ಶಿರಾಡಿ: ನಿರ್ಬಂಧ ತೆರವಿಗೆ ಸಿದ್ಧತೆ

7

ಶಿರಾಡಿ: ನಿರ್ಬಂಧ ತೆರವಿಗೆ ಸಿದ್ಧತೆ

Published:
Updated:

ಮಂಗಳೂರು: ಶಿರಾಡಿ ಘಾಟಿಯಲ್ಲಿ ಸರಕು ಸಾಗಣೆ ವಾಹನಗಳ ಸಂಚಾರಕ್ಕೆ ಇರುವ ನಿರ್ಬಂಧವನ್ನು ಮುಂದಿನ ವಾರ ತೆರವುಗೊಳಿಸುವ ಸಾಧ್ಯತೆ ಇದೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ತಿಳಿಸಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಪ್ರತಿಕ್ರಿಯಿಸಿದ ಅವರು, ‘ಶಿರಾಡಿ ಘಾಟಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ವ್ಯಾಪ್ತಿಯಲ್ಲಿರುವ ಪ್ರದೇಶದಲ್ಲಿ ಸದ್ಯ ಯಾವುದೇ ಸಮಸ್ಯೆ ಇಲ್ಲ. ಹಾಸನ ಜಿಲ್ಲೆಯ ಭಾಗದಲ್ಲಿ ಎರಡು ಕಡೆ ದೊಡ್ಡ ಪ್ರಮಾಣದ ಭೂಕುಸಿತ ಸಂಭವಿಸಿದ ಸ್ಥಳದಲ್ಲಿ ಕಾಮಗಾರಿ ನಡೆಯುತ್ತಿದೆ. ನಿರ್ಬಂಧ ತೆರವಿಗೆ ನಾವು ಸಮ್ಮತಿ ನೀಡಿದ್ದೇವೆ. ಹಾಸನ ಜಿಲ್ಲಾಧಿಕಾರಿ ಒಪ್ಪಿಗೆ ನೀಡಿದರೆ ಮುಂದಿನ ವಾರ ನಿರ್ಬಂಧ ತೆರವಾಗಲಿದೆ’ ಎಂದರು.

ಲೋಕೋಪಯೋಗಿ ಇಲಾಖೆಯ ಹಿರಿಯ ಅಧಿಕಾರಿಗಳು ಇತ್ತೀಚೆಗೆ ರಸ್ತೆಯ ಪರಿಶೀಲನೆ ನಡೆಸಿದ್ದಾರೆ. ನಿರ್ಬಂಧ ತೆರವು ಮಾಡಲು ಕ್ರಮ ಕೈಗೊಳ್ಳುವಂತೆ ಅವರನ್ನೂ ಕೋರಲಾಗಿದೆ. ದೀಪಾವಳಿ ವೇಳೆ ಪ್ರಯಾಣಿಕ ವಾಹನಗಳ ಸಂಚಾರ ಹೆಚ್ಚಾಗಿರುತ್ತದೆ. ಈ ಅವಧಿಯಲ್ಲಿ ಸರಕು ಸಾಗಣೆ ವಾಹನಗಳಿಗೆ ತಕ್ಷಣ ಅವಕಾಶ ನೀಡಿದರೆ ಸಮಸ್ಯೆ ಉಂಟಾಗಬಹುದು ಎಂಬ ಕಾರಣದಿಂದ ನಿರ್ಬಂಧ ತೆರವು ನಿರ್ಧಾರ ಕೈಗೊಂಡಿಲ್ಲ ಎಂದು ಹೇಳಿದರು.

ಭಾರಿ ಭೂಕುಸಿತದ ಕಾರಣದಿಂದ ಆಗಸ್ಟ್‌ 14ರಿಂದ ಶಿರಾಡಿ ಘಾಟಿ ಮಾರ್ಗವನ್ನು ಬಂದ್ ಮಾಡಲಾಗಿತ್ತು. ಸೆಪ್ಟೆಂಬರ್‌ 5ರಿಂದ ಲಘು ವಾಹನಗಳ ಸಂಚಾರಕ್ಕೆ ಅವಕಾಶ ನೀಡಲಾಗಿತ್ತು. ಅಕ್ಟೋಬರ್‌ 3ರಿಂದ ದೊಡ್ಡ ಬಸ್‌ಗಳ ಸಂಚಾರಕ್ಕೆ ಅನುಮತಿ ನೀಡಲಾಗಿತ್ತು. ಆದರೆ, ಸರಕು ಸಾಗಣೆ ವಾಹನಗಳ ಮೇಲಿನ ನಿರ್ಬಂಧವನ್ನು ತೆರವುಗೊಳಿಸಿರಲಿಲ್ಲ.

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !