2008ರ ಸರಣಿ ಸ್ಫೋಟ ಪ್ರಕರಣ: ಎಸ್‌‍ಪಿಪಿ ದಿಢೀರ್‌ ಬದಲು

7
ಕೇರಳದ ಪಿಡಿಪಿ ಮುಖಂಡ ಅಬ್ದುಲ್‌ ನಾಸಿರ್‌ ಮದನಿ ಪ್ರಕರಣದ ಪ್ರಮುಖ ಆರೋಪಿ l ವಿಚಾರಣೆ ಮುಗಿದು ಶೀಘ್ರ ತೀರ್ಪು ಪ್ರಕಟವಾಗುವ ನಿರೀಕ್ಷೆ

2008ರ ಸರಣಿ ಸ್ಫೋಟ ಪ್ರಕರಣ: ಎಸ್‌‍ಪಿಪಿ ದಿಢೀರ್‌ ಬದಲು

Published:
Updated:

ಬೆಂಗಳೂರು: ಹತ್ತು ವರ್ಷದ ಹಿಂದೆ ನಗರದಲ್ಲಿ ನಡೆದಿದ್ದ ಸರಣಿ ಬಾಂಬ್‌ ಸ್ಫೋಟ ಪ್ರಕರಣದ ವಿಚಾರಣೆ ಅಂತಿಮ ಹಂತ ತಲುಪಿರುವಾಗ ರಾಜ್ಯಸರ್ಕಾರ ವಿಶೇಷ ಪಬ್ಲಿಕ್‌ ಪ್ರಾಸಿಕ್ಯೂಟರ್‌ (ಎಸ್‌ಪಿಪಿ) ಅನ್ನು ಹಠಾತ್ತನೇ ಬದಲಾಯಿಸಿರುವ ಬೆಳವಣಿಗೆ ನಡೆದಿದೆ.

2008ರ ಜುಲೈ 25ರಂದು ನಡೆದಿದ್ದ ಸರಣಿ ಸ್ಫೋಟದಲ್ಲಿ ಒಬ್ಬರು ಮೃತಪಟ್ಟು, 20 ಜನ ಗಾಯಗೊಂಡಿದ್ದರು.

ಕೇರಳ ‘ಪೀಪಲ್‌ ಡೆಮಾಕ್ರಟಿಕ್‌ ಪಾರ್ಟಿ’ ಮುಖಂಡ ಅಬ್ದುಲ್‌ ನಾಸಿರ್‌ ಮದನಿ ಆರೋಪಿಯಾಗಿರುವ ಈ ಪ್ರಕರಣದ ವಿಚಾರಣೆ ಇನ್ನೇನು ಮುಗಿದು, ತೀರ್ಪು ಸದ್ಯದಲ್ಲೇ ಪ್ರಕಟವಾಗಬೇಕಿತ್ತು. ಆದರೆ, ಗೃಹ ಇಲಾಖೆ ಕಳೆದ ವಾರ ಎಸ್‌ಪಿಪಿ ಅವರನ್ನು ದಿಢೀರ್‌ ಬದಲಾವಣೆ ಮಾಡಿದೆ.

ವಿಶೇಷ ಪಬ್ಲಿಕ್‌ ‍ಪ್ರಾಸಿಕ್ಯೂಟರ್‌ ಆಗಿ ಸದಾಶಿವಮೂರ್ತಿ ಇದುವರೆಗೆ ಕೆಲಸ ಮಾಡಿದ್ದರು. ಈಗ ರುದ್ರಸ್ವಾಮಿ ಅವರನ್ನು ನೇಮಿಸಲಾಗಿದೆ. ಗೃಹ ಇಲಾಖೆ ಹಿರಿಯ ಅಧಿಕಾರಿಗಳು ಬದಲಾವಣೆಗೆ ಸರಿಯಾದ ಕಾರಣ ನೀಡಿಲ್ಲ. ರಾಜ್ಯ ಪ್ರಾಸಿಕ್ಯೂಷನ್‌ ನಿರ್ದೇಶನಾಲಯದ ಅಧಿಕಾರಿಗಳೂ ಈ ಬಗ್ಗೆ ತಮಗೇನೂ ಗೊತ್ತಿಲ್ಲ ಎಂದು ಹೇಳಿ ಜಾರಿಕೊಳ್ಳುತ್ತಿದ್ದಾರೆ.

‘ಸದಾಶಿವಮೂರ್ತಿ ಅವರೇ ತಮ್ಮನ್ನು ಬದಲಾವಣೆ ಮಾಡುವಂತೆ ಮನವಿ ಮಾಡಿದ್ದರು. ಇದರಿಂದಾಗಿ ರುದ್ರಸ್ವಾಮಿ ಅವರನ್ನು ನೇಮಿಸಲಾಗಿದೆ. ಬದಲಾವಣೆಗೆ ಬೇರೆ ಕಾರಣಗಳಿಲ್ಲ’ ಎಂದು ಗೃಹ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಆದರೆ, ಇದನ್ನು ಮೂರ್ತಿ ನಿರಾಕರಿಸಿದರು. ‘ನನ್ನನ್ನು ಬದಲಾವಣೆ ಮಾಡಿದ ವಿಷಯ ಗೊತ್ತಿರಲಿಲ್ಲ. ಈ ಪ್ರಕರಣದ ವಿಚಾರಣೆ ಬಹುತೇಕ ಮುಗಿದಿತ್ತು. ನಾನು ನನ್ನ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿದ್ದೇನೆ. ರಾಜ್ಯ ಸರ್ಕಾರದ ಆದೇಶ ತಲುಪಿದ ಬಳಿಕ ಶುಕ್ರವಾರ ರುದ್ರಸ್ವಾಮಿ ಅವರಿಗೆ ಅಧಿಕಾರ ವಹಿಸಿಕೊಟ್ಟಿದ್ದೇನೆ’ ಎಂದರು.

‘ಸದಾಶಿವಮೂರ್ತಿ ನಿಷ್ಠಾವಂತ ಅಧಿಕಾರಿ. ಪ್ರಾಸಿಕ್ಯೂಷನ್‌ ವಿಭಾಗದ ನಿರ್ದೇಶಕರೂ ಆಗಿದ್ದವರು. ಅವರ ಬಗ್ಗೆಯಾಗಲಿ ಅಥವಾ ಅವರ ಕೆಲಸದ ಬಗ್ಗೆಯಾಗಲಿ ಯಾರೂ ಮಾತನಾಡುವಂತಿಲ್ಲ. ಕೊನೆಯ ಹಂತದಲ್ಲಿ ಅವರನ್ನು ಬದಲಾವಣೆ ಮಾಡಿರುವುದರ ಹಿಂದೆ ರಾಜಕೀಯ ಒತ್ತಡ ಇದ್ದಂತಿದೆ’ ಎಂದು ಪ್ರಾಸಿಕ್ಯೂಷನ್‌ ವಿಭಾಗದ ಅಧಿಕಾರಿಯೊಬ್ಬರು ತಿಳಿಸಿದರು.

ಎಸ್‌ಪಿಪಿ ಅವರನ್ನು ಬದಲಾವಣೆ ಮಾಡುವ ತೀರ್ಮಾನ ಸರ್ಕಾರದ ಮಟ್ಟದಲ್ಲಿ ಕೈಗೊಳ್ಳಲಾಗಿದ್ದು, ಈ ಬಗ್ಗೆ ಪ್ರತಿಕ್ರಿಯೆಗೆ ಗೃಹ ಸಚಿವ ಜಿ. ಪರಮೇಶ್ವರ ಅವರು ಸಿಗಲಿಲ್ಲ. ಅವರು ದೂರವಾಣಿ ಕರೆಯನ್ನೂ ಸ್ವೀಕರಿಸಲಿಲ್ಲ. 2008ರ ಜುಲೈ 25ರಂದು ಬೆಂಗಳೂರಿನ ವಿವಿಧ ಕಡೆಗಳಲ್ಲಿ ಕಡಿಮೆ ಸಾಮರ್ಥ್ಯದ ಕಚ್ಚಾ ಬಾಂಬ್‌ ಸ್ಪೋಟಿಸಲಾಗಿತ್ತು. ಬಾಂಗ್ಲಾ ಗಡಿಯಲ್ಲಿ ಬಂಧಿತರಾಗಿದ್ದ ಎಲ್‌ಇಟಿಯ ಇಬ್ಬರು ಭಯೋತ್ಪಾದಕರು ವಿವಿಧ ನಗರಗಳಲ್ಲಿ ನಡೆದಿದ್ದ ಸರಣಿ ಸ್ಫೋಟದ ಮಾಹಿತಿ ನೀಡಿದ್ದರು.

ಅಲ್ಲದೆ, ಬೆಂಗಳೂರು ಸ್ಫೋಟದ ಹಿಂದೆ ಮದನಿ ಕೈವಾಡವಿದೆ ಎಂದೂ ಬಹಿರಂಗಪಡಿಸಿದ್ದರು. ಆರೋಪ ಕುರಿತು ಪೊಲೀಸರು ತನಿಖೆ ನಡೆಸಿ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

Tags: 

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 2

  Frustrated
 • 4

  Angry

Comments:

0 comments

Write the first review for this !