ಗುಂಡಿಮಯ ರಸ್ತೆಯಲ್ಲಿ ಯಾತನೆಮಯ ಬದುಕು

7
ಆರ್‌.ಜಿ ಲೇಔಟ್‌ ನಿವಾಸಿಗಳ ನಿದ್ದೆಗೆಡಿಸಿದ ಕಚ್ಚಾ ರಸ್ತೆಗಳು

ಗುಂಡಿಮಯ ರಸ್ತೆಯಲ್ಲಿ ಯಾತನೆಮಯ ಬದುಕು

Published:
Updated:
Deccan Herald

ಕೋಲಾರ: ನಗರದ ರಾಮೇಗೌಡ ಬಡಾವಣೆಯ (ಆರ್‌.ಜಿ ಲೇಔಟ್‌) ಗುಂಡಿಮಯ ರಸ್ತೆಗಳು ಸ್ಥಳೀಯರ ನಿದ್ದೆಗೆಡಿಸಿವೆ. ಬಡಾವಣೆ ನಿರ್ಮಾಣವಾಗಿ ಎರಡು ದಶಕವಾದರೂ ನಗರಸಭೆಯು ಸ್ಥಳೀಯರಿಗೆ ಸುಸಜ್ಜಿತ ರಸ್ತೆ ಭಾಗ್ಯ ಕಲ್ಪಿಸಿಲ್ಲ.

ಶ್ರೀನಿವಾಸಪುರ ರಸ್ತೆಗೆ ಹೊಂದಿಕೊಂಡಂತಿರುವ ಆರ್‌.ಜಿ ಲೇಔಟ್‌ನಲ್ಲಿ ಸುಮಾರು 70 ಮನೆಗಳಿದ್ದು, ಜನಸಂಖ್ಯೆ 300ರ ಗಡಿ ದಾಟಿದೆ. ಬಡಾವಣೆ ಮಾಲೀಕರು ನಿವೇಶನ ಮಾರಾಟ ಮಾಡಿದ ನಂತರ ರಸ್ತೆ ನಿರ್ಮಿಸುವ ಗೋಜಿಗೆ ಹೋಗಿಲ್ಲ. ನಗರಸಭೆಯು ಖಾಸಗಿ ಬಡಾವಣೆ ಎಂಬ ಕಾರಣಕ್ಕೆ ರಸ್ತೆ ನಿರ್ಮಿಸುವ ಪ್ರಯತ್ನ ಮಾಡಿಲ್ಲ.

ಬಡಾವಣೆಯ ಬಹುತೇಕ ರಸ್ತೆಗಳು ಕಚ್ಚಾ ರಸ್ತೆಗಳಾಗಿದ್ದು, ತುಂತುರು ಮಳೆ ಬಂದರೂ ಕೆಸರು ಗದ್ದೆಯಂತಾಗುತ್ತವೆ. ರಸ್ತೆಗಳ ತುಂಬಾ ಗುಂಡಿಗಳಾಗಿದ್ದು, ಮಳೆಗಾಲದಲ್ಲಿ ಮಳೆ ನೀರು ನಿಂತು ಸಾಕಷ್ಟು ಅವಾಂತರ ಸೃಷ್ಟಿಸುತ್ತಿದೆ. ಗುಂಡಿಮಯ ರಸ್ತೆಗಳಲ್ಲಿ ಸೈಕಲ್‌ ಅಥವಾ ಬೈಕ್‌ನಲ್ಲಿ ಸಂಚರಿಸುವುದೂ ಕಷ್ಟವಾಗಿದೆ.

ಬಡಾವಣೆಯ ರಸ್ತೆಗಳಲ್ಲಿ ವಾಹನಗಳು ಹೂತುಕೊಳ್ಳುವುದು ಸಾಮಾನ್ಯವಾಗಿದ್ದು, ಆಟೊ ಹಾಗೂ ನೀರಿನ ಟ್ಯಾಂಕರ್‌ ಚಾಲಕರು ಈ ಭಾಗಕ್ಕೆ ಬರಲು ಹಿಂದೇಟು ಹಾಕುತ್ತಾರೆ. ಕಚ್ಚಾ ರಸ್ತೆಗಳಲ್ಲಿ ವಾಹನಗಳು ನಿಧಾನ ಗತಿಯಲ್ಲಿ ಸಾಗುವ ದೃಶ್ಯ ಕಂಡುಬರುತ್ತದೆ. ಬೀದಿ ದೀಪಗಳು ಹಾಳಾಗಿದ್ದು, ರಾತ್ರಿ ವೇಳೆ ಇಲ್ಲಿನ ರಸ್ತೆಗಳಲ್ಲಿ ಓಡಾಡುವುದು ಸಾಹಸವೇ ಸರಿ. ಮಕ್ಕಳು ಹಾಗೂ ವಯೋವೃದ್ಧರ ಬವಣೆ ಹೇಳತೀರದು. ವಾಹನ ಸವಾರರು ರಸ್ತೆಗಳಲ್ಲಿ ಬಿದ್ದು ಗಾಯಗೊಳ್ಳುವುದು ಸಾಮಾನ್ಯವಾಗಿದೆ.

ಮಳೆಗಾಲದಲ್ಲಿ ಕೊಳೆಗೇರಿ: ಬಡಾವಣೆಯ ಮ್ಯಾನ್‌ಹೋಲ್‌ ಹಾಗೂ ಯುಜಿಡಿ ಪೈಪ್‌ಗಳಲ್ಲಿ ಆಗಾಗ್ಗೆ ಕೆಸರು ತುಂಬಿಕೊಂಡು ಕೊಳಚೆ ನೀರಿನ ಹರಿವಿಗೆ ಸಮಸ್ಯೆಯಾಗುತ್ತಿದೆ. ರಸ್ತೆಯ ಮಣ್ಣು ಮಳೆ ನೀರಿನ ಜತೆ ಕೊಚ್ಚಿ ಹೋಗಿ ಚರಂಡಿಗಳಲ್ಲಿ ತುಂಬಿಕೊಂಡು ಸಮಸ್ಯೆ ಸೃಷ್ಟಿಸುತ್ತದೆ. ಮಳೆಗಾಲದಲ್ಲಿ ಮ್ಯಾನ್‌ಹೋಲ್‌ ಮತ್ತು ಯುಜಿಡಿ ಪೈಪ್‌ನಿಂದ ಕೊಳಚೆ ನೀರು, ಮಲಮೂತ್ರ ರಸ್ತೆಗೆ ಹರಿದು ಬಡಾವಣೆ ಕೊಳೆಗೇರಿಯಂತಾಗುತ್ತದೆ.

ನೀರಿಗೆ ತತ್ವಾರ: ರಸ್ತೆ ಸಮಸ್ಯೆ ಜತೆಗೆ ನೀರಿನ ಸಮಸ್ಯೆಯು ಸ್ಥಳೀಯರನ್ನು ಬಹುವಾಗಿ ಬಾಧಿಸುತ್ತಿದೆ. ನಗರಸಭೆ ವತಿಯಿಂದ ಕೊಳವೆ ಮಾರ್ಗ (ಪೈಪ್‌ಲೈನ್) ನಿರ್ಮಾಣ ಮಾಡಿ ಮನೆ ಮನೆಗೂ ನಲ್ಲಿ ಸಂಪರ್ಕ ಕಲ್ಪಿಸಲಾಗಿದೆ. ಆದರೆ, ನಲ್ಲಿಗಳಲ್ಲಿ ನಿಯಮಿತವಾಗಿ ನೀರು ಬರುತ್ತಿಲ್ಲ. ನಗರಸಭೆ ವತಿಯಿಂದ ಟ್ಯಾಂಕರ್‌ ನೀರು ಸಹ ಪೂರೈಸುತ್ತಿಲ್ಲ. ನೀರಿನ ಸಮಸ್ಯೆಯಿಂದ ಬಸವಳಿದಿರುವ ಸ್ಥಳೀಯರು ಹಣ ಕೊಟ್ಟು ಖಾಸಗಿ ಟ್ಯಾಂಕರ್‌ ಮಾಲೀಕರಿಂದ ನೀರು ಖರೀದಿಸುತ್ತಿದ್ದಾರೆ. ಸ್ಥಳೀಯರು ತಮ್ಮ ದುಡಿಮೆಯ ಬಹುಪಾಲು ಹಣವನ್ನು ನೀರಿಗೆ ಖರ್ಚು ಮಾಡುವ ಪರಿಸ್ಥಿತಿ ಇದೆ.

ಬಾಡಿಗೆಗೆ ಬರಲು ಹಿಂದೇಟು: ನೀರು ಹಾಗೂ ರಸ್ತೆ ಸಮಸ್ಯೆಯ ಕಾರಣಕ್ಕೆ ಸಾರ್ವಜನಿಕರು ಬಡಾವಣೆಯ ಮನೆಗಳಿಗೆ ಬಾಡಿಗೆಗೆ ಬರಲು ಹಿಂದೇಟು ಹಾಕುತ್ತಾರೆ. ಕೆಲ ನಿವಾಸಿಗಳು ಮನೆ ಖಾಲಿ ಮಾಡಿ ಬೇರೆ ಬಡಾವಣೆಗಳಿಗೆ ಹೋಗಿ ನೆಲೆಸುತ್ತಿದ್ದಾರೆ. ಸ್ವಂತ ಮನೆ ಹೊಂದಿರುವವರು ಅನಿವಾರ್ಯವಾಗಿ ಸಮಸ್ಯೆಗಳ ಮಧ್ಯೆ ಬದುಕು ಸಾಗಿಸುತ್ತಿದ್ದಾರೆ.

ರಸ್ತೆ ಸಮಸ್ಯೆ ಸಂಬಂಧ ಸ್ಥಳೀಯರು ನಗರಸಭೆಗೆ ಬರೆದ ದೂರಿನ ಪ್ರತಿಗಳು ಕಸದ ಬುಟ್ಟಿ ಸೇರಿದ್ದು, ಸುಸಜ್ಜಿತ ರಸ್ತೆ ಸೌಕರ್ಯದ ಕೂಗು ಅರಣ್ಯರೋದನವಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !