರಯಾಣಿಕರ ಗೌಜು-ಗದ್ದಲ. ಟಾಟಾ, ಜೋಪಾನ, ಹುಷಾರು, ಮತ್ತೆ ಯಾವಾಗ ಬರುವೆ? ಎನ್ನುವ ಪರಸ್ಪರ ಉಭಯ ಕುಶಲೋಪರಿಯ ಮಾತುಗಳು ಕೇಳಿ ಬರುತ್ತಿದ್ದವು.

 ಅದೇ ವೇಳೆಯಲ್ಲಿ ಮಹಿಳೆಯೊಬ್ಬಳು ಬಂಧು-ಬಾಂಧವರಿಲ್ಲದೆ ಅನಾಥಳಾಗಿ ಹುಚ್ಚಿಯಂತೆ `ಎಪ್ಪಾ ಹಸಿವಾಗ್ಯಾದ. ಒಂದ್ರೂಪಾಯಿ ಕೊಡ್ರಿ. ನಿಮ್ಗ ಪುಣ್ಯಾ ಬರ‌್ತಾದ~ ಎಂದು ಯಾದಗಿರಿ ಜಿಲ್ಲೆಯ ಸೈದಾಪುರ ರೈಲ್ವೆ ನಿಲ್ದಾಣದ ಪ್ಲಾಟ್‌ಫಾರಂ ಬಳಿ ಸುತ್ತಾಡುತ್ತಿದ್ದಳು...ಅದೊಂದು ಕಸದ ತೊಟ್ಟಿ. ಮದುವೆ ಊಟದ ಎಂಜಲು ಎಲೆ ಅಲ್ಲಿ ಬೀಳುತ್ತಿದ್ದಂತೆಯೇ ಆತ ಪ್ರತ್ಯಕ್ಷವಾಗುತ್ತಿದ್ದ. ಹಂದಿ, ನಾಯಿಗಳೊಂದಿಗೆ ತುತ್ತು ಅನ್ನಕ್ಕಾಗಿ ಹೊಡೆದಾಟ ನಡೆಸಿದ್ದ. ತೊಟ್ಟಿಯೊಳಗೆ ಎಲೆ ಬೀಳುವುದನ್ನೇ ಕಾಯುತ್ತಿದ್ದ.  ಅಕ್ಷರಶಃ ಹುಚ್ಚನಂತೆ ಕಾಣುತ್ತಿದ್ದ ಆತ ಬೀದರ್ ಜಿಲ್ಲೆಯ ಭಾಲ್ಕಿ ಪಟ್ಟಣದ ಕಲ್ಯಾಣ ಮಂಟಪದ ಕಸದ ತೊಟ್ಟಿಯಲ್ಲಿ ಸಿಕ್ಕ....ಮೇಲಿನ ಈ  ದೃಶ್ಯಗಳು ನಗರದ ಹೈಕೋರ್ಟ್ ಸಂಚಾರಿ ಪೀಠದ ಎದುರಿಗಿನ ನಿರಾಶ್ರಿತರ ಪರಿಹಾರ ಕೇಂದ್ರಕ್ಕೆ `ಪ್ರಜಾವಾಣಿ~ ಭೇಟಿ ನೀಡಿದಾಗ ಕಂಡು, ಕೇಳಿದ ಹೃದಯ ವಿದ್ರಾವಕ ಸಂಗತಿಗಳು.1993ರಲ್ಲಿ ಮೂರು ಎಕರೆ ಜಾಗದಲ್ಲಿ ನಿರ್ಮಾಣವಾಗಿರುವ ಈ ಕೇಂದ್ರದಲ್ಲಿ ಎರಡು ವಸತಿ ಕೋಣೆ, ಒಂದು ಅಡುಗೆಕೋಣೆ, ಒಂದು ಕಚೇರಿ ಕೋಣೆ ಹಾಗೂ ವಿಶಾಲ ಮೈದಾನವಿದೆ. ಯಾದಗಿರಿ, ಗುಲ್ಬರ್ಗ, ಬೀದರ್, ಬಿಹಾರ, ಉತ್ತರ ಪ್ರದೇಶ ವ್ಯಾಪ್ತಿಯ 6 ಜನ ಮಹಿಳೆಯರು, 23 ಜನ ಪುರುಷರು ಸೇರಿದಂತೆ ಒಟ್ಟು 29 ಜನ ನಿರಾಶ್ರಿತರಿದ್ದಾರೆ.ಅವರಿಗಾಗಿ ಒಬ್ಬ ವಾರ್ಡರ್, ಒಬ್ಬರು ಅಡುಗೆಯಾತ, ಇಬ್ಬರು ದಿನಗೂಲಿ ನೌಕರರು, ಮೂರು ಜನ ಭದ್ರತಾ ಸಿಬ್ಬಂದಿ, ವಾಹನ ಚಾಲಕ, ಒಬ್ಬ ಅಧೀಕ್ಷಕ ಸೇರಿದಂತೆ ಒಟ್ಟು 9 ಜನ ಸಿಬ್ಬಂದಿ ಇಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.         ಭಿಕ್ಷಾಟನೆ ನಿರ್ಮೂಲನೆಗೆ ಪಣ ತೊಟ್ಟಿರುವ ಸರ್ಕಾರ                 ಸಮಾಜ ಕಲ್ಯಾಣ ಇಲಾಖೆಯ ಮೂಲಕ ಅನೇಕ ಯೋಜನೆಗಳನ್ನು ಜಾರಿಗೆ ತರಲಾಗಿದ್ದರೂ `ಆಮ್ ಆದ್ಮಿಗೆ ರೋಟಿ, ಕಪಡಾ ಔರ್ ಮಕಾನ್ ಒದಗಿಸದಿರುವುದು ಕಟು ವಾಸ್ತವ.ನಿರಾಶ್ರಿತರ ನುಡಿ

ಎರಡೊತ್ತು ರೊಟ್ಟಿ, ಅನ್ನ, ಬ್ಯಾಳಿ, ಸಂಜಿಮುಂದ ಚಹಾ ನೀಡಲಾಗುತ್ತಿದ್ದು, ನಮ್ಮನ್ನು ಬಿಟ್ಟರೆ ಹೋಗುತ್ತೇವೆ. ಇಲ್ಲದಿದ್ದಲ್ಲಿ ಇಲ್ಲಿಯೇ ಆರಾಮಾಗಿ ಇರುತ್ತೇವೆ ಎಂದು ಕೆಲವರು ಹೇಳಿದರೆ, ಇಲ್ಲೆ ಶಾಣಯ್ಯನ ಗುಡಿಗೆ ಬಂದಿದ್ದೆ. ಇವರು ಹಿಡಕೊಂಡು ತಂದಾರ. ಇಲ್ಲಿಗಿ ಬಂದು ಎರಡ್ಮೂರು ತಿಂಗಳಾಯ್ತು. ನಮ್ಮಣ್ಣ ಸುಪ್ರೀಂ ಕೋರ್ಟ್ ಜಡ್ಜ್ ಅದಾನ. ಇಲ್ಲೆ ಇರಂದ್ರ ಇರ‌್ತೀನಿ. ಎಲ್ಯಾದ್ರೂ ಮಾಡಿ ಉಣೋದು ತಪ್ಪುವುದಿಲ್ಲ. ಮನೆಯಲ್ಲಿ ಹೆಣ್ತಿ ಹಡಿಲ್ಯಾಕ್ ತವ್ರ ಮನಿಗಿ ಹೋಗ್ಯಾಳ. ಸ್ವಲ್ಪ ಸಾಲ, ಗೀಲಾ ಆಗ್ಯಾದ. ಕೊಡೋರಿಗೆ ಕೊಟ್ಟು ಅವರ ಸಾಲ ತೀರಿಸಿ ಬೇಕಂದ್ರ ಮತ್ತೆ ಇಲ್ಲಿಗೆ ಬರತೀನಿ. ನಮ್ಮ ಸಾಹೇಬ್ರಿಗಿ ನೀವಾದ್ರೂ ಹೇಳ್ರಿ ಎಂದು ಇನ್ನೂ ಕೆಲವರು ನಕ್ಕೊಂತ ನುಡಿಯುತ್ತಾರೆ.ಸಿಬ್ಬಂದಿ ಸಮಜಾಯಿಸಿ

ನಿರಾಶ್ರಿತರನ್ನು ಇಲ್ಲಿಗೆ ಕರೆತಂದ ಕೂಡಲೇ ಎಲ್ಲರಿಗೂ ಸಮವಸ್ತ್ರ, ಊಟ, ವಸತಿಯ ವ್ಯವಸ್ಥೆ ಮಾಡಲಾಗುತ್ತದೆ. ಕೇಂದ್ರದ ಆವರಣದಲ್ಲಿಯೇ ತರಕಾರಿ ಬೆಳೆಯಲಾಗುತ್ತಿದ್ದು, ಅದಕ್ಕೆ ನೀರು ಹಾಕುವ ಕಳೆ ತೆಗೆಯುವ ಕೆಲಸವನ್ನು ನಿರಾಶ್ರಿತರಿಂದ ತೆಗೆದುಕೊಳ್ಳಲಾಗುತ್ತಿದೆ. ಇನ್ನೂ ಕೆಲವರಿಗೆ ಫಿನೈಲ್,  ಚಾಕ್‌ಪೀಸ್ ತಯಾರಿಸುವ ತರಬೇತಿ ಸಹ ನೀಡಲಾಗುತ್ತಿದೆ. ಲ್ಯಾಂಡ್ ಫೋನ್ ಕಟ್ ಆಗ್ಯಾದ. ಗಾಡಿಗಿ ಕಲರ್ ಮಾಡಿಸ್ಬೇಕಾಗಿದೆ ಎಂಬುದು ನಿರಾಶ್ರಿತ ಕೇಂದ್ರದ ಅಧೀಕ್ಷಕ ರಾಮಬಾಬು ಸಮಜಾಯಿಷಿ ನೀಡುತ್ತಿದ್ದರೆ ಅದಕ್ಕೆ ವಾರ್ಡರ್ ನರಸಿಂಗ್ ರಾಠೋಡ್ ದನಿಗೂಡಿಸುತ್ತಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry