ಹೂಡಿಕೆ, ಹಣ ಉಳಿತಾಯದ ಕುರಿತ ನಿಮ್ಮ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ

7

ಹೂಡಿಕೆ, ಹಣ ಉಳಿತಾಯದ ಕುರಿತ ನಿಮ್ಮ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ

Published:
Updated:
Deccan Herald

ಐತಪ್ಪ ಮೂಲ್ಯ, ಬೆಂಗಳೂರು

ನಿಮ್ಮ ಪ್ರಶ್ನೋತ್ತರ ಪ್ರತೀ ಬುಧವಾರ ತಪ್ಪದೇ ಓದುತ್ತೇನೆ. ನಾನು ಬ್ಯಾಂಕ್ ಠೇವಣಿಯಲ್ಲಿ ₹ 50 ಲಕ್ಷ ಇರಿಸಿದ್ದೇನೆ ಹಾಗೂ ₹ 31 ಲಕ್ಷ REC ಬಾಂಡುಗಳಲ್ಲಿ ತೊಡಗಿಸಿದ್ದೇನೆ. ಸದ್ಯ ನನ್ನ ಸಂಬಳ ₹ 17,500, ಹೆಂಡತಿ ಸಂಬಳ ₹ 19,000. ನಾನು ₹ 22 ಲಕ್ಷ ಮ್ಯೂಚುವಲ್ ಫಂಡ್‌ನಲ್ಲಿ ತೊಡಗಿಸಿದ್ದೇನೆ. 2019ರಲ್ಲಿ ನಾನು ₹ 32 ಲಕ್ಷ ತಿರುಗಿ ಮ್ಯೂಚುವಲ್ ಫಂಡ್‌ನಲ್ಲಿ ತೊಡಗಿಸಬೇಕೆಂದಿದ್ದೇನೆ. ನಾನು ತೆರಿಗೆ ಉಳಿಸಲು ಈ ವರ್ಷ ₹ 5 ಲಕ್ಷ ನನ್ನ ಹೆಂಡತಿ ಹೆಸರಿಗೆ ವರ್ಗಾಯಿಸಿದ್ದೇನೆ ಹಾಗೂ ಬರುವ ವರ್ಷ ಪುನಃ ₹ 5 ಲಕ್ಷ ವರ್ಗಾಯಿಸ ಬೇಕೆಂದಿದ್ದೇನೆ. ಈ ವರ್ಷ ₹ 25,000 ಆದಾಯ ತೆರಿಗೆ ತುಂಬಿದ್ದು ಬರುವ ವರ್ಷ ₹ 60,000 ತುಂಬುವ ಪರಿಸ್ಥಿತಿ ಇದೆ. REC  ಬಾಂಡ್‌ನ ಬಡ್ಡಿ ಆರ್ಥಿಕ ವರ್ಷದಲ್ಲಿ ಬರುತ್ತದೆ. ನಾನು ಮಾಡುವುದು ಸರಿ ಇದೆಯೇ ದಯಮಾಡಿ ಮಾರ್ಗದರ್ಶನ ಮಾಡಿರಿ.

ಉತ್ತರ: ನೀವು ನಿಮ್ಮ ಒಟ್ಟು ಹೂಡಿಕೆಯ ಸಿಂಹಪಾಲು ಮ್ಯೂಚುವಲ್ ಫಂಡ್‌ನಲ್ಲಿ ತೊಡಗಿಸುವ ಉದ್ದೇಶ ವ್ಯಕ್ತಪಡಿಸಿದ್ದೀರಿ. ಇಲ್ಲಿ ಬರುವ ಡಿವಿಡೆಂಡ್‌ ಆದಾಯ ₹ 10 ಲಕ್ಷಗಳ ತನಕ ವಿನಾಯಿತಿ ಇರುವುದು ನಿಜ. ಆದರೆ, ಈ ಹೂಡಿಕೆ ಕಂಟಕ ರಹಿತವಲ್ಲ. Do not keep all eggs in single basket  ಎನ್ನುವ ಆಂಗ್ಲ ಗಾದೆ ನೆನಪಿಡಿ. ನೀವು ಹೂಡಬಹುದಾದ ಒಟ್ಟು ಹಣದಿಂದ ಶೇ 10ಕ್ಕೂ ಮೇಲೆ ಇಲ್ಲಿ ಹೂಡುವುದು ಸುರಕ್ಷತೆಯ ದೃಷ್ಟಿಯಿಂದ ಸರಿ ಇಲ್ಲ. ಇದೇ ವೇಳೆ, ನಿಮ್ಮ ಹಣ ನಿಮ್ಮ ಹೆಂಡತಿ ಹೆಸರಿಗೆ ವರ್ಗಾಯಿಸಿ ತೆರಿಗೆ ಉಳಿಸಲು ಆದಾಯ ತೆರಿಗೆ ಕಾನೂನಿನಲ್ಲಿ ಯಾವ ಸಾಧ್ಯತೆ ಇರುವುದಿಲ್ಲ.

ಪ್ರಾಪ್ತ ವಯಸ್ಸಿನ (Major Children) ಮಕ್ಕಳಿದ್ದರೆ ಈ ಮಾರ್ಗವನ್ನು ತೆರಿಗೆ ಕಾನೂನು ಒಪ್ಪುತ್ತದೆ. ದ್ರವ್ಯತೆ ದೃಷ್ಟಿಯಿಂದ ₹ 15 ಲಕ್ಷ ಬ್ಯಾಂಕ್ ಅಥವಾ ಅಂಚೆ ಕಚೇರಿ ಠೇವಣಿಯಲ್ಲಿ ಇರಿಸಿ ಉಳಿದ ಹಣದಿಂದ ಮಂಗಳೂರಿನಲ್ಲಿ ಅಥವಾ ಮಂಗಳೂರು ಸಮೀಪದಲ್ಲಿ ಒಂದು ನಿವೇಶನ ಕೊಂಡುಕೊಳ್ಳಿ. ಹೀಗೆ ಮಾಡುವುದರಿಂದ Wealth Management ಬಹಳ ಸುಲಭವಾಗುತ್ತದೆ. ಜೊತೆಗೆ ಸ್ಥಿರ ಆಸ್ತಿ ಹೂಡಿಕೆಗಿಂತ ಮಿಗಿಲಾದ ಹೂಡಿಕೆ ಬೇರೊಂದಿಲ್ಲ. ಜೀವನದಲ್ಲಿ ಆದಷ್ಟು ಸಮಸ್ಯೆಗಳನ್ನು ಇರಿಸಿಕೊಂಡು ಬಾಳುವುದು, ಶಾಂತಿಯನ್ನು ಕದಡುತ್ತದೆ. ಇದರಿಂದ ನಷ್ಟ ಅನುಭವಿಸುವ ಸಾಧ್ಯತೆ ಕೂಡಾ ಇರುತ್ತದೆ.

ವಿಜಯಕುಮಾರ್, ರಾಯಚೂರು

ನಾನು ಪ್ರಾಥಮಿಕ ಶಾಲಾ ಶಿಕ್ಷಕ. ಒಟ್ಟುಸಂಬಳ ₹ 46,925. ಕಡಿತ ₹ 11,770 (ವಿವರ LIC ₹ 11,000, KGID ₹ 2110, KGEDL80 1384, PLI 700, RD ₹ 11,000) ನನಗೆ ಇಬ್ಬರು ಗಂಡು ಮಕ್ಕಳು. 10 ಹಾಗೂ 6ನೇ ತರಗತಿಯಲ್ಲಿ ಓದುತ್ತಿದ್ದಾರೆ. ಇನ್ನೂ ಸೇವಾವಧಿ 7 ವರ್ಷ. ಈ ಊರಿನಲ್ಲಿ 40X60 ನಿವೇಶನ ಇದೆ. ಇಲ್ಲಿ 25X10 ಚಿಕ್ಕ ಮನೆ ಇದೆ. ನಿವೇಶನದಲ್ಲಿ ಉಳಿದ ಸ್ಥಳದಲ್ಲಿ ಒಂದು ಮನೆ ಕಟ್ಟಿ ಬಾಡಿಗೆ ಕೊಡುವುದು ಅಥವಾ ಹೊಸ ನಿವೇಶನ ಕೊಳ್ಳುವುದು ಯಾವುದು ಸೂಕ್ತ ತಿಳಿಸಿರಿ. ಸಾಲ ಮಾಡುವಲ್ಲಿ ತಿಂಗಳಿಗೆ ₹ 1500 ಕಂತು ಕಟ್ಟುವ ಸಾಮರ್ಥ್ಯವಿದೆ.

ಉತ್ತರ: ನಿಮ್ಮ ಪ್ರಶ್ನೆ ಓದಿ ಸಂತಸಪಟ್ಟೆ. ಮಧ್ಯಮ ವರ್ಗದ ಜನರು ನಿಮ್ಮ ಜೀವನ ಶೈಲಿ ಹಾಗೂ ಉಳಿತಾಯದ ಕ್ರಮ ನಕಲು ಮಾಡುವಂತಿದೆ. ನಿಮಗೆ ಧನ್ಯವಾದಗಳು. ನಿಮ್ಮ ಎರಡೂ ಪ್ಲ್ಯಾನ್‌ ತುಂಬಾ ಚೆನ್ನಾಗಿವೆ. ಇದರಲ್ಲಿ ನಿವೇಶನಕೊಳ್ಳುವುದೇ ಲಾಭದಾಯಕ ಹಾಗೂ ಇಬ್ಬರೂ ಮಕ್ಕಳಿಗೆ ಬೇರೆ ಬೇರೆ ಸ್ಥಿರ ಆಸ್ತಿ ಮಾಡಿ ಇಟ್ಟ ಹಾಗಾಗುತ್ತದೆ.

ಇದೇ ವೇಳೆ ನಿವೇಶನದ ಬೆಲೆ ಮುಂದೆ ಹೆಚ್ಚಾಗುವುದರಲ್ಲಿ ಸಂಶಯವಿಲ್ಲ. ಈ ರೀತಿ ಹೂಡಿಕೆಯಲ್ಲಿ ತಲೆನೋವಿರುವುದಿಲ್ಲ ಹಾಗೂ ಲಾಭಾಂಶ ಹೆಚ್ಚಿರುತ್ತದೆ. ನಿಮಗೂ ನಿಮ್ಮ ಕುಟುಂಬಕ್ಕೂ ಉಜ್ವಲ ಭವಿಷ್ಯ ಹಾರೈಸುತ್ತೇನೆ.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !