‘ಕದ್ದು ಮುಚ್ಚಿ’ ಚೆಲುವೆಯ ಅಂತರಾಳ

7

‘ಕದ್ದು ಮುಚ್ಚಿ’ ಚೆಲುವೆಯ ಅಂತರಾಳ

Published:
Updated:
Deccan Herald

‘ಅಂಧ ಪ್ರೇಮಿ’ಗಳಿಬ್ಬರ ಭಾವುಕ ಜಗತ್ತನ್ನು ಪ್ರೇಕ್ಷಕರಿಗೆ ಮನಮುಟ್ಟುವಂತೆ ತೋರಿಸಿದ ಚಿತ್ರ ‘ಕೃಷ್ಣ ತುಳಸಿ’. ಈ ಸಿನಿಮಾದಲ್ಲಿ ತುಳಸಿ ಪಾತ್ರಕ್ಕೆ ಅದ್ಭುತ ಎನಿಸುವಂತೆ ಜೀವ ತುಂಬಿದವರು ನಟಿ ಮೇಘಶ್ರೀ. ಅಂತಿಮ ವರ್ಷದ ಬಿಎ ವ್ಯಾಸಂಗ ಮಾಡುತ್ತಿರುವ ಇವರು ಓದು ಮತ್ತು ನಟನೆ ಎರಡನ್ನೂ ಸಮಾನವಾಗಿ ಸರಿದೂಗಿಸಿಕೊಂಡು ಹೋಗುತ್ತಿದ್ದಾರೆ.

‘ಕೃಷ್ಣ ತುಳಸಿ’ ಸಿನಿಮಾದಲ್ಲಿ ಇಡೀ ಗಾಂಧಿ ನಗರವೇ ತಿರುಗಿ ನೋಡುವಂತೆ ನಟಿಸಿದ್ದ ಮೇಘಶ್ರೀ ಅವರ ಅಭಿನಯ ಚಾತುರ್ಯಕ್ಕೆ ಎಲ್ಲೆಡೆಯಿಂದ ಮೆಚ್ಚುಗೆಯ ಮಾತುಗಳು ಕೇಳಿಬಂದಿದ್ದವು. ಅಲ್ಲದೇ ಕಳೆದ ವರ್ಷ ತೆರೆಕಂಡಿದ್ದ ‘ಮಾರ್ಚ್‌ 22’ ಸಿನಿಮಾಕ್ಕೆ ಪ್ರಶಸ್ತಿ ಕೂಡ ಲಭಿಸಿತ್ತು. ಈ ಚಿತ್ರದ ನಾಯಕಿ ನಟಿಯಾಗಿಯೂ ಅವರು ಬಣ್ಣ ಹಚ್ಚಿದ್ದರು. ಬಣ್ಣದ ಜಗತ್ತಿನಲ್ಲಿ ಒಂದೊಂದೇ ಯಶಸ್ಸಿನ ಮೆಟ್ಟಿಲು ಏರುತ್ತಿರುವ ಈ ಚೆಲುವೆ ಕನ್ನಡದ ಜತೆಗೆ ತೆಲುಗು ಚಿತ್ರರಂಗದಲ್ಲೂ ಛಾಪು ಮೂಡಿಸುತ್ತಿದ್ದಾರೆ.

‘ರಾಜಮಾರ್ತಾಂಡ’, ‘ಕದ್ದು ಮುಚ್ಚಿ’, ‘ದಶರಥ’ ಮತ್ತು ‘ಅಮೃತವರ್ಷಿಣಿ’ ಹೀಗೆ ಸಾಲು ಸಾಲು ಕನ್ನಡ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಮೇಘಶ್ರೀ. ಓದಿನ ಕಡೆಗೂ ಗಮನ ಹರಿಸಿರುವುದು ಮತ್ತು ಕನ್ನಡದಲ್ಲೇ ಸಾಕಷ್ಟು ಅವಕಾಶಗಳು ಸಿಗುತ್ತಿರುವುದರಿಂದ ಬೇರೆ ಭಾಷೆಯ ಚಿತ್ರಗಳನ್ನು ಅವರು ಒಪ್ಪಿಕೊಳ್ಳುತ್ತಿಲ್ಲವಂತೆ.

‘ನಾನು ನಟಿಸಿರುವ ಮೂರು ಚಿತ್ರಗಳೂ ಶೀಘ್ರದಲ್ಲೇ ತೆರೆಗೆ ಬರಲಿವೆ. ‘ಅಮೃತ ವರ್ಷಿಣಿ ಸಿನಿಮಾದ ಚಿತ್ರೀಕರಣ ಇನ್ನಷ್ಟೇ ಆರಂಭಗೊಳ್ಳಬೇಕಿದೆ. ‘ಕದ್ದು ಮುಚ್ಚಿ’ ಸಿನಿಮಾದ ಆಡಿಯೊ ಬಿಡುಗಡೆ ಆಗಿದ್ದು, ಚಿತ್ರದ ಗೀತೆಗಳ ಬಗ್ಗೆ ಸಿನಿರಸಿಕರಿಂದ ಮೆಚ್ಚುಗೆಯ ಮಾತುಗಳು ಕೇಳಿಬರುತ್ತಿವೆ. ‘ದಶರಥ’ ಸಿನಿಮಾ ಮುಂದಿನ ತಿಂಗಳು ತೆರೆಗೆ ಬರಲು ಸಜ್ಜಾಗಿದೆ. ಕನ್ನಡದಲ್ಲೇ ಕೈ ತುಂಬ ಸಿನಿಮಾಗಳು ಸಿಗುತ್ತಿರುವುದರಿಂದ ಅನ್ಯ ಭಾಷೆಯ ಚಿತ್ರಗಳನ್ನು ಒಪ್ಪಿಕೊಳ್ಳುತ್ತಿಲ್ಲ. ಕನ್ನಡದಲ್ಲಿ ರೂಪುಗೊಳ್ಳುತ್ತಿರುವ ‘ಅಮೃತ ವರ್ಷಿಣಿ’ ಸಿನಿಮಾ ತೆಲುಗು ಭಾಷೆಯಲ್ಲೂ ತೆರೆಕಾಣಲಿದೆ. ಅದರಲ್ಲಿ ಎನ್‌ಟಿಆರ್ ಅವರ ಮೊಮ್ಮಗ ತಾರಕ್ ರಾಮ್ ನಾಯಕನಟರಾಗಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಮಾಹಿತಿ ಇದೆ. ಆದರೆ, ಆ ಬಗ್ಗೆ ನನಗೆ ಹೆಚ್ಚಿನ ಮಾಹಿತಿ ಇಲ್ಲ. ಕನ್ನಡದಲ್ಲಿ ಯಶಸ್ ಸೂರ್ಯ ಅವರು ನಾಯಕನಟರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಶಿವ ಪ್ರಭು ಚಿತ್ರದ ನಿರ್ದೇಶಕರು’ ಎಂದು ತಾವು ನಟಿಸಿರುವ ಚಿತ್ರಗಳ ಕುರಿತು ಹೇಳಿಕೊಳ್ಳುತ್ತಾರೆ ಮೇಘಶ್ರೀ.

‘ಕದ್ದು ಮುಚ್ಚಿ’ ಮನರಂಜನಾತ್ಮಕ ಸಿನಿಮಾ. ಚಿತ್ರದ ನಾಯಕನಟ ಎನ್ಆರ್‌ಐ. ನಾನು ಇದರಲ್ಲಿ ಹಳ್ಳಿ ಹುಡುಗಿಯ ಪಾತ್ರ ನಿರ್ವಹಿಸಿದ್ದೇನೆ. ಬಬ್ಲಿ ಕ್ಯಾರೆಕ್ಟರ್‌ ಅದು. ಅಜ್ಜಿ-ತಾತ, ದೊಡ್ಡಪ್ಪ ಚಿಕ್ಕಪ್ಪ, ದೊಡ್ಡಮ್ಮ, ಚಿಕ್ಕಮ್ಮ ಅವರ ಮಕ್ಕಳು ಎಲ್ಲರೂ ಇರುವ ದೊಡ್ಡ ಕುಟುಂಬ ನಮ್ಮದು. ಹಿರಿಯ ನಟಿ ಬಿ.ವಿ.ರಾಧಾ ಅವರು ಅಜ್ಜಿ ಪಾತ್ರ ನಿರ್ವಹಿಸಿದ್ದಾರೆ. ಅವರು ನಟಿಸಿದ ಕೊನೆಯ ಸಿನಿಮಾ ಇದೇ ಇರಬಹುದು ಅಂತ ಅಂದುಕೊಂಡಿದ್ದೇನೆ. ನಗರದಿಂದ ಹಳ್ಳಿಗೆ ಬರುವ ನಾಯಕನಿಗೆ ನಮ್ಮ ಕೂಡು ಕುಟುಂಬವನ್ನು ನೋಡಿ ತುಂಬ ಮೆಚ್ಚಿಕೊಳ್ಳುತ್ತಾನೆ. ನನ್ನ ಮೇಲೆ ಲವ್ ಆಗುತ್ತದೆ. ಈ ರೀತಿಯಲ್ಲಿ ಕತೆ ಸಾಗುತ್ತದೆ. ಇದೊಂದು ಕೌಟುಂಬಿಕ ಮನರಂಜನಾತ್ಮಕ ಸಿನಿಮಾ’ ಎನ್ನುತ್ತಾರೆ ‘ಮಾರ್ಚ್‌ 22’ ಚಿತ್ರದ ಚೆಲುವೆ ಮೇಘಶ್ರೀ.

‘ಅಮೃತವರ್ಷಿಣಿ’  ಚಿತ್ರೀಕರಣ ಇನ್ನೂ ಶುರುವಾಗಿಲ್ಲ. ಇದೊಂದು ಸಸ್ಪೆನ್ಸ್, ಥ್ರಿಲ್ಲರ್ ಜಾನರ್ ಸಿನಿಮಾ. ಈ ಚಿತ್ರದಲ್ಲಿ ನಾನು ಡಾಕ್ಟರ್ ಪಾತ್ರ ನಿರ್ವಹಿಸುತ್ತಿದ್ದೇನೆ. ರಮೇಶ್ ಅರವಿಂದ್, ಸುಹಾಸಿನಿ, ಶರತ್‌ಬಾಬು ಅಭಿನಯದ ‘ಅಮೃತವರ್ಷಿಣಿ’ ಸಿನಿಮಾಕ್ಕೂ ಈ ಚಿತ್ರಕ್ಕೂ ಯಾವುದೇ ಸಂಬಂಧವಿಲ್ಲ. ಆದರೆ, ಹಿರಿಯ ನಿರ್ದೇಶಕ ದಿನೇಶ್ ಬಾಬು ಅವರ ಗರಡಿಯಲ್ಲಿ ಬೆಳೆದವರು ಈ ಚಿತ್ರದ ನಿರ್ದೇಶಕ ಶಿವಪ್ರಭು. ಚಿತ್ರಕತೆಗೆ ಈ ಶೀರ್ಷಿಕೆ ಹೊಂದುತ್ತದೆ ಎಂಬ ಕಾರಣಕ್ಕೆ ಅದೇ ಹೆಸರನ್ನು ತಮ್ಮ ಹೊಸ ಚಿತ್ರಕ್ಕೂ ಇಟ್ಟಿದ್ದಾರೆ. ಇದು ಆ ಚಿತ್ರದ ಮುಂದುವರಿದ ಭಾಗ ಅಲ್ಲ. ಆದರೆ, ಕತೆಯಲ್ಲಿ ಸಾಮ್ಯತೆ ಇರಬಹುದಷ್ಟೇ’ ಎನ್ನುತ್ತಾರೆ ನಟಿ ಮೇಘಶ್ರೀ.

ಕನ್ನಡದಲ್ಲೇ ಉತ್ತಮ ಅವಕಾಶಗಳು ಸಿಗುತ್ತಿರುವುದರಿಂದ ಬೇರೆ ಭಾಷೆಯ ಚಿತ್ರಗಳ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಂಡಿಲ್ಲ ಎನ್ನುವಾಗ ನಟಿ ಮೇಘಶ್ರೀ ಅವರ ಬಟ್ಟಲು ಕಂಗಳಲ್ಲಿ ಕನ್ನಡಾಭಿಮಾನ ಪ್ರಕಾಶಿಸುತ್ತಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !