ರಾಜ್ಯ ಸರ್ಕಾರದಿಂದ ಇಬ್ಬಗೆ ನೀತಿ: ಸಿ.ಟಿ.ರವಿ ಆರೋಪ

7

ರಾಜ್ಯ ಸರ್ಕಾರದಿಂದ ಇಬ್ಬಗೆ ನೀತಿ: ಸಿ.ಟಿ.ರವಿ ಆರೋಪ

Published:
Updated:

ಮಂಗಳೂರು: ‘ಟಿಪ್ಪು ಸುಲ್ತಾನ್‌ನನ್ನು ಟೀಕಿಸುವವರನ್ನು ಬಂಧಿಸುತ್ತಿರುವ ಜೆಡಿಎಸ್‌– ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರ, ಹಿಂದೂ ಧರ್ಮ ಮತ್ತು ದೇವರನ್ನು ಅವಹೇಳನ ಮಾಡುವವರ ವಿರುದ್ಧ ಕ್ರಮ ಜರುಗಿಸುತ್ತಿಲ್ಲ. ಈ ವಿಚಾರದಲ್ಲಿ ಸಮ್ಮಿಶ್ರ ಸರ್ಕಾರ ಇಬ್ಬಗೆ ನೀತಿ ಅನುಸರಿಸುತ್ತಿದೆ’ ಎಂದು ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಆರೋಪಿಸಿದರು.

ಪಕ್ಷದ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಕಚೇರಿಯಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಟಿಪ್ಪು ಸುಲ್ತಾನ್‌ ಜಯಂತಿ ವಿರೋಧಿಸಿದ್ದಕ್ಕೆ ಸಮ್ಮಿಶ್ರ ಸರ್ಕಾರ ಪೊಲೀಸರ ಮೇಲೆ ಪ್ರಭಾವ ಬೀರಿ ಪತ್ರಕರ್ತ ಸಂತೋಷ್ ತಮ್ಮಯ್ಯ ಅವರನ್ನು ಬಂಧಿಸಿದೆ. ಆದರೆ, ರಾಮ, ಕೃಷ್ಣ, ಸ್ವಾಮಿ ವಿವೇಕಾನಂದ, ಭಗವದ್ಗೀತೆಯನ್ನು ಅವಹೇಳನ ಮಾಡಿದ ಪ್ರೊ.ಕೆ.ಎಸ್‌.ಭಗವಾನ್‌, ಪ್ರೊ.ಮಹೇಶ್ಚಂದ್ರ ಗುರು, ಯೋಗೇಶ್ ಮಾಸ್ಟರ್‌ ಅವರನ್ನು ಏಕೆ ಬಂಧಿಸಿಲ್ಲ. ‘ನಾನು ನಗರ ನಕ್ಸಲ್‌’ ಎಂದು ಕೊರಳಲ್ಲಿ ಫಲಕ ಹಾಕಿಕೊಂಡು ಓಡಾಡಿದ ಗಿರೀಶ್ ಕಾರ್ನಾಡ್‌ ವಿರುದ್ಧ ಏಕೆ ಕ್ರಮ ಜರುಗಿಸಿಲ್ಲ’ ಎಂದು ಪ್ರಶ್ನಿಸಿದರು.

ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸುವವರನ್ನೂ ಈ ಸರ್ಕಾರ ಬೆಂಬಲಿಸುತ್ತಿದೆ. ರಾಜ್ಯದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಗೆ ಅಪಾಯ ಎದುರಾಗಿದೆ. ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕಲಾಗುತ್ತಿದೆ. ಆದರೆ, ಹಿಂದೆ ಅಸಹಿಷ್ಣುತೆ ಎಂದು ಕೂಗು ಹಾಕಿದವರು ಈಗ ಸಂತೋಷ್‌ ತಮ್ಮಯ್ಯ ಅವರಂತಹವರನ್ನು ಬಂಧಿಸಿದಾಗ ಚಕಾರ ಎತ್ತುತ್ತಿಲ್ಲ ಎಂದರು.

ತನಿಖಾ ಸಂಸ್ಥೆಗಳ ದುರ್ಬಳಕೆ: ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪಕ್ಷಗಳು ಕೇಂದ್ರ ಸರ್ಕಾರ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡುತ್ತಿದೆ ಎಂದು ಪದೇ ಪದೇ ಆರೋಪಿಸುತ್ತವೆ. ಆದರೆ, ಹಿಂದಿನ ಕಾಂಗ್ರೆಸ್‌ ಸರ್ಕಾರ ಭ್ರಷ್ಟರನ್ನು ರಕ್ಷಿಸಲು ಭ್ರಷ್ಟಾಚಾರ ನಿಗ್ರಹವನ್ನು ದುರ್ಬಳಕೆ ಮಾಡಿಕೊಂಡಿತ್ತು. ಈಗಿನ ಸಮ್ಮಿಶ್ರ ಸರ್ಕಾರ ಸಿಸಿಬಿಯನ್ನು ದುರ್ಬಳಕೆ ಮಾಡಿಕೊಂಡು ರಾಜಕೀಯ ವಿರೋಧಿಗಳನ್ನು ಹತ್ತಿಕ್ಕಲು ಯತ್ನಿಸುತ್ತಿದೆ ಎಂದು ದೂರಿದರು.

‘ಆ್ಯಂಬಿಡೆಂಟ್‌ ಪ್ರಕರಣದಲ್ಲಿ ಸಿಸಿಬಿ ಪೊಲೀಸರು ಯಾವುದೇ ಆಧಾರವಿಲ್ಲದೇ ಜನಾರ್ದನ ರೆಡ್ಡಿ ಅವರನ್ನು ಬಂಧಿಸಿದೆ ಎಂದು ನ್ಯಾಯಾಲಯವೇ ಸಂಶಯ ವ್ಯಕ್ತಪಡಿಸಿದೆ. ಇದು ಈ ಸರ್ಕಾರ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವುದಕ್ಕೆ ಉದಾಹರಣೆ’ ಎಂದರು.

ಕುಸಿತಕ್ಕೆ ಕಾಂಗ್ರೆಸ್‌ ಕಾರಣ: ಕಾಂಗ್ರೆಸ್‌ ನೇತೃತ್ವದ ಯುಪಿಎ ಸರ್ಕಾರ 2008– 2014ರ ಅವಧಿಯಲ್ಲಿ ಕಾರ್ಪೋರೇಟ್‌ ಕಂಪೆನಿಗಳಿಗೆ ₹ 34 ಲಕ್ಷ ಕೋಟಿ ಸಾಲ ನೀಡಿತ್ತು. ಆಗ ಸಾಲ ಪಡೆದವರೇ ಈಗ ದೇಶ ಬಿಟ್ಟು ಓಡಿಹೋದವರಲ್ಲಿ ಸೇರಿದ್ದಾರೆ. ಆದರೆ, ಈಗಿನ ಎನ್‌ಡಿಎ ಸರ್ಕಾರದ ಮೇಲೆ ಗೂಬೆ ಕೂರಿಸುವ ಪ್ರಯತ್ನವನ್ನು ಕಾಂಗ್ರೆಸ್‌ ಮಾಡುತ್ತಿದೆ ಎಂದು ಹೇಳಿದರು.

‘ಕಾಂಗ್ರೆಸ್‌ ಸಂಸದರಾಗಿದ್ದ ಆಂಧ್ರಪ್ರದೇಶದ ಲಗಡಾಪತಿ ರಾಜು ₹ 53,000 ಕೋಟಿ ಬಾಕಿ ಹೊಂದಿದ್ದಾರೆ. ನೀರವ್‌ ಮೋದಿ, ವಿಜಯ್‌ ಮಲ್ಯ ಎಲ್ಲರೂ ಕಾಂಗ್ರೆಸ್‌ ಕೃಪಾಕಟಾಕ್ಷದಿಂದಲೇ ದೊಡ್ಡ ಮೊತ್ತದ ಸಾಲ ಪಡೆದಿದ್ದರು’ ಎಂದು ಆಪಾದಿಸಿದರು.

ನರೇಂದ್ರ ಮೋದಿ ನೇತೃತ್ವದ ಸರ್ಕಾರ ದಿವಾಳಿತನ ಕಾಯ್ದೆ ಜಾರಿಗೊಳಿಸಿದ ಪರಿಣಾಮವಾಗಿ ನಾಲ್ಕು ತಿಂಗಳಲ್ಲಿ ₹ 83,000 ಕೋಟಿ ಬಾಕಿ ಸಾಲ ವಸೂಲಿಯಾಗಿದೆ. ಎನ್‌ಡಿಎ ಸರ್ಕಾರ ಮುದ್ರಾ ಯೋಜನೆಯ ಮೂಲಕ 14 ಕೋಟಿ ಬಡವರು, ಮಧ್ಯಮ ವರ್ಗದವರಿಗೆ ಸಾಲ ನೀಡಿದೆ. ಬೇನಾಮಿ ಆಸ್ತಿ ತಡೆ ಕಾಯ್ದೆ ಜಾರಿಗೊಳಿಸಿ ಭ್ರಷ್ಟಾಚಾರ ನಿಯಂತ್ರಣಕ್ಕೆ ಕ್ರಮ ಜರುಗಿಸಿದೆ ಎಂದರು.

₹ 500 ಮತ್ತು ₹ 1,000 ಮುಖಬೆಲೆಯ ನೋಟುಗಳ ನಿಷೇಧವನ್ನು ಆರಂಭದಲ್ಲಿ ಕಾಂಗ್ರೆಸ್‌ ಸ್ವಾಗತಿಸಿತ್ತು. ಈಗ ಟೀಕಿಸುತ್ತಿದೆ. ಭ್ರಷ್ಟರು ಮತ್ತು ಕಪ್ಪು ಹಣ ಹೊಂದಿದ್ದವರಿಗೆ ಮಾತ್ರ ನೋಟುಗಳ ನಿಷೇಧದಿಂದ ತೊಂದರೆ ಆಗಿದೆ. ಪ್ರಾಮಾಣಿಕರಿಗೆ ಯಾವ ಸಮಸ್ಯೆಯೂ ಆಗಿಲ್ಲ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 9

  Happy
 • 2

  Amused
 • 0

  Sad
 • 1

  Frustrated
 • 5

  Angry

Comments:

0 comments

Write the first review for this !