ನಾನು ಕೇಳಿದ್ದಕ್ಕೆಲ್ಲ ಆಸ್ತು ಎನ್ನುವ ಶಾಸ್ತ್ರಿ: ವಿರಾಟ್ ಕೊಹ್ಲಿ

7
ಭಾರತ ತಂಡದ ಕೋಚ್‌ ಬಗ್ಗೆ ಹೇಳಿಕೆ; ವಿಶ್ವಕಪ್ ವರೆಗೆ ತಂಡದಲ್ಲಿಲ್ಲ ಬದಲಾವಣೆ

ನಾನು ಕೇಳಿದ್ದಕ್ಕೆಲ್ಲ ಆಸ್ತು ಎನ್ನುವ ಶಾಸ್ತ್ರಿ: ವಿರಾಟ್ ಕೊಹ್ಲಿ

Published:
Updated:
Deccan Herald

ಮುಂಬೈ: ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ರವಿಶಾಸ್ತ್ರಿ ಅವರು ನಾಯಕ ವಿರಾಟ್ ಕೊಹ್ಲಿ  ಹೇಳಿದ್ದಕ್ಕೆಲ್ಲ ‘ಯೆಸ್’ ಅಂತಾರೆ ಎಂಬ ಊಹಾಪೋಹಗಳಿಗೆ ಗುರುವಾರ ವಿರಾಟ್ ತಿರುಗೇಟು ನೀಡಿದ್ದಾರೆ.

ಆಸ್ಟ್ರೇಲಿಯಾ ಪ್ರವಾಸಕ್ಕೆ ತೆರಳುವ ಮುನ್ನ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವಿರಾಟ್, ‘ರವಿಶಾಸ್ತ್ರಿ ನಾನು ಕೇಳಿದ್ದಕ್ಕೆಲ್ಲ ಯೆಸ್‌ ಅನ್ನುತ್ತಾರೆ. ಇದುವರೆಗೂ ಅವರಿಂದ ‘ಇಲ್ಲ’ ಅಥವಾ ‘ಬೇಡ’ ಎಂಬ ಪದಗಳನ್ನು ಕೇಳಿಲ್ಲ. ಉತ್ತಮ ಸಲಹೆಗಳನ್ನು ನೀಡುತ್ತಾರೆ. ತಂಡದಲ್ಲಿ ಸೂಕ್ತ ಬದಲಾವಣೆಗಳನ್ನು ಮಾಡಲು ನೆರವಾಗುತ್ತಾರೆ’ ಎಂದರು.

‘ಶಾಸ್ತ್ರೀಯವರು ಎಲ್ಲದಕ್ಕೂ ಸಮ್ಮತಿ ನೀಡುವುದು ಕೆಲವೊಮ್ಮೆ ನನಗೆ  ಸೋಜಿಗವೆನಿಸುತ್ತದೆ.  ಆದರೆ ಅವರು ನೀಡುವ ಸಲಹೆಗಳು ಅಮೂಲ್ಯವಾಗಿವೆ. ಕಳೆದ ಕೆಲವು ಪಂದ್ಯಗಳಲ್ಲಿ ಮಹತ್ವದ ಬದಲಾವಣೆಗಳನ್ನು ಮಾಡಲು ನನಗೆ ಅದರಿಂದ ಸಾಧ್ಯವಾಗಿತ್ತು. ಇವೆಲ್ಲವೂ ತಂಡದ ಆಂತರಿಕ ವಿಷಯಗಳು. ಚರ್ಚೆಗಳು, ವಿಚಾರ ವಿನಿಮಯಗಳು ತಂಡವನ್ನು ಸಮರ್ಥವಾಗಿ ಕಟ್ಟುವ ಉದ್ದೇಶವನ್ನೇ ಹೊಂದಿರುತ್ತವೆ’ ಎಂದರು.

‘ರವಿಶಾಸ್ತ್ರಿಯವರು ಕೋಚ್ ಅವರ ಮಾರ್ಗದರ್ಶನದಲ್ಲಿ ತಂಡವು ಚೆನ್ನಾಗಿ ಬೆಳೆದಿದೆ. ನಮ್ಮ ಆಟಗಾರರ ಮೇಲೆ ಜನರ ವಿಶ್ವಾಸ ಹೆಚ್ಚಿದೆ. 2014ರಲ್ಲಿ ಇಂಗ್ಲೆಂಡ್ ಪ್ರವಾಸಕ್ಕೆ ತೆರಳಿದ್ದಾಗ ಕಠಿಣ ಪರಿಸ್ಥಿತಿಯನ್ನು ಎದುರಿಸಿದ್ದೆ. ಆದರೆ ಅದರಿಂದ ಹೊರಬರುವಲ್ಲಿ ಯಶಸ್ವಿಯಾದೆ. 2015ರ ವಿಶ್ವಕಪ್‌ ಟೂರ್ನಿಯಲ್ಲಿ ಶಿಖರ್  ಧವನ್ ಕೂಡ ಫಾರ್ಮ್‌ ಕಳೆದುಕೊಂಡು ಕಷ್ಟಪಟ್ಟಿದ್ದರು. ಆಗೆಲ್ಲ ಅವರು (ರವಿ) ತುಂಬಿದ ವಿಶ್ವಾಸವೇ ನಮ್ಮ ಬಲ ಹೆಚ್ಚಿಸಿತು’ ಎಂದರು.

‘ರವಿಶಾಸ್ತ್ರಿಯವರು ತಂಡವನ್ನು ನಿರ್ವಹಿಸುವ ಕೆಲಸವನ್ನು ಅಚ್ಚುಕಟ್ಟಾಗಿ ಮಾಡುತ್ತಿದ್ದಾರೆ. ಜನರು ತಮ್ಮ ತಮ್ಮ ಅಭಿಪ್ರಾಯಗಳನ್ನು ಹೇಳುತ್ತಾರೆ.  ಸತ್ಯವೆನೆಂಬುದು ನಮಗೆ ಗೊತ್ತಿರುತ್ತದೆ. ಅದರ ಮೇಲೆಯೇ ನಮ್ಮ ಬದುಕು ರೂಪುಗೊಳ್ಳುತ್ತದೆ’ ಎಂದು ವಿರಾಟ್ ಹೇಳಿದರು.

‘ಆಸ್ಟ್ರೇಲಿಯಾದಲ್ಲಿ ಉತ್ತಮವಾಗಿ ಆಡುವ ವಿಶ್ವಾಸವಿದೆ. ಒಂದು ತಂಡವಾಗಿ ನಾವು ಬಲಿಷ್ಠವಾಗಿದ್ದೇವೆ. ಎಲ್ಲರೂ ಉತ್ತಮ ಲಯದಲ್ಲಿದ್ದಾರೆ. ಇಂಗ್ಲೆಂಡ್ ಮತ್ತು ದಕ್ಷಿಣ ಆಫ್ರಿಕಾಗಳಲ್ಲಿ ಆನುಭವಿಸಿರುವ ಸರಣಿ ಸೋಲುಗಳಿಂದ ಪಾಠ ಕಲಿತಿದ್ದೇವೆ. ಲೋಪಗಳನ್ನು ತಿದ್ದಿಕೊಂಡಿದ್ದೇವೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ನಮ್ಮ ತಂಡದ ಬೌಲರ್‌ಗಳ ಫಿಟ್‌ನೆಸ್‌ ಮಟ್ಟ ಹೆಚ್ಚಿದೆ. ವಿದೇಶದ ಪಿಚ್‌ಗಳಲ್ಲಿಯೂ ವಿಕೆಟ್ ಗಳಿಸುವ ಸಾಮರ್ಥ್ಯವನ್ನು ವೃದ್ಧಿಸಿಕೊಂಡಿದ್ದಾರೆ’ ಎಂದರು. ಆಸ್ಟ್ರೇಲಿಯಾ ತಂಡದಲ್ಲಿ ಪ್ರಮುಖ ಆಟಗಾರರಾದ ಸ್ಟೀವನ್ ಸ್ಮಿತ್ ಮತ್ತು ಡೇವಿಡ್ ವಾರ್ನರ್ ಅವರು ಇಲ್ಲದ್ದರಿಂದ ಭಾರತಕ್ಕೆ ಎಷ್ಟು ಅನುಕೂಲ  ಇದೆ ಎಂಬ ಪ್ರಶ್ನೆಗೆ ಕೊಹ್ಲಿ ನೇರ ಉತ್ತರ ನೀಡಲಿಲ್ಲ.

ನವೆಂಬರ್ 21ರಿಂದ ಆಸ್ಟ್ರೇಲಿಯಾದಲ್ಲಿ ಸರಣಿ ಆರಂಭವಾಗಲಿದೆ.  ಮೂರು ವೆಂಟಿ–20, ಮೂರು ಏಕದಿನ ಮತ್ತು ನಾಲ್ಕು ಟೆಸ್ಟ್‌ ಪಂದ್ಯಗಳನ್ನು ಆಡಲಿದೆ.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !