ಆಯುಷ್‌ ಜಾಗೃತಿಗೆ ಪಠ್ಯಕ್ರಮ: ಕೇಂದ್ರ ಆಯುಷ್‌ ಸಚಿವ ಶ್ರೀಪಾದ್ ಯೆಸ್ಸೋ ನಾಯ್ಕ್‌

7

ಆಯುಷ್‌ ಜಾಗೃತಿಗೆ ಪಠ್ಯಕ್ರಮ: ಕೇಂದ್ರ ಆಯುಷ್‌ ಸಚಿವ ಶ್ರೀಪಾದ್ ಯೆಸ್ಸೋ ನಾಯ್ಕ್‌

Published:
Updated:
Deccan Herald

ಮಂಗಳೂರು: ದ್ವಿತೀಯ ಪಿಯುಸಿಗೂ ಮುನ್ನವೇ ಮಕ್ಕಳಲ್ಲಿ ಆಯುಷ್‌ ವೈದ್ಯ ಪದ್ಧತಿ ಕುರಿತು ಜಾಗೃತಿ ಮೂಡಿಸಲು ಪಠ್ಯಕ್ರಮ ರೂಪಿಸಲಾಗುವುದು ಎಂದು ಕೇಂದ್ರ ಆಯುಷ್‌ ಖಾತೆ ಸಚಿವ ಶ್ರೀಪಾದ್‌ ಯೆಸ್ಸೋ ನಾಯ್ಕ್‌ ಹೇಳಿದರು.

ನಗರದ ಸೇಂಟ್‌ ಅಲೋಶಿಯಸ್‌ ಪ್ರೌಢಶಾಲಾ ಸಭಾಂಗಣದಲ್ಲಿ ಭಾನುವಾರ ನಡೆದ ದಕ್ಷಿಣ ಕನ್ನಡ ಆಯುಷ್‌ ಫೌಂಡೇಶನ್‌ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಮತ್ತು ಸಮಾಜ ಸೇವಾ ಚಟುವಟಿಕೆಗಳ ಚಾಲನಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಆಯುರ್ವೇದ, ಯೋಗ ಮತ್ತು ಪ್ರಕೃತಿ ಚಿಕಿತ್ಸೆ, ಯುನಾನಿ, ಸಿದ್ಧ ಮತ್ತು ಹೋಮಿಯೋಪಥಿ ಚಿಕಿತ್ಸಾ ಪದ್ಧತಿಗಳನ್ನು ಒಳಗೊಂಡಿರುವ ಭಾರತೀಯ ಆಯುಷ್‌ ವೈದ್ಯ ಪದ್ಧತಿ ಕುರಿತು ಮಕ್ಕಳಿಗೆ ಅರಿವು ಇರುವುದಿಲ್ಲ. ದ್ವಿತೀಯ ಪಿಯುಸಿ ಬಳಿಕ ಪ್ರವೇಶ ಪರೀಕ್ಷೆಯಲ್ಲಿ ಕಡಿಮೆ ಅಂಕ ದೊರೆತರೆ ಅನಿವಾರ್ಯವಾಗಿ ಆಯುಷ್‌ ವೈದ್ಯ ಪದ್ಧತಿಗಳ ಕೋರ್ಸ್‌ಗೆ ಪ್ರವೇಶ ಪಡೆಯುವ ಮನಸ್ಥಿತಿ ಇದೆ. ಮಕ್ಕಳಲ್ಲಿ ಎಳೆಯ ವಯಸ್ಸಿನಿಂದಲೇ ಆಯುಷ್‌ ವೈದ್ಯ ಪದ್ಧತಿಗಳ ಕುರಿತು ಜಾಗೃತಿ ಮೂಡಿಸಿ, ಅವುಗಳ ಬಗ್ಗೆ ಪ್ರೀತಿ ಹುಟ್ಟಿಸುವ ಉದ್ದೇಶದಿಂದ ಪಠ್ಯಕ್ರಮ ಅಳವಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಆಯುಷ್‌ ವೈದ್ಯರನ್ನು ಈಗ ಕೀಳರಿಮೆ ಕಾಡುವ ಪ್ರಶ್ನೆಯೇ ಇಲ್ಲ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಎಲ್ಲ ಜಿಲ್ಲೆಗಳಲ್ಲಿ ಆಯುಷ್‌ ಆಸ್ಪತ್ರೆಗಳನ್ನು ಸ್ಥಾಪಿಸುವ ನಿರ್ಧಾರ ಕೈಗೊಂಡಿದೆ. ಆಯುಷ್‌ ವೈದ್ಯ ಪದ್ಧತಿಗಳಿಗೆ ಸಂಬಂಧಿಸಿದಂತೆ ಸಂಶೋಧನೆ ಮತ್ತು ಸಹಕಾರಕ್ಕಾಗಿ ಆಯುಷ್‌ ಸಚಿವಾಲಯ 15 ರಾಷ್ಟ್ರಗಳೊಡನೆ ಒಪ್ಪಂದ ಮಾಡಿಕೊಂಡಿದೆ. ದೇಶದ 13 ಪ್ರಮುಖ ವಿಶ್ವವಿದ್ಯಾಲಯಗಳಲ್ಲಿ ಆಯುಷ್‌ ಅಧ್ಯಯನ ಪೀಠಗಳು ಅಸ್ತಿತ್ವಕ್ಕೆ ಬಂದಿವೆ. ಮುಂದಿನ ದಿನಗಳಲ್ಲಿ ಯೋಗ ಪಾರ್ಕ್‌ಗಳ ಸ್ಥಾಪನೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಆಯುಷ್‌ ವೈದ್ಯ ಪದ್ಧತಿಗೆ ಸಂಬಂಧಿಸಿದ ಜ್ಞಾನವು ಸಂಸ್ಕೃತ ಭಾಷೆಯಲ್ಲಿ ಹೆಚ್ಚಾಗಿದೆ. ಈ ಕಾರಣದಿಂದ ಆಯುಷ್‌ ವೈದ್ಯರು ಸಂಸ್ಕೃತ ಭಾಷೆಯನ್ನು ಕಲಿಯಲು ಪ್ರಯತ್ನಿಸಬೇಕು. ಆಗ, ಈ ವೈದ್ಯ ಪದ್ಧತಿಯ ನೈಜ ಚಿಕಿತ್ಸಾ ಕ್ರಮವನ್ನು ಪೂರ್ಣವಾಗಿ ಅರಿತು ವೃತ್ತಿಯಲ್ಲಿ ಬಳಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಸಲಹೆ ನೀಡಿದರು.

ಡಾ.ಗೋಪಾಲಕೃಷ್ಣ ನಾಯಕ್‌ ದಕ್ಷಿಣ ಕನ್ನಡ ಆಯುಷ್‌ ಫೌಂಡೇಶನ್‌ನ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದರು. ಡಾ.ಸಂತೋಷ್‌ ಶೆಟ್ಟಿ ಮತ್ತು ಡಾ.ರವಿ ಗಣೇಶ್‌ ಪ್ರಧಾನ ಕಾರ್ಯದರ್ಶಿಗಳಾಗಿ ಮತ್ತು ಡಾ.ಕೇಶವ ಪಿ.ಕೆ. ಖಜಾಂಚಿಯಾಗಿ ಪದಗ್ರಹಣ ಮಾಡಿದರು.

ದಕ್ಷಿಣ ಕನ್ನಡ ಆಯುಷ್‌ ಫೌಂಡೇಶನ್‌ನ ಸಂಸ್ಥಾಪಕ ಅಧ್ಯಕ್ಷೆ ಡಾ.ಆಶಾಜ್ಯೋತಿ ರೈ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಆಯುಷ್‌ ಅಧಿಕಾರಿ ಡಾ.ಮೊಹಮ್ಮದ್ ಇಕ್ಬಾಲ್, ತುಳುನಾಡು ಎಜುಕೇಷನ್‌ ಟ್ರಸ್ಟ್ ಅಧ್ಯಕ್ಷ ಪ್ರೊ.ಎಂ.ಬಿ.ಪುರಾಣಿಕ್‌, ಕರ್ನಾಟಕ ಎಜುಕೇಷನ್‌ ಅಂಡ್‌ ಚಾರಿಟಬಲ್‌ ಟ್ರಸ್ಟ್‌ ಅಧ್ಯಕ್ಷ ಡಾ.ರಜನೀಶ್ ಸೊರಕೆ, ಫಾದರ್‌ ಮುಲ್ಲರ್‌ ಹೋಮಿಯೋಪಥಿ ಕಾಲೇಜಿನ ಸಹಾಯಕ ಆಡಳಿತಾಧಿಕಾರಿ ಫಾದರ್‌ ಸಿಲ್ವೆಸ್ಟರ್‌ ವಿನ್ಸೆಂಟ್ ಲೋಬೊ, ವೆನ್ಲಾಕ್ ಜಿಲ್ಲಾ ಸರ್ಕಾರಿ ಆಸ್ಪತ್ರೆ ಅಧೀಕ್ಷಕಿ ಡಾ.ರಾಜೇಶ್ವರಿ ದೇವಿ, ದಕ್ಷಿಣ ಕನ್ನಡ ಆಯುಷ್‌ ಫೌಂಡೇಶನ್‌ನ ಸಂಸ್ಥಾಪಕ ಪ್ರಧಾನ ಕಾರ್ಯದರ್ಶಿ ಡಾ.ನಾರಾಯಣ ಆಸ್ರ, ಖಜಾಂಚಿ ಡಾ.ಜೈನುದ್ದೀನ್‌ ಉಪಸ್ಥಿತರಿದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !