ಮಧ್ಯಮವೇಗಿಗಳಿಗೆ ಐಪಿಎಲ್‌ನಿಂದ ವಿಶ್ರಾಂತಿ: ಕೊಹ್ಲಿ ಮನವಿ

7

ಮಧ್ಯಮವೇಗಿಗಳಿಗೆ ಐಪಿಎಲ್‌ನಿಂದ ವಿಶ್ರಾಂತಿ: ಕೊಹ್ಲಿ ಮನವಿ

Published:
Updated:

ನವದೆಹಲಿ: ಮುಂದಿನ ವರ್ಷ ಇಂಗ್ಲೆಂಡ್‌ನಲ್ಲಿ ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ನಡೆಯಲಿದೆ. ಅದರಲ್ಲಿ ಆಡುವ ಭಾರತ ತಂಡದ ಮಧ್ಯಮವೇಗದ ಬೌಲರ್‌ಗಳಿಗೆ ಇಂಡಿಯನ್ ಪ್ರೀಮಿಯರ್ ಲೀಗ್‌ನಿಂದ ವಿಶ್ರಾಂತಿ ನೀಡಬೇಕು ಎಂದು ನಾಯಕ ವಿರಾಟ್ ಕೊಹ್ಲಿ ಅವರು ಆಡಳಿತಾಧಿಕಾರಿಗಳ ಸಮಿತಿ (ಸಿಒಎ)ಗೆ ಮನವಿ ಮಾಡಿದ್ದಾರೆ.

ಹೈದರಾಬಾದ್‌ನಲ್ಲಿ ಈಚೆಗೆ ನಡೆದಿದ್ದ ಸಭೆಯಲ್ಲಿ ಅವರು ಈ ಮನವಿಯನ್ನು ಸಲ್ಲಿಸಿದ್ದರು. ಮಧ್ಯಮವೇಗಿಗಳಾದ ಜಸ್‌ಪ್ರೀತ್ ಬೂಮ್ರಾ ಮತ್ತು ಭುವನೇಶ್ವರ್ ಕುಮಾರ್ ಅವರಿಗೆ ಐಪಿಎಲ್‌ನಲ್ಲಿ ಆಡಿಸಬಾರದು. ವಿಶ್ವಕಪ್ ಟೂರ್ನಿಯಲ್ಲಿ ಅವರ ಪಾತ್ರ ಮಹತ್ವದ್ದು ಎಂದು ಹೇಳಿದ್ದಾರೆ. ಇದರಿಂದಾಗಿ ಈ ಬೌಲರ್‌ಗಳು ಪ್ರತಿನಿಧಿಸುವ ಐಪಿಎಲ್ ಫ್ರ್ಯಾಂಚೈಸ್‌ಗಳು ಅಸಮಾಧಾನ ವ್ಯಕ್ತಪಡಿಸಿವೆ ಎನ್ನಲಾಗಿದೆ.

‘ಮುಂದಿನ ವರ್ಷದ ಮಾರ್ಚ್‌ 29ರಿಂದ ಮೇ 19ರವರೆಗೆ ಐಪಿಎಲ್  ಟೂರ್ನಿ ನಡೆಯಲಿದೆ. ಅದಾಗಿ ಹದಿನೈದು ದಿನಗಳ ನಂತರ ಇಂಗ್ಲೆಂಡ್‌ ನಲ್ಲಿ ವಿಶ್ವಕಪ್ ಟೂರ್ನಿ ನಡೆಯಲಿದೆ. ಜೂನ್‌ ಐದರಂದು  ದಕ್ಷಿಣ ಆಫ್ರಿಕಾ ತಂಡವನ್ನು ಭಾರತ ಎದುರಿಸುವ ಮೂಲಕ ಅಭಿಯಾನ ಆರಂಭಿಸಲಿದೆ. ಆದ್ದರಿಂದ ಮಧ್ಯಮವೇಗಿಗಳು ಐಪಿಎಲ್‌ನಲ್ಲಿ ಆಡದಿರುವುದು ಸೂಕ್ತ’ ಎಂದು ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 

ಆ ಸಭೆಯಲ್ಲಿ ತಂಡದ ಉಪನಾಯಕ ರೋಹಿತ್ ಶರ್ಮಾ ಕೂಡ ಹಾಜರಿದ್ದರು. ಅವರು ನಾಯಕತ್ವ ವಹಿಸುವ ಮುಂಬೈ ಇಂಡಿಯನ್ಸ್‌ ತಂಡದಲ್ಲಿ ಜಸ್‌ಪ್ರೀತ್ ಬೂಮ್ರಾ ಆಡುತ್ತಾರೆ.

‘ವಿರಾಟ್ ಮನವಿಗೆ ಸಂಬಂಧಿಸಿದಂತೆ ರೋಹಿತ್ ಅವರ ಅಭಿಪ್ರಾಯವನ್ನು ಸಿಒಎ ಮುಖ್ಯಸ್ಥ ವಿನೋದ್ ರಾಯ್ ಪಡೆದುಕೊಂಡರು. ಒಂದೊಮ್ಮೆ ಮುಂಬೈ ತಂಡವು ಐಪಿಎಲ್‌ನಲ್ಲಿ ಪ್ಲೇಆಫ್ ಅಥವಾ ಫೈನಲ್‌ ತಲುಪಿದರೆ ಬೂಮ್ರಾ ಅವರನ್ನು ಆಡಿಸುವುದು ಮುಖ್ಯವಾಗುತ್ತದೆ. ಅವರು ಫಿಟ್‌ ಆಗಿದ್ದರೆ ವಿಶ್ರಾಂತಿ ನೀಡಲಾಗುವುದಿಲ್ಲವೆಂದು ಹೇಳಿದ್ದರು. ಇದು ವಿರಾಟ್ ಅವರ ಸಲಹೆಗೆ ವ್ಯತಿರಿಕ್ತವಾದ ಹೇಳಿಕೆಯಂತಿತ್ತು’ ಎಂದು ಸಭೆಯಲ್ಲಿದ್ದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !