‘ಕಬ್ಬು ಪೂರೈಕೆಗೆ ಭದ್ರತೆ ನೀಡಿ’

7
ಒಡೆದು ಆಳುವ ನೀತಿಗೆ ಸೊಪ್ಪು ಹಾಕೊಲ್ಲ; ಪ್ರತಿಭಟನಾ ನಿರತರ ಸ್ಪಷ್ಟನೆ

‘ಕಬ್ಬು ಪೂರೈಕೆಗೆ ಭದ್ರತೆ ನೀಡಿ’

Published:
Updated:
Deccan Herald

ಬಾಗಲಕೋಟೆ: ಕಬ್ಬಿಗೆ ನ್ಯಾಯಯುತ ಬೆಲೆ ನಿಗದಿ ವಿಚಾರದಲ್ಲಿ ಮುಧೋಳದಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆಯ ನಡುವೆಯೇ, ಅಲ್ಲಿನ ನಿರಾಣಿ, ಪ್ರಭುಲಿಂಗೇಶ್ವರ ಹಾಗೂ ರನ್ನ ಶುಗರ್ಸ್ ಸಂಸ್ಥೆಗೆ ಕಬ್ಬು ಪೂರೈಕೆ ಮಾಡುವ ಬೆಳೆಗಾರರು ಭಿನ್ನ ಹಾದಿ ತುಳಿದಿದ್ದಾರೆ.

‘ಫ್ಯಾಕ್ಟರಿಗಳಿಗೆ ಬೇಕಿದ್ದರೆ ನಾವು ಉಚಿತವಾಗಿ ಕಬ್ಬು ಪೂರೈಸುತ್ತೇವೆ. ಎಫ್‌ಆರ್‌ಪಿ (ನ್ಯಾಯಯುತ ಹಾಗೂ ಲಾಭದಾಯಕ) ಅನ್ವಯ ನಮಗೆ ಈಗ ಕೊಟ್ಟಿರುವ ದರವೇ ಸಾಕು. ಹಾಗಾಗಿ ಫ್ಯಾಕ್ಟರಿಗೆ ಕಬ್ಬು ಸಾಗಣೆ ಮಾಡಲು ಅವಕಾಶ ಕೊಟ್ಟು ಸೂಕ್ತ ಭದ್ರತೆ ನೀಡಿ, ಇಲ್ಲದಿದ್ದರೆ ಕಟಾವಿಗೆ ಬಂದಿರುವ ಕಬ್ಬು ಹೊಲದಲ್ಲಿಯೇ ಒಣಗಲಿದೆ’ ಎಂದು ಗುರುವಾರ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ದಾರೆ.

ಟೆಂಪೊ ಟ್ರ್ಯಾಕ್ಸ್‌ಗಳಲ್ಲಿ ಬಂದ ಕಬ್ಬು ಪೂರೈಕೆದಾರರು, ಜಿಲ್ಲಾಧಿಕಾರಿಗೆ ಮನವಿಪತ್ರ ನೀಡಿದರು.

‘ಈಗಾಗಲೇ ಕಟಾವು ತಡವಾಗಿದೆ. 18 ತಿಂಗಳಿನಿಂದ ಕಬ್ಬು ನಿಂತಿದೆ. ಇನ್ನು ಬಿಟ್ಟರೆ ಇಳುವರಿ ಕಡಿಮೆಯಾಗಲಿದೆ. ಹಾಗಾಗಿ ಸ್ವ ಇಚ್ಛೆಯಿಂದ ಫ್ಯಾಕ್ಟರಿಗೆ ಕಬ್ಬು ಪೂರೈಸಲು ಮುಂದಾಗಿದ್ದೇವೆ’ ಎಂದು ನಿರಾಣಿ ಶುಗರ್ಸ್‌ಗೆ ಕಬ್ಬು ಪೂರೈಸುವ ಢವಳೇಶ್ವರದ ರೈತ ಚನ್ನಪ್ಪ ಪಟ್ಟಣಶೆಟ್ಟಿ ಹೇಳಿದರು.

‘ನನ್ನದು 60 ಎಕರೆ ಕಬ್ಬು ಇದೆ. ಲುಕ್ಸಾನು ಆಗಲಿದೆ. ಫ್ಯಾಕ್ಟರಿ ಚಾಲೂ ಇಟ್ಟುಕೊಂಡು ಹೋರಾಟ ಮಾಡಲಿ. ನಾವೂ ಬೆಂಬಲಿಸಲಿದ್ದೇವೆ’ ಎಂದರು.

ಒಡೆದು ಆಳುವ ನೀತಿ?

‘ಕೆಲವು ಹಿತಾಸಕ್ತಿಗಳು ರೈತರನ್ನು ಒಡೆದು ಆಳಲು ಪ್ರಯತ್ನಿಸುತ್ತಿವೆ. ನಮ್ಮಲ್ಲಿ ಒಡಕು ಮೂಡಿಸಲೆಂದೇ ಹಿಂದಿನ ಹಂಗಾಮಿನಲ್ಲಿ ಡಿಸೆಂಬರ್ 31ರವರೆಗೆ ಕಬ್ಬು ಪೂರೈಸಿದವರಿಗೆ ಫ್ಯಾಕ್ಟರಿ ಮಾಲೀಕರು ಟನ್‌ಗೆ ₹2500 ಬೆಲೆ ನೀಡಿದರು. ನಂತರ ಹೋದವರಿಗೆ ಮಾರುಕಟ್ಟೆಯಲ್ಲಿ ಸಕ್ಕರೆ ಬೆಲೆ ಕುಸಿದಿದೆ ಎಂಬ ಕಾರಣ ನೀಡಿ ಎಫ್‌ಆರ್‌ಪಿ ಅನ್ವಯ ಟನ್‌ಗೆ ₹2150 ಕೊಟ್ಟರು’ ಎಂದು ಮುಧೋಳದ ರೈತ ಸಂಘದ ಮುಖಂಡ ವಿಶ್ವನಾಥ ಉದಗಟ್ಟಿ ಆರೋಪಿಸುತ್ತಾರೆ.

‘ಆಗ ಪೂರ್ತಿ ಹಣ ಪಡೆದ ಕೆಲವರು ನಮ್ಮ ಬೆಂಬಲಕ್ಕೆ ನಿಲ್ಲದೇ ಈಗ ಭಿನ್ನ ಹಾದಿ ತುಳಿದಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸುವ ಅವರು, ‘ಈ ಕೆಲಸ ಪ್ರತೀ ವರ್ಷ ನಡೆಯುತ್ತಿದೆ. ಇಂತಹ ಕೆಲಸಕ್ಕೆ ನಾವು ಸೊಪ್ಪು ಹಾಕುವುದಿಲ್ಲ’ ಎನ್ನುತ್ತಾರೆ.

‘ನಾವೆಲ್ಲಾ ಒಗ್ಗಟ್ಟಾಗಿದ್ದೇವೆ. ಸಮಸ್ಯೆ ಇತ್ಯರ್ಥವಾಗಿ ಸೂಕ್ತ ದರ ನಿಗದಿಯಾಗುವವರೆಗೂ ಹೋರಾಟ ಮುಂದುವರೆಸಲಿದ್ದೇವೆ’ ಎಂದು ಜಿಲ್ಲಾ ಕಬ್ಬು ಬೆಳೆಗಾರರ ಸಂಘದ ಮುಖಂಡ ಸುಭಾಷ್ ಶಿರಬೂರ ಹೇಳುತ್ತಾರೆ.

 

 

 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !