ಮರಳ ಕಣಕಣದಲ್ಲೂ ಕಾಂಚಾಣ ಝಣ ಝಣ

7
ರಾಜ್ಯದಾದ್ಯಂತ ಹಬ್ಬಿದೆ ಮರಳು ದಂಧೆ; ತಡೆಯಲು ಯತ್ನಿಸಿದ ಡಿಸಿ, ಎಸ್ಪಿ, ಎಸಿ, ತಹಸೀಲ್ದಾರ್‌ಗಳ ಮೇಲೂ ಹಲ್ಲೆ

ಮರಳ ಕಣಕಣದಲ್ಲೂ ಕಾಂಚಾಣ ಝಣ ಝಣ

Published:
Updated:
Deccan Herald

ಮೈಸೂರು: ಮರಳು ಗಣಿಗಾರಿಕೆ ಮತ್ತು ವಿತರಣೆ ಆರಂಭದಿಂದ ಅಂತ್ಯದತನಕ ಸಂಪೂರ್ಣ ಲಂಚಮಯ....!

ಈ ಜಾಲದಲ್ಲಿ ಲಂಚ, ಹಫ್ತಾ, ಕಲಬೆರಕೆ, ನಿಯಮ ಉಲ್ಲಂಘನೆ ಎಲ್ಲವೂ ಚಿಟಿಕೆ ಹೊಡೆದಷ್ಟೇ ಸುಲಭ. ಜನಪ್ರತಿನಿಧಿಗಳ ಆಶೀರ್ವಾದವಿದ್ದರೆ, ಪೊಲೀಸರದ್ದೇ ಬೆಂಗಾವಲು. ಗಣಿ ಇಲಾಖೆ ಮತ್ತು ಜಿಲ್ಲಾಡಳಿತದ್ದೇ ಮೇಲುಸ್ತುವಾರಿ. ದಂಧೆಯ ಎಲ್ಲ ಪಾಲುದಾರರಿಗೆ ಅಡಿಯಿಂದ ಮುಡಿವರೆಗೆ ಮೃಷ್ಟಾನ್ನ ಭೋಜನ.

ಅಧಿಕೃತ ಬ್ಲಾಕ್‌ಗಳಲ್ಲಿ ಪ್ರತಿ ಟನ್ ಮರಳಿಗೆ ಸರ್ಕಾರ ನಿಗದಿಪಡಿಸಿದ ಹಣ ಪಡೆಯಬೇಕು. 10 ಟನ್‌ಗೆ ₹ 5 ಸಾವಿರ ಇದ್ದರೆ ಬ್ಲಾಕ್‌ ಹೊಂದಿದವರು ಅದಕ್ಕಿಂತ ಹೆಚ್ಚಿನ ದರದಲ್ಲಿ ಮಾರಾಟ ಮಾಡುತ್ತಾರೆ. ಅಂಥ ಬ್ಲಾಕ್‌ಗಳಲ್ಲಿ ಟಿಪ್ಪರ್‌ ಮಾಲೀಕರು ಒಂದು ಲೋಡ್‌ಗೆ ₹ 10 ಸಾವಿರ ನೀಡಿ ಮರಳು ತಂದು ಗ್ರಾಹಕರಿಗೆ ₹ 35 ಸಾವಿರದಿಂದ 50 ಸಾವಿರದವರೆಗೆ ಮಾರಾಟ ಮಾಡುತ್ತಾರೆ. ಒಂದು ಲೋಡ್‌ ಮರಳು ಗ್ರಾಹಕರನ್ನು ತಲುಪುವಷ್ಟರಲ್ಲಿ ವಿವಿಧ ಹಂತಗಳಲ್ಲಿ ₹ 25 ಸಾವಿರದವರೆಗೆ ಮಾಮೂಲಿ ನೀಡಲಾಗುತ್ತದೆ. ಡೀಸೆಲ್‌ ದರ, ಚಾಲಕನ ಪಗಾರ ಕಳೆದು ₹ 5ರಿಂದ 10 ಸಾವಿರ ಲಾಭ ಗಿಟ್ಟಿಸಿಕೊಳ್ಳುತ್ತಾರೆ. ಕಲಬೆರೆಕೆ ಇಲ್ಲದ, ಅಪ್ಪಟ ನದಿ ಮರಳಾದರೆ ಬೆಂಗಳೂರಿನಲ್ಲಿ 80 ಸಾವಿರ ಕೊಡಬೇಕು.ತಮಿಳುನಾಡಿಂದ ತರಿಸಿದ್ದರೆ ಒಂದು ಲಾರಿ ಲೋಡ್‌ಗೆ ₹ 85 ಸಾವಿರದವರೆಗೆ ನೀಡಬೇಕು. ಹೀಗೆ ಅಧಿಕೃತ ಮತ್ತ ಲಂಚದ ಹಣದ ಹೊರೆ ಎಲ್ಲವೂ ಗ್ರಾಹಕನ ಮೇಲೆ ಬೀಳುತ್ತದೆ.

ಮರಳು ಸಾಗಣೆಗೆ ಗ್ರಾಮ ಪಂಚಾಯಿತಿ ಸದಸ್ಯ, ಊರಿನ ಪ್ರಭಾವಿಗಳು, ಹೋರಾಟಗಾರರು, ಪಕ್ಷಗಳ ಕಾರ್ಯಕರ್ತರು, ಶಾಸಕ, ಮಂತ್ರಿಯಿಂದ ಹಿಡಿದು ರಿಯಲ್‌ ಎಸ್ಟೇಟ್‌ ಮಾಫಿಯಾದವರೆಗೆ ಪ್ರಭಾವವಿರುತ್ತದೆ. ಈ ಮಾಫಿಯಾದ ಕೇಂದ್ರ ಸ್ಥಳೀಯ ಪೊಲೀಸ್‌ ಠಾಣೆಯಾಗಿದ್ದರೆ, ಸರ್ಕಲ್ ಮತ್ತು ಸಬ್ ಇನ್ಸ್ ಪೆಕ್ಟರ್‌ಗಳು ಸೂತ್ರಧಾರಿಗಳ ಪಾತ್ರ ನಿರ್ವಹಿಸುತ್ತಾರೆ. ಶಾಸಕರ ಅನಧಿಕೃತ ಉಸ್ತುವಾರಿಯಲ್ಲೇ ಪೊಲೀಸರು ಟಿಪ್ಪರ್‌ಗಿಷ್ಟು, ಲಾರಿಗಿಷ್ಟು, ಟ್ರ್ಯಾಕ್ಟರ್‌ಗಿಷ್ಟು ಎಂದು ಮಾಮೂಲಿ ಪಡೆದು ಕಳಿಸುತ್ತಾರೆ.

ಆರಂಭಿಕ ಹಂತದಲ್ಲೇ ಟಿಪ್ಪರ್‌ನಿಂದ ₹ 15 ಸಾವಿರದವರೆಗೆ ವಸೂಲಾಗುತ್ತದೆ. ಮಧ್ಯದಲ್ಲಿ ₹ 10 ಸಾವಿರದವರೆಗೆ ಹಂಚಿಕೆ ಮಾಡಬೇಕಾಗುತ್ತದೆ. ಒಂದು ಲೋಡ್‌ಗೆ ಪರವಾನಗಿ ಸಿಕ್ಕರೆ ಅಕ್ರಮವಾಗಿ 10 ಲೋಡ್‌ ಸಾಗಿಸುತ್ತಾರೆ. ಇಂತಹ ಟಿಪ್ಪರ್‌ಗಳು ಇಂತಿಷ್ಟು ಸಮಯಕ್ಕೆ ಹೋಗುತ್ತವೆ ಎಂಬುದನ್ನು ಮುಂಚಿತವಾಗಿ ಠಾಣೆಗಳಿಗೆ, ಚೆಕ್‌ಪೋಸ್ಟ್‌ಗಳಿಗೆ ತಿಳಿಸಲಾಗುತ್ತದೆ. ಹೀಗಾಗಿ, ನದಿ ತೀರದ ಮರಳಿನ ಲೂಟಿ ಅಬಾಧಿತ. ಗುತ್ತಿಗೆದಾರರೊಬ್ಬರ ಪ್ರಕಾರ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗೇ ತಿಂಗಳಿಗೆ ₹ 2 ಲಕ್ಷದವರೆಗೆ ಮಾಮೂಲಿ ಹೋಗುತ್ತದೆ!

ನಿಗದಿಪಡಿಸಿದ ಬ್ಲಾಕ್‌ನಲ್ಲಷ್ಟೇ ಪರವಾನಗಿ ಹೊಂದಿರುವ ಗುತ್ತಿಗೆದಾರರು ಇಂತಿಷ್ಟು ಮರಳು ತೆಗೆಯಬೇಕು ಎಂಬ ನಿಯಮವಿದೆ. ಆದರೆ, ಅದು ದಾಖಲೆಯಲ್ಲಿ ಮಾತ್ರ. ತಮಗೆ ಬೇಕಾದಷ್ಟು ಅಗಲ, ಆಳದವರೆಗೆ ಅಗೆಯುತ್ತಿರುತ್ತಾರೆ. ಈ ವಿಚಾರ ಗೊತ್ತಿದ್ದರೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ತುಟಿಪಿಟಿಕ್‌ ಎನ್ನುವುದಿಲ್ಲ. ಏಕೆಂದರೆ ಅವರಿಗೆ ‘ಭರ್ಜರಿ ಭೋಜನ’ ಪೂರೈಕೆ ಆಗಿರುತ್ತದೆ.

ಮರಳಿನ ತೂಕ, ಸಾಗಣೆ, ಸಂಗ್ರಹದ ಮೇಲೆ ಕಣ್ಣಿಡಲು ಲೋಕೋಪಯೋಗಿ ಇಲಾಖೆಯು ಬ್ಲಾಕ್‌ ಸಮೀಪವೇ ಕ್ಯಾಂಪ್‌ ತೆರೆಯಬೇಕು. ಸಿ.ಸಿ ಟಿ.ವಿ ಕ್ಯಾಮೆರಾ, ವಾಹನಕ್ಕೆ ಜಿಪಿಆರ್‌ಎಸ್‌ ವ್ಯವಸ್ಥೆ ಇರಬೇಕು. ಜೆಸಿಬಿ, ಹಿಟಾಚಿ ಯಂತ್ರ ಬಳಕೆ ಮಾಡಲು ಅವಕಾಶ ನೀಡುವಂತಿಲ್ಲ. ಆದರೆ, ಇಲ್ಲಿ ಒಬ್ಬ ಅಧಿಕಾರಿಯೂ ಕಾಣಸಿಗುವುದಿಲ್ಲ.‌ ಮರಳು ಬ್ಲಾಕ್‌ಗಳಿಂದ ಲೋಕೋಪಯೋಗಿ ಇಲಾಖೆಯ ದಾಸ್ತಾನು ಯಾರ್ಡ್‌ಗೆ ಹಾಕಬೇಕು. ಅಲ್ಲಿಂದ ಇಲಾಖೆಗೆ ಡಿ.ಡಿ ಮೂಲಕ ಹಣ ನೀಡಿ ಮರಳು ಮಾರಾಟ ಮಾಡಬೇಕು. ಆದರೆ, ನದಿ ತೀರದಿಂದ ವ್ಯಾಪಾರಿಗಳ ಲಾರಿಗೆ ನೇರವಾಗಿ ಮರಳು ತುಂಬಿಸುತ್ತಾರೆ. 

‘ಕದ್ದು ಮುಚ್ಚಿ ಮರಳು ಗಣಿಗಾರಿಕೆ ಮಾಡಲು ಸಾಧ್ಯವೇ ಇಲ್ಲ. ಯಾವುದೇ ಸ್ಥಳದಲ್ಲಿ ಅಕ್ರಮವಾಗಿ ಮರಳು ಅಗೆದರೂ ಸ್ಥಳೀಯ ಠಾಣೆಗೆ ಮಾಹಿತಿ ಬಂದೇಬರುತ್ತದೆ‌. ಕಾಣಿಸಿಯೂ ಕಾಣಿಸದಂತೆ ‘ಮಾಮೂಲಿ‌’ ದಾರಿಯಲ್ಲಿ ಸಾಗುತ್ತದೆ’ ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ಹೇಳುತ್ತಾರೆ.

ಇದನ್ನೂ ಓದಿ: ಕಲುಷಿತ ಮರಳು– ಪರಿಣಾಮಗಳೇನು?

ನಿಷೇಧಿತ ಪ್ರದೇಶಗಳಲ್ಲಿ ರಾತ್ರೋರಾತ್ರಿ ನದಿಯಿಂದ ಮರಳು ಎತ್ತಲು ಸ್ಥಳೀಯರು ನೆರವು ನೀಡುತ್ತಾರೆ. ತೆಪ್ಪದಲ್ಲಿ ಸಾಗಿ ನೀರಿನೊಳಗೆ ಮುಳುಗಿ ಮರಳು ಬಾಚಿ ಟಿಪ್ಪರ್‌ಗೆ ತುಂಬಿಸುತ್ತಾರೆ. ಒಂದು ಟಿಪ್ಪರ್‌ ಲೋಡ್‌ ಜಮೀನಿನಲ್ಲಿ ಹಾದು ಹೋದರೆ ಆ ಜಮೀನು ಮಾಲೀಕನಿಗೆ ₹ 500 ಸಿಗುತ್ತದೆ. ಕೆಲವೆಡೆ ಸ್ಥಳೀಯರಿಗೆ ಇಂತಿಷ್ಟು ಹಣ ನೀಡಿ ಅವರ ಗದ್ದೆ ಬಯಲಿನಲ್ಲೇ ದಾಸ್ತಾನು ಮಾಡುತ್ತಾರೆ. ಅಕಸ್ಮಾತ್‌ ದಾಳಿ ನಡೆದರೆ ಸಿಕ್ಕಿಬೀಳುವುದು ಸ್ಥಳೀಯರೇ.

‘ನದಿಯಿಂದ ಮರಳು ತೆಗೆಯುವುದು ಒಂದು ಗ್ಯಾಂಗ್‌, ದಾಸ್ತಾನು ಹಾಕಿ ಮಾರುವುದು ಮತ್ತೊಂದು ಗ್ಯಾಂಗ್‌. ಲೋಡ್‌ ಮಾಡುವವರು ಬೇರೆ. ಮರಳು ಸಾಗಿಸಿ ಗ್ರಾಹಕರಿಗೆ ಮಾರಾಟ ಮಾಡುವುದು ಇನ್ನೊಂದು ಗ್ಯಾಂಗ್‌. ಸ್ಥಳೀಯ ಠಾಣೆ ಬುಕ್‌ ಮಾಡಿಕೊಂಡು ತೊಂದರೆ ಉಂಟಾಗದಂತೆ ನೋಡಿಕೊಳ್ಳುತ್ತಾರೆ’ ಎಂದು ಹೇಳುತ್ತಾರೆ ಪೊಲೀಸ್‌ ಅಧಿಕಾರಿ.

ಪರವಾನಗಿ ಪಡೆದ ವ್ಯಾಪ್ತಿಯಲ್ಲಷ್ಟೇ ಮಾರಾಟ ಮಾಡಬೇಕು. ಆದರೆ, ಪಕ್ಕದ ಕೇರಳಕ್ಕೂ ಮರಳು ಸಾಗಿಸುತ್ತಾರೆ. ಹೆದ್ದಾರಿಗಳಲ್ಲಿ, ಹೊರವರ್ತುಲ ರಸ್ತೆಗಳಲ್ಲಿ, ನಗರದೊಳಗೆ ಮಧ್ಯರಾತ್ರಿಯಲ್ಲಿ ಸಾಗಣೆ ನಡೆಯುತ್ತಿರುತ್ತದೆ. ಅಕ್ಕಿ ಚೀಲದ ಕೆಳಗೆ ಮರಳಿನ ಚೀಲ ಇಟ್ಟು ಸಾಗಿಸುತ್ತಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !