ರಣಜಿ ಕ್ರಿಕೆಟ್: ನಿಶ್ಚಲ್– ಶರತ್ ಶತಕದ ಸೊಬಗು

7
ಕರ್ನಾಟಕಕ್ಕೆ ಮೊದಲ ಇನಿಂಗ್ಸ್ ಮುನ್ನಡೆ

ರಣಜಿ ಕ್ರಿಕೆಟ್: ನಿಶ್ಚಲ್– ಶರತ್ ಶತಕದ ಸೊಬಗು

Published:
Updated:

ನಾಗಪುರ: ಅಪಾರ ತಾಳ್ಮೆಯ ಬ್ಯಾಟ್ಟ್‌ಮನ್ ಡೇಗಾ ನಿಶ್ಚಲ್ ಮತ್ತು ಪದಾರ್ಪಣೆ ‍ಪಂದ್ಯದಲ್ಲಿಯೇ  ಆತ್ಮವಿಶ್ವಾಸದಿಂದ ಆಡಿದ ಬಿ.ಆರ್. ಶರತ್  ಜಮ್ತಾ ಕ್ರೀಡಾಂಗಣದಲ್ಲಿ ಬುಧವಾರ ಶತಕ ಸಂಭ್ರಮ ಆಚರಿಸಿದರು.

ವಿದರ್ಘ ತಂಡದ ಎದುರು ಇಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ಎಲೀಟ್ ಎ ಗುಂಪಿನ ಪಂದ್ಯದಲ್ಲಿ ಕರ್ನಾಟಕ ತಂಡವು ಮೊದಲ ಇನಿಂಗ್ಸ್‌ನಲ್ಲಿ 71 ರನ್‌ಗಳ ಮುನ್ನಡೆ ಸಾಧಿಸಿತು.

ಮೊದಲ ಇನಿಂಗ್ಸ್‌ನಲ್ಲಿ ವಿದರ್ಭ ತಂಡವು 307 ರನ್‌ಗಳನ್ನು ಪೇರಿಸಿತ್ತು. ಬ್ಯಾಟಿಂಗ್ ಆರಂಭಿಸಿದ್ದ ಕರ್ನಾಟಕ ತಂಡವು ಮಂಗಳವಾರ 149 ರನ್‌ಗಳಿಗೆ 5 ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟದಲ್ಲಿತ್ತು. ಈ ಹಂತದಲ್ಲಿ ಕ್ರೀಸ್‌ನಲ್ಲಿದ್ದ ಆರಂಭಿಕ ಬ್ಯಾಟ್ಸ್‌ಮನ್‌ ನಿಶ್ಚಲ್ ಜೊತೆಗೂಡಿದ ಶರತ್ ಕರ್ನಾಟಕವನ್ನು ಸಂಕಷ್ಟದಿಂದ ಪಾರು ಮಾಡಿದರು. ನಿಶ್ಚಲ್ (113; 338ಎಸೆತ, 10ಬೌಂಡರಿ) ಮತ್ತು ಶರತ್ (103; 161ಎಸೆತ, 20ಬೌಂಡರಿ) ಆರನೇ ವಿಕೆಟ್‌ ಜೊತೆಯಾಟದಲ್ಲಿ 160 ರನ್‌ ಪೇರಿಸಿದರು.

ನಿಶ್ಚಲ್ ಅವರಿಗೆ ಇದು ಪ್ರಥಮ  ದರ್ಜೆ ಕ್ರಿಕೆಟ್‌ನಲ್ಲಿ ಎರಡನೇ ಶತಕವಾಗಿದೆ.  ಶರತ್‌ ಅವರು ಪದಾರ್ಪಣೆ ಪಂದ್ಯದಲ್ಲಿಯೇ ಶತಕ ದಾಖಲಿಸಿದ ಮೊದಲ ವಿಕೆಟ್‌ಕೀಪರ್–ಬ್ಯಾಟ್ಸ್‌ಮನ್‌ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ಸಾಧನೆ ಮಾಡಿದ ಕರ್ನಾಟಕದ ಏಳನೇ ಬ್ಯಾಟ್ಸ್‌ಮನ್ ಇವರಾಗಿದ್ದಾರೆ.

22 ವರ್ಷದ ಶರತ್ ಅವರು ಈಚೆಗೆ ವಿಜಯ್ ಹಜಾರೆ ಟ್ರೋಫಿಯಲ್ಲಿ ಆಡಿದ್ದರು. ಹಿರಿಯ ಆಟಗಾರ ಸಿ.ಎಂ. ಗೌತಮ್ ಅವರ ಬದಲಿಗೆ ಶರತ್ ಅವರನ್ನು ತಂಡಕ್ಕೆ ಆಯ್ಕೆ ಮಾಡಲಾಗಿತ್ತು.

ಸಹನೆಯ ಆಟ: ಆರಂಭಿಕ ಬ್ಯಾಟ್ಸ್‌ಮನ್ ಆಗಿ ಕಣಕ್ಕಿಳಿದಿದ್ದ ನಿಶ್ಚಲ್ ಅವರು ಸಹನೆಯ ಬ್ಯಾಟಿಂಗ್ ಮಾಡಿದರು.   338 ಎಸೆತಗಳನ್ನು ಎದುರಿಸಿದ ಅವರು ಕೇವಲ 10 ಬೌಂಡರಿಗಳನ್ನು ಬಾರಿಸಿದರು.  ಹೋದ ವರ್ಷದ ಟೂರ್ನಿಯಲ್ಲಿ ಪದಾರ್ಪಣೆ ಬೆಂಗಳುರಿನ ನಿಶ್ಚಲ್ ಅವರು ತಮ್ಮ ಎರಡನೇ ಪಂದ್ಯದಲ್ಲಿಯೇ 195 ರನ್ ಗಳಿಸಿದ್ದರು.

ಇವರಿಬ್ಬರೂ ಔಟಾದ ನಂತರ ನಾಯಕ ಆರ್. ವಿನಯಕುಮಾರ್ 39; 98ಎಸೆತ, 6ಬೌಂಡರಿ) ಮತ್ತು ಜೆ. ಸುಚಿತ್ (20; 49ಎಸೆತ, 2ಬೌಂಡರಿ) ಅಲ್ಪ ಕಾಣಿಕೆ ನೀಡಿದರು.

ಎರಡನೇ ಇನಿಂಗ್ಸ್‌ ಆರಂಭಿಸಿರುವ ಆತಿಥೇಯ ತಂಡವು 28 ಓವರ್‌ಗಳಲ್ಲಿ 2 ವಿಕೆಟ್‌ಗೆಲಿ 71 ರನ್‌ ಗಳಿಸಿದೆ. ಒಂದು ರನ್ ಲೀಡ್ ಪಡೆದುಕೊಂಡಿದೆ.  ವಾಸೀಂ ಜಾಫರ್ (ಬ್ಯಾಟಿಂಗ್ 21 ) ಮತ್ತು ಗಣೇಶ್ ಸತೀಶ್ (ಬ್ಯಾಟಿಂಗ್ 24 ) ಕ್ರೀಸ್‌ನಲ್ಲಿದ್ದಾರೆ.

ಅಪ್ಪ ಅಂಪೈರ್; ಮಗ ವಿಕೆಟ್‌ಕೀಪರ್

‘ಕ್ರಿಕೆಟ್‌ ದಿಗ್ಗಜ ವಿಶ್ವನಾಥ್ ಅವರು ಈಗಷ್ಟೇ ಕರೆ ಮಾಡಿದ್ದರು. ನಿನ್ನ ಮಗ ನಮ್ಮ ಕ್ಲಬ್‌ ಸೇರಿದ್ದಾನೆ. ಅಭಿನಂದನೆಗಳು ಎಂದು ಶುಭಹಾರೈಸಿದ್ದಾರೆ. ಇದಕ್ಕಿಂತ ದೊಡ್ಡ ಗೌರವ ಇನ್ನೇನು ಬೇಕು?'–

ನಾಗಪುರದಲ್ಲಿ ವಿದರ್ಭ ಎದುರಿನ ರಣಜಿ ಪಂದ್ಯದಲ್ಲಿ ಶತಕ ಬಾರಿಸಿದ ಬಿ.ಆರ್. ಶರತ್ ಅವರ ತಂದೆ ಬಿ.ಕೆ. ರವಿ ಅವರ ಮಾತುಗಳಿವು. ಬಿಸಿಸಿಐ ಪ್ಯಾನಲ್‌ನ ಹಿರಿಯ ಅಂಪೈರ್‌ ಆಗಿರುವ ಬಿ.ಕೆ. ರವಿ ಸದ್ಯ ಭುವನೇಶ್ವರದಲ್ಲಿ ನಡೆಯುತ್ತಿರುವ ಒಡಿಶಾ ಮತ್ತು ಉತ್ತರಪ್ರದೇಶ ತಂಡಗಳ ನಡುವಣ ಪಂದ್ಯದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಬಾಲ್ಯದಿಂದಲೂ ಅವರ ಗರಡಿಯಲ್ಲಿಯೇ ಬೆಳೆದ ಶರತ್ ಇದೇ ಮೊದಲ ಬಾರಿ ರಣಜಿಯಲ್ಲಿ ಆಡುವ ಅವಕಾಶ ಪಡೆದಿದ್ದಾರೆ. ಪದಾರ್ಪಣೆ ಪಂದ್ಯದಲ್ಲಿ ಶತಕ ಬಾರಿಸಿದ ಕರ್ನಾಟಕ ಮೊದಲ ವಿಕೆಟ್‌ಕೀಪರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

‘ಮಧ್ಯಾಹ್ನ ನಾನು ಮೈದಾನದಲ್ಲಿ ಕಾರ್ಯನಿರ್ವಹಿಸುತ್ತಿದ್ದೆ. ನಮ್ಮ ಪಂದ್ಯ ರೆಫರಿ ನನಗೆ ವಿಷಯ ತಿಳಿಸಿದರು. ತುಂಬಾ ಸಂತೋಷವಾಯಿತು. ನಾನು ರಣಜಿ ಆಟಗಾರನಾಗಬೇಕು ಎಂದು ನಮ್ಮಪ್ಪ  ಆಸೆಪಟ್ಟಿದ್ದರು. ಆದರೆ ಅದು ಸಾಧ್ಯವಾಗಿರಲಿಲ್ಲ. ಮೊಮ್ಮಗನ ಬಗ್ಗೆಯೂ ಅವರಿಗೆ ಅದೇ ಆಸೆ ಇತ್ತು. ಇವತ್ತು ಶರತ್ ತನ್ನ ಅಜ್ಜ ಮತ್ತು ನನ್ನ ಕನಸುಗಳನ್ನು ನನಸು ಮಾಡಿದ್ದಾನೆ. ನನ್ನ ಪತ್ನಿ ಸುಮಾ ಪಟ್ಟ ಶ್ರಮ ಸಾರ್ಥಕವಾಗಿದೆ’ ಎಂದು ರವಿ ಭಾವುಕರಾದರು.

"ನಿನ್ನೆ (ಮಂಗಳವಾರ) ರಾತ್ರಿ ನನ್ನೊಂದಿಗೆ ಶರತ್ ಮಾತನಾಡಿದ್ದ. ಬಹಳ ಆತ್ಮವಿಶ್ವಾಸದಲ್ಲಿದ್ದ. ತಂಡಕ್ಕೆಮುನ್ನಡೆ ಕೊಡಿಸುವ ಛಲ ವ್ಯಕ್ತಪಡಿಸಿದ್ದ. ಅದೇ ರೀತಿ ಆಡಿ ತಂಡಕ್ಕೆ ನೆರವಾಗಿದ್ದಾನೆ’ ಎಂದರು.

ಜಿ.ಆರ್. ವಿಶ್ವನಾಥ್ ಅವರು ಕೂಡ ತಮ್ಮ ಪದಾರ್ಪಣೆ ರಣಜಿ ಪಂದ್ಯದಲ್ಲಿ ಶತಕ ಬಾರಿಸಿದ ದಾಖಲೆ ಹೊಂದಿದ್ಧಾರೆ.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !