ಭಾರತ–ವೆಸ್ಟ್ ಇಂಡೀಸ್ ಮೂರನೇ ಟ್ವೆಂಟಿ–20: ‘ಬೆಂಚ್’ ಹುಡುಗರಿಗೆ ಮಿಂಚುವ ಕಾತುರ

7

ಭಾರತ–ವೆಸ್ಟ್ ಇಂಡೀಸ್ ಮೂರನೇ ಟ್ವೆಂಟಿ–20: ‘ಬೆಂಚ್’ ಹುಡುಗರಿಗೆ ಮಿಂಚುವ ಕಾತುರ

Published:
Updated:
Deccan Herald

ಚೆನ್ನೈ: ವೆಸ್ಟ್‌ ಇಂಡೀಸ್ ಎದುರಿ ಟ್ವೆಂಟಿ–20 ಸರಣಿಯಲ್ಲಿ ಕ್ಲೀನ್‌ಸ್ವೀಪ್ ಜಯ ಸಾಧಿಸುವ ಯೋಚನೆಯಲ್ಲಿರುವ ಭಾರತ ಕ್ರಿಕೆಟ್ ತಂಡವು ಭಾನುವಾರ ನಡೆಯಲಿರುವ ಟ್ವೆಂಟಿ–20 ಪಂದ್ಯದಲ್ಲಿ ಅನುಭವಿಗಳಿಗೆ ವಿಶ್ರಾಂತಿ ನೀಡಿ ಕಿರಿಯರಿಗೆ ಕಣಕ್ಕಿಳಿಯಲು ಅವಕಾಶ ನೀಡುತ್ತಿದೆ.

ಸರಣಿಯನ್ನು ಈಗಾಗಲೇ 2–0ಯಿಂದ ಕೈವಶ ಮಾಡಿಕೊಂಡಿರುವ ಆತಿಥೇಯರು ವಿಂಡೀಸ್ ತಂಡವನ್ನು ಬರಿಗೈಯಲ್ಲಿ ಮರಳಿ ಕಳಿಸುವ ತವಕದಲ್ಲಿದೆ. ವಿರಾಟ್ ಕೊಹ್ಲಿ ವಿಶ್ರಾಂತಿ ಪಡೆದಿರುವುದರಿಂದ ನಾಯಕತ್ವ ವಹಿಸಿರುವ ರೋಹಿತ್ ಶರ್ಮಾ ಹೋದ ಪಂದ್ಯದಲ್ಲಿ ಅಬ್ಬರದ ಶತಕ ದಾಖಲಿಸಿದ್ದರು. ಶಿಖರ್ ಧವನ್ ಕೂಡ ಲಯಕ್ಕೆ ಮರಳುವ ಪ್ರಯತ್ನ ಮಾಡಿದ್ದರು. ಕೆ.ಎಲ್. ರಾಹುಲ್  ನಾಲ್ಕನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದು 26 ರನ್‌ಗಳ ಕಾಣಿಕೆ ನೀಡಿದ್ದರು.

ಈ ಪಂದ್ಯದಲ್ಲಿ ಶಿಖರ್‌ಗೆ ವಿಶ್ರಾಂತಿ ನೀಡಿ ರಾಹುಲ್‌ಗೆ ಇನಿಂಗ್ಸ್ ಆರಂಭಿಸುವ ಅವಕಾಶ ನೀಡಬಹುದು. ಇದರಿಂದಾಗಿ ಶ್ರೇಯಸ್ ಅಯ್ಯರ್ ಅವರೂ ಆಡುವ ಸಾಧ್ಯತೆ ಇದೆ. ಬೌಲಿಂಗ್‌ನಲ್ಲಿಯೂ ಬದಲಾವಣೆಗಳು ಖಚಿತ. ಉಮೇಶ್ ಯಾದವ್, ಕುಲದೀಪ್ ಯಾದವ್ ಮತ್ತು ಜಸ್‌ಪ್ರೀತ್ ಬೂಮ್ರಾ ಅವರಿಗೆ ವಿಶ್ರಾಂತಿ ನೀಡಲಾಗಿದೆ. ಇದರಿಂದಾಗಿ ಭುವನೇಶ್ವರ್ ಕುಮಾರ್, ಎಡಗೈ ಮಧ್ಯಮವೇಗಿ ಖಲೀಲ್ ಅಹಮದ್ ಬೌಲಿಂಗ್ ಹೊಣೆ ನಿರ್ವಹಿಸಲಿದ್ದಾರೆ. ಮೂರನೇ ಮಧ್ಯಮವೇಗಿಯಾಗಿ ಸಿದ್ಧಾರ್ಥ್ ಕೌಲ್ ಅವಕಶ ಪಡೆಯಬಹುದು. ಸ್ಪಿನ್‌ ವಿಭಾಗದಲ್ಲಿ  ವಾಷಿಂಗ್ಟನ್ ಸುಂದರ್ ಅಥವಾ ಶಾಬಾಜ್ ನದೀಮ್ ಅವರಲ್ಲಿ ಒಬ್ಬರು ಕಣಕ್ಕಿಳಿಯಬಹುದು.

ಆದರೆ, ವಿಂಡೀಸ್ ತಂಡವು ಈ ಪಂದ್ಯದಲ್ಲಿ ಸಮಾಧಾನಕರ ಜಯ ಸಾಧಿಸುವ ಯೋಚನೆಯಲ್ಲಿದೆ. ಸೆಪ್ಟೆಂಬರ್ ಕೊನೆಯ ವಾರದಲ್ಲಿ ಭಾರತಕ್ಕೆ ಬಂದಿಳಿದಿದ್ದ ಕೆರಿಬಿಯನ್ ಬಳಗವು ಈ ಪ್ರವಾಸದಲ್ಲಿ ಕಹಿ ಅನುಭವಿಸಿದ್ದೇ ಹೆಚ್ಚು. ಟೆಸ್ಟ್ ಮತ್ತು ಏಕದಿನ ಕ್ರಿಕೆಟ್‌ ಸರಣಿಗಳಲ್ಲಿ ಸೋಲು, ಈಗ ಟ್ವೆಂಟಿಯಲ್ಲಿಯೂ ಸರಣಿ ಕೈಬಿಟ್ಟು ಹೋಗಿದೆ. ಏಕದಿನ ಕ್ರಿಕೆಟ್‌ ಸರಣಿಯಲ್ಲಿ ಒಂದು ವಿಜಯ ಸಾಧಿಸಿತ್ತು. ಒಂದು ಪಂದ್ಯವನ್ನು ಟೈ ಮಾಡಿಕೊಂಡಿತ್ತು. ಆದರೆ, ಚುಟುಕು ಕ್ರಿಕೆಟ್‌ನಲ್ಲಿ ವಿಶ್ವ ಚಾಂಪಿಯನ್ ಆಗಿರುವ ತಂಡವು ಕಳೆದ ಎರಡೂ ಟ್ವೆಂಟಿ–20 ಪಂದ್ಯಗಳಲ್ಲಿ ಕಳಪೆ ಆಟವಾಡಿತ್ತು . ಕೊನೆಯ ಪಂದ್ಯದಲ್ಲಿ ಗೆದ್ದು ಪ್ರವಾಸಕ್ಕೆ ತೆರೆ ಎಳೆಯುವತ್ತ ಚಿತ್ತ ನೆಟ್ಟಿದೆ.

ನಾಯಕ ಕಾರ್ಲೋಸ್ ಬ್ರಾಥ್‌ವೇಟ್, ಶಿಮ್ರೊನ್ ಹೆಟ್ಮೆಯರ್, ಡರೆನ್ ಬ್ರಾವೊ, ಶಾಯ್ ಹೋಪ್ ಅವರು ಲಯಕ್ಕೆ ಮರಳಿದರೆ ಗೆಲುವು ಒಲಿಯಬಹುದು.  ಆದರೆ ಬೌಲರ್‌ಗಳು ಆತಿಥೇಯ ತಂಡದ ಬಲಿಷ್ಠ ಬ್ಯಾಟಿಂಗ್ ಪಡೆಯನ್ನು ಕಟ್ಟಿಹಾಕುವ ಕೆಲಸ ಮಾಡಬೇಕಷ್ಟೇ!

ತಂಡ ಇಂತಿವೆ: ಭಾರತ: ರೋಹಿತ್ ಶರ್ಮಾ (ನಾಯಕ), ಶಿಖರ್ ಧವನ್, ಕೆ.ಎಲ್. ರಾಹುಲ್, ದಿನೇಶ್ ಕಾರ್ತಿಕ್ (ವಿಕೆಟ್‌ಕೀಪರ್), ಮನೀಷ್ ಪಾಂಡೆ, ಶ್ರೇಯಸ್ ಅಯ್ಯರ್, ರಿಷಭ್ ಪಂತ್ (ವಿಕೆಟ್ ಕೀಪರ್), ಕೃಣಾಲ್ ಪಾಂಡ್ಯ, ವಾಷಿಂಗ್ಟನ್ ಸುಂದರ್, ಯಜುವೇಂದ್ರ ಚಾಹಲ್, ಭುವನೇಶ್ವರ್ ಕುಮಾರ್, ಖಲೀಲ್ ಅಹಮದ್, ಶಾಬಾಜ್ ನದೀಮ್, ಸಿದ್ಧಾರ್ಥ್ ಕೌಲ್.

ವೆಸ್ಟ್ ಇಂಡೀಸ್: ಕಾರ್ಲೋಸ್ ಬ್ರಾಥ್‌ವೇಟ್ (ನಾಯಕ), ಡರೆನ್ ಬ್ರಾವೊ, ಶಿಮ್ರೊನ್ ಹೆಟ್ಮೆಯರ್, ಶಾಯ್ ಹೋಪ್, ಒಬೆಡ್ ಮೆಕಾಯ್, ಕೀಮೊ ಪಾಲ್, ಖ್ಯಾರಿ ಪಿಯರ್, ಕೀರನ್ ಪೊಲಾರ್ಡ್, ನಿಕೊಲಸ್ ಪೂರನ್, ರೋಮನ್ ಪೊವೆಲ್, ದಿನೇಶ್ ರಾಮ್ದಿನ್, ಶೆರ್ಫೆನ್ ರುದರ್‌ಫೋರ್ಡ್, ಒಷೇನ್ ಥಾಮಸ್ .

ಪಂದ್ಯ ಆರಂಭ: ಸಂಜೆ 7
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !