ಕಲ್ಯಾಣಕರವಾದ ಶೀಲ

7

ಕಲ್ಯಾಣಕರವಾದ ಶೀಲ

ಗುರುರಾಜ ಕರಜಗಿ
Published:
Updated:
Deccan Herald

ಹಿಂದೆ ಬ್ರಹ್ಮದತ್ತ ವಾರಾಣಸಿಯನ್ನು ಆಳುತ್ತಿದ್ದಾಗ ಬೋಧಿಸತ್ವ ಅವನ ಪುರೋಹಿತನಾಗಿ ಹುಟ್ಟಿದ್ದ. ಆತ ಅತ್ಯಂತ ಸದಾಚಾರಿ, ಸುಶೀಲನಾಗಿದ್ದ. ಅದಕ್ಕೆ ರಾಜ ಅವನಿಗೆ ಉಳಿದ ಬ್ರಾಹ್ಮಣರಿಗಿಂತ ಹೆಚ್ಚು ಗೌರವವನ್ನು ನೀಡುತ್ತಿದ್ದ. ಈ ಪುರೋಹಿತ ಯೋಚಿಸಿದ. ‘ರಾಜ ನನಗೆ ಅತಿ ಹೆಚ್ಚಿನ ಮರ್ಯಾದೆ ನೀಡುತ್ತಾನೆ. ಇದು ನನ್ನ ಜಾತಿಗೋ, ಜ್ಞಾನಕ್ಕೊ ಅಥವಾ ಶೀಲಸಂಪನ್ನತೆಗೋ?’ ಅದನ್ನು ಪರೀಕ್ಷಿಸಲು ತೀರ್ಮಾನಿಸಿದ.

ಮರುದಿನ ರಾಜನ ಅರಮನೆಯಿಂದ ಬರುವಾಗ ಕೋಶಾಧಿಕಾರಿಯ ಕಚೇರಿಗೆ ಹೋಗಿ ಮಾತನಾಡುತ್ತಿದ್ದು ಹೊರಡುವಾಗ ಒಂದು ಕಹಾಪಣ (ಬಂಗಾರದ ನಾಣ್ಯ)ವನ್ನು ಎತ್ತಿಕೊಂಡು ಬಂದ. ಕೋಶಾಧಿಕಾರಿ ಅದನ್ನು ಗಮನಿಸಿದರೂ ಪುರೋಹಿತನ ಬಗ್ಗೆ ಇದ್ದ ಗೌರವದಿಂದ ಏನನ್ನೂ ಹೇಳಲಿಲ್ಲ. ಮರುದಿನ ಪುರೋಹಿತ ಮತ್ತೆ ಅಲ್ಲಿಗೆ ಹೋಗಿ ಮೆತ್ತಗೆ ಎರಡು ಕಹಾಪಣಗಳನ್ನು ಎತ್ತಿಕೊಂಡ. ಇಂದೂ ಕೋಶಾಧಿಕಾರಿ ತಕರಾರು ತೆಗೆಯಲಿಲ್ಲ. ಮಾರನೆಯ ದಿನ ಪುರೋಹಿತ ಒಂದು ಹಿಡಿಯಷ್ಟು ನಾಣ್ಯಗಳನ್ನು ತೆಗೆದುಕೊಂಡಾಗ ಕೋಶಾಧಿಕಾರಿ ಸಿಟ್ಟಿನಿಂದ, ‘ನೀವು ಪ್ರಾಮಾಣಿಕರಲ್ಲ, ರಾಜ್ಯದ ಹಣವನ್ನು ಕಳ್ಳತನ ಮಾಡುತ್ತಿದ್ದೀರಿ’ ಎಂದು ಸೇವಕರನ್ನು ಕರೆದು ಪುರೋಹಿತನಿಗೆ ಎರಡು ಪೆಟ್ಟು ಕೊಟ್ಟು ಹೆಡಮುರಿಗೆ ಕಟ್ಟಿಸಿ ರಾಜನ ಬಳಿಗೆ ಕರೆದುಕೊಂಡು ಹೊರಟ.

ದಾರಿಯಲ್ಲಿ ಒಬ್ಬ ಹಾವಾಡಿಗ ದೊಡ್ಡ ಸರ್ಪದ ಬಾಲವನ್ನು ಹಿಡಿದುಕೊಂಡಿದ್ದ, ಅದರ ಹೆಡೆ ಅವನ ಕುತ್ತಿಗೆಯನ್ನು ಸುತ್ತಿತ್ತು. ಪುರೋಹಿತ ಕೂಗಿದ, ‘ದಡ್ಡಾ, ಹೆಡೆ ಹಿಡಿದುಕೋ, ಇಲ್ಲದಿದ್ದರೆ ಅದು ನಿನ್ನನ್ನು ಕಚ್ಚಿಬಿಡುತ್ತದೆ’. ಹಾವಾಡಿಗ, ‘ಅಯ್ಯ ಕಳ್ಳ ಬ್ರಾಹ್ಮಣ, ನನ್ನ ಹಾವು ನಿನ್ನ ಹಾಗೆ ದುಶ್ಯೀಲವಲ್ಲ, ಶೀಲವಂತವಾಗಿದೆ. ಅದು ಕಚ್ಚುವುದನ್ನು ಬಿಟ್ಟುಬಿಟ್ಟಿದೆ’ ಎಂದ. ರಾಜನ ಮುಂದೆ ಪುರೋಹಿತನನ್ನು ನಿಲ್ಲಿಸಿದಾಗ ದುಃಖದಿಂದ ಕೇಳಿದ, ‘ಇಷ್ಟು ಸದಾಚಾರಿಗಳಾದ ನೀವು ಏಕೆ ಈ ತಪ್ಪನ್ನು ಮಾಡಿದಿರಿ?’ ಪುರೋಹಿತ, ‘ರಾಜಾ, ನಾನು ತಪ್ಪು ಮಾಡಲಿಲ್ಲ, ಪರೀಕ್ಷೆ ಮಾಡಿದೆ. ನೀನು ಕೊಡುವ ವಿಶೇಷ ಗೌರವಕ್ಕೆ ಜಾತಿ, ಜ್ಞಾನ ಅಥವಾ ಶೀಲ ಇವುಗಳಲ್ಲಿ ಯಾವುದಕ್ಕೆ ಪ್ರಾಮುಖ್ಯತೆ ಎಂಬುದನ್ನು ನೋಡಬೇಕಿತ್ತು. ನಿನ್ನ ಗೌರವ ನನ್ನ ಸದಾಚಾರಕ್ಕೆ ಎಂಬುದು ಮನವರಿಕೆಯಾಯಿತು. ಒಂದು ಹಾವು ಕಚ್ಚುವುದನ್ನು ಬಿಟ್ಟು ಶೀಲವಂತ ಎನ್ನಿಸಿಕೊಳ್ಳಬೇಕಾದರೆ, ಮನುಷ್ಯ ಶೀಲವಂತನಾಗದಿದ್ದರೆ ಅವನು ಹಾವಿಗಿಂತ ಕಡೆ. ನಾನು ಈಗ ತೀರ್ಮಾನಮಾಡಿದ್ದೇನೆ. ರಾಜಗೃಹದಲ್ಲಿ ಇದ್ದೇ ಸದಾಚಾರಿಯಾಗಿರಲು ಸಾಧ್ಯವಿದ್ದರೆ ಸದಾಚಾರದ ನಿಯಮಗಳನ್ನು ಸನ್ಯಾಸಿಯಾಗಿ ಪಾಲಿಸಿದರೆ ಮತ್ತಷ್ಟು ನನ್ನ ಜೀವನ ಶೀಲವಂತವಾಗುತ್ತದೆ. ನಾನೀಗ ಚೇತವನಕ್ಕೆ ಹೋಗಿ ಬುದ್ಧನಿಂದ ಪಬ್ಬಜಿತನಾಗುತ್ತೇನೆ’ ಎಂದು ಹೇಳಿ ಹೊರಟುಬಿಟ್ಟ. ಅವನ ಬಂಧುಗಳು ತಡೆಯಬಯಸಿದರೂ ಕೇಳದೇ ಬುದ್ಧನ ಕಡೆಗೆ ಬಂದು ಪಬ್ಬಜಿತನಾದ. ಸದಾ ಸಾಧನೆಯನ್ನು ಮಾಡುತ್ತ ಕೊನೆಗೆ ಅರ್ಹತ್ವವನ್ನು ಪಡೆದ.

ಬುದ್ಧ ಹೇಳಿದ, ‘ಘೋರವಾದ ವಿಷಸರ್ಪವೂ ತನ್ನ ವಿನಾಶದ ಬುದ್ಧಿಯನ್ನು ಬಿಟ್ಟು ಶೀಲವಂತವಾದಾಗ ವಧಾರ್ಹವಾಗುವುದಿಲ್ಲ, ಹಾವಾಡಿಗನಿಗೆ ಪ್ರಿಯವಾದ ಹಾರದಂತಾಗುತ್ತದೆ. ಆದ್ದರಿಂದ ಶೀಲವೇ ಕಲ್ಯಾಣಕಾರಕವಾದದ್ದು. ಪ್ರಪಂಚದಲ್ಲಿ ಶೀಲಕ್ಕಿಂತ ಶ್ರೇಷ್ಠವಾಗಿರುವುದು ಯಾವುದೂ ಇಲ್ಲ. ಈ ಶೀಲಗುಣದಿಂದಲೇ ಮನುಷ್ಯನೆಂಬ ಪ್ರಾಣಿ ಸದಾಚಾರಿಯಾಗುವುದು’.

 

ಬರಹ ಇಷ್ಟವಾಯಿತೆ?

 • 14

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !