ಅಧ್ಯಯನ ವರದಿ ವಿಳಂಬಕ್ಕೆ ಹೈಕೋರ್ಟ್‌ ಅತೃಪ್ತಿ

7
ಫ್ಲೆಕ್ಸ್, ರಸ್ತೆ ಗುಂಡಿ, ರಾಜಕಾಲುವೆ ನಿರ್ವಹಣೆ

ಅಧ್ಯಯನ ವರದಿ ವಿಳಂಬಕ್ಕೆ ಹೈಕೋರ್ಟ್‌ ಅತೃಪ್ತಿ

Published:
Updated:
Deccan Herald

ಬೆಂಗಳೂರು: ‘ಬೃಹತ್ ಬೆಂಗಳೂರು ಮಹಾ ನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ ಫ್ಲೆಕ್ಸ್, ಬ್ಯಾನರ್ ಮತ್ತು ಹೋರ್ಡಿಂಗ್ಸ್ ಸೇರಿದಂತೆ ಜಾಹೀರಾತುಗಳಿಗೆ ಬಳಸುವ ಪರಿಕರಗಳು ನೆಲದಲ್ಲಿ ಕರಗುವ ತ್ಯಾಜ್ಯ ಗುಣ ಹೊಂದಿವೆಯೋ ಅಥವಾ ಪ್ಲಾಸ್ಟಿಕ್‌ಯುಕ್ತವಾಗಿಯೋ  ಎಂಬುದರ ಬಗ್ಗೆ ಅಧ್ಯಯನ ವರದಿ ನೀಡಲು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ವಿಳಂಬ ಧೋರಣೆ ಅನುಸರಿಸುತ್ತಿದೆ’ ಎಂದು ಹೈಕೋರ್ಟ್ ತೀವ್ರ ಅತೃಪ್ತಿ ವ್ಯಕ್ತಪಡಿಸಿದೆ.

ಈ ಕುರಿತಂತೆ ಕೇಂದ್ರ ಸರ್ಕಾರದ ಸಂಶೋಧನಾ ಸಂಸ್ಥೆ ಹಾಗೂ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಮೇಲೆ ಮುಖ್ಯ ನ್ಯಾಯಮೂರ್ತಿ ದಿನೇಶ್ ಮಾಹೇಶ್ವರಿ ಹಾಗೂ ಎಸ್. ಸುಜಾತಾ ಅವರಿದ್ದ ವಿಭಾಗೀಯ ನ್ಯಾಯಪೀಠ ಶನಿವಾರ ಅಸಮಾಧಾನ ಹೊರ ಹಾಕಿತು.

ಸಹಾಯಕ ಸಾಲಿಸಿಟರ್ ಜನರಲ್ ಸಿ. ಶಶಿಕಾಂತ್ ಅವರು, ‘ಈ ಪ್ರಕರಣದಲ್ಲಿ ಕೇಂದ್ರ ಸರ್ಕಾರವನ್ನು ಪ್ರತಿವಾದಿಯನ್ನಾಗಿ ಮಾಡಿಲ್ಲ. ಹೀಗಾಗಿ, ಪರಿಕರಗಳ ಬಳಕೆ ಕುರಿತಾದ ಸಂಶೋಧನಾ ವರದಿ ನೀಡುವಲ್ಲಿ ಸಂವಹನದ ಕೊರತೆಯಾಗಿದೆ’ ಎಂದು ಸ್ಪಷ್ಟನೆ ನೀಡಿದರು.

ಅಂತೆಯೇ ಮಾಲಿನ್ಯ ನಿಯಂತ್ರಣ ಮಂಡಳಿ ಪರ ಹಾಜರಿದ್ದ ವಕೀಲ ಗುರುರಾಜ್ ಜೋಶಿ ಅವರು, ‘ಈ ಪರಿಕರಗಳ ಅಧ್ಯಯನ ಮತ್ತು ಸಂಶೋಧನಾ ವರದಿ ನಾಲ್ಕು ವಿವಿಧ ಹಂತಗಳಲ್ಲಿ ನಡೆಯಬೇಕಿದೆ. ಸದ್ಯ, 15 ದಿನಗಳ ಅಧ್ಯಯನ ಪ್ರಕ್ರಿಯೆಗೆ ಒಳಗಾದ ಪರಿಕರಗಳ ಮೇಲಿನ ವರದಿಯನ್ನು ನ್ಯಾಯಪೀಠಕ್ಕೆ ಸಲ್ಲಿಸಲಾಗುವುದು’ ಎಂದು ತಿಳಿಸಿದರು.

ಇದೇ ವೇಳೆ, ವಿವಿಧ ಇಲಾಖೆಗಳ ಸಮನ್ವಯ ಸಮಿತಿಗೆ ಹೈಕೋರ್ಟ್ ಪರವಾಗಿ ಸದಸ್ಯರಾಗಿರುವ ಹಿರಿಯ ವಕೀಲ ಆದಿತ್ಯ ಸೋಂಧಿ ಅವರು, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ನಡೆದ ಸಭೆಯ ಕುರಿತು ನ್ಯಾಯಪೀಠಕ್ಕೆ ವಿವರಣೆ ನೀಡಿದರು.

ರಾಜಕಾಲುವೆ ನಿರ್ವಹಣೆ ಕುರಿತು ವಿವರಿಸಿದ ಅವರು, ‘ರೋಬೊಟಿಕ್ ಯಂತ್ರಗಳ ಬಳಕೆಗೆ ಬಿಬಿಎಂಪಿ ಪ್ರಸ್ತಾವ ಸಲ್ಲಿಸಿದೆ. ಈ ಕುರಿತು ಸಭೆಯಲ್ಲಿ ಇನ್ನೂ ತೀರ್ಮಾನ ಕೈಗೊಂಡಿಲ್ಲ’ ಎಂದರು.

ಕಟಿಬದ್ಧತೆ ಬೇಕು: ’ಬೆಂಗಳೂರು ತನ್ನ ಗತವೈಭವವನ್ನು ಮರಳಿ ಪಡೆಯಲೇ ಬೇಕು. ಈ ವಿಷಯದಲ್ಲಿ ಎರಡನೇ ಮಾತೇ ಇಲ್ಲ’ ಎಂದು ಪುನರುಚ್ಛರಿಸಿದ ಮುಖ್ಯ ನ್ಯಾಯಮೂರ್ತಿಗಳು, ‘ಅಧಿಕಾರಿಗಳು ಮತ್ತು ವಿವಿಧ ಸಂಸ್ಥೆಗಳು ನಗರದ ಸ್ವಚ್ಛತೆಗೆ ಸಂಬಂಧಿಸಿದಂತೆ ಕೈ ಜೋಡಿಸಬೇಕು. ಸಾರ್ವಜನಿಕ ಸೇವೆಯ ಕಟಿಬದ್ಧತೆಗೆ ಮಿಗಿಲಾದದ್ದು ಬೇರಾವುದೂ ಇಲ್ಲ’ ಎಂದರು.

ವಿಚಾರಣೆಯನ್ನು ಡಿಸೆಂಬರ್ 15ಕ್ಕೆ ಮುಂದೂಡಲಾಗಿದೆ.

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !