ಜಮಖಂಡಿ ಉಪಚುನಾವಣೆ: ಚುನಾವಣಾ ಕರ್ತವ್ಯಕ್ಕೆ ಹಾಜರಾದ ಸಿಬ್ಬಂದಿ

7
ನ.6ರಂದು ಮತ ಎಣಿಕೆ: ಜಿಲ್ಲಾಡಳಿತದಿಂದ ನಿಷೇಧಾಜ್ಞೆ ಜಾರಿ

ಜಮಖಂಡಿ ಉಪಚುನಾವಣೆ: ಚುನಾವಣಾ ಕರ್ತವ್ಯಕ್ಕೆ ಹಾಜರಾದ ಸಿಬ್ಬಂದಿ

Published:
Updated:
Deccan Herald

ಬಾಗಲಕೋಟೆ: ಜಮಖಂಡಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ನವೆಂಬರ್ 3ರಂದು ಮತದಾನ ನಡೆಯಲಿದೆ. ಕಾಂಗ್ರೆಸ್, ಬಿಜೆಪಿ, ಪ್ರಜಾಪರಿವರ್ತನಾ ಪಕ್ಷ, ಪಕ್ಷೇತರರು ಸೇರಿದಂತೆ ಏಳು ಮಂದಿ ಕಣದಲ್ಲಿದ್ದಾರೆ.

ಕ್ಷೇತ್ರದಲ್ಲಿ 1,02,009 ಪುರುಷರು ಹಾಗೂ 1,01,370 ಮಹಿಳೆಯರು ಹಾಗೂ ಆರು ಮಂದಿ ಇತರರು ಸೇರಿ ಒಟ್ಟು 2,03,385 ಮತದಾರರು ಇದ್ದಾರೆ. ಮತದಾನಕ್ಕಾಗಿ  226 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. 1419 ಸಿಬ್ಬಂದಿ ಚುನಾವಣಾ ಕರ್ತವ್ಯದಲ್ಲಿ ನಿರತರಾಗಿದ್ದಾರೆ. ಭದ್ರತೆಗೆ 1239 ಪೊಲೀಸ್ ಸಿಬ್ಬಂದಿಯನ್ನು ನೇಮಕ ಮಾಡಲಾಗಿದೆ.

ಜಮಖಂಡಿಯ ಜಿ.ಜಿ.ಕಾಲೇಜಿನಲ್ಲಿ ಮಸ್ಟರಿಂಗ್ ಹಾಗೂ ಡಿಮಸ್ಟರಿಂಗ್ ವ್ಯವಸ್ಥೆ ಮಾಡಲಾಗಿದೆ. ಅಲ್ಲಿನ ಹುಲ್ಯಾಳದ ಮತಗಟ್ಟೆ ಸಂಖ್ಯೆ 200 ಹಾಗೂ ಸಾವಳಗಿಯ ಮತಗಟ್ಟೆ ಸಂಖ್ಯೆ 137ನ್ನು ಪಿಂಕ್ ಮತಗಟ್ಟೆಗಳಾಗಿ ಮಾರ್ಪ‍ಡಿಸಲಾಗಿದೆ. ಮತಯಂತ್ರಗಳಿಗೆ ಮತಪತ್ರಗಳ ಜೋಡಣೆ ಮಾಡಲಾಗಿದೆ. ಮತ ಎಣಿಕೆ ಕಾರ್ಯ ನವೆಂಬರ್ 6ರಂದು ಅಲ್ಲಿನ ಮಿನಿ ವಿಧಾನಸೌಧದಲ್ಲಿ ನಡೆಯಲಿದೆ.

ಮತದಾನದ ದಿನ ಜಮಖಂಡಿ ಕ್ಷೇತ್ರದ ವ್ಯಾಪ್ತಿಯ ಸಿದ್ದಾಪುರ, ಸಾವಳಗಿ, ಕವಟಗಿ, ಶೂರಪಾಲಿ, ನಾಗನೂರ ಗ್ರಾಮಗಳಲ್ಲಿ ನಡೆಯುವ ವಾರದ ಸಂತೆಯನ್ನು ನಿಷೇಧಿಸಲಾಗಿದೆ. 

ಜಿಲ್ಲಾಡಳಿತದಿಂದ ನಿಷೇಧಾಜ್ಞೆ ಜಾರಿ:  ನವೆಂಬರ್ 6 ರಂದು ಮತ ಎಣಿಕೆ ನಿಮಿತ್ಯ ಸೆಕ್ಷನ್ 144 ರ ಅನ್ವಯ ನಿಷೇಧಾಜ್ಞೆ ಜಾರಿ ಮಾಡಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

ಅಂದು ಮತಕ್ಷೇತ್ರದಾದ್ಯಂತ ಐವರಿಗಿಂತ ಹೆಚ್ಚಿನ ಜನರು ಜೊತೆಗೂಡಿ, ಗುಂಪಾಗಿ ಸಂಚರಿಸುವಂತಿಲ್ಲ.ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು, ಬೆಂಬಲಿಗರು ಚುನಾವಣೆಯಲ್ಲಿ ಗೆದ್ದ ಅಭ್ಯರ್ಥಿಗಳ ಪರ ವಿಜಯೋತ್ಸವ, ಮೆರವಣಿಗೆ ನಡೆಸುವಂತಿಲ್ಲ. ಶಾಂತಿ ಭಂಗ, ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ತರುವುದು ಹಾಗೂ ಇತರೆ ಅಹಿತಕರ ಘಟನೆ ಜರುಗದಂತೆ ನವೆಂಬರ್ 6 ರಂದು ಬೆಳಿಗ್ಗೆ 6 ಗಂಟೆಯಿಂದ ನವೆಂಬರ್ 8ರ ಬೆಳಿಗ್ಗೆ 6 ಗಂಟೆವರೆಗೆ ನಿಷೇಧಾಜ್ಞೆ ಜಾರಿಯಲ್ಲಿರಲಿದೆ.

ಶಸ್ತ್ರ, ಬಡಿಗೆ, ಭರ್ಜಿ, ಗದೆ, ಬಂದೂಕು, ಚೂರಿ, ಲಾಠಿ, ದೊಣ್ಣೆ, ಚಾಕು ಅಥವಾ ದೇಹಕ್ಕೆ ಅಪಾಯವನ್ನು ಉಂಟು ಮಾಡಬಹುದಾದ ಯಾವುದೇ ಮಾರಕಾಸ್ತ್ರ ತೆಗೆದುಕೊಂಡು ತಿರುಗಾಡುವುದನ್ನು ಪ್ರತಿಬಂಧಿಸಲಾಗಿದೆ. ಕಲ್ಲು, ಕ್ಷಾರ ಪದಾರ್ಥ ಇಲ್ಲವೇ ಸ್ಫೋಟಕಗಳನ್ನು ತೆಗೆದುಕೊಂಡು ಹೋಗುವುದು, ಶೇಖರಿಸಿಡುವುದನ್ನು ನಿಷೇಧಿಸಲಾಗಿದೆ.

ಬಹಿರಂಗವಾಗಿ ಘೋಷಣೆ ಮಾಡುವುದು, ಪದ ಹಾಡುವುದು, ವಾದ್ಯ ಬಾರಿಸುವುದು, ವ್ಯಾಖ್ಯಾನ ಕೊಡುವುದು, ಸಾರ್ವಜನಿಕ ಸಭ್ಯತೆ,  ವ್ಯಕ್ತಿಗಳ ತೇಜೋವಧೆ ಮಾಡುವಂತಹ ಚಿತ್ರಗಳು, ಚಿಹ್ನೆಗಳು, ಪ್ರತಿಕೃತಿ ಮುಂತಾದವುಗಳನ್ನು ಪ್ರದರ್ಶಿಸುವುದಾಗಲಿ, ಕಾನೂನು ಮತ್ತು ಸುವ್ಯವಸ್ಥೆಗೆ ಭಂಗ ತರುವಂತಹ ಯಾವುದೇ ಕೃತ್ಯಗಳಲ್ಲಿ ತೊಡಗುವಂತಿಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !