ಪ್ರಥಮ ದರ್ಜೆ ಕ್ರಿಕೆಟ್‌ಗೆ ಅಂಬಟಿ ವಿದಾಯ

7

ಪ್ರಥಮ ದರ್ಜೆ ಕ್ರಿಕೆಟ್‌ಗೆ ಅಂಬಟಿ ವಿದಾಯ

Published:
Updated:
Deccan Herald

ನವದೆಹಲಿ: ಭಾರತ ಕ್ರಿಕೆಟ್  ತಂಡದ ಆಟಗಾರ ಅಂಬಟಿ ರಾಯುಡು ಅವರು ಶನಿವಾರ ಪ್ರಥಮ ದರ್ಜೆ ಕ್ರಿಕೆಟ್‌ಗೆ ವಿದಾಯ ಹೇಳಿದರು.

33 ವರ್ಷದ ಅಂಬಟಿ ಅವರು ಆಂಧ್ರಪ್ರದೇಶದ ಗುಂಟೂರಿನವರು. 97 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿರುವ ಅವರು 6151 ರನ್‌ಗಳನ್ನು ಗಳಿಸಿದ್ದಾರೆ. 16 ಶತಕ ಮತ್ತು 34 ಅರ್ಧಶತಕಗಳನ್ನು ಬಾರಿಸಿದ್ದಾರೆ. 150 ಲೀಸ್ಟ್‌ ಎ ಪಂದ್ಯಗಳಲ್ಲಿ ಅವರು 4856 ರನ್‌ಗಳನ್ನು ಗಳಿಸಿದ್ದಾರೆ.  ಭಾರತ ತಂಡದ ಪರ ಅವರು 45 ಏಕದಿನ ಪಂದ್ಯಗಳಲ್ಲಿ 1447 ರನ್‌ಗಳನ್ನು ಪೇರಿಸಿದ್ದಾರೆ. ಆರು ಟ್ವೆಂಟಿ–20 ಪಂದ್ಯಗಳಿಂದ 42 ರನ್‌ ಹೊಡೆದಿದ್ದಾರೆ.  ಈಚೆಗೆ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯಲ್ಲಿ ಅವರು ಭಾರತ ತಂಡವನ್ನು ಪ್ರತಿನಿಧಿಸಿದ್ದರು. ಒಂದು ಶತಕ ಮತ್ತು ಒಂದು ಅರ್ಧಶತಕ ಗಳಿಸಿದ್ದರು. ಆದರೆ ಅವರಿಗೆ ಇದುವರೆಗೂ ಟೆಸ್ಟ್‌ ಆಡುವ ಅವಕಾಶ ದೊರೆತಿರಲಿಲ್ಲ.

‘ಭಾರತ ತಂಡದ ಬ್ಯಾಟಿಂಗ್‌ನಲ್ಲಿ ನಾಲ್ಕನೇ ಕ್ರಮಾಂಕದ ಆಟಗಾರನ ಕೊರತೆ ಯನ್ನು ಅಂಬಟಿ ನೀಗಿಸಿದ್ದಾರೆ’ ಎಂದು ರೋಹಿತ್ ಶರ್ಮಾ ಈಚೆಗೆ ಶ್ಲಾಘಿಸಿದ್ದರು.

‘ಹೈದರಾಬಾದ್  ಕ್ರಿಕೆಟ್ ತಂಡದ ನಾಯಕ ಮತ್ತು ಭಾರತ ತಂಡದ ಆಟಗಾರ ಅಂಬಟಿ ರಾಯುಡು ಅವರು ಪ್ರಥಮದರ್ಜೆ ಕ್ರಿಕೆಟ್‌ನಿಂದ ನಿವೃತ್ತರಾಗಲು ನಿರ್ಧರಿಸಿದ್ದಾರೆ. ಅವರು ರಣಜಿ ಟ್ರೋಫಿ ಟೂರ್ನಿಯಲ್ಲಿಯೂ ಆಡುವುದಿಲ್ಲ.  ಏಕದಿನ ಮತ್ತು ಟ್ವೆಂಟಿ–20 ಕ್ರಿಕೆಟ್‌ನಲ್ಲಿ ಮಾತ್ರ ಆಡಲಿದ್ದಾರೆ’ ಎಂದು ಹೈದರಾಬಾದ್ ಕ್ರಿಕೆಟ್ ಸಂಸ್ಥೆಯು  ತಿಳಿಸಿದೆ.

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ ತಂಡದ ಆಟಗಾರರಾಗಿದ್ದಾರೆ. ಹೋದ ಟೂರ್ನಿಯಲ್ಲಿ ಚೆನ್ನೈ ತಂಡವು ಪ್ರಶಸ್ತಿ ಗೆಲ್ಲಲು ಅವರ ಉತ್ತಮ ಆಟವೂ ಕಾರಣವಾಗಿತ್ತು.

‘ನಿಗದಿತ ಓವರ್‌ಗಳ ಕ್ರಿಕೆಟ್‌ ಮೇಲೆ ಹೆಚ್ಚು ಗಮನ ಕೇಂದ್ರಿಕರಿಸುವ ಉದ್ದೇಶದಿಂದ ಈ ನಿರ್ಣಯ ಮಾಡಿದ್ದೇನೆ. ಹೈದರಾಬಾದ್ ಕ್ರಿಕೆಟ್ ಸಂಸ್ಥೆ, ಬಿಸಿಸಿಐ ನನಗೆ ನೀಡುತ್ತಿರುವ ಬೆಂಬಲಕ್ಕೆ ಆಭಾರಿಯಾಗಿದ್ದೇನೆ’ ಎಂದು ಅಂಬಟಿ ತಮ್ಮ ವಿದಾಯ ಪತ್ರದಲ್ಲಿ  ಉಲ್ಲೇಖಿಸಿದ್ದಾರೆ.

Tags: 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !