ಕೇಂದ್ರೀಕೃತ ಅಡುಗೆ ಕೇಂದ್ರಗಳಿಗೆ ವಿರೋಧ

7
ನಗರದಲ್ಲಿ ಅಕ್ಷರ ದಾಸೋಹ ನೌಕರರ ಸಂಘದ ಚಿಕ್ಕಬಳ್ಳಾಪುರ ತಾಲ್ಲೂಕಿನ 4ನೇ ಸಮ್ಮೇಳನ

ಕೇಂದ್ರೀಕೃತ ಅಡುಗೆ ಕೇಂದ್ರಗಳಿಗೆ ವಿರೋಧ

Published:
Updated:
Deccan Herald

ಚಿಕ್ಕಬಳ್ಳಾಪುರ: ‘ಕೇಂದ್ರ ಸರ್ಕಾರ ಕೇಂದ್ರೀಕೃತ ಅಡುಗೆ ಕೇಂದ್ರಗಳನ್ನು ತೆರೆಯುವ ಆದೇಶವನ್ನು ವಾಪಸ್ ಪಡೆಯಬೇಕು. ಬಿಸಿಯೂಟ ಯೋಜನೆ ನೌಕರರನ್ನು ಕಾಯಂಗೊಳಿಸಿ ಕನಿಷ್ಠ ₹18 ಸಾವಿರ ಸಂಬಳ ನೀಡಬೇಕು’ ಎಂದು ರಾಜ್ಯ ಅಕ್ಷರ ದಾಸೋಹ ನೌಕರರ ಸಂಘದ (ಸಿಐಟಿಯು) ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಸಿದ್ಧಗಂಗಪ್ಪ ಆಗ್ರಹಿಸಿದರು.

ನಗರದಲ್ಲಿ ಶನಿವಾರ ನಡೆದ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘದ ಚಿಕ್ಕಬಳ್ಳಾಪುರ ತಾಲ್ಲೂಕಿನ 4ನೇ ಸಮ್ಮೇಳನದಲ್ಲಿ ಅವರು ಮಾತನಾಡಿದರು.

‘2001ರಲ್ಲಿ ಸುಪ್ರೀಂ ಕೋರ್ಟ್ ನಿರ್ದೇಶನದ ಮೆರೆಗೆ ಬಿಸಿಯೂಟ ಯೋಜನೆ ಜಾರಿಗೆ ತಂದ ಕೇಂದ್ರ ಸರ್ಕಾರ ಬಳಿಕ ಅದನ್ನು ಖಾಸಗೀಕರಣ ಮಾಡಲು ಹೊರಟಿದ್ದು, ಈ ನಿಟ್ಟಿನಲ್ಲಿ ಕೇಂದ್ರೀಕೃತ ಅಡುಗೆ ಕೇಂದ್ರಗಳನ್ನು ತೆರೆಯುವ ಬಗ್ಗೆ ಸುತ್ತೋಲೆ ಹೊರಡಿಸಿದೆ. ಜತೆಗೆ ಈ ಯೋಜನೆಗೆ ಶೇ 40ರಷ್ಟು ಅನುದಾನ ಕಡಿತಗೊಳಿಸಿದೆ’ ಎಂದು ಆರೋಪಿಸಿದರು.

‘ರಾಜ್ಯದಲ್ಲಿ ಬಿಸಿಯೂಟ ಯೋಜನೆಯಡಿ ಸುಮಾರು 1.18 ಲಕ್ಷ ನೌಕರರು ಕೆಲಸ ಮಾಡುತ್ತಿದ್ದಾರೆ. ಆದರೆ ಸರ್ಕಾರ ಈ ಯೋಜನೆಗಳನ್ನು ಖಾಸಗಿ ಸಂಸ್ಥೆಗಳಿಗೆ ನೀಡಲು ಸರ್ಕಾರ ಮುಂದಾಗಿದೆ. ಈಗಾಗಲೇ ರಾಜ್ಯದಲ್ಲಿ ಕೂಡಾ ಬೆಂಗಳೂರು, ಮಂಗಳೂರು, ಹುಬ್ಬಳ್ಳಿ ಧಾರವಾಡ ಸೇರಿದಂತೆ ವಿವಿಧ ನಗರಗಳಲ್ಲಿ ಸುಮಾರು 10 ಲಕ್ಷ ಮಕ್ಕಳಿಗೆ ಇಸ್ಕಾನ್, ಅದಮ್ಯ ಚೇತನ, ವಿವಿಧ ಮಠಗಳು ಊಟ ಪೂರೈಸುತ್ತಿವೆ. ಇಂತಹ ಕ್ರಮಗಳ ವಿರುದ್ಧ ಸತತ ಹೋರಾಡಿ ಬಿಸಿಯೂಟ ನೌಕರರನ್ನು ಕೆಲಸದಲ್ಲಿ ಉಳಿಸಲು ಸಾಧ್ಯವಾಗಿದೆ’ ಎಂದು ತಿಳಿಸಿದರು.

‘ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತಿದ್ದರೂ ಕೇಂದ್ರ ಸರ್ಕಾರ ನೌಕರರಿಗೆ ಒಂದು ನಯಾಪೈಸೆಯಷ್ಟು ವೇತನ ಏರಿಕೆ ಮಾಡಿಲ್ಲ. ವೇತನ ಹೆಚ್ಚು ಮಾಡಿ ಎಂದು ಕೇಳಿದರೆ ಅನುದಾನ ಕೊರತೆ ಎಂದು ಹೇಳುತ್ತಾರೆ. ಆದರೆ ದೇಶದ ಶ್ರೀಮಂತ ಬಂಡವಾಳಗಾರರಿಗೆ ಲಕ್ಷ ಕೋಟಿಗಟ್ಟಲೇ ಸಾಲ, ನೇರ ತೆರಿಗೆ ವಿನಾಯಿತಿ ನೀಡಿದೆ. ಇದರರ್ಥ ಬಿಜೆಪಿ ಸರ್ಕಾರ ಬಂಡವಾಳಗಾರರ ಪರ ಆಡಳಿತ ನಡೆಸುತ್ತಿದೆ’ ಎಂದು ದೂರಿದರು.

ರಾಜ್ಯ ಅಕ್ಷರ ದಾಸೋಹ ನೌಕರ ಸಂಘದ ತಾಲ್ಲೂಕು ಘಟಕದ ಗೌರವಾಧ್ಯಕ್ಷ ಬಿ.ಎನ್.ಮುನಿಕೃಷ್ಣಪ್ಪ ಮಾತನಾಡಿ, ‘ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ಧೋರಣೆ, ನೀತಿಗಳ ವಿರುದ್ಧ ನಮ್ಮ ಹೋರಾಟ ಇನ್ನೂ ತೀವ್ರವಾಗಬೇಕಿದೆ. ಕೇಂದ್ರ ಬಿಸಿಯೂಟ ಯೋಜನೆಗೆ ಕಡಿತ ಮಾಡಿರುವ ಅನುದಾನ ವಾಪಸ್‌ ನೀಡಬೇಕು’ ಎಂದು ಒತ್ತಾಯಿಸಿದರು.

‘ಹಾಜರಾತಿ ಆಧಾರದಲ್ಲಿ ಅಡುಗೆಯನ್ನು ಕೈ ಬಿಡುವ ಕ್ರಮ ನಿಲ್ಲಿಸಬೇಕು. ಬಿಸಿಯೂಟ ನೌಕರರನ್ನು ಶಾಲೆಯ ಇತರೆ ಕೆಲಸಗಳಿಗೆ ಪೂರಕವಾಗುವ ಹಾಗೆ 4ನೇ ದರ್ಜೆಯ ನೌಕರರಾಗಿ ಪರಿಗಣಿಸಬೇಕು. 45ನೇ ಐಎಲ್‌ಸಿ ಶಿಫಾರಸು ಈ ಕೂಡಲೇ ಜಾರಿ ಮಾಡಬೇಕು. ನಿವೃತ್ತಿ ಸೌಲಭ್ಯ ನೀಡಬೇಕು. ವೇತನವು ಪ್ರತಿ ತಿಂಗಳ ನಿಗದಿತ ಸಮಯದಲ್ಲಿ ನೀಡಬೇಕು’ ಎಂದು ಹೇಳಿದರು.

‘ಪ್ರಧಾನಿ ನರೇದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರ ಒಳ್ಳೆಯ ದಿನಗಳು ಬರಲಿವೆ ಎನ್ನುತ್ತ ನಾಲ್ಕು ವರ್ಷ ಕಾಲಹರಣ ಮಾಡಿತು. ಆದರೆ ಒಳ್ಳೆಯ ದಿನಗಳು ಬರಲೇ ಇಲ್ಲ. ವಿದೇಶಗಳಲ್ಲೇ ಹೆಚ್ಚು ಕಾಲ ಕಳೆಯುವ ಮೋದಿ ಅವರ ಅವಧಿಯಲ್ಲಿ ಕಾರ್ಮಿಕ ಕಾಯ್ದೆಗಳ ತಿದ್ದುಪಡಿಯಿಂದಾಗಿ ಕಾರ್ಮಿಕರು ಕಾಯಂ ಉದ್ಯೋಗವಿಲ್ಲದೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ’ ಎಂದು ಆರೋಪಿಸಿದರು.

ಸಂಘದ ತಾಲ್ಲೂಕು ಘಟಕ ಅಧ್ಯಕ್ಷೆ ಕೆ.ವಿ.ವೆಂಕಟಲಕ್ಷಮ್ಮ, ಜಿಲ್ಲಾ ಘಟಕದ ಕಾರ್ಯದರ್ಶಿ ಕೆ.ಆರ್.ಮಂಜುಳಾ, ಖಜಾಚಿ ಭಾರತಿ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !