ಸವಾಲು ನಿಭಾಯಿಸುವಲ್ಲಿ ಹಿತಾನುಭವ ಇದೆ

7
ಮಿಜೋರಾಂ ತಂಡದ ಕೋಚ್, ಕನ್ನಡಿಗ ಶಶಿಕಾಂತ್ ಭರವಸೆ

ಸವಾಲು ನಿಭಾಯಿಸುವಲ್ಲಿ ಹಿತಾನುಭವ ಇದೆ

Published:
Updated:
Deccan Herald

ಬೆಂಗಳೂರು: ಈಶಾನ್ಯ ಭಾರತದ ಮಿಜೋರಾಂ ರಾಜ್ಯದ ಹುಡುಗರಿಗೆ ಫುಟ್‌ಬಾಲ್ ಕ್ರೀಡೆಯೆಂದರೆ ಪಂಚ ಪ್ರಾಣ. ಆದರೆ ಈಗ ಅವರಿಗೆ ಕ್ರಿಕೆಟ್‌ ಆಟದ ರುಚಿ ಹತ್ತಿಸಲು ಕನ್ನಡಿಗರೊಬ್ಬರು ಶ್ರಮಿಸುತ್ತಿದ್ದಾರೆ.

ಹೌದು; ಕರ್ನಾಟಕದ ಪಿ.ವಿ. ಶಶಿಕಾಂತ್ ಈಗ ಮಿಜೋರಾಂ ತಂಡಕ್ಕೆ ಮಾರ್ಗದರ್ಶನ ನೀಡುತ್ತಿದ್ದಾರೆ. ತಂಡವು ಇದೇ ಮೊದಲ ಬಾರಿ ರಣಜಿ ಟ್ರೋಫಿ ಟೂರ್ನಿಯಲ್ಲಿ ಆಡುತ್ತಿದೆ. ಪ್ಲೇಟ್‌ ಗುಂಪಿನ ಮೊದಲ ಪಂದ್ಯದಲ್ಲಿ ಶುಕ್ರವಾರ ನಾಗಾಲ್ಯಾಂಡ್ ಎದುರು ಸೋತಿತ್ತು. ಆದರೆ ಈ ಪರಾಭವವನ್ನು ಕಲಿಕೆಯ ಒಂದು ಭಾಗವಾಗಿ ಸ್ವೀಕರಿ ಸುವ ಪಾಠವನ್ನು ಶಶಿಕಾಂತ್ ತಂಡಕ್ಕೆ ಹೇಳಿಕೊಟ್ಟಿದ್ದಾರೆ. ಈ ಕುರಿತು ಆವರು ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದರು.

* ದಕ್ಷಿಣದ ಕರ್ನಾಟಕದಿಂದ ಹೋಗಿ ಈಶಾನ್ಯ ರಾಜ್ಯವೊಂದರ ತಂಡವನ್ನು ಸಿದ್ಧಗೊಳಿಸುವ ಅನುಭವ ಹೇಗಿದೆ?

ಕರ್ನಾಟಕದಲ್ಲಿ ಜೂನಿಯರ್ ಆಟಗಾರರಿಗೆ ಹಲವು ವರ್ಷಗಳಿಂದ ತರಬೇತಿ ನೀಡಿದ್ದೇನೆ. ಅಲ್ಲದೇ ತಾರಾ ವರ್ಚಸ್ಸಿನ ಆಟಗಾರರು ಇದ್ದ ರಾಜ್ಯ ತಂಡಕ್ಕೂ ಕೋಚ್ ಆಗಿದ್ದೆ. ಆದರೆ ಇಲ್ಲಿಯದು (ಮಿಜೋರಾಂ) ವಿಭಿನ್ನ ವಾದ ಅನುಭವ. ಏಕೆಂದರೆ ಇಲ್ಲಿ ಶೂನ್ಯ ಸ್ಥಿತಿಯಿಂದ ಕಾರ್ಯ ಆರಂಭಿಸಿದ್ದೇನೆ. ಐಜ್ವಾಲ್‌ನಲ್ಲಿ ಒಂದು ಕ್ರೀಡಾಂಗಣವಿದೆ. ಆದರೆ ತರಬೇತಿಗೆ ಸೂಕ್ತ ಸೌಲಭ್ಯಗಳು ಇಲ್ಲ. ಮಳೆಯೂ ಹೆಚ್ಚು. ಕಾಂಕ್ರಿಟ್ ಪಿಚ್‌ ಇತ್ತು. ಆದ್ದರಿಂದ ಅಸ್ಸಾಂ ರಾಜ್ಯ ಜೊಹ್ರಾಟ್‌ನಲ್ಲಿ ತರಬೇತಿ ಸೌಲಭ್ಯ ಪಡೆ ದಿದ್ದೇವೆ. ಅದು ನಮ್ಮ ತವರು
ಕ್ರೀಡಾಂಗಣವಾಗಿದೆ.

* ನಿಮ್ಮ ತಂಡದಲ್ಲಿ ಸ್ಥಳೀಯರು ಎಷ್ಟು ಮಂದಿ ಹಾಗೂ ಹೊರ ರಾಜ್ಯದ ಎಷ್ಟು ಆಟಗಾರರು ಇದ್ದಾರೆ?

ನಮ್ಮ ಬಳಗದಲ್ಲಿ 12 ಹುಡುಗರು ಸ್ಥಳೀಯರು ಇದ್ದಾರೆ.  ಹೊರರಾಜ್ಯದ ಮೂವರು ಆಟಗಾರರಾದ ಸಿನಾನ್ ಅಬ್ದುಲ್ ಖಾದರ್ (ಕರ್ನಾಟಕ),  ತರುವರ್ ಕೊಹ್ಲಿ (ಪಂಜಾಬ್) ಮತ್ತು ಅಖಿಲ್ ರಜಪೂತ್ (ಮುಂಬೈ)ಆವರಿ ದ್ದಾರೆ. ಈ ಮೂವರಿಗೂ ಕ್ರಿಕೆಟ್ ಆಡಿದ ಅನುಭವ ಚೆನ್ನಾಗಿದೆ. ಆದರೆ ಉಳಿ ದವರಿಗೆ ಮೂಲಪಾಠದಿಂದ ಆರಂಭಿಸಬೇಕಿತ್ತು. ಅದರಲ್ಲಿ ತಕ್ಕಮಟ್ಟಿಗೆ ಯಶಸ್ವಿಯಾಗಿದ್ದೇನೆ.  ನಾಗಾಲ್ಯಾಂಡ್ ತಂಡ, ಉತ್ತರಾಖಂಡ ಮತ್ತಿತರ ತಂಡಗಳಲ್ಲಿ ಹೊರರಾಜ್ಯದ ಆಟಗಾರರು ಹೆಚ್ಚು ಇದ್ದಾರೆ. 

* ನಾಗಾಲ್ಯಾಂಡ್ ವಿರುದ್ಧದ ಮೊದ ಲ ಪಂದ್ಯದ ಅನುಭವ ಹೇಗಿತ್ತು?

ಮಿಜೋರಾಂನಲ್ಲಿ ಸ್ಥಳೀಯ ಕ್ರಿಕೆಟ್‌ ಟೂರ್ನಿಗಳು ಹೆಚ್ಚು ನಡೆದಿಲ್ಲ. ಆದರೆ ನಾಗಾಲ್ಯಾಂಡ್ ತಂಡವು ಮೂರು ವರ್ಷಗಳಿಂದಲೂ ಸಾಕಷ್ಟು ಸ್ಥಳೀಯ ಟೂರ್ನಿಗಳಲ್ಲಿ ಆಡಿದ ಅನುಭವ ಹೊಂದಿದೆ. ಅಲ್ಲದೇ ಹೊರರಾಜ್ಯದ ಉತ್ತಮ ಆಟಗಾರರನ್ನು ಸೇರ್ಪಡೆ ಮಾಡಿಕೊಂಡಿದೆ. ನಮ್ಮ ತಂಡಕ್ಕೆ ಈ ಪಂದ್ಯವು ಕಲಿಕೆಯ ಒಂದು ಭಾಗವಾಗಿದೆ. ಹೋದ ತಿಂಗಳು ನಡೆದಿದ್ದ ವಿಜಯ್ ಹಜಾರೆ ಟ್ರೋಫಿ ಟೂರ್ನಿಯಲ್ಲಿ ಸಿಕ್ಕಿಂ ತಂಡದ ವಿರುದ್ಧ ಮಿಜೋರಾಂ ಗೆದ್ದಿತ್ತು.

 * ಈಶಾನ್ಯ ರಾಜ್ಯದ ಕ್ರಿಕೆಟ್ ತಂಡಗಳ ಭವಿಷ್ಯದ ಬಗ್ಗೆ ಏನು ಹೇಳುತ್ತೀರಿ?

ಈ ತಂಡಗಳನ್ನು ರಣಜಿ ಟ್ರೋಫಿ ಟೂರ್ನಿಗೆ ಮಾನ್ಯತೆ ನೀಡಿ ಒಳ್ಳೆಯ ಕೆಲಸ ಮಾಡಿದೆ. ಇಲ್ಲಿ ಪ್ರತಿಭಾವಂತರು ಇದ್ದಾರೆ. ಆದರೆ ಸೌಲಭ್ಯಗಳ ಕೊರತೆ ಇದೆ. ಮುಂದಿನ ಹಂತದಲ್ಲಿ ಮೂಲಸೌಲಭ್ಯಗಳು ಅಭಿವೃದ್ಧಿ ಹೊಂದುವ ನಿರೀಕ್ಷೆ ಇದೆ. ಕನಿಷ್ಠ ಮೂರು
ವರ್ಷದ ಸಮಯಾವಕಾಶವನ್ನು ಈ  ತಂಡಗಳಿಗೆ ನೀಡಬೇಕು. ಅಷ್ಟು ಅವಧಿಯಲ್ಲಿ ಈ  ಆಟಗಾರರು ಚೆನ್ನಾಗಿ ಬೆಳೆಯುವುದು ಖಚಿತ.

ಪಿ.ವಿ. ಶಶಿಕಾಂತ್ ಬಗ್ಗೆ..

ಮೂಲತಃ ಮಂಗಳೂರಿನ ಶಶಿಕಾಂತ್ ಅವರು ಒಟ್ಟು 51 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದಾರೆ. ನಾಲ್ಕುಶತಕಗಳು ಸೇರಿರುವ 2397 ರನ್‌ಗಳು ಅವರ ಖಾತೆಯಲ್ಲಿವೆ. 1996–97ರಲ್ಲಿ ಇರಾನಿ ಕಪ್  ಗೆದ್ದ ಕರ್ನಾಟಕ ತಂಡದ ನಾಯಕತ್ವ ವಹಿಸಿದ್ದರು. 1999ರಲ್ಲಿ ಕ್ರಿಕೆಟ್‌ನಿಂದ ನಿವೃತ್ತರಾಗಿದ್ದರು. ನಂತರ ಬೆಂಗಳೂರಿನಲ್ಲಿ ಜೂನಿಯರ್ ಆಟಗಾರರಿಗೆ ತರಬೇತಿ  ಆರಂಭಿಸಿದ್ದರು. 2017–18ರಲ್ಲಿ ಕರ್ನಾಟಕದ ತಂಡದ ಕೋಚ್ ಆಗಿದ್ದರು. ಅವರ ಮಾರ್ಗದರ್ಶನದಲ್ಲಿ ತಂಡವು ವಿಜಯ್ ಹಜಾರೆ ಟ್ರೋಫಿ ಗೆದ್ದಿತ್ತು. ರಣಜಿ ಟ್ರೋಫಿಯಲ್ಲಿ ಸೆಮಿಫೈನಲ್‌ ಪ್ರವೇಶಿಸಿತ್ತು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !