ಮೂಲಸೌಕರ್ಯ ಮರೀಚಿಕೆ: ಸ್ಥಳೀಯರು ಹೈರಾಣ

7
ಎನ್‌ಜಿಒ ಲೇಔಟ್‌– ಈದ್ಗಾ ಮೊಹಲ್ಲಾದಲ್ಲಿ ಸಮಸ್ಯೆಗಳ ಸರಮಾಲೆ

ಮೂಲಸೌಕರ್ಯ ಮರೀಚಿಕೆ: ಸ್ಥಳೀಯರು ಹೈರಾಣ

Published:
Updated:
Deccan Herald

ಕೋಲಾರ: ಹಾದಿ ಬೀದಿಯಲ್ಲಿ ನಾಯಿ ಹಂದಿಗಳ ಹಿಂಡು... ಹನಿ ಹನಿ ನೀರಿಗೂ ತತ್ವಾರ... ಕಣ್ಣು ಹಾಯಿಸಿದಲ್ಲೆಲ್ಲಾ ಕಸದ ರಾಶಿ.... ಚರಂಡಿ ತುಂಬಿ ರಸ್ತೆಗೆ ಹರಿದು ನಿಂತ ಕೊಳಚೆ ನೀರು... ವಿಲೇವಾರಿಯಾಗದೆ ದುರ್ನಾತ ಬೀರುತ್ತಿರುವ ತ್ಯಾಜ್ಯ...

ಇದು ಯಾವುದೋ ಕುಗ್ರಾಮದ ಚಿತ್ರಣವಲ್ಲ. ಬದಲಿಗೆ ಜಿಲ್ಲಾ ಕೇಂದ್ರದ 16ನೇ ವಾರ್ಡ್‌ ವ್ಯಾಪ್ತಿಯ ಎನ್‌ಜಿಒ ಲೇಔಟ್‌ ಹಾಗೂ ಈದ್ಗಾ ಮೊಹಲ್ಲಾ ಬಡಾವಣೆಗಳ ದುಸ್ಥಿತಿ. ನೈರ್ಮಲ್ಯ, ರಸ್ತೆ, ಬೀದಿ ದೀಪ ಹೀಗೆ ಪಟ್ಟಿ ಮಾಡಿದರೆ ಸಮಸ್ಯೆಗಳ ಸರಮಾಲೆಯೇ ಇಲ್ಲಿದೆ. ಇಲ್ಲ ಇಲ್ಲಗಳ ನಡುವೆ ಬದುಕು ಸಾಗಿಸುತ್ತಿರುವ ಸ್ಥಳೀಯರ ಬವಣೆ ಹೇಳತೀರದು.

ವಾರ್ಡ್‌ನ ವ್ಯಾಪ್ತಿ ವಿಸ್ತಾರವಾದಂತೆ ಸಮಸ್ಯೆಗಳು ಗಂಭೀರವಾಗುತ್ತಿದ್ದು, ಸ್ಥಳೀಯರ ಮೂಲಸೌಲಭ್ಯದ ಕೂಗು ಅರಣ್ಯರೋದನವಾಗಿದೆ. ವಾರ್ಡ್‌ನ ಸದಸ್ಯರು ಹಾಗೂ ನಗರಸಭೆ ಆಡಳಿತ ಯಂತ್ರವು ಬಡಾವಣೆಗಳ ಅಭಿವೃದ್ಧಿಯನ್ನು ಸಂಪೂರ್ಣ ನಿರ್ಲಕ್ಷಿಸಿದ್ದು, ಸ್ಥಳೀಯರ ಅಳಲು ಕೇಳುವವರಿಲ್ಲ.

ನಗರದ ಇತರೆ ಬಡಾವಣೆಗಳಂತೆಯೇ ಈ ಬಡಾವಣೆಗಳಲ್ಲೂ ನೀರಿನ ಸಮಸ್ಯೆ ಗಂಭೀರವಾಗಿದೆ. ಕೊಳವೆ ಬಾವಿಗಳಲ್ಲಿ ಅಂತರ್ಜಲ ಮಟ್ಟ ಸುಧಾರಿಸಿದ್ದರೂ ಸ್ಥಳೀಯರಿಗೆ ನೀರಿನ ಬವಣೆ ತಪ್ಪಿಲ್ಲ. ನೀರು ಲಭ್ಯವಿರುವ ಕೊಳವೆ ಬಾವಿಗಳಿಗೆ ಪಂಪ್‌ ಮತ್ತು ಮೋಟರ್‌ ಅಳವಡಿಸದ ಕಾರಣ ನೀರಿನ ಕೃತಕ ಅಭಾವ ಸೃಷ್ಟಿಯಾಗಿದೆ. ನಿವಾಸಿಗಳು ಹಣ ಕೊಟ್ಟು ಖಾಸಗಿ ಟ್ಯಾಂಕರ್‌ ಮಾಲೀಕರಿಂದ ನೀರು ಖರೀದಿಸುವ ಪರಿಸ್ಥಿತಿ ಸೃಷ್ಟಿಯಾಗಿದೆ.

ಕಸದ ದುರ್ನಾತ: ವಾರ್ಡ್‌ನ ವ್ಯಾಪ್ತಿಯಲ್ಲಿ ತ್ಯಾಜ್ಯ ಸಂಗ್ರಹಣೆ ಪ್ರಕ್ರಿಯೆ ಹಳಿ ತಪ್ಪಿದ್ದು, ನೈರ್ಮಲ್ಯ ಸಮಸ್ಯೆ ಎದುರಾಗಿದೆ. ಪೌರ ಕಾರ್ಮಿಕರು ಮನೆಗಳ ಬಳಿ ಬಂದು ಕಸ ಸಂಗ್ರಹಿಸುತ್ತಿಲ್ಲ. ವಾರ್ಡ್‌ನಲ್ಲಿ ತ್ಯಾಜ್ಯ ಸಂಗ್ರಹಣಾ ತೊಟ್ಟಿಗಳನ್ನು ನಿರ್ಮಿಸಿಲ್ಲ.

ಹೀಗಾಗಿ ಸ್ಥಳೀಯರು ರಸ್ತೆ ಬದಿಯಲ್ಲಿ ಹಾಗೂ ಖಾಲಿ ನಿವೇಶನಗಳಲ್ಲಿ ತ್ಯಾಜ್ಯ ವಿಲೇವಾರಿ ಮಾಡುತ್ತಿದ್ದು, ಕಸ ರಾಶಿಯಾಗಿ ಬೆಳೆದಿದೆ. ಪೌರ ಕಾರ್ಮಿಕರು ಆ ಕಸ ತೆರವುಗೊಳಿಸದೆ ಕೈಚೆಲ್ಲಿದ್ದಾರೆ. ಕಸದ ರಾಶಿಗೆ ಚರಂಡಿ ಮತ್ತು ಮಳೆ ನೀರು ಸೇರಿ ತ್ಯಾಜ್ಯ ಸ್ಥಳದಲ್ಲೇ ಕೊಳೆತು ದುರ್ನಾತ ಬೀರುತ್ತಿದೆ.

ಕೆಸರುಮಯ ರಸ್ತೆ: ಎನ್‌ಜಿಒ ಲೇಔಟ್‌ ಹಾಗೂ ಈದ್ಗಾ ಮೊಹಲ್ಲಾ ಬಡಾವಣೆಯ ಬಹುತೇಕ ರಸ್ತೆಗಳು ಕಚ್ಚಾ ರಸ್ತೆಗಳಾಗಿವೆ. ಬಡಾವಣೆಗಳು ನಿರ್ಮಾಣವಾಗಿ ದಶಕ ಕಳೆದರೂ ರಸ್ತೆಗಳಿಗೆ ಡಾಂಬರು ಹಾಕಿಲ್ಲ. ತುಂತುರು ಮಳೆ ಬಂದರೂ ರಸ್ತೆಗಳು ಕೆಸರು ಗದ್ದೆಯಂತಾಗುತ್ತವೆ. ಕೆಸರುಮಯ ರಸ್ತೆಗಳಲ್ಲಿ ವಾಹನಗಳು ನಿಧಾನ ಗತಿಯಲ್ಲಿ ಸಾಗುವ ದೃಶ್ಯ ಪ್ರತಿನಿತ್ಯ ಕಂಡುಬರುತ್ತದೆ. ವಾಹನ ಸವಾರರು ಕಚ್ಚಾ ರಸ್ತೆಗಳಲ್ಲಿ ಬಿದ್ದು ಗಾಯಗೊಳ್ಳುವುದು ಸಾಮಾನ್ಯವಾಗಿದೆ.

ಮತ್ತೊಂದೆಡೆ ಬಡಾವಣೆಗಳ ಚರಂಡಿಗಳನ್ನು ಏಳೆಂಟು ತಿಂಗಳಿಂದ ಸ್ವಚ್ಛಗೊಳಿಸಿಲ್ಲ. ಇದರಿಂದ ಚರಂಡಿಗಳು ಕಟ್ಟಿಕೊಂಡು ಕೊಳಚೆ ನೀರು ರಸ್ತೆಗೆ ಹರಿಯುತ್ತಿದೆ. ಕೊಳಚೆ ನೀರು ಹಾಗೂ ಕಸದ ರಾಶಿಯಿಂದ ಬಡಾವಣೆಗಳ ಸ್ವರೂಪವೇ ಬದಲಾಗಿದ್ದು, ಇಡೀ ಪ್ರದೇಶ ಕೊಳೆಗೇರಿಯಂತಾಗಿವೆ. ಚರಂಡಿ ಸಮಸ್ಯೆಯಿಂದ ಸೊಳ್ಳೆ, ನೊಣ, ಹಂದಿ, ಬೀದಿ ನಾಯಿ ಕಾಟ ಹೆಚ್ಚಿದ್ದು, ಸ್ಥಳೀಯರಲ್ಲಿ ಸಾಂಕ್ರಾಮಿಕ ರೋಗ ಭೀತಿ ಮನೆ ಮಾಡಿದೆ.

ಮ್ಯಾನ್‌ಹೋಲ್‌ ಅವಾಂತರ: ಹಲವೆಡೆ ಮ್ಯಾನ್‌ಹೋಲ್‌ ಮತ್ತು ಯುಜಿಡಿ ಪೈಪ್‌ಗಳು ಹಾಳಾಗಿದ್ದು, ಮನೆಗಳ ನಲ್ಲಿಯಲ್ಲಿ ಚರಂಡಿ ಹಾಗೂ ಮ್ಯಾನ್‌ಹೋಲ್‌ನ ಕೊಳಚೆ ನೀರು ಬರುತ್ತಿದೆ. ಮ್ಯಾನ್‌ಹೋಲ್‌ಗಳು ಕಟ್ಟಿಕೊಂಡು ಮಲಮೂತ್ರ ರಸ್ತೆಗೆ ಹರಿದು ಅವಾಂತರ ಸೃಷ್ಟಿಸಿದೆ. ಮ್ಯಾನ್‌ಹೋಲ್‌ ಮುಚ್ಚಳಗಳು ಹಾಳಾಗಿ ವರ್ಷವೇ ಕಳೆದರೂ ಅವುಗಳನ್ನು ಬದಲಿಸಿಲ್ಲ. ಈ ಸಂಬಂಧ ಸ್ಥಳೀಯರು ವಾರ್ಡ್‌ನ ಸದಸ್ಯರಿಗೆ ಹಲವು ಬಾರಿ ದೂರು ನೀಡಿದ್ದರೂ ಸಮಸ್ಯೆ ಬಗೆಹರಿದಿಲ್ಲ. ಒಟ್ಟಾರೆ ಮೂಲಸೌಕರ್ಯ ಸಮಸ್ಯೆಯಿಂದ ಸ್ಥಳೀಯರ ಬದುಕು ನರಕ ಸದೃಶವಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !