ಯುವಜನರು ಸೇವಾ ಮನೋಭಾವ ಬೆಳೆಸಿಕೊಳ್ಳಿ: ವಜುಭಾಯಿ ವಾಲಾ

7
ಮುದ್ದೇನಹಳ್ಳಿಯ ಸತ್ಯಸಾಯಿ ಗ್ರಾಮದಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ನ ರೋವರ್ಸ್, ರೇಂಜರ್ಸ್ ರಾಷ್ಟ್ರೀಯ ಸಮಾವೇಶಕ್ಕೆ ಚಾಲನೆ

ಯುವಜನರು ಸೇವಾ ಮನೋಭಾವ ಬೆಳೆಸಿಕೊಳ್ಳಿ: ವಜುಭಾಯಿ ವಾಲಾ

Published:
Updated:
Deccan Herald

ಚಿಕ್ಕಬಳ್ಳಾಪುರ: ‘ದೇಶಪ್ರೇಮ, ಶಿಸ್ತು, ಸೇವಾಮನೋಭಾವನೆಯಂತಹ ಉತ್ತಮ ಗುಣಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ದೇಶದ ಯುವ ಜನರು ಕ್ರಿಯಾಶೀಲರಾಗಿ ತಮ್ಮನ್ನು ಸಮಾಜಸೇವೆಯಲ್ಲಿ ತೊಡಗಿಸಿಕೊಳ್ಳಬೇಕು’ ಎಂದು ರಾಜ್ಯಪಾಲ ವಜುಭಾಯಿ ವಾಲಾ ಹೇಳಿದರು.

ತಾಲ್ಲೂಕಿನ ಮುದ್ದೇನಹಳ್ಳಿಯ ಸತ್ಯಸಾಯಿ ಗ್ರಾಮದಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ವತಿಯಿಂದ ಆಯೋಜಿಸಿರುವ ರೋವರ್ಸ್, ರೇಂಜರ್ಸ್ ರಾಷ್ಟ್ರೀಯ ಸಮಾವೇಶಕ್ಕೆ ಶುಕ್ರವಾರ ಚಾಲನೆ ನೀಡಿ ಅವರು ಮಾತನಾಡಿದರು.

‘ಸಮಸ್ತ ವಿಶ್ವ ನನ್ನ ಪರಿಹಾರ ಎಂಬ ಉದಾತ್ತ ತತ್ವವನ್ನು ಪ್ರಪಂಚಕ್ಕೆ ಸಾರಿದ ದೇಶ ನಮ್ಮದು. ದೇಶದ ಸಂಪತ್ತಿನಂತಿರುವ ಯುವಜನರು ಇರ್ಷ್ಯೆ, ಅಹಂಕಾರ, ದ್ವೇಷದಿಂದ ಮುಕ್ತರಾಗಿ ಪ್ರೀತಿಯಿಂದ ಬದುಕಿ, ಜನಸೇವೆ ಮಾಡಬೇಕಿದೆ. ರಾಷ್ಟ್ರಸೇವೆಯನ್ನು ಧ್ಯೇಯವನ್ನಾಗಿಸಿಕೊಳ್ಳಬೇಕಿದೆ. ಸೇವೆಯೇ ನಮ್ಮ ಧರ್ಮವಾಗಲಿ’ ಎಂದು ತಿಳಿಸಿದರು.

‘ಯುವಜನರು ಭಯ ತೊಡೆದು ಹಾಕಿ ಧೈರ್ಯದಿಂದ, ಮುನ್ನುಗ್ಗುವ ಗುಣ ಬೆಳೆಸಿಕೊಂಡು ಬದುಕಬೇಕಿದೆ. ತುಂಡು ತುಂಡಾಗಿದ್ದ ದೇಶವನ್ನು ಒಗ್ಗೂಡಿಸಿದ ಸರ್ದಾರ್ ವಲ್ಲಭ ಭಾಯ್ ಪಟೇಲ್‌ ಅವರು ಧೈರ್ಯ ನಮಗೆ ಪ್ರೇರಣೆಯಾಗಬೇಕಿದೆ. ಜ್ಞಾನದ ದ್ಯೋತಕವಾದ ಸ್ವಾಮಿ ವಿವೇಕಾನಂದರು ಹೇಳಿದ ಏಳಿ ಎದ್ದೇಳಿ ಗುರಿ ಮುಟ್ಟುವ ತನಕ ನಿಲ್ಲದಿರಿ ಎಂಬ ಮಾತು ನಾವು ಮರೆಯಬಾರದು’ ಎಂದರು.

‘ಇವತ್ತು ಸಮಾಜದಲ್ಲಿ ರೈತರು, ಕಾರ್ಮಿಕರು ಭ್ರಷ್ಟಾಚಾರ ಮಾಡುತ್ತಿಲ್ಲ. ರಾಜಕಾರಣಿಗಳು, ಅಧಿಕಾರಿಗಳಿಂದ ಭ್ರಷ್ಟಾಚಾರ ಹೆಚ್ಚಾಗಿದೆ. ಆ ಮಾರ್ಗದಲ್ಲಿ ಹೋಗಬೇಡಿ. ರಾಷ್ಟ್ರಕ್ಕಾಗಿ ಬಲಿದಾನ ಮಾಡಿದ ವೀರಪುರುಷರು ನಮಗೆ ಪ್ರೇರಣೆಯಾಗಬೇಕು. ಅದಕ್ಕಾಗಿ ಮಹನೀಯರ ಬದುಕಿನ ಕುರಿತಾದ ಪುಸ್ತಕಗಳನ್ನು ಓದಿ ಜ್ಞಾನ ಬೆಳೆಸಿಕೊಳ್ಳುವ ಜತೆಗೆ ಉತ್ತಮ ವ್ಯಕ್ತಿತ್ವ ರೂಢಿಸಿಕೊಳ್ಳಿ’ ಎಂದು ಕಿವಿಮಾತು ಹೇಳಿದರು.

‘ಮಹಾತ್ಮಾ ಗಾಂಧೀಜಿಯವರು ಲಂಡನ್‌ನಲ್ಲಿ ಬ್ಯಾರಿಸ್ಟರ್ ಪದವಿ ಪಡೆದರೂ ದೇಶವನ್ನು ಬ್ರಿಟಿಷರ ದಾಸ್ಯದಿಂದ ಮುಕ್ತಗೊಳಿಸುವ ಸಲುವಾಗಿ ಇಡೀ ಜೀವನ ಲಂಗೋಟಿಯಲ್ಲಿ ಬದುಕಿದರು. ಅದಕ್ಕಾಗಿ ಅವರ ತ್ಯಾಗವನ್ನು ಇಡೀ ಜಗತ್ತು ಸ್ಮರಿಸುತ್ತದೆ. ಒಳ್ಳೆಯ ಕೆಲಸ ಮಾಡಿದರೆ ಸಾಮಾನ್ಯ ವ್ಯಕ್ತಿ ಕೂಡ ದೇವರಾಗುತ್ತಾರೆ ಎನ್ನುವುದಕ್ಕೆ ಭಗವಾನ್ ಸತ್ಯಸಾಯಿ ಬಾಬಾ ಅವರೇ ಉತ್ತಮ ಉದಾಹರಣೆ’ ಎಂದು ತಿಳಿಸಿದರು.

‘ಸ್ಕೌಟ್ಸ್ ಮತ್ತು ಗೈಡ್ಸ್‌ನಲ್ಲಿ ತೊಡಗಿಸಿಕೊಂಡಿರುವ ಅಬಾಲವೃದ್ಧರೂ ಸೇವಾ ತತ್ಪರರಾಗಬೇಕು. ಈ ಸಮಾವೇಶದಲ್ಲಿ ಪ್ರತಿಯೊಬ್ಬರೂ ಗಂಭೀರವಾಗಿ ತೊಡಗಿಸಿಕೊಳ್ಳಿ. ನಿಮ್ಮ ನಿಮ್ಮ ಪ್ರಾಂತ್ಯದ ವಿಶೇಷತೆ ಪ್ರಸ್ತುತಪಡಿಸಿ. ಭಾಷೆ, ವೇಷಗಳು ಭಿನ್ನವಾದರೂ ನಮ್ಮ ವಿಚಾರಧಾರೆಗಳು ಮಾತ್ರ ಒಂದೇ ಇರಬೇಕು. ಕಾಯಕವೇ ಕೈಲಾಸ ಎಂಬ ತತ್ವ ಬದುಕಿನಲ್ಲಿ ಅಳವಡಿಸಿಕೊಂಡು ಬದುಕಬೇಕು’ ಎಂದರು.

ಭಾರತ್ ಸ್ಕೌಟ್ಸ್‌ ಮತ್ತು ಗೈಡ್ಸ್‌ನ ರಾಜ್ಯ ಮುಖ್ಯ ಆಯುಕ್ತ ಪಿ.ಜಿ.ಆರ್‌ ಸಿಂದ್ಯಾ ಮಾತನಾಡಿ, ‘ಈ ಸಮಾವೇಶದಲ್ಲಿ 27 ರಾಜ್ಯಗಳಿಂದ ಸುಮಾರು 1,500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದಾರೆ. ಮುಂದಿನ ಮೂರು ದಿನಗಳಲ್ಲಿ ಅವರು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲಿದ್ದಾರೆ. ಸಮಾವೇಶದಲ್ಲಿ ಬದುಕುವ ಕಲೆ ಕಲಿತು ದೇಶದ ಸತ್ಪ್ರಜೆಗಳಾಗಿ ರೂಪುಗೊಳ್ಳಲಿದ್ದಾರೆ. ನಿಜವಾದ ರಾಷ್ಟ್ರೀಯ ಐಕ್ಯತೆಯನ್ನು ಇಲ್ಲಿ ಕಾಣಬಹುದಾಗಿದೆ’ ಎಂದು ಹೇಳಿದರು.

ಭಾರತ್ ಸ್ಕೌಟ್ಸ್‌ ಮತ್ತು ಗೈಡ್ಸ್‌ನ ರಾಷ್ಟ್ರೀಯ ಆಯುಕ್ತ ಎಂ.ಎ.ಖಾಲಿದ್ ಮಾತನಾಡಿ, ‘ರಾಜ್ಯದಲ್ಲಿ ಸ್ಕೌಟ್ಸ್‌ ಮತ್ತು ಗೈಡ್ಸ್‌ ಸಂಸ್ಥೆ ತೆರೆದು 100 ವರ್ಷಗಳಾಗಿದ್ದು ಪ್ರಸ್ತುತ ನಾವು ಶತಮಾನೋತ್ಸವದ ಸಂಭ್ರಮದಲ್ಲಿದ್ದೇವೆ. ಜಾಗತಿಕ ಮಟ್ಟದಲ್ಲಿ 217 ದೇಶದಲ್ಲಿ ಕೆಲಸ ಮಾಡುತ್ತಿರುವ ಸಂಸ್ಥೆಯ ಮಹಾನ್ ಚಳವಳಿ ವಿವಿಧ ರಂಗಗಳಲ್ಲಿ ಸೇವೆ ಸಲ್ಲಿಸುತ್ತಿದೆ. ದೇಶದ ಭವ್ಯ ಸಂಸ್ಕೃತಿ, ಪರಂಪರೆ ಉಳಿಸುವ ದೊಡ್ಡ ಜವಾಬ್ದಾರಿ ಯುವ ಪೀಳಿಗೆ ಮೇಲಿದೆ’ ಎಂದು ತಿಳಿಸಿದರು.

ಶಾಸಕ ಡಾ.ಕೆ.ಸುಧಾಕರ್, ವಿಧಾನ ಪರಿಷತ್ ಸದಸ್ಯ ಮೋಹನ್ ಕೊಂಡಜ್ಜಿ, ಹಿರಿಯ ನಾಯಕ ಕೊಂಡಜ್ಜಿ ಷಣ್ಮುಗಪ್ಪ, ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಜಾಫರ್, ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗುರುದತ್ ಹೆಗಡೆ, ಎಸ್ಪಿ ಕಾರ್ತಿಕ್ ರೆಡ್ಡಿ, ಸತ್ಯಸಾಯಿ ಬಾಬಾ ಅವರ ಸಂದೇಶವಾಹಕ ಮಧುಸೂಧನ್ ನಾಯ್ಡು, ಲೋಕಸೇವಾ ಶಿಕ್ಷಣ ಟ್ರಸ್ಟ್ ಕಾರ್ಯದರ್ಶಿ ಬಿ.ಎನ್.ನರಸಿಂಹಮೂರ್ತಿ, ಟ್ರಸ್ಟಿ ನಾರಾಯಣರಾವ್, ಮೇಜರ್‌ ಜನರಲ್ ಭಕುನಿ, ಸ್ಕೌಟ್ಸ್ ಅಂಡ್ ಗೈಡ್ಸ್‌ನ ಬೆಂಗಳೂರು ಜಿಲ್ಲಾ ಕಾರ್ಯದರ್ಶಿ ಎಂ.ಎಸ್.ಸತೀಶ್, ಜಿಲ್ಲಾ ಕಾರ್ಯದರ್ಶಿ ಡಿ.ಎಸ್.ಮನೋಹರ್ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !