ಪಾಕಿಸ್ತಾನದಲ್ಲಿ ಎರಡನೇ ದಿನವೂ ಪ್ರತಿಭಟನೆ ಭುಗಿಲು

7
ಧರ್ಮನಿಂದನೆ ಆರೋಪದಿಂದ ಕ್ರೈಸ್ತ ಮಹಿಳೆ ಖುಲಾಸೆಗೆ ವಿರೋಧ l ಹಲವೆಡೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣ

ಪಾಕಿಸ್ತಾನದಲ್ಲಿ ಎರಡನೇ ದಿನವೂ ಪ್ರತಿಭಟನೆ ಭುಗಿಲು

Published:
Updated:
Deccan Herald

ಇಸ್ಲಾಮಾಬಾದ್‌: ಧರ್ಮನಿಂದನೆ ಪ್ರಕರಣದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿದ್ದ ಕ್ರೈಸ್ತ ಮಹಿಳೆಯನ್ನು ಆರೋಪ ಮುಕ್ತಗೊಳಿಸಿರುವ ಪಾಕಿಸ್ತಾನದ ಸುಪ್ರೀಂ ಕೋರ್ಟ್ ತೀರ್ಪು ವಿರೋಧಿಸಿ ದೇಶದಾದ್ಯಂತ ಭುಗಿಲೆದ್ದಿರುವ ಪ್ರತಿಭಟನೆ, ಎರಡನೇ ದಿನವಾದ ಗುರುವಾರವೂ ಮುಂದುವರಿದಿದೆ. ಇದರಿಂದ ಹಲವೆಡೆ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದೆ.

ತೆಹ್ರಿಕ್- ಎ- ಲಬೈಕ್ ಪಾಕಿಸ್ತಾನ್‌ ಮತ್ತು ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಗುರುವಾರ ಪ್ರತಿಭಟನೆಗಳು ನಡೆದವು. ಕರಾಚಿ, ಲಾಹೋರ್ ಮತ್ತು ಇಸ್ಲಾಮಾಬಾದ್‌ನಲ್ಲಿ ಪ್ರತಿಭಟನೆ ತೀವ್ರ ಸ್ವರೂಪ ಪಡೆದಿತ್ತು. ಪ್ರತಿಭಟನಾಕಾರರು ವಿವಿಧೆಡೆ ಪ್ರಮುಖ ರಸ್ತೆಗಳನ್ನು ಬಂದ್ ಮಾಡಿ ಆಕ್ರೋಶ ವ್ಯಕ್ತಪಡಿಸಿದರು. ಪರಿಣಾಮವಾಗಿ, ವಾಹನಗಳು ಗಂಟೆಗಟ್ಟಲೆ ರಸ್ತೆಗಳಲ್ಲಿ ಸಾಲುಗಟ್ಟಿ ನಿಲ್ಲಬೇಕಾಯಿತು.

ಪಂಜಾಬ್, ಸಿಂಧ್ ಮತ್ತು ಖಿಬರ್‌ ಪಕ್ತುಂಕ್ವಾ ಪ್ರಾಂತ್ಯಗಳಲ್ಲಿ ಶಾಲೆಗಳಿಗೆ ರಜೆ ಘೋಷಿಸಲಾಗಿತ್ತು. ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಪೊಲೀಸರು ಮತ್ತು ಅರೆಸೈನಿಕ ಪಡೆಗಳು ಸತತ ಪ್ರಯತ್ನ ನಡೆಸುತ್ತಿವೆ. ಘರ್ಷಣೆಗಳು ಸಂಭವಿಸುವ ಭೀತಿಯಿದ್ದು, ಜಾಗ್ರತೆ ವಹಿಸುವಂತೆ ಆಸ್ಪತ್ರೆಗಳಿಗೆ ತಿಳಿಸಲಾಗಿದೆ. ಹಲವು ಭಾಗಗಳಲ್ಲಿ ಮೊಬೈಲ್ ಫೋನ್ ಮತ್ತು ಇಂಟರ್‌ನೆಟ್ ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

‘ದೇಶದಲ್ಲಿ ಶಾಂತಿ ಮರುಸ್ಥಾಪಿಸಲು ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ನಾವು ಸಿದ್ಧರಾಗಿದ್ದೇವೆ’ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

2009ರಲ್ಲಿ ನೆರೆಮನೆಯ ಮಹಿಳೆ ಬಳಿ ಇಸ್ಲಾಂ ಧರ್ಮವನ್ನು ನಿಂದಿಸಿದ ಆರೋಪವನ್ನು ಎದುರಿಸುತ್ತಿದ್ದ ಏಷಿಯಾ ಬೀಬಿ (47) ಅವ
ರಿಗೆ ವಿಚಾರಣಾ ನ್ಯಾಯಾಲಯ 2010ರಲ್ಲಿ ಗಲ್ಲುಶಿಕ್ಷೆ ವಿಧಿಸಿತ್ತು. ಎಂಟು ವರ್ಷಗಳಿಂದ ಅವರನ್ನು ಒಂಟಿಯಾಗಿ ಬಂಧನದಲ್ಲಿ ಇರಿಸಲಾಗಿತ್ತು.

ಸಾಕ್ಷ್ಯಾಧಾರಗಳ ಕೊರತೆಯಿಂದ ಬೀಬಿ ಅವರನ್ನು ಈ ಆರೋಪದಿಂದ ಖುಲಾಸೆಗೊಳಿಸಿಸುಪ್ರೀಂ ಕೋರ್ಟ್‌ ಬುಧವಾರ ಐತಿಹಾಸಿಕ ತೀರ್ಪು ನೀಡಿದೆ.

ಪ್ರಧಾನಿ ಇಮ್ರಾನ್‌ ಖಾನ್‌ ಎಚ್ಚರಿಕೆ

‘ಬೀಬಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ತೀರ್ಪು ಮುಂದಿಟ್ಟುಕೊಂಡು ದೇಶದಲ್ಲಿ ಯಾರೂ ಭಯದ ವಾತಾವರಣ ಸೃಷ್ಟಿಸಬಾರದು’ ಎಂದು ಪ್ರಧಾನಿ ಇಮ್ರಾನ್‌ ಖಾನ್ ಎಚ್ಚರಿಸಿದ್ದಾರೆ.

‘ಭಯ ಹುಟ್ಟುಹಾಕಲು ಹೊರಟರೆ ನಮ್ಮ ಜವಾಬ್ದಾರಿಯನ್ನು ನಾವು ನಿರ್ವಹಿಸುತ್ತೇವೆ’ ಎಂದು ವಿಡಿಯೊ ಸಂದೇಶದಲ್ಲಿ ಅವರು ಕಟುವಾಗಿ ತಿಳಿಸಿದ್ದಾರೆ.

‘ಜನರ ಜೀವ ಮತ್ತು ಆಸ್ತಿ ರಕ್ಷಣೆ ಮಾಡುತ್ತೇವೆ. ಪ್ರತಿಭಟನಾಕಾರರು ರಸ್ತೆಗಳನ್ನು ಮುಚ್ಚಲು ಮತ್ತು ಅಶಾಂತಿ ಸೃಷ್ಟಿಸಲು ಅವಕಾಶ ನೀಡುವುದಿಲ್ಲ’ ಎಂದಿದ್ದಾರೆ.

ಹತ್ಯೆ ಭಯ: ದೇಶ ಬಿಡುವ ಸಾಧ್ಯತೆ

ಧರ್ಮನಿಂದನೆ ಆರೋಪದಿಂದ ಮುಕ್ತರಾಗಿರುವ ಏಶಿಯಾ ಬೀಬಿಗೆ ಮೂಲಭೂತವಾದಿ ಗಳಿಂದ ಕೊಲೆ ಬೆದರಿಕೆ ಎದು ರಾಗಿದೆ. ಹೀಗಾಗಿ ಆಕೆ ದೇಶ ಬಿಡುವ ಸಾಧ್ಯತೆ ಇದೆ.

ಬ್ರಿಟನ್‌ನಲ್ಲಿರುವ ಬೀಬಿ ಪತಿ ಆಶಿಕ್ ಮಾಸಿಹ್ ತಮ್ಮ ಕುಟುಂಬ ಸಹಿತ ಈಗಾಗಲೇ ಪಾಕಿಸ್ತಾನಕ್ಕೆ ಬಂದಿದ್ದಾರೆ. ಬೇಬಿಗೆ ಆಶ್ರಯ ನೀಡಲು ಹಲವು ದೇಶಗಳು ಮುಂದಾಗಿವೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.

ಮಾಸಿಹ್‌ ಅವರಿಗೆ ಕಾನೂನು ಜಾರಿ ಸಂಸ್ಥೆಗಳು ಸಂಪೂರ್ಣ ಭದ್ರತೆ ನೀಡಿವೆ. ಬೀಬಿ ಸದ್ಯ ಲಾಹೋರ್ ಬಳಿಯ ಶೇಕುಪುರದ ಜೈಲಿನಲ್ಲಿದ್ದು, ಅಲ್ಲಿಂದ ಅವರನ್ನು ಬಿಡುಗಡೆ ಮಾಡುವ ಸಮಯವನ್ನು ಅಧಿಕಾರಿಗಳು ಭದ್ರತೆಯ ಕಾರಣಕ್ಕೆ ಬಹಿರಂಗಪಡಿಸಿಲ್ಲ.

ಧರ್ಮನಿಂದನೆ ಪ್ರಕರಣದಲ್ಲಿ ಗಲ್ಲು ಶಿಕ್ಷೆಗೆ ಒಳಗಾಗಿದ್ದ ಮೊದಲ ಮಹಿಳೆಯಾದ ಬೀಬಿ, ನಾಲ್ವರು ಮಕ್ಕಳ ತಾಯಿಯಾಗಿದ್ದಾರೆ.

Tags: 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !