‘ಥಗ್ಸ್’ ಕಣ್ಣಂಚಿಗೆ ‘ಪೈರೇಟ್ಸ್’ ಕಾಡಿಗೆ!

7

‘ಥಗ್ಸ್’ ಕಣ್ಣಂಚಿಗೆ ‘ಪೈರೇಟ್ಸ್’ ಕಾಡಿಗೆ!

Published:
Updated:
Deccan Herald

ಚಿತ್ರ: ಥಗ್ಸ್ ಆಫ್ ಹಿಂದೂಸ್ತಾನ್ (ಹಿಂದಿ)
ನಿರ್ಮಾಣ: ಆದಿತ್ಯ ಚೋಪ್ರಾ
ನಿರ್ದೇಶನ: ವಿಜಯ್ ಕೃಷ್ಣ ಆಚಾರ್ಯ
ತಾರಾಗಣ: ಅಮಿತಾಭ್ ಬಚ್ಚನ್, ಅಮೀರ್ ಖಾನ್, ಫಾತಿಮಾ ಸನಾ ಶೇಖ್, ಲಾರ್ಡ್ ಓವೆನ್, ಕತ್ರಿನಾ ಕೈಫ್

‘ಪೈರೇಟ್ಸ್ ಆಫ್‌ ದಿ ಕೆರೇಬಿಯನ್’ ಸಿನಿಮಾ ಪಾತ್ರಧಾರಿ ಜಾಕ್ ಆಫ್ ಸ್ಪ್ಯಾರೊ ಕಣ್ಣ ಕಾಡಿಗೆ ಗಮನಿಸಿರುವಿರೇ? ಅದನ್ನು ನಿರ್ದೇಶಕ ವಿಜಯ್ ಕೃಷ್ಣ ಆಚಾರ್ಯ ಯಥಾವತ್ತು ಕಿತ್ತುತಂದು ಅಮೀರ್ ಖಾನ್ ಕಣ್ಣಿಗಿಟ್ಟಿದ್ದಾರೆ. ಅಮಿತಾಭ್ ಬಚ್ಚನ್ ತಲೆಮೇಲೆ ಸದಾ ಸದ್ದು ಮಾಡುತ್ತಾ ಹಾರುವ ರಣಹದ್ದು. ‘ಪೈರೇಟ್ಸ್ ಆಫ್‌ ದಿ ಕೆರೇಬಿಯನ್’ ಕಿವಿಗೆ ಹೇಗೆ ಧ್ವನಿಸುವುದೋ ‘ಥಗ್ಸ್ ಆಫ್ ಹಿಂದೂಸ್ತಾನ್’ ಹಾಗೆಯಷ್ಟೆ ಧ್ವನಿಸಬಹುದು. ಆದರೆ, ಅದರಷ್ಟು ನಯನಾನಂದ ಇದರಲ್ಲಿ ಸಾಧ್ಯವಿಲ್ಲ.

ಬಾಲಿಶ ಎನ್ನುವ ಪದವನ್ನು ಕುರ್ಚಿ ಅಡಿ ಹಾಕಿಕೊಂಡು ಕೂತರೆ ನೋಡುಗ ಗೆದ್ದಂತೆ. ಪಿಳಿ ಪಿಳಿ ಕಣ್ಣುಬಿಡುತ್ತಾ ಮಕ್ಕಳಾಗಿ ನೋಡಿದರಷ್ಟೇ ಇಂಥ ‘ಫ್ಯಾಂಟಸಿ’ ಕಥನವನ್ನು ಒಳಗಿಳಿಸಿಕೊಳ್ಳಲಾದೀತು.

ಹತ್ತೊಂಬತ್ತನೇ ಶತಮಾನದ ಆದಿಯೊಳೊಂದು ಕಥೆ. ಬ್ರಿಟಿಷ್ ವಸಾಹತುವಿನ ಮಾಲೀಕನ ಮೇಲೆ ರಾಜಕುವರಿಗೆ ಸೇಡು. ರಾಜಕುವರಿಯ ಪಾತ್ರದಲ್ಲಿ ಫಾತಿಮಾ. ಅವಳ ಪಾಲಕ ಅದಕ್ಕೆಂದೇ ದರೋಡೆಕೋರನಾಗಿದ್ದಾನೆ. ಅವನದ್ದೂ ಒಂದು ಜನಮುಖಿ ಸಾಮ್ರಾಜ್ಯ; ಅಲ್ಲಿ ಅನುಕೂಲ ಪಡೆದ ಜನರು ಕಾಣುವುದಿಲ್ಲ ಎನ್ನುವುದು ಬೇರೆ ಮಾತು. ಇಳಿವಯಸ್ಸಿನಲ್ಲೂ ಸಮುದ್ರದ ಮಧ್ಯೆ ಹಡಗುಗಳಲ್ಲೇ ಎಲ್ಲೆಂದೆಲ್ಲಿಗೋ ಜಿಗಿಯುತ್ತಾ ಶತ್ರು ಸಂಹಾರ ಮಾಡಬಲ್ಲ ಗಟ್ಟಿಗನೀ ಅಜ್ಜ. ಅವನ ಹೆಸರು ‘ಆಜಾದ್’ ಅರ್ಥಾತ್ ಸ್ವಾತಂತ್ರ್ಯ. ಅವನ ಸೇನೆಯವರೆಲ್ಲರ ಹೆಸರೂ ಅದೇ. ಇಂಥ ಮಹಾಸಾಹಸಿ ಪಾತ್ರದಲ್ಲಿ ಅಮಿತಾಭ್. ಅವನನ್ನು ಬ್ರಿಟಿಷರಿಗೆ ಹಿಡಿದು ಕೊಡಲು ಫರಂಗಿ ಹೆಸರಿನ ಇನ್ನೊಂದು ಪಾತ್ರ ಭೂಮಿಗಿಳಿಯುತ್ತದೆ. ಅದೇ ಕಣ್ಣಕಾಡಿಗೆಯ ಅಮೀರ್ ಖಾನ್.

ಅಮೀರ್ ವಾಹನ ಕತ್ತೆ. ಆಗೀಗ ಶರಾಬಿನ ಹಂಗು. ಭವಿಷ್ಯ ನುಡಿಯುವ ಮಂಕುದಿಣ್ಣೆಯಂಥ ಅವನ ಸ್ನೇಹಿತನೂ ಅಪರಾ ತಪರಾ. ಅಮೀರ್ ಅರ್ಥಾತ್ ಫಿರಂಗಿ ನರ್ತಕಿ ಸುರಯ್ಯಾ ಕೈಯಿಂದ ಕಪಾಳಮೋಕ್ಷ ಮಾಡಿಸಿಕೊಳ್ಳುವುದರಲ್ಲೂ ಸುಖ ಕಾಣಬಲ್ಲ. ದಗಲಬಾಜಿತನದಲ್ಲಿ ಎತ್ತಿದ ಕೈ ತನ್ನದು ಎಂದು ಹೇಳುತ್ತಲೇ ಆಜಾದ್ ಜೇನುಗೂಡಿಗೆ ಕಲ್ಲು ಹೊಡೆದು ನಗುವವ. ‘ಆಜಾದನ ಅಡ್ಡೆ’ಯೊಳಗೇ ನುಗ್ಗಿ ಅವನ ಹೃದಯವನ್ನೇ ಗೆಲ್ಲುವ ಕಳ್ಳ...

ಹೀಗೆಲ್ಲ ಕಥೆ ಕೇಳುತ್ತಾ ಹೋದರೆ ಯಾವುದೋ ಜನಪದ ನೆನಪಾಗಲಿಕ್ಕೆ ಸಾಕು. ಆದರೆ, ಸಿನಿಮಾದಲ್ಲಿ ಅಂಥ ದೊಡ್ಡ ಉದ್ದೇಶವೇನೂ ಕಾಣದು. ಸೆಕೆಂಡಿಗಿಷ್ಟು ಫ್ರೇಮುಗಳು ಎಂಬ ಲೆಕ್ಕಾಚಾರದಲ್ಲಿ ನಿರ್ದೇಶಕರು ಸ್ಲೋಮೋಷನ್ನಿನಲ್ಲಿ ತೋರುವ ಹೊಡೆದಾಟಗಳನ್ನು ವಿಡಿಯೊ ಗೇಮ್ ನೋಡುವಂದದಿ ಕಣ್ತುಂಬಿಕೊಳ್ಳಲು ಅಡ್ಡಿಯಿಲ್ಲ. ಇಷ್ಟು ವಯಸ್ಸಾಗಿರುವ ಅಮಿತಾಭ್ ಮೂಗಿನ ಮೇಲೆ ಈಗಲೂ ‘ಆ್ಯಂಗ್ರಿ ಯಂಗ್ ಮ್ಯಾನ್’ ಅನ್ನು ತಂದು ಕೂರಿಸಿರುವ ನಿರ್ದೇಶಕರ ವಿಶ್ವಾಸಕ್ಕೆ ತಬ್ಬಿಬ್ಬಾಗದೆ ವಿಧಿಯಿಲ್ಲ.

ಗಜಿಬಿಜಿ ಕಥನದಲ್ಲಿನ ವಿಪರೀತ ತಿರುವುಗಳಲ್ಲಿ ಪಾತ್ರಗಳ ವರ್ತನೆಯೇ ಕಳೆದುಹೋಗುತ್ತದೆ. ಮಂದಬೆಳಕಿನಲ್ಲಿ ಅಮೀರ್ ಚೆಂದವೋ, ಫಾತಿಮಾ ಚೆಂದವೋ ಹೇಳಲಾಗದು. ಅಮಿತಾಭ್ ಹೂಂಕಾರ, ಅಮೀರ್ ಕುಹಕ ನಗೆಯ ಒಳಾರ್ಥ ಕೂಡ ದಕ್ಕದು. ಹೀಗಾಗಿ ಎಲ್ಲರ ಅಭಿನಯ ಸಾಮರ್ಥ್ಯವಿಲ್ಲಿ ವೇಸ್ಟು. ಕತ್ರಿನಾ ನೃತ್ಯದ ಕೆಲವು ಚಲನೆಗಳು ಬಿಟ್ಟ ಕಣ್ಣು ಬಿಡುವ ಹಾಗೆ ಮಾಡುತ್ತವೆ.

ಅಜಯ್–ಅತುಲ್ ಸಂಗೀತದ ಹಾಡುಗಳು ಗಾಳಿಯಲ್ಲಿ ತೇಲಿಹೋಗುತ್ತವೆ. ‘ಮ್ಯೂಟ್’ ಮಾಡಿಕೊಂಡು ನೋಡಿದರೆ ಸಿನಿಮಾದಲ್ಲಿ ಏನೂ ಉಳಿಯುವುದಿಲ್ಲ ಎಂಬಂಥ ಹಿನ್ನೆಲೆ ಸಂಗೀತವನ್ನು ಜಾನ್ ಸ್ಟಿವರ್ಟ್ ಎಜುರಿ ನೀಡಿದ್ದಾರೆ. ಮನುಷ್ ನಂದನ್ ಸಿನಿಮಾಟೊಗ್ರಫಿ ಹಾಗೂ ಗ್ರಾಫಿಕ್ ತಂತ್ರಗಳ ನಡುವಿನ ಗೆರೆ ಹುಡುಕುವುದೂ ಕಷ್ಟ ಕಷ್ಟ.

ಇಂಥ ಮಂಕು ಸಿನಿಮಾದಲ್ಲೂ ಒಂದು ಬೆಳಕಿನಂಥ ದೃಶ್ಯವಿದೆ. ಅಮಿತಾಭ್ ಬರಡು ನೆಲವನ್ನು ಉತ್ತುತ್ತಿರುತ್ತಾರೆ. ‘ಇಲ್ಲಿ ಏನು ಬೆಳೆಯುವೆ’–ಅಮೀರ್ ಪ್ರಶ್ನೆ. ‘ಕನಸುಗಳನ್ನು ಬೆಳೆಯುತ್ತಿರುವೆ; ಸೇರಿಕೊಳ್ಳುವೆಯಾ’ ಎಂದು ಅಮಿತಾಭ್ ಆಹ್ವಾನಿಸುತ್ತಾರೆ. ಅವರೊಟ್ಟಿಗೆ ಬಿತ್ತನೆ ಕಾರ್ಯಕ್ಕೆ ಅಮೀರ್. ಆಮೇಲೆ ಒಂದೆರಡು ಮೊಳಕೆಗಳು ಅಲ್ಲಿ ಕಾಣುತ್ತವೆ. ಅವುಗಳ ಸಂಖ್ಯೆ ಹೆಚ್ಚಾಗಿದ್ದಿದ್ದರೆ ಸಿನಿಮಾ ಮೇಲೇಳುತ್ತಿತ್ತೋ ಏನೋ?

ಬರಹ ಇಷ್ಟವಾಯಿತೆ?

 • 9

  Happy
 • 7

  Amused
 • 1

  Sad
 • 0

  Frustrated
 • 3

  Angry

Comments:

0 comments

Write the first review for this !