ಶ್ರೀಲಂಕಾ: ಪಕ್ಷಾಂತರಿಗಳ ಸೆಳೆಯಲು ಕಸರತ್ತು

7
ವಿಶ್ವಾಸಮತ ಮಂಡನೆಗೆ ಹೆಚ್ಚುತ್ತಿರುವ ಆಗ್ರಹ

ಶ್ರೀಲಂಕಾ: ಪಕ್ಷಾಂತರಿಗಳ ಸೆಳೆಯಲು ಕಸರತ್ತು

Published:
Updated:

ಕೊಲಂಬೊ: ರಾಜಕೀಯ ಬಿಕ್ಕಟ್ಟು ಎದುರಿಸುತ್ತಿರುವ ಶ್ರೀಲಂಕಾದಲ್ಲಿ, ಪ್ರಧಾನಿ ಹುದ್ದೆಯಿಂದ ಉಚ್ಛಾಟನೆಗೊಂಡಿರುವ ರನಿಲ್ ವಿಕ್ರಮಸಿಂಘೆ ಹಾಗೂ ಹೊಸದಾಗಿ ಹುದ್ದೆಗೆ ನೇಮಕವಾಗಿರುವ ಮಹಿಂದ ರಾಜಪಕ್ಸೆ ಅವರು ಪರಸ್ಪರ ತಾವೇ ಪ್ರಧಾನಿ ಎಂದು ಕಾದಾಡುತ್ತಿದ್ದಾರೆ. 

ಈ ಸಂದರ್ಭದಲ್ಲಿಯೇ, ಪಕ್ಷಾಂತರಿಗಳನ್ನು ತಮ್ಮತ್ತ ಸೆಳೆಯಲು ಎರಡೂ ಪಕ್ಷಗಳು ನಡೆಸುತ್ತಿರುವ ಕಸರತ್ತು ತೀವ್ರಗೊಂಡಿದೆ. ಸಂಸತ್ತಿನಲ್ಲಿ ವಿಶ್ವಾಸಮತ ಮಂಡನೆ ಮಾಡಬೇಕೆಂಬ ಆಗ್ರಹವೂ ಕೇಳಿಬರುತ್ತಿದೆ.

‘ಬಹುಮತ ಸಾಬೀತುಪಡಿಸಲು ಅಗತ್ಯ ಸಂಖ್ಯಾಬಲ ಇದೆ. ವಿಕ್ರಮಸಿಂಘೆ ಪರ ಇದ್ದವರಲ್ಲಿ ಕನಿಷ್ಠ ಆರು ಮಂದಿ ನಮ್ಮ ಕಡೆಗೆ ಪಕ್ಷಾಂತರ ಮಾಡಿದ್ದಾರೆ’ ಎಂದು ರಾಜಪಕ್ಸೆ ಹೇಳಿಕೊಳ್ಳುತ್ತಿದ್ದಾರೆ.

ವಿಕ್ರಮಸಿಂಘೆ ಅವರ ಯುನೈಟೆಡ್ ನ್ಯಾಷನಲ್ ಪಕ್ಷದ (ಯುಎನ್‌ಪಿ) ಎಸ್.ಬಿ. ನವಿನ್ನ ಈಚೆಗೆ ಪಕ್ಷಾಂತರಗೊಂಡಿರುವವರ ಪಟ್ಟಿಗೆ ಹೊಸ ಸೇರ್ಪಡೆಯಾಗಿದ್ದು, ರಾಜಪಕ್ಸೆ ಸರ್ಕಾರದಲ್ಲಿ ಅವರಿಗೆ ಸಾಂಸ್ಕೃತಿಕ ವ್ಯವಹಾರಗಳ ಖಾತೆ ನೀಡಲಾಗಿದೆ. 

ಯುಎನ್‌ಪಿ ಹಿರಿಯ ನಾಯಕ, ರಂಗೆ ಭಂಡಾರ ಅವರು, ‘ರಾಜಪಕ್ಸೆ ಬೆಂಬಲಿಸಿದರೆ ₹20.41 ಕೋಟಿ ಹಣ ನೀಡುವುದಾಗಿ ನನಗೆ ಆಮಿಷ ಒಡ್ಡಲಾಗಿದೆ’ ಎಂದು ಹೇಳಿದ್ದರು. 

ತಮಿಳ್ ನ್ಯಾಷನಲ್ ಅಲಯನ್ಸ್ (ಟಿಎನ್‌ಎ) ಪಕ್ಷದ ಉಪಾಧ್ಯಕ್ಷ ಸಹ ಪಕ್ಷಾಂತರಗೊಂಡಿದ್ದು, ಅವರಿಗೆ ಉಪಸಚಿವ ಸ್ಥಾನ ನೀಡಲಾಗಿದೆ. 225 ಸ್ಥಾನ ಹೊಂದಿರುವ ಸಂಸತ್ತಿನಲ್ಲಿ ಟಿಎನ್‌ಎ 16 ಸ್ಥಾನಗಳನ್ನು ಹೊಂದಿದೆ. ಇವರಲ್ಲಿ ಕನಿಷ್ಠ 3 ಜನರು ರಾಜಪಕ್ಸೆ ಅವರಿಗೆ ಬೆಂಬಲ ಸೂಚಿಸುವ ನಿರೀಕ್ಷೆ ಇದೆ. 

‘ಮತ್ತಷ್ಟು ಜನರು ಪಕ್ಷಾಂತರ ಮಾಡುವ ಸಾಧ್ಯತೆ ಇದೆ’ ಎಂದು ಅಧ್ಯಕ್ಷ ಸಿರಿಸೇನ ಅವರ ಆಪ್ತಮೂಲಗಳು ತಿಳಿಸಿವೆ. 

ಈಚೆಗಿನ ವರದಿ ಪ್ರಕಾರ ವಿಕ್ರಮಸಿಂಘೆ ಅವರು 103, ರಾಜಪಕ್ಸೆ ಅವರು 100 ಸದಸ್ಯರ ಬೆಂಬಲ ಹೊಂದಿದ್ದಾರೆ. ಟಿಎನ್ಎ ಸೇರಿದಂತೆ ಉಳಿದ 22 ಸಂಸದರು ರಾಜಪಕ್ಸೆ ಅವರ ನ್ನು ವಿರೋಧಿಸುವ ಸಾಧ್ಯತೆ ಇದೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. 

ಅಧ್ಯಕ್ಷ ಮೈತ್ರಿಪಾಲ ಸಿರಿಸೇನ ಅವರು ತಮ್ಮನ್ನು ಪ್ರಧಾನಿ ಸ್ಥಾನದಿಂದ ಉಚ್ಛಾಟನೆಗೊಳಿಸಿರುವುದನ್ನು ಒಪ್ಪಿಕೊಳ್ಳಲು ರನಿಲ್‌ ವಿಕ್ರಮಸಿಂಘೆ ನಿರಾಕರಿಸುತ್ತಿದ್ದಾರೆ. 

ರಾಜಪಕ್ಸೆಗೆ ವಿರೋಧ: ರಾಜಪಕ್ಸೆ ವಿರುದ್ಧ ಅವಿಶ್ವಾಸ ಮಂಡನೆ ಬೆಂಬಲಿಸು ವುದಾಗಿ ಟಿಎನ್ಎ ಘೋಷಿಸಿದೆ. ರಾಜಪಕ್ಸೆ ಅವರ ನೇಮಕಾತಿ, ಸಂವಿಧಾನದ 19ನೇ ತಿದ್ದುಪಡಿಯ ಉಲ್ಲಂಘನೆಯಾಗಿದೆ ಎಂದು ಪ್ರಕಟಣೆಯಲ್ಲಿ ಟಿಎನ್‌ಎ ತಿಳಿಸಿದೆ. 

‘ಬೆಂಬಲಕ್ಕಾಗಿ ಲಂಚ’

‘ತನ್ನ ಬದಲಿಗೆ ಪ್ರಧಾನಿ ಹುದ್ದೆಗೆ ನೇಮಕಗೊಂಡಿರುವವರು, ಸಂಸತ್ತಿನಲ್ಲಿ ವಿಶ್ವಾಸ ಮತ ಯಾಚನೆ ಮುಂಬರುತ್ತಿರುವ ಈ ಸಂದರ್ಭದಲ್ಲಿ ಬೆಂಬಲ ಗಳಿಸಲು ಪ್ರತಿಯಾಗಿ ಲಂಚ ನೀಡುತ್ತಿದ್ದಾರೆ. ಇದಕ್ಕೆ ನನ್ನ ಬಳಿ ವಿಶ್ವಾಸಾರ್ಹ ಸಾಕ್ಷ್ಯಗಳಿವೆ’ ಎಂದು ಉಚ್ಚಾಟಿತ ಪ್ರಧಾನಿ ರನಿಲ್ ವಿಕ್ರಮಸಿಂಘೆ ಆರೋಪಿಸಿದ್ದಾರೆ.

‘ಮಹಿಂದ ರಾಜಪಕ್ಸೆ ನೇತೃತ್ವದಲ್ಲಿ ರಚನೆಯಾಗಿರುವ ನೂತನ ಸರ್ಕಾರದ ಸದಸ್ಯರು, ಬೆಂಬಲಕ್ಕೆ ಪ್ರತಿಯಾಗಿ ಹಣ ನೀಡುವುದಾಗಿ ಶಾಸಕರಿಗೆ ಆಮಿಷ ಒಡ್ಡಿದ್ದಾರೆ’ ಎಂದು ವಿಕ್ರಮಸಿಂಘೆ ತಿಳಿಸಿದ್ದಾರೆ.

 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !