ನ.13ರ ವರೆಗೆ ಪ್ರದೀಪ್‌ಗೆ ನ್ಯಾಯಾಂಗ ಬಂಧನ

7
ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ (ಐಪಿಸಿ 353) ಆರೋಪದ ಮೇಲೆ ವಶಕ್ಕೆ ಪಡೆದು ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಹಾಜರು

ನ.13ರ ವರೆಗೆ ಪ್ರದೀಪ್‌ಗೆ ನ್ಯಾಯಾಂಗ ಬಂಧನ

Published:
Updated:
Deccan Herald

ಚಿಕ್ಕಬಳ್ಳಾಪುರ: ನಗರ ಪೊಲೀಸ್ ಠಾಣೆ ಎದುರು ಶುಕ್ರವಾರ ಆಮರಣಾಂತ ಉಪವಾಸ ಸತ್ಯಾಗ್ರಹಕ್ಕೆ ಮುಂದಾದ ಉಪನ್ಯಾಸಕ ಪ್ರದೀಪ್ ಈಶ್ವರ್ ಅವರನ್ನು ಪೊಲೀಸರು ಕರ್ತವ್ಯಕ್ಕೆ ಅಡ್ಡಿಪಡಿಸಿದ (ಐಪಿಸಿ 353) ಆರೋಪದ ಮೇಲೆ ವಶಕ್ಕೆ ಪಡೆದು ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಹಾಜರುಪಡಿಸಿದರು. ನ್ಯಾಯಾಲಯ ಪ್ರದೀಪ್ ಅವರನ್ನು ನವೆಂಬರ್ 13ರ ವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತು.

ಠಾಣೆ ಎದುರು ಅಂಬೇಡ್ಕರ್ ಅವರ ಭಾವಚಿತ್ರ ಹಿಡಿದು ಕುಳಿತು ಆಮರಣಾಂತ ಉಪವಾಸ ಸತ್ಯಾಗ್ರಹಕ್ಕೆ ಮುಂದಾದ ಪ್ರದೀಪ್, ‘ಇತ್ತೀಚೆಗೆ ನಗರಸಭೆ ಆವರಣದಲ್ಲಿ ನಗರಸಭೆ ಸದಸ್ಯ ಎ.ಗಜೇಂದ್ರ ಅವರು ನನ್ನ ಮೇಲೆ ಹಲ್ಲೆ ನಡೆಸಿದ ದೃಶ್ಯಗಳು ನಗರಸಭೆ ಆವರಣದಲ್ಲಿ ಅಳವಡಿಸಿರುವ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ. ಆ ದೃಶ್ಯಾವಳಿಗಳನ್ನು ಪೊಲೀಸರು ಮಾಧ್ಯಮದವರ ಎದುರು ಬಿಡುಗಡೆ ಮಾಡಬೇಕು’ ಎಂದು ಆಗ್ರಹಿಸಿದರು. ಈ ವೇಳೆ ಪೊಲೀಸರು ಅವರನ್ನು ಬಂಧಿಸಿದರು.

ಈ ವೇಳೆ ಮಾತನಾಡಿದ ಪ್ರದೀಪ್ ಈಶ್ವರ್, ‘ಅಕ್ಟೋಬರ್ 29 ರಂದು ಕೆಲ ದಾಖಲೆಗಳು ಪಡೆಯಲು ನಗರಸಭೆಗೆ ಹೋದಾಗ ಗಜೇಂದ್ರ ಅವರು ನಗರಸಭೆ ಆವರಣದಲ್ಲಿಯೇ ನನ್ನ ಮೇಲೆ ತೀವ್ರವಾಗಿ ಹಲ್ಲೆ ನಡೆಸಿದ್ದಾರೆ. ನಾನು ಅವರಿಗೆ ಒಂದೇ ಒಂದು ಏಟು ಹೊಡೆದಿಲ್ಲ. ಘಟನೆ ಕುರಿತು ದೂರು ಸಹ ನೀಡಿದ್ದೇನೆ. ಆದರೂ ಪೊಲೀಸರು ಅವರ ವಿರುದ್ಧ ಐಪಿಸಿ 307 ಸೆಕ್ಷನ್ (ಕೊಲೆ ಯತ್ನ) ಅಡಿ ಪ್ರಕರಣ ದಾಖಲಿಸಿಲ್ಲ. ಬದಲು ಶಾಸಕ ಸುಧಾಕರ್ ಅವರ ಒತ್ತಡಕ್ಕೆ ಮಣಿದು ನನ್ನ ವಿರುದ್ಧವೇ ಕ್ರಮಕ್ಕೆ ಮುಂದಾಗಿದ್ದಾರೆ’ ಎಂದು ಆರೋಪಿಸಿದರು.

‘ನಾನು ಠಾಣೆ ಎದುರು ಪ್ರತಿಭಟನೆ ನಡೆಸುತ್ತೇನೆ ಎಂದು ತಿಳಿದ ಕೂಡಲೇ ಪೊಲೀಸರು ಗಜೇಂದ್ರ ಅವರು ಆರು ತಿಂಗಳ ಹಿಂದೆ ನನ್ನ ವಿರುದ್ಧ ನೀಡಿದ್ದ ದೂರೊಂದರ ಆಧಾರ ಮೇಲೆ ಇದೀಗ ಪ್ರಕರಣ ದಾಖಲಿಸಿಕೊಂಡಿದ್ದಾರೆ. ನನ್ನ ಸತ್ಯಾಗ್ರಹ ಮಟ್ಟ ಹಾಕಲು ಇಂತಹ ಷಡ್ಯಂತ್ರ ನಡೆಯುತ್ತಿದೆ. ಇದಕ್ಕೆ ನಾನು ಹೆದರುವುದಿಲ್ಲ. ಶೇ 5ರಷ್ಟು ಇರುವ ಕೆಟ್ಟ ಹುಳುಗಳಿಂದ ಪ್ರಜಾಪ್ರಭುತ್ವ ವ್ಯವಸ್ಥೆ ಹಾಳಾಗುತ್ತಿದೆ. ಶಾಸಕ ಸುಧಾಕರ್ ಅವರ ರೌಡಿಸಂ ಅಂತ್ಯ ಕಾಣಬೇಕು’ಎಂದು ತಿಳಿಸಿದರು.

‘ನಮ್ಮ ಪೊಲೀಸರು ಅಮಾಯಕರು ಸತ್ತು ಹೋಗುವವರೆಗೂ ಅವರಿಗೆ ನ್ಯಾಯ ಕೊಡಿಸುವುದಿಲ್ಲ. ಸತ್ತ ಮೇಲೆ ರಾಜೀ ಸಂಧಾನ ಮಾಡುತ್ತಾರೆ. ನಾನು ಈ ಪ್ರಕರಣವನ್ನು ಅಷ್ಟು ಸುಲಭಕ್ಕೆ ಸುಮ್ಮನೆ ಬಿಡುವುದಿಲ್ಲ. ಸುಪ್ರೀಂ ಕೋರ್ಟ್ ಮೆಟ್ಟಿಲೇರಿಯಾದರೂ ನ್ಯಾಯ ಪಡೆಯುತ್ತೇನೆ’ ಎಂದರು.

‘ಇಂತಹ ಗೂಂಡಾಗಿರಿ ನಡೆಸುವ ಬದಲು ತಾಕತ್ತು ಇದ್ದವರು ಬಹಿರಂಗವಾಗಿ ಚರ್ಚೆ ಬರಲಿ. ಇತ್ತೀಚೆಗೆ ನಗರದಲ್ಲಿ ನಡುರಸ್ತೆಯಲ್ಲಿ ಹಾಡುಹಗಲೇ ವಿನಯ್ ಎಂಬ ಯುವಕನನ್ನು ಥಳಿಸಿ ಕೊಂದರು. ಆದರೂ ಪ್ರಕಣದ ಆರೋಪಿಗಳೆಲ್ಲ ಖುಲಾಸೆಯಾದರು. ಅಂತಹದ್ದೇ ನಾಳೆ ನನ್ನ ಮೇಲೆ ನಡೆಯಬಹುದು. ಇವತ್ತು ಕ್ಷೇತ್ರದಲ್ಲಿ ಶಾಸಕರ ವಿರೋಧಿಗಳ ವಿರುದ್ಧ ಪೊಲೀಸರು ಒತ್ತಡಕ್ಕೆ ಮಣಿದು ನಕಲಿ ಪ್ರಕರಣಗಳನ್ನು ದಾಖಲಿಸಿ, ಜೈಲಿಗೆ ಕಳುಹಿಸುತ್ತಿದ್ದಾರೆ’ ಎಂದು ಆರೋಪಿಸಿದರು.

ಸರ್ಕಲ್ ಇನ್‌ಸ್ಪೆಕ್ಟರ್ ಸುದರ್ಶನ್ ಮಾತನಾಡಿ, ‘ನಗರಸಭೆ ಆವರಣದಲ್ಲಿ ನಡೆದ ಗಲಾಟೆಗೆ ಸಂಬಂಧಿಸಿದಂತೆ ಪ್ರದೀಪ್ ಮತ್ತು ಗಜೇಂದ್ರ ಅವರು ಪರಸ್ಪರ ಹಲ್ಲೆ ಆರೋಪದ ಮೇಲೆ ದೂರು ನೀಡಿದ್ದಾರೆ. ಆ ಬಗ್ಗೆ ತನಿಖೆ ನಡೆಯುತ್ತಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಗಜೇಂದ್ರ ಮತ್ತು ಅನಿಲ್ ಎಂಬುವರನ್ನು ಬಂಧಿಸಿದ್ದೇವೆ. ಅವರು ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ’ ಎಂದು ತಿಳಿಸಿದರು.

‘ನಗರಸಭೆ ಆವರಣದಲ್ಲಿ ಅಳವಡಿಸಿದ ಸಿಸಿ ಕ್ಯಾಮೆರಾಗಳ ಡಿವಿಆರ್ ಅನ್ನು ನಾವು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಒಪ್ಪಿಸಿದ್ದೇವೆ. ಅದರಲ್ಲಿನ ದೃಶ್ಯಾವಳಿಗಳು ಬೇಕಾದರೆ ಅವರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿ ಪಡೆಯಬೇಕು. ಅದನ್ನು ಬಿಟ್ಟು ಪ್ರದೀಪ್ ಅವರು ಅನುಮತಿ ಪಡೆಯದೆ ಠಾಣೆಯ ಆವರಣದಲ್ಲಿ ಪ್ರತಿಭಟನೆ ನಡೆಸುವ ಮೂಲಕ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದರಿಂದ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು’ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !