ಶನಿವಾರ, ಜೂನ್ 19, 2021
22 °C

ಪಲ್ಲಟವಾದ ಮುಖ

ಎನ್‌.ಆರ್. ತಿಪ್ಪೇಸ್ವಾಮಿ Updated:

ಅಕ್ಷರ ಗಾತ್ರ : | |

Deccan Herald

ಅದೇ ಆ ಜಾತ್ರೆಯಲ್ಲಿ

ಕಂಡೂ ಕಾಣದಂತೆ ಕಂಡು ಮಾಯವಾದ ಮುಖ

ಪಶ್ಚಿಮಕ್ಕೆ ಚಲಿಸಿತು

ಜನರ ಗದ್ದಲದ ಗೋಜು

ಸರ್ಕಸ್ಸಿನಲ್ಲಿ ಮೋಟರ್ ಬೈಕ್‌ನ ಶಬ್ದ ಬರ್ರ್ ಬರ್ರ್

ಮಂಗಳ ಯಾನಕ್ಕೋ

ಚಂದ್ರ ಯಾನಕ್ಕೋ

ಹೊರಟಂತೆ ಜೋರು ಶಬ್ದ

ಹೂ ಹಣ್ಣು ಕಾಯಿಗಳ, ಪ್ಲಾಸ್ಟಿಕ್ ಆಟಿಕೆಗಳ

ಸಿಹಿ ತಿನಿಸು ಅಂಗಡಿಗಳ ಸಾಲು ಸರಣಿ ಕೊನೆಗೊಳ್ಳುವುದಿಲ್ಲ

ಉಪಖಂಡದಲ್ಲಿ ಇಂತಹ ಜಾತ್ರೆ ನೂರಾರು

ಕೊಳ್ಳಲಿಕ್ಕೂ ಮಾರಲಿಕ್ಕೂ ನೀತಿಯಿದೆ

ಜಾತ್ರೆಯಲ್ಲಿನ ಪ್ಲಾಸ್ಟಿಕ್ ಕಾರ್ ಬಲವಿಲ್ಲದೆ ಚಲಿಸುವುದಿಲ್ಲ

ಡೇರೆಯೊಳಗಿನ ಮಾರಾಟಗಾರರ ಬದುಕು;

ಆ ಮಾಯ ಮುಖದ ಬೆರಗಿಗೆ ಚಲನೆ ತಪ್ಪಿದೆ

ಆದರೆ,

ಜೀವದೊಂದಿಗೆ ಜೀವ ಬೆಸೆಯುತ್ತವೆ

ಕಲ್ಲಿನ ದೇವಿಗೂ ಜೀವ ಬಂದು ಸಾವಿರಾರು ಜನರ ಸೆಳೆಯುತ್ತದೆ

ಜನ ಸಂಸ್ಕೃತಿ ಜೀವಪರ.

ಇಲ್ಲಿ ಜನರು ಗ್ರಾಹಕರಲ್ಲ.

**

ಅದೇ ಆ ಮುಖ ;

ನಗರಗಳಲ್ಲಿ ದೊಡ್ಡ ದೊಡ್ಡ ಮಾಲ್‌ಗಳ

ನೀಳ ಗ್ಲಾಸ್‌ನ ಪರದೆಯ ಮೇಲೆ ಕಂಡಿತು

ಪಶ್ಚಿಮದಿಂದಲೇ ಹಿಂದಿರುಗಿರಬೇಕು

ಮಾಲ್‌ನೊಳಗಿನ ಪ್ಲಾಸ್ಟಿಕ್ ಕಾರ್ ಕೀ ಕೊಟ್ಟರೆ ಚಲಿಸುತ್ತದೆ

ಸ್ವಿಚ್ ಹಾಕಿದರೆ ಗೋಡೆ ಎದ್ದು ನಿಲ್ಲುತ್ತದೆ

ಅಂಗಡಿಗಳ ಸಾಲು ಸರಣಿಗೆ ಜಾತ್ರೆಗಳೇ ಆಗಬೇಕಿಲ್ಲ

ಇಲ್ಲಿ ನಿತ್ಯವೂ ಜಾತ್ರೆಯೇ

ಕೊಳ್ಳುಬಾಕ ಸಂಸ್ಕೃತಿಗೆ ಆ ಮುಖ ಜಾಹೀರಾಗಿ ಗ್ಲಾಸ್‌ನ ಮೇಲೆ ಮೂಡಿದೆ

ಎಲ್ಲರನ್ನೂ ಗ್ರಾಹಕರನ್ನಾಗಿಸುತ್ತಿದೆ

ಖಂಡಾಂತರಗಳಲ್ಲಿ ಜೋಡಿಸಿದ ಕೈಗಳು

ಕೈಯಿಂದ ಕೈಗೆ ಸೂಟ್‌ಕೇಸುಗಳು ಬದಲಾಗುವುದಕ್ಕೆ ಸಾಕ್ಷಿಯಾಗಿದೆ ಆ ಮುಖ

ಎಲ್ಲರ ಮುಖವೂ ಆ ಮುಖದ ಚಹರೆಯಾಗಿದೆ

ಕೈ ಬದಲಾದಂತೆ ಮುಖವೂ ಬದಲಾವಣೆಗೆ ಒಳಪಡುತ್ತದೆ

ಮನುಷ್ಯರ ಮನಸ್ಸುಗಳ ನಡುವೆ ಗೋಡೆ ಕಟ್ಟಿಸಿದೆ

ಇಲ್ಲಿ ವಸ್ತುಗಳೂ, ಜನರೂ ನಂಬರ್‌ಗಳಿಂದ ಗುರ್ತಿಸಲ್ಪಡುತ್ತಿದ್ದಾರೆ

ಮೋಟರ್ ಸೈಕಲ್‌ಗಳು ಚಲಿಸುತ್ತಿವೆ ಬರ್ರ್ ಬರ್ರ್

ಮಂಗಳ ಯಾನಕ್ಕೋ, ಚಂದ್ರ ಯಾನಕ್ಕೋ

ವಿಳಾಸ ಬದಲಿಸಲು

ಪರದೆಯ ಮೇಲಿನ ಮುಖ ದಿಟ್ಟಿಸುತ್ತಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.