ಬೆಂಗಳೂರು ಓಪನ್‌ ಎಟಿಪಿ ಚಾಲೆಂಜರ್‌ ಟೆನಿಸ್‌: ಭಾರತದ ಆಟಗಾರರಿಗೆ ಪ್ರಶಸ್ತಿಯ ತವಕ

7
ಇಂದಿನಿಂದ ಮುಖ್ಯ ಸುತ್ತಿನ ಪಂದ್ಯಗಳು

ಬೆಂಗಳೂರು ಓಪನ್‌ ಎಟಿಪಿ ಚಾಲೆಂಜರ್‌ ಟೆನಿಸ್‌: ಭಾರತದ ಆಟಗಾರರಿಗೆ ಪ್ರಶಸ್ತಿಯ ತವಕ

Published:
Updated:

ಬೆಂಗಳೂರು: ಏಷ್ಯಾದ ಪ್ರತಿಷ್ಠಿತ ಎಟಿಪಿ ಟೆನಿಸ್‌ ಟೂರ್ನಿಗಳಲ್ಲಿ ಒಂದೆನಿಸಿರುವ ಬೆಂಗಳೂರು ಓಪನ್‌ ಚಾಲೆಂಜರ್‌ನ ಮುಖ್ಯಸುತ್ತಿನ ಪಂದ್ಯಗಳು ಸೋಮವಾರದಿಂದ ಶುರುವಾಗಲಿವೆ. ಕರ್ನಾಟಕ ರಾಜ್ಯ ಲಾನ್‌ ಟೆನಿಸ್‌ ಸಂಸ್ಥೆಯ (ಕೆಎಸ್‌ಎಲ್‌ಟಿಎ) ಅಂಗಳದಲ್ಲಿ ಒಟ್ಟು ಆರು ದಿನಗಳ ಕಾಲ ಟೂರ್ನಿ ನಡೆಯಲಿದ್ದು ಟೆನಿಸ್‌ ಆಟದ ಸೊಬಗು ಕಣ್ತುಂಬಿಕೊಳ್ಳಲು ಉದ್ಯಾನನಗರಿಯ ಅಭಿಮಾನಿಗಳು ಉತ್ಸುಕರಾಗಿದ್ದಾರೆ.

ಪ್ರಜ್ಞೇಶ್‌ ಗುಣೇಶ್ವರನ್‌, ಸುಮಿತ್‌ ನಗಾಲ್‌, ಸಾಕೇತ್‌ ಮೈನೇನಿ, ಸೂರಜ್‌ ಪ್ರಭೋದ್‌ ಮತ್ತು ಆದಿಲ್‌ ಕಲ್ಯಾಣಪುರ ಅವರು ಭಾರತದ ಭರವಸೆಯಾಗಿದ್ದು, ಸಿಂಗಲ್ಸ್‌ ವಿಭಾಗದ ಕಿರೀಟ ಮುಡಿಗೇರಿಸಿಕೊಳ್ಳಲು ಕಾತರರಾಗಿದ್ದಾರೆ.

ಪ್ರಜ್ಞೇಶ್‌ ಅವರು ಟೂರ್ನಿಯಲ್ಲಿ ನಾಲ್ಕನೇ ಶ್ರೇಯಾಂಕ ಪಡೆದಿದ್ದಾರೆ. ವಿಶ್ವ ಕ್ರಮಾಂಕ ಪಟ್ಟಿಯಲ್ಲಿ 141ನೇ ಸ್ಥಾನದಲ್ಲಿರುವ ಅವರಿಗೆ ಮೊದಲ ಸುತ್ತಿನಲ್ಲಿ ರಷ್ಯಾದ ಇವಾನ್‌ ನೆಡೆಲ್ಕೊ ಸವಾಲು ಎದುರಾಗಲಿದೆ. ಇವಾನ್‌, ವಿಶ್ವ ರ‍್ಯಾಂಕಿಂಗ್‌ನಲ್ಲಿ ಪ್ರಜ್ಞೇಶ್‌ ಅವರಿಗಿಂತಲೂ 123ಸ್ಥಾನ ಕೆಳಗಿದ್ದಾರೆ. ಹೀಗಾಗಿ ಭಾರತದ ಆಟಗಾರನ ಗೆಲುವಿನ ಹಾದಿ ಸುಗಮ ಎಂದೇ ಭಾವಿಸಲಾಗಿದೆ.

ಸುಮಿತ್‌ ನಗಾಲ್‌ ಮತ್ತು ಏಳನೇ ಶ್ರೇಯಾಂಕದ ಆಟಗಾರ ಜಯ್‌ ಕ್ಲಾರ್ಕ್‌ ನಡುವಣ ಹೋರಾಟ ಮೊದಲ ದಿನದ ಆಕರ್ಷಣೆಯಾಗಿದೆ. ಹಾಲಿ ಚಾಂಪಿಯನ್‌ ಸುಮಿತ್‌ ಈ ಪೈಪೋಟಿಯಲ್ಲಿ ಕ್ಲಾರ್ಕ್‌ ಸವಾಲು ಮೀರಿ ನಿಲ್ಲುತ್ತಾರಾ ಎಂಬ ಕುತೂಹಲ ಈಗ ಗರಿಗೆದರಿದೆ.

ಸಾಕೇತ್‌ ಮೈನೇನಿ ಮತ್ತು ಆದಿಲ್‌ ಕಲ್ಯಾಣಪುರ ಅವರು ಮೊದಲ ಸುತ್ತಿನಲ್ಲಿ ಮುಖಾಮುಖಿಯಾಗಲಿದ್ದಾರೆ. ಸಾಕೇತ್‌ , 2014ರ ಏಷ್ಯನ್‌ ಕ್ರೀಡಾಕೂಟದ ಮಿಶ್ರ ಡಬಲ್ಸ್‌ನಲ್ಲಿ ಚಿನ್ನ ಮತ್ತು ಪುರುಷರ ಡಬಲ್ಸ್‌ನಲ್ಲಿ ಬೆಳ್ಳಿಯ ಪದಕ ಜಯಿಸಿದ ಹಿರಿಮೆ ಹೊಂದಿದ್ದಾರೆ. ಹಲವು ಅಂತರರಾಷ್ಟ್ರೀಯ ಟೂರ್ನಿಗಳಲ್ಲಿ ಆಡಿದ ಅನುಭವವೂ ಅವರಿಗಿದೆ. ಹೀಗಾಗಿ ಆದಿಲ್‌ ಎದುರು ಸಾಕೇತ್‌ ಗೆಲುವು ಸುಲಭ ಎಂದು ಅಂದಾಜಿಸಲಾಗಿದೆ.

ಕರ್ನಾಟಕದ ಸೂರಜ್‌ ಪ್ರಭೋದ್‌ ಕೂಡಾ ಪ್ರಶಸ್ತಿಯ ಮೇಲೆ ಕಣ್ಣಿಟ್ಟಿದ್ದಾರೆ. ‘ವೈಲ್ಡ್‌ ಕಾರ್ಡ್‌’ಅರ್ಹತಾ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದು ಮುಖ್ಯ ಸುತ್ತು ಪ್ರವೇಶಿಸಿರುವ ಸೂರಜ್‌ಗೆ ಪ್ರಥಮ ಸುತ್ತಿನಲ್ಲಿ ಕಠಿಣ ಪೈಪೋಟಿ ಎದುರಾಗಲಿದೆ. ಫ್ರಾನ್ಸ್‌ನ ಆರನೇ ಶ್ರೇಯಾಂಕದ ಆಟಗಾರ ಕ್ವೆಂಟಿನ್‌ ಹಲೀಸ್‌ ಎದುರು ಸೂರಜ್‌ ಆಡಬೇಕಿದೆ.

ಮಾಲ್ಡೋವಾದ ರಾಡು ಆಲ್ಬಟ್‌, ಅರ್ಜೆಂಟೀನಾದ ಮಾರ್ಕೊ ಟ್ರಂಗೆಲ್ಲಿಟಿ, ಸ್ವೀಡನ್‌ನ ಎಲೀಸ್‌ ಯೆಮರ್‌, ಆಸ್ಟ್ರೇಲಿಯಾದ ಮಾರ್ಕ್‌ ಪೋಲ್ಸ್‌ಮನ್‌ ಮತ್ತು ಕೆನಡಾದ ಫ್ಲಿಪ್‌ ಪೆಲಿವೊ ಅವರೂ ಕಣದಲ್ಲಿದ್ದಾರೆ. ರಾಡು, ಟೂರ್ನಿಯಲ್ಲಿ ಅಗ್ರಶ್ರೇಯಾಂಕ ಹೊಂದಿದ್ದಾರೆ. ವಿಶ್ವ ರ‍್ಯಾಂಕಿಂಗ್‌ನಲ್ಲಿ ಅಗ್ರ 100ರೊಳಗಿನ ಸ್ಥಾನದಲ್ಲಿರುವ ಅವರು ಪ್ರಶಸ್ತಿ ಜಯಿಸುವ ನೆಚ್ಚಿನ ಆಟಗಾರರಲ್ಲಿ ಒಬ್ಬರೆನಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !