ಅನಾರೋಗ್ಯದ ನೆಪವೊಡ್ಡಿ ರಜೆ: ಪೊಲೀಸರ ವಿರುದ್ಧ ಕ್ರಮ

7

ಅನಾರೋಗ್ಯದ ನೆಪವೊಡ್ಡಿ ರಜೆ: ಪೊಲೀಸರ ವಿರುದ್ಧ ಕ್ರಮ

Published:
Updated:

ಬೆಂಗಳೂರು: ವರ್ಗಾವಣೆ ಸಂದರ್ಭದಲ್ಲಿ ಅನಾರೋಗ್ಯದ ನೆಪವೊಡ್ಡಿ ಕರ್ತವ್ಯಕ್ಕೆ ಗೈರಾಗುವ ಪೊಲೀಸ್‌ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಲು ಮುಂದಾಗಿರುವ ಡಿಜಿಪಿ ನೀಲಮಣಿ ರಾಜು, ವೈದ್ಯಕೀಯ ರಜೆ ಕೋರುವ ಅಧಿಕಾರಿಗಳ ಬಗ್ಗೆ ತನಿಖೆ ನಡೆಸಿ ವರದಿ ನೀಡುವಂತೆ ಹಿರಿಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ನ. 2ರಂದು ಸುತ್ತೋಲೆ ಹೊರಡಿಸಿರುವ ಡಿಜಿಪಿ, ‘ವಿನಾಕಾರಣ ಸುಳ್ಳು ಹೇಳಿ ರಜೆ ಪಡೆದಿದ್ದು ಕಂಡುಬಂದರೆ, ಅಂಥ ಅಧಿಕಾರಿಗಳನ್ನು 6 ತಿಂಗಳಿನಿಂದ 1 ವರ್ಷದವರೆಗೆ ನಾನ್‌ ಎಕ್ಸಿಕ್ಯೂಟಿವ್‌ ಹುದ್ದೆಗೆ ನೇಮಿಸಲಾಗುವುದು. ಜೊತೆಗೆ ಶಿಸ್ತುಕ್ರಮ ಸಹ ಜರುಗಿಸಲಾಗುವುದು’ ಎಂದು ಎಚ್ಚರಿಕೆ ನೀಡಿದ್ದಾರೆ. 

‘ಒಂದೇ ಹುದ್ದೆಯಲ್ಲಿ ಹಲವು ವರ್ಷ ಕೆಲಸ ಮಾಡಿದ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗುತ್ತದೆ. ವರ್ಗಾವಣೆಯಾದ ಬಹುಪಾಲು ಅಧಿಕಾರಿಗಳು, ತಮಗೆ ಸೂಚಿಸಿದ ಹುದ್ದೆಗಳಿಗೆ ಹೋಗಿ ಅಧಿಕಾರ ವಹಿಸಿಕೊಳ್ಳುವುದು ತಡವಾಗುತ್ತಿದೆ. ಕಾರಣ ಕೇಳಿದರೆ, ವೈದ್ಯಕೀಯ ರಜೆ ಪಡೆದಿರುವುದಾಗಿ ಉತ್ತರ ಬರುತ್ತಿದೆ. ಇಂಥ ಅಧಿಕಾರಿಗಳ ವರ್ತನೆಗೆ ಕಡಿವಾಣ ಹಾಕಲು ಈ ಸುತ್ತೋಲೆ ಹೊರಡಿಸಲಾಗಿದೆ’ ಎಂದು ಡಿಜಿಪಿ ಹೇಳಿದ್ದಾರೆ.

‘ವರ್ಗಾವಣೆಗೊಂಡ ಅಧಿಕಾರಿಗಳು, ವೈದ್ಯಕೀಯ ರಜೆ ಕೋರಿ ಸಲ್ಲಿಸುವ ಅರ್ಜಿಗಳ ಬಗ್ಗೆ ಹಿರಿಯ ಅಧಿಕಾರಿಗಳು ವಿಚಾರಣೆ ನಡೆಸಬೇಕು. ಅದರ ವರದಿಯನ್ನು ಡಿಜಿಪಿ ಕಚೇರಿಗೆ ಕಳುಹಿಸಬೇಕು’ ಎಂದು ಸುತ್ತೋಲೆಯಲ್ಲಿ ಡಿಜಿಪಿ ನೀಲಮಣಿ ರಾಜು ಸೂಚಿಸಿದ್ದಾರೆ.

‘ವೈದ್ಯಕೀಯ ರಜೆ ಪಡೆಯುವ ಅಧಿಕಾರಿಗಳ ಸಹಿಯನ್ನು ಸೇವಾ ಪುಸ್ತಕದಲ್ಲಿ ಪಡೆಯಬೇಕು. ವರ್ಗಾವಣೆ ಸಮಯದಲ್ಲಿ ಪದೇ ಪದೇ ವೈದ್ಯಕೀಯ ರಜೆ ಪಡೆದರೆ, ಆ ಬಗ್ಗೆಯೂ ಸೇವಾ ಪುಸ್ತಕದಲ್ಲಿ ವಿವರವನ್ನು ದಾಖಲಿಸಬೇಕು’ ಎಂದು ಅವರು ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 6

  Happy
 • 2

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !