ಸಮಸ್ಯೆ ಅರಿತು ಮಿತವಾಗಿ ನೀರು ಬಳಸಿ

7
ನಗರವಾಸಿಗಳಿಗೆ ಶಾಸಕ ಶ್ರೀನಿವಾಸಗೌಡ ಮನವಿ

ಸಮಸ್ಯೆ ಅರಿತು ಮಿತವಾಗಿ ನೀರು ಬಳಸಿ

Published:
Updated:
Deccan Herald

ಕೋಲಾರ: ‘ನಾಗರಿಕರು ನಗರದಲ್ಲಿ ಎದುರಾಗಿರುವ ನೀರಿನ ಸಮಸ್ಯೆ ಅರಿತು ಮಿತವಾಗಿ ನೀರು ಬಳಕೆ ಮಾಡಬೇಕು’ ಎಂದು ಶಾಸಕ ಕೆ.ಶ್ರೀನಿವಾಸಗೌಡ ಮನವಿ ಮಾಡಿದರು.

ನಗರಸಭೆ ವತಿಯಿಂದ ಅಮೃತ್ ಸಿಟಿ ಯೋಜನೆಯಡಿ ನಗರದ 26ನೇ ವಾರ್ಡ್‌ನಲ್ಲಿ (ಶಾಂತಿನಗರ) ನಿರ್ಮಿಸಿರುವ ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಬುಧವಾರ ಚಾಲನೆ ನೀಡಿ ಮಾತನಾಡಿ, ‘ಜಿಲ್ಲೆಯಾದ್ಯಂತ ಮುಂಗಾರು ಮಳೆ ಕೈಕೊಟ್ಟಿದ್ದು, ನಗರದಲ್ಲಿ ಹಿಂದಿನ ವರ್ಷಕ್ಕಿಂತ ಈ ಬಾರಿ ನೀರಿನ ಸಮಸ್ಯೆ ತೀವ್ರವಾಗಿದೆ’ ಎಂದು ಹೇಳಿದರು.

‘ನಗರಕ್ಕೆ ಸಮೀಪವಿರುವ ಅಮ್ಮೇರಹಳ್ಳಿ ಮತ್ತು ಮಡೇರಹಳ್ಳಿ ಕೆರೆ ನೀರನ್ನು ಕುಡಿಯುವ ನೀರಿನ ಸೌಕರ್ಯಕ್ಕೆ ಮೀಸಲಿರಿಸಲಾಗಿತ್ತು. 6 ತಿಂಗಳ ಹಿಂದೆ ಸುರಿದ ಮಳೆಗೆ ಈ ಕೆರೆಗಳು ತುಂಬಿ ಕೋಡಿ ಹರಿದಿದ್ದವು. ಕೆರೆ ಅಂಗಳದ ನೀರು ಸಂಸ್ಕರಣಾ ಘಟಕಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡಿಲ್ಲ. ನೀರನ್ನು ಸಂಸ್ಕರಿಸದೆ ನೇರವಾಗಿ ನಗರಕ್ಕೆ ಪಂಪ್‌ ಮಾಡಿರುವುದರಿಂದ ಬೇಗ ಖಾಲಿಯಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ನಗರದಲ್ಲಿ ಸಾಕಷ್ಟು ಕೊಳವೆ ಬಾವಿಗಳಿದ್ದು, ಅಂತರ್ಜಲ ಬತ್ತಿದ್ದ ಕೆಲ ಕೊಳವೆ ಬಾವಿಗಳಲ್ಲಿ ನೀರು ಬಂದಿದೆ ಎಂದು ಸದಸ್ಯರು ತಿಳಿಸಿದ್ದಾರೆ. ಅಂತಹ ಕೊಳವೆ ಬಾವಿಗಳನ್ನು ಪರೀಕ್ಷಿಸಿ ಪಂಪ್‌ ಮೋಟರ್‌ ಅಳವಡಿಸಲು ಕ್ರಿಯಾ ಯೋಜನೆ ರೂಪಿಸುವಂತೆ ನಗರಸಭೆಗೆ ಸೂಚಿಸಲಾಗಿದೆ’ ಎಂದು ತಿಳಿಸಿದರು.

ರಸ್ತೆ ಹಾಳಾಗಿವೆ: ‘ಅಮೃತ್ ಸಿಟಿ ಯೋಜನೆಯಡಿ ನಗರದಲ್ಲಿ ಕೈಗೆತ್ತಿಕೊಂಡಿರುವ ಯುಜಿಡಿ ಕಾಮಗಾರಿಯಿಂದ ರಸ್ತೆಗಳು ಸಂಪೂರ್ಣ ಹಾಳಾಗಿವೆ. ಕಾಮಗಾರಿ ಪೂರ್ಣಗೊಂಡಿರುವ ಕಡೆ ಗುತ್ತಿಗೆದಾರರು ರಸ್ತೆ ದುರಸ್ತಿ ಮಾಡಬೇಕು. ಇಲ್ಲದಿದ್ದರೆ ಅವರನ್ನು ಕಪ್ಪುಪಟ್ಟಿಗೆ ಸೇರಿಸಿ ಬಿಲ್‌ ತಡೆ ಹಿಡಿಯಲಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.

‘ನಗರದ ಪ್ರತಿ ವಾರ್ಡ್‌ಗೂ ಭೇಟಿ ಕೊಟ್ಟು ಮೂಲಸೌಕರ್ಯ ಸಮಸ್ಯೆಯ ಮಾಹಿತಿ ಪಡೆಯಲಾಗುವುದು. ವಾರ್ಡ್‌ ಭೇಟಿ ವೇಳೆ ನಗರಸಭೆ ಅಧಿಕಾರಿಗಳು ಮತ್ತು ಸದಸ್ಯರು ಜತೆಗಿರುತ್ತಾರೆ. ಸಮಸ್ಯೆ ಪರಿಹಾರಕ್ಕೆ ಶೀಘ್ರವೇ ಕ್ರಮ ಕೈಗೊಳ್ಳಲಾಗುವುದು’ ಎಂದು ಭರವಸೆ ನೀಡಿದರು.

ಪ್ರತಿನಿತ್ಯ ನೀರು: ‘ಶುದ್ಧ ಕುಡಿಯುವ ನೀರಿನ ಘಟಕದಿಂದ ಸಾರ್ವಜನಿಕರಿಗೆ ಪ್ರತಿನಿತ್ಯ ನೀರು ಪೂರೈಸಬೇಕು. ಸ್ವಲ್ಪ ದಿನಕ್ಕೆ ಘಟಕ ತಾಂತ್ರಿಕ ಸಮಸ್ಯೆಯ ನೆಪ ಹೇಳಿ ಸ್ಥಗಿತಗೊಳಿಸಿದರೆ ಸುಮ್ಮನಿರುವುದಿಲ್ಲ. ಜವಾಬ್ದಾರಿಯುವಾಗಿ ಘಟಕ ನಿರ್ವಹಣೆ ಮಾಡಬೇಕು’ ಎಂದು ಸೂಚಿಸಿದರು.

ನಗರಸಭೆ ಸದಸ್ಯೆ ಲಕ್ಷ್ಮಮ್ಮ, ಜೆಡಿಎಸ್ ಜಿಲ್ಲಾ ಘಟಕದ ಉಪಾಧ್ಯಕ್ಷ ಇ.ಗೋಪಾಲ್, ಗುತ್ತಿಗೆದಾರ ಸೊಣ್ಣೇಗೌಡ, ಪಕ್ಷದ ಮುಖಂಡರಾದ ಶ್ರೀಕೃಷ್ಣ, ಎಂ.ಚಂದ್ರಮೌಳಿ, ಶಂಕರ್, ಆರ್.ರಾಮಚಂದ್ರಯ್ಯ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !