ತಂಬಾಕು ಉತ್ಪನ್ನದಿಂದ ಭವಿಷ್ಯ ಸರ್ವ ನಾಶ

7
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಲಹೆಗಾರ ಮಹಮ್ಮದ್‌ ಕಿವಿಮಾತು

ತಂಬಾಕು ಉತ್ಪನ್ನದಿಂದ ಭವಿಷ್ಯ ಸರ್ವ ನಾಶ

Published:
Updated:
Deccan Herald

ಕೋಲಾರ: ‘ತಂಬಾಕು ಉತ್ಪನ್ನಗಳಿಂದ ಭವಿಷ್ಯವೇ ಸರ್ವ ನಾಶವಾಗುತ್ತದೆ. ತಂಬಾಕು ಉತ್ಪನ್ನಗಳ ಸೇವನೆಯು ಜೀವಕ್ಕೆ ಅಪಾಯಕಾರಿ’ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಲಹೆಗಾರ ಪಿ.ಮಹಮ್ಮದ್‌ ಕಿವಿಮಾತು ಹೇಳಿದರು.

ತಂಬಾಕು ಉತ್ಪನ್ನಗಳ ಸೇವನೆಯ ದುಷ್ಪರಿಣಾಮ ಕುರಿತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ತಾಲ್ಲೂಕಿನ ಅರಾಭಿಕೊತ್ತನೂರು ಸರ್ಕಾರಿ ಪ್ರೌಢ ಶಾಲೆಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಪ್ರಬಂಧ ಹಾಗೂ ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಮಾತನಾಡಿದರು.

‘ತಂಬಾಕು ಮತ್ತು ಮಾದಕ ವಸ್ತುಗಳ ಸೇವನೆಯಿಂದ ಆಗುವ ದುಷ್ಪರಿಣಾಮದ ಬಗ್ಗೆ ಜನರಿಗೆ ಹೆಚ್ಚಿನ ಅರಿವಿಲ್ಲ. ಮಾದಕ ವಸ್ತುಗಳ ಸೇವನೆಯು ಸಾವಿನ ಹಾದಿಯ ಪಯಣ. ಜಾಗತಿಕವಾಗಿ ಶೇ 50ರಷ್ಟು ಮಂದಿ ಕ್ಯಾನ್ಸರ್‌ ಕಾಯಿಲೆಗೆ ತುತ್ತಾಗುತ್ತಿದ್ದಾರೆ. ಈ ಪೈಕಿ ಬೆಂಗಳೂರು 3ನೇ ಸ್ಥಾನದಲ್ಲಿದೆ. ಜನ ತಂಬಾಕು ಉತ್ಪನ್ನಗಳ ಸೇವನೆಯಿಂದ ಕ್ಯಾನ್ಸರ್‌ಗೆ ಬಲಿಯಾಗುತ್ತಿದ್ದಾರೆ’ ಎಂದು ಕಳವಳ ವ್ಯಕ್ತಪಡಿಸಿದರು.

ಅದೃಶ್ಯ ಕೊಲೆಗಾರರು: ‘ತಂಬಾಕು ಉತ್ಪನ್ನಗಳು ಮನುಷ್ಯನ ಪಾಲಿಗೆ ಅದೃಶ್ಯದ ಕೊಲೆಗಾರರಿದ್ದಂತೆ. ಆರೋಗ್ಯಕ್ಕೆ ಕಂಟಕಪ್ರಾಯವಾಗಿರುವ ತಂಬಾಕು ಉತ್ಪನ್ನಗಳನ್ನು ಬಹಿಷ್ಕರಿಸುವ ಮೂಲಕ ನೆಮ್ಮದಿಯ ಬದುಕು ಕಟ್ಟಿಕೊಳ್ಳಬೇಕು. ಮಾದಕ ವಸ್ತುಗಳು ಹಾಗೂ ತಂಬಾಕು ಉತ್ಪನ್ನಗಳ ಸೇವನೆಯ ದುಶ್ಚಟದಿಂದ ದೂರವಿದ್ದು, ಆರೋಗ್ಯಕರ ಜೀವನ ನಡೆಸಬೇಕು’ ಎಂದು ಸಲಹೆ ನೀಡಿದರು.

‘ಧೂಮಸಹಿತ ತಂಬಾಕು ಉತ್ಪನ್ನಗಳಾದ ಸಿಗರೇಟ್‌, ಬೀಡಿ, ಸಿಗಾರ್‌ನಲ್ಲಿ ಸುಮಾರು 7 ಸಾವಿರ ಬಗೆಯ ರಾಸಾಯನಿಕ ವಸ್ತುಗಳಿದ್ದು, ಇವು ಶೇ 69ರಷ್ಟು ಕ್ಯಾನ್ಸರ್‌ಕಾರಕ ಅಂಶಗಳನ್ನು ಒಳಗೊಂಡಿವೆ. ಧೂಮರಹಿತ ತಂಬಾಕು ಉತ್ಪನ್ನಗಳಲ್ಲಿ 3,095 ಬಗೆಯ ರಾಸಾಯನಿಕ ವಸ್ತುಗಳಿದ್ದು, ಇವು ಶೇ 28ರಷ್ಟು ಕ್ಯಾನ್ಸರ್‌ಕಾರಕ ಅಂಶಗಳನ್ನು ಒಳಗೊಂಡಿವೆ’ ಎಂದು ವಿವರಿಸಿದರು.

‘ತಂಬಾಕು ಉತ್ಪನ್ನಗಳ ಬಳಕೆಯಿಂದ ಹೃದ್ರೋಗ, ಕ್ಯಾನ್ಸರ್‌, ಪಾರ್ಶ್ವವಾಯು ಬರುತ್ತದೆ. ಅಲ್ಲದೇ, ಶ್ವಾಸಕೋಶ ಹಾಗೂ ಉಸಿರಾಟ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಜ್ಞಾಪಕ ಶಕ್ತಿ ಸಹ ಕಡಿಮೆಯಾಗುತ್ತದೆ. ಧೂಮಪಾನದಿಂದ ಮನುಷ್ಯನ ಆಯಸ್ಸು ಕಡಿಮೆಯಾಗುತ್ತದೆ ಎಂಬ ಸಂಗತಿ ವೈಜ್ಞಾನಿಕ ಸಂಶೋಧನೆಯಿಂದ ದೃಢಪಟ್ಟಿದೆ’ ಎಂದು ಮಾಹಿತಿ ನೀಡಿದರು.

ಸಾಕಷ್ಟು ನಿರ್ಬಂಧ: ‘ಸಿಗರೇಟ್ ಮತ್ತು ಇತರೆ ತಂಬಾಕು ಉತ್ಪನ್ನಗಳ ಕಾಯ್ದೆಯು (ಕೋಟ್ಪಾ) ತಂಬಾಕು ಉತ್ಪನ್ನಗಳ ಉತ್ಪಾದನೆ, ಜಾಹೀರಾತು, ಸರಬರಾಜು, ಮಾರಾಟ ಮತ್ತು ಬಳಕೆಗೆ ಸಂಬಂಧಪಟ್ಟಂತೆ ಸಾಕಷ್ಟು ನಿರ್ಬಂಧ ವಿಧಿಸಿದೆ. ಈ ಕಾಯ್ದೆ ಅನ್ವಯ ಸಾರ್ವಜನಿಕ ಸ್ಥಳದಲ್ಲಿ ಧೂಮಪಾನ ಮಾಡುವಂತಿಲ್ಲ. ಶಾಲೆಯಿಂದ 100 ಮೀಟರ್ ಅಂತರದಲ್ಲಿ ತಂಬಾಕು ಉತ್ಪನ್ನ ಮಾರುವಂತಿಲ್ಲ. ಪೋಷಕರು ಮಕ್ಕಳಿಂದ ಬೀಡಿ, ಸಿಗರೇಟು ತರಿಸಬಾರದು’ ಎಂದು ಹೇಳಿದರು.

ಪ್ರಬಂಧ ಸ್ಪರ್ಧೆಯಲ್ಲಿ ಅನುಶ್ರೀ, ಚಂದನಾ, ಸುಪ್ರಿಯಾ ಮತ್ತು ಚಿತ್ರಕಲಾ ಸ್ಪರ್ಧೆಯಲ್ಲಿ ಎನ್.ನವೀನ್‌ಕುಮಾರ್, ಆರ್.ಸಿಂಧು, ಮನುಪ್ರಸಾದ್ ಕ್ರಮವಾಗಿ ಪ್ರಥಮ, ದ್ವಿತೀಯ, ತೃತೀಯ ಬಹುಮಾನ ಪಡೆದರು. ಶಾಲೆಯ ಶಿಕ್ಷಕರಾದ ಎಸ್.ಅನಂತಪದ್ಮನಾಭ್, ಎಸ್‌.ಸತೀಶ್, ಭವಾನಿ, ಶ್ವೇತಾ, ಸುಗುಣಾ, ಲೀಲಾ, ವೆಂಕಟರೆಡ್ಡಿ, ಫರೀದಾ, ಶ್ರೀನಿವಾಸಲು, ಡಿ.ಚಂದ್ರಶೇಖರ್ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !