ಜಿಲ್ಲಾ ಆಸ್ಪತ್ರೆಯಲ್ಲಿ ವೈದ್ಯರ ಗೈರು: ರೋಗಿಗಳ ನರಳಾಟ

7

ಜಿಲ್ಲಾ ಆಸ್ಪತ್ರೆಯಲ್ಲಿ ವೈದ್ಯರ ಗೈರು: ರೋಗಿಗಳ ನರಳಾಟ

Published:
Updated:
Deccan Herald

ಕೋಲಾರ: ನರಕ ಚತುರ್ದಶಿ ಹಾಗೂ ದೀಪಾವಳಿ ಹಬ್ಬದ ಸರಣಿ ರಜೆ ಹಿನ್ನೆಲೆಯಲ್ಲಿ ಇಲ್ಲಿನ ಶ್ರೀ ನರಸಿಂಹರಾಜ (ಎಸ್‌ಎನ್‌ಆರ್‌) ಜಿಲ್ಲಾ ಆಸ್ಪತ್ರೆಯಲ್ಲಿ ಬಹುಪಾಲು ವೈದ್ಯರು ಬುಧವಾರ ಕರ್ತವ್ಯಕ್ಕೆ ಗೈರಾಗಿದ್ದರಿಂದ ರೋಗಿಗಳಿಗೆ ಸಕಾಲಕ್ಕೆ ಚಿಕಿತ್ಸೆ ಸಿಗದೆ ನರಳಾಡಿದರು.

ಜಿಲ್ಲಾ ಕೇಂದ್ರದ ಈ ಆಸ್ಪತ್ರೆಯಲ್ಲಿ ಪ್ರತಿನಿತ್ಯದಂತೆ ರೋಗಿಗಳ ಸಂಖ್ಯೆ ಹೆಚ್ಚಿನ ಪ್ರಮಾಣದಲ್ಲಿತ್ತು. ಆದರೆ, ಆಸ್ಪತ್ರೆಯ 37 ವೈದ್ಯರ ಪೈಕಿ 13 ಮಂದಿ ಮಾತ್ರ ಕರ್ತವ್ಯಕ್ಕೆ ಹಾಜರಾಗಿದ್ದರು. ಮತ್ತೊಂದೆಡೆ ನರ್ಸ್‌ಗಳು ಹಾಗೂ ಕೆಳ ಹಂತದ ವೈದ್ಯಕೀಯ ಸಿಬ್ಬಂದಿಯು ರಜೆ ಮೇಲೆ ತೆರಳಿದ್ದರು. ಹಲವು ವಿಭಾಗಗಳು ಸಿಬ್ಬಂದಿ ಇಲ್ಲದೆ ಭಣಗುಡುತ್ತಿದ್ದವು.

ವೈದ್ಯರು ಕರ್ತವ್ಯಕ್ಕೆ ಬರಬಹುದೆಂದು ರೋಗಿಗಳು ಹಾಗೂ ಸಂಬಂಧಿಕರು ಆಸ್ಪತ್ರೆಯಲ್ಲಿ ಗಂಟೆಗಟ್ಟಲೇ ಕಾದು ಕುಳಿತಿದ್ದ ದೃಶ್ಯ ಕಂಡುಬಂತು. ಮಧ್ಯಾಹ್ನ 1 ಗಂಟೆಯಾದರೂ ವೈದ್ಯರು ಬಾರದಿದ್ದರಿಂದ ಕೆಲ ರೋಗಿಗಳು ಖಾಸಗಿ ಆಸ್ಪತ್ರೆಗಳತ್ತ ಮುಖ ಮಾಡಿದರು. ನರ್ಸ್‌ಗಳು ಆಸ್ಪತ್ರೆಗೆ ರಜೆ ಎಂಬ ಕಾರಣ ಹೇಳಿ ರೋಗಿಗಳನ್ನು ವಾಪಸ್‌ ಕಳುಹಿಸಿದರು.

ಚಿಕಿತ್ಸೆ ಸಿಗದೆ ತೊಂದರೆ: ವಿದ್ಯುತ್‌ ಪ್ರವಹಿಸಿ ತೀವ್ರವಾಗಿ ಗಾಯಗೊಂಡಿದ್ದ ಬಂಗಾರಪೇಟೆ ತಾಲ್ಲೂಕಿನ ತ್ಯಾರನಹಳ್ಳಿ ಗ್ರಾಮದ ರೈತ ರಮೇಶ್‌ ಅವರನ್ನು ಕುಟುಂಬ ಸದಸ್ಯರು ಮಂಗಳವಾರ ಸಂಜೆಯೇ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ವೈದ್ಯರು ರಜೆಯಿದ್ದ ಕಾರಣ ಅವರಿಗೆ ಸಕಾಲಕ್ಕೆ ಚಿಕಿತ್ಸೆ ಸಿಗದೆ ತೀವ್ರ ತೊಂದರೆ ಅನುಭವಿಸಿದರು.

ನರ್ಸ್‌ಗಳು ರಮೇಶ್‌ ಅವರನ್ನು ತೀವ್ರ ನಿಗಾ ಘಟಕದಲ್ಲಿ ಇರಿಸಿದ್ದರು. ಆದರೆ, ಬುಧವಾರ ಮಧ್ಯಾಹ್ನದವರೆಗೂ ಯಾವುದೇ ವೈದ್ಯರು ಅವರಿಗೆ ಚಿಕಿತ್ಸೆ ನೀಡಲಿಲ್ಲ. ಈ ಸಂಬಂಧ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಸದಸ್ಯರು ಜಿಲ್ಲಾ ಶಸ್ತ್ರಚಿಕಿತ್ಸಕರಿಗೆ ಕರೆ ಮಾಡಿ ದೂರು ನೀಡಿದರು.

‘ಆಸ್ಪತ್ರೆಗೆ ಸರ್ಕಾರಿ ರಜೆ ಇಲ್ಲದಿದ್ದರೂ ಬಹುಪಾಲು ವೈದ್ಯರು ಕರ್ತವ್ಯಕ್ಕೆ ಗೈರಾಗಿದ್ದಾರೆ. ಈ ಸಂಬಂಧ ದೂರು ನೀಡಲು ಜಿಲ್ಲಾ ಶಸ್ತ್ರಚಿಕಿತ್ಸಕರ ಕೊಠಡಿಗೆ ಹೋದಾಗ ಅವರು ಸಹ ಲಭ್ಯರಿರಲಿಲ್ಲ. ಬಳಿಕ ಅವರ ಮೊಬೈಲ್‌ಗೆ ಕರೆ ಮಾಡಿ ವೈದ್ಯರ ಗೈರಿನ ಬಗ್ಗೆ ದೂರು ಹೇಳಿದೆವು’ ಎಂದು ರೈತ ಸಂಘ ಜಿಲ್ಲಾ ಘಟಕದ ಅಧ್ಯಕ್ಷ ರಾಮೇಗೌಡ ‘ಪ್ರಜಾವಾಣಿ’ಗೆ ತಿಳಿಸಿದರು.

ಬರಹ ಇಷ್ಟವಾಯಿತೆ?

 • 1

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !