ಟಿಪ್ಪು ಜಯಂತಿ: ದೇಶದ ಏಕತೆ ಕಾಪಾಡಲು ಒಟ್ಟಾಗಿ– ಸಚಿವ ಎನ್‌.ಎಚ್.ಶಿವಶಂಕರರೆಡ್ಡಿ

7

ಟಿಪ್ಪು ಜಯಂತಿ: ದೇಶದ ಏಕತೆ ಕಾಪಾಡಲು ಒಟ್ಟಾಗಿ– ಸಚಿವ ಎನ್‌.ಎಚ್.ಶಿವಶಂಕರರೆಡ್ಡಿ

Published:
Updated:
Deccan Herald

ಚಿಕ್ಕಬಳ್ಳಾಪುರ: ‘ಇವತ್ತು ಕೆಲ ಕೋಮುವಾದಿ ಶಕ್ತಿಗಳು ಸಮಾಜ ಒಡೆಯುವ, ಸಾಮರಸ್ಯ ಹಾಳು ಮಾಡುವ, ಧರ್ಮ ಧರ್ಮಗಳ ನಡುವೆ ದ್ವೇಷ ಹುಟ್ಟಿಸಿ, ಸಂಘರ್ಷಕ್ಕೆ ಎಡೆಮಾಡಿಕೊಡುತ್ತಿವೆ. ಇದನ್ನು ಹಿಮ್ಮೆಟ್ಟಿಸಲು ಎಲ್ಲ ಧರ್ಮೀಯರು ಒಗ್ಗಟ್ಟಾಗಿ ದೇಶದ ಏಕತೆ ಕಾಪಾಡಬೇಕಾಗಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್‌.ಎಚ್.ಶಿವಶಂಕರರೆಡ್ಡಿ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ನಗರದಲ್ಲಿ ಶನಿವಾರ ಆಯೋಜಿಸಿದ್ದ ಟಿಪ್ಪು ಸುಲ್ತಾನ್ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಸ್ವಾತಂತ್ರ್ಯ ಸಂಗ್ರಾಮಕ್ಕಾಗಿ ಹೋರಾಡಿದವರನ್ನು ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯ. ಅದರಂತೆ ಇವತ್ತು ದೇಶ, ರಾಜ್ಯದಲ್ಲಿ ಅನೇಕ ಮಹಾಪುರುಷರ ಜಯಂತಿಗಳನ್ನು ಆಚರಿಸುತ್ತಿದ್ದೇವೆ. ಟಿಪ್ಪು ಮೊದಲ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಬ್ರಿಟಿಷರ ಹೋರಾಡಿದ ಧೀರ ನಾಯಕ ಎಂದು ಇತಿಹಾಸದಲ್ಲಿ ದಾಖಲಾಗಿದೆ. ಅದಕ್ಕಾಗಿ ಅವರ ಜಯಂತಿ ಆಚರಿಸುತ್ತಿದ್ದೇವೆ ವಿನಾ ಇದು ಯಾವುದೇ ವರ್ಗಕ್ಕೆ ಸೀಮಿತವಾಗಿ, ಮತ್ತೊಂದು ಜನಾಂಗಕ್ಕೆ ನೋವುಂಟು ಮಾಡುವ ಆಚರಣೆಯಲ್ಲ’ ಎಂದು ತಿಳಿಸಿದರು.

‘ಟಿಪ್ಪು ಕಂದಾಯ ಇಲಾಖೆ ಸೇರಿದಂತೆ ಅನೇಕ ಇಲಾಖೆಗಳಲ್ಲಿ ಆಮೂಲಾಗ್ರ ಬದಲಾವಣೆ ತಂದರು. ರಾಕೆಟ್ ತಂತ್ರಜ್ಞಾನ ಪ್ರಪಂಚಕ್ಕೆ ಪರಿಚಯಿಸುವ ಕೆಲಸ ಮಾಡಿದರು. ದೇಶ ಮತ್ತು ಸಮಾಜಕ್ಕಾಗಿ ಉಡುಗೊರೆ ನೀಡಿದರು. ಎಲ್ಲರನ್ನೂ ಒಟ್ಟಿಗೆ ಕರೆದುಕೊಂಡು ಹೋಗುವ ಕೆಲಸವನ್ನು ಮಾಡಿದ್ದರು’ ಎಂದರು.

‘ದೇಶವನ್ನು ಜಾತ್ಯತೀತ ತತ್ವದಡಿ ರಚಿಸಲಾಗಿದೆ. ಇಲ್ಲಿ ಎಲ್ಲ ಜಾತಿಯವರೂ ಸಮಾನವಾದ ಅವಕಾಶ ಹೊಂದಿದ್ದಾರೆ. ಬಹಳಷ್ಟು ದಶಕಗಳಿಂದ ಸಮಾಜದಲ್ಲಿ ಉತ್ತಮ ಸಾಮರಸ್ಯ, ಭಾಂದವ್ಯ ಕಾಪಾಡಿಕೊಂಡು ಬಂದಿದ್ದೇವೆ. ಆದರೆ ಇತ್ತೀಚಿನ ದಿನಗಳಲ್ಲಿ ಧಾರ್ಮಿಕ ಭಾವನೆಗಳನ್ನು ಕೆದಕುವುದು, ನಂಬಿಕೆಗಳನ್ನು ಸಂಶಯದಿಂದ ನೋಡುವುದು, ಸಮಾಜದ ಸಾಮರಸ್ಯ ಹಾಳು ಮಾಡುವಂತಹ ಪ್ರಯತ್ನಗಳು ನಡೆಯುತ್ತಿರುವುದು ದುರ್ದೈವ’ ಎಂದು ವಿಷಾದಿಸಿದರು.

‘ಬಡವರು, ಶೋಷಿತರು, ಅಲ್ಪಸಂಖ್ಯಾತರಿಗೆ ಈ ದೇಶದಲ್ಲಿ ಬದುಕುವ ಹಕ್ಕಿಲ್ಲವೇ ಎನ್ನುವ ರೀತಿಯಲ್ಲಿ ಬೆಳವಣಿಗೆಗಳು ನಡೆಯುತ್ತಿವೆ. ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕವಾಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಹಾಗಾಗಿ, ನಾವೆಲ್ಲರೂ ಒಂದಾಗಿ ಧಾರ್ಮಿಕ ಭಾವನೆಗಳಿಗೆ, ಕುಚೋದ್ಯ ಶಕ್ತಿಗಳಿಗೆ ಮಣಿಯದೆ ಒಟ್ಟಾಗಿ ದೇಶದ ಸಾಮರಸ್ಯ ಕಾಪಾಡುವ ಕೆಲಸ ಮಾಡಬೇಕು’ ಎಂದು ಹೇಳಿದರು.

ಶಾಸಕ ಡಾ.ಕೆ.ಸುಧಾಕರ್ ಮಾತನಾಡಿ, ‘ರಾಜ್ಯ ಸರ್ಕಾರ ಜಾತಿ, ಧರ್ಮಾತೀತವಾಗಿ ಅನೇಕ ಸಮಾಜ ಸುಧಾಕರ ಜಯಂತಿ ಆಚರಿಸುತ್ತ ಬರುತ್ತಿದೆ. ಅವರ ಆಶಯಗಳನ್ನು ಹೊಸ ತಲೆಮಾರು ಅಳವಡಿಸಿಕೊಂಡು ಬದುಕಿ ಸಮಾಜವನ್ನು ಸುಸ್ಥಿರಗೊಳಿಸಬೇಕು ಎಂಬ ಸದುದ್ದೇಶದಿಂದ ಇದರ ಹಿಂದಿದೆ. ಆದರೆ ರಾಜ್ಯದಲ್ಲಿ ಟಿಪ್ಪು ಜಯಂತಿಗೆ ಕೆಲವರು ರಾಜಕೀಯ ಉದ್ದೇಶದಿಂದ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಹೊರತು ಅವರ ಆರೋಪಗಳಲ್ಲಿ ಸತ್ಯಾಂಶವಿಲ್ಲ’ ಎಂದು ಆರೋಪಿಸಿದರು.

‘ಟಿಪ್ಪು ಸುಲ್ತಾನ್ ಅವರು ದೇಶಕ್ಕಾಗಿ ಹೋರಾಡಿ ಮಡಿದ ಅಪ್ರತಿಮ ಭಾರತೀಯ. ಬ್ರಿಟಿಷರ ಆಳ್ವಿಕೆ ಚೆನ್ನಾಗಿತ್ತು ಎಂದು ಹೇಳಿದವರು, ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಳ್ಳದವರು ಇವತ್ತು ಟಿಪ್ಪು ಜಯಂತಿ ವಿರೋಧಿಸುತ್ತಿದ್ದಾರೆ. ಯುದ್ಧದಲ್ಲಿ ಪ್ರಾಣ ಹಾನಿ ಸಹಜ. ಆದರೆ ಕೆಲವರು ಇತಿಹಾಸದಲ್ಲಿ ನಡೆದಿರುವ ಕರಾಳ ಘಟನೆಗಳನ್ನು ವರ್ತಮಾನದಲ್ಲಿ ನೆನಪಿಸಿ ಉದ್ದೇಶಪೂರ್ವಕವಾಗಿ ವಿರೋಧ ಮಾಡುತ್ತಿದ್ದಾರೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಟಿಪ್ಪು ಹಿಂದೂ ವಿರೋಧಿಯಾಗಿದ್ದರೆ ಶೃಂಗೇರಿ, ನಂಜನಗೂಡು ಸೇರಿ ಇತರ ಹಿಂದೂ ದೇವಾಲಯಗಳಿಗೆ ಟಿಪ್ಪು ಕೊಡುಗೆ ನೀಡುತ್ತಿರಲಿಲ್ಲ. ಆದರೆ ಇತಿಹಾಸ ತಿರುಚುವುದರಲ್ಲಿ ಪ್ರಸಿದ್ಧರಾಗಿರುವ ಕೆಲವರು ಸಮಾಜ ಒಡೆಯುವ ಕೆಲಸ ಮಾಡುತ್ತಿದ್ದಾರೆ. ಆದ್ದರಿಂದ ಅಲ್ಪಸಂಖ್ಯಾತರು ಒಗ್ಗಟ್ಟಾಗಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು. ಕೋಮುವಾದ ಅಡ್ಡ ಇಟ್ಟುಕೊಂಡು ರಾಜಕೀಯ ಬೆಳೆ ಬೇಯಿಸಿಕೊಳ್ಳುವವರಿಗೆ ಅವಕಾಶ ಕೊಡಬಾರದು’ ಎಂದರು.

ಉಪನ್ಯಾಸಕ ಝಡ್.ಎ.ಮಹಮ್ಮದ್ ಅರಾಫತ್ ಅವರು ಟಿಪ್ಪು ಸುಲ್ತಾನ್ ಅವರನ್ನು ಕುರಿತು ವಿಶೇಷ ಉಪನ್ಯಾಸ ನೀಡಿದರು. ವಿವಿಧ ಕ್ಷೇತ್ರಗಳ ಸಾಧಕರನ್ನು ಮತ್ತು ಎಸ್ಸೆಸ್ಸೆಲ್ಸಿ, ಪಿಯುಸಿ, ಪದವಿ, ಸ್ನಾತಕೋತ್ತರ ಪರೀಕ್ಷೆಗಳಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಚ್.ವಿ ಮಂಜುನಾಥ್, ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್, ಹೆಚ್ಚುವರಿ ಜಿಲ್ಲಾಧಿಕಾರಿ ಆರತಿ ಆನಂದ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗುರುದತ್ ಹೆಗಡೆ, ತಹಶೀಲ್ದಾರ್ ಕೆ.ನರಸಿಂಹಮೂರ್ತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಬಿ.ಎಸ್ ವೆಂಕಟಾಚಲಪತಿ, ಜಿಲ್ಲಾ ವಕ್ಫ್ ಮಂಡಳಿ ಅಧ್ಯಕ್ಷ ಬಿ.ಎಸ್ ರಫಿವುಲ್ಲಾ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !